ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ; ಮಹಿಳೆ ಸಾವು, ಇಬ್ಬರಿಗೆ ಗಾಯ

ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟ (ಸಂಗ್ರಹ ಚಿತ್ರ)
ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟ (ಸಂಗ್ರಹ ಚಿತ್ರ)

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಬೆಂಗಳೂರಿನ ಜನನಿಭಿಡ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟವಾಗಿದ್ದು, ಐಇಡಿ ಬಾಂಬ್ ಬಳಸಿ ಸ್ಫೋಟಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಭವಾನಿ ಮತ್ತು ಅವರ ಸಂಬಂಧಿಯನ್ನು ಮಲ್ಯ ಆಸ್ಪತ್ರೆಗೆ ಮತ್ತು ಓರ್ವ ಗಾಯಾಳುವನ್ನು ಮೆಕ್ ಗ್ರಾತ್ ರಸ್ತೆಯ ಹಾಸ್ ಮಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ 38 ವರ್ಷದ ಮಹಿಳೆ ಭವಾನಿ ದೇವಿ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ.

ಘಟನೆಯಲ್ಲಿ ಭವಾನಿ ದೇವಿ ತಲೆಗೆ ತೀವ್ರ ಪೆಟ್ಟಾಗಿತ್ತು, ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರದ್ದೇ ಕುಟುಂಬದ ಮತ್ತೋರ್ವ ಸಂಬಂಧಿ ಕಾರ್ತಿಕ್ ಎಂಬಾತನ ಬೆನ್ನಿಗೆ ಗಾಯವಾಗಿದ್ದು, ಅವರಿಗೂ ಕೂಡ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸ್ಫೋಟದಲ್ಲಿ ಗಾಯಗೊಂಡಿರುವ ಮತ್ತೋರ್ವ ವ್ಯಕ್ತಿ ಸಂದೀಪ್ ಎಂಬಾತನನ್ನು ಹಾಸ್ ಮಾಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೋಕೋನಟ್ ಗ್ರೋವ್ ಎಂಬ ಹೊಟೆಲ್ ನ ಕಾಂಪೌಂಡ್ ನ ಹೊರಗಿನ ಗಿಡಗಳ ನಡುವೆ ಬಾಂಬ್ ಅನ್ನು ಬಟ್ಟೆಯಲ್ಲಿ ಸುತ್ತಿಡಲಾಗಿತ್ತು. ಅಲ್ಲದೆ ಬಾಂಬ್ ಗೆ ಟೈಮರ್ ಕೂಡ ಅಳವಡಿಸಲಾಗಿತ್ತು ಎಂದು ತಿಳಿದು ಬಂದಿದೆ. 

ಘಟನಾ ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಪರೀಕ್ಷೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಸ್ತುತ ನಗರಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಚರ್ಚ್ ಸ್ಟ್ರೀಟ್, ಶಿವಾಜಿನಗರ, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.

ಇದೇ ಡಿಸೆಂಬರ್ 31ರ ರಾತ್ರಿ ಬೆಂಗಳೂರಿನ ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸವರ್ಷಾಚರಣೆಗೆ ಸಿದ್ಧತೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡಿರುವುದು ತೀವ್ರ ಆತಂಕಕ್ಕೀಡು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com