ಕುರ್ಚಿಗಾಗಿ ಕಸರತ್ತು ಮಾಡುವ ಬಿಜೆಪಿ ಬಣ್ಣದ ಮಾತು ನಂಬದಿರಿ

ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.1
ಯಾರು ಚೆಂದದ ಹೇಳಿಕೆ ಕೊಡ್ತಾರೋ ಅಂಥವರಿಂದ ದೇಶ ಉದ್ದಾರವಾಗದು. ಬಣ್ಣದ ಮಾತುಗಳ ಹಿಂದೆ ಕುರ್ಚಿಯಲ್ಲಿ ರಾರಾಜಿಸುವ ಕನಸು ತುಂಬಿಕೊಂಡಿರುತ್ತದೆಯೇ ವಿನಃ ಜನ, ದೇಶದ ಕಲ್ಯಾಣ ಇರುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಶನಿವಾರ ಗುಲ್ಬರ್ಗದಲ್ಲಿ 1300 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಇಎಸ್ಐ ಆಸ್ಪತ್ರೆ ಉದ್ಘಾಟಿಸಿದ ಬಳಿಕ ಕಾಂಗ್ರೆಸ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಬಿಜೆಪಿ ಹಿಂಸೆಯನ್ನು ಪ್ರೋತ್ಸಾಹಿಸುತ್ತಿದೆ. ಸಾಮರಸ್ಯ ಕದಡುವ ಚಟುವಟಿಕೆಗಳಿಗೆ ಬೆಂಬಲಿಸುತ್ತಿದೆ. ವಿಷ ಬಿತ್ತುವ (ಜಹರ್ ಕಿ ಖೇತಿ) ಕೆಲಸ ಮಾಡುತ್ತಿರುವ ಬಿಜೆಪಿಯಿಂದ ಜಾಗೃತರಾಗಿರಿ. ಯಾವ ಕಾರಣಕ್ಕೂ ಹಿಂಸೆ ಪ್ರಚೋದಿಸುವ, ಮತೀಯ ವಿಷ ಬೀಜ ಬಿತ್ತುವವರನ್ನು ಬೆಂಬಲಿಸಬೇಡಿ. ಅವರನ್ನು ಅಧಿಕಾರದ ಹತ್ತಿರಕ್ಕೂ ಸುಳಿಯದಂತೆ ನೋಡಿಕೊಳ್ಳಿ ಎಂದರು.
ಇಪ್ಪತ್ತು ನಿಮಿಷಗಳ ತಮ್ಮ ಭಾಷಣದಲ್ಲಿ ಸೋನಿಯಾ ಸಿಂಹಪಾಲು ಸಮಯ ಬಿಜೆಪಿ ಹಾಗೂ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರು ಪ್ರಸ್ತಾಪಿಸದೆ ತರಾಟೆಗೆ ತೆಗೆದುಕೊಂಡರು. ಈ ಮೂಲಕ ಲೋಕಸಭೆ ಸಮರಕ್ಕೆ ಗುಲ್ಬರ್ಗದ ಬಹಿರಂಗ ಸಮಾರಂಭದ ಮೂಲಕ ಚಾಲನೆ ನೀಡಿದರು. ಮಧ್ಯಾಹ್ನ 1.40 ಗಂಟೆ ಸುಮಾರಿಗೆ ಗಿಳಿ ಹಸಿರು ಬಣ್ಣದ ಸೀರೆಯುಟ್ಟು ಲವಲವಿಕೆಯಿಂದಿದ್ದ ಜನರತ್ತ ಕೈಬೀಸುತ್ತ ವೇದಿಕೆಯಲ್ಲಿ ಆಸೀನರಾದ ಸೋನಿಯಾ, ದೇಶ, ಜನರ ಕಲ್ಯಾಣದ ಚಿಂತೆ ಇರುವ ನಮಗೆ ಆಶೀರ್ವದಿಸಿ 'ಕೈ' ಬಲಪಡಿಸಿ ಎಂದು ಕೋರಿದರು.
ಮಾಹಿತಿ ಹಕ್ಕು, ಜನ ಲೋಕಪಾಲ ಕಾಯ್ದೆ ತಂದವರು ಕಾಂಗ್ರೆಸ್ಸಿಗರು. ಭ್ರಷ್ಟಾಚಾರದ ವಿರುದ್ಧದ ಯುದ್ಧಕ್ಕೆ ಇವೆ ಅಸ್ತ್ರಗಳು. ಅನ್ಯರಂತೆ ಸುಳ್ಳು ಹೇಳಿಕೆ ಕೊಡುತ್ತ, ವೃಥಾ ಆರೋಪ ಮಾಡುತ್ತ ಕುಳಿತುಕೊಳ್ಳುವವರು ನಾವಲ್ಲ. ಜನಪರ ಕೆಲಸ ಆಗಬೇಕು. ಅಂದರೆ ಅಲ್ಲಿ ಕಾಂಗ್ರೆಸ್ ಆಡಳಿತ ಇರಲೇಬೇಕು. ನಾನು ಕರ್ನಾಟಕಕ್ಕೆ ಬಂದು ಹೋಗುವಾಗೆಲ್ಲ ಹೊಸ ಹುರುಪು, ಶಕ್ತಿಯೊಂದಿಗೆ ಮರಳುತ್ತೇನೆ. ಇಲ್ಲಿನ ಜನತೆ ಸ್ಪಷ್ಟ ರಾಜನೀತಿಗೆ ಸದಾ ಬೆಂಬಲಿಸುತ್ತಾರೆ. ಆ ಕಾರಣಕ್ಕಾಗಿಯೇ ಕರ್ನಾಟಕ ಎಂದರೆ ನನಗೆ ತುಂಬಾ ಇಷ್ಟ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನೆಲ್ಲ ಈಡೇರಿಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಮನಮೋಹನ ಸಿಂಗ್ ನೇತೃತ್ವದಲ್ಲಿ ಯುಪಿಎ ಸರ್ಕಾರ ಆರೋಗ್ಯ, ಕಾರ್ಮಿಕ ಕ್ಷೇತ್ರ, ಉದ್ಯೋಗ ಖಾತ್ರಿ, ಇಂದಿರಾ ಆವಾಸ್, ಸರ್ವ ಶಿಕ್ಷಾ ಅಭಿಯಾನದಂಥ ಅನೇಕ ಪ್ರಗತಿಪರ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಕಾರಣ ಭ್ರಷ್ಟಾಚಾರವೇ ಮೇಲುಗೈ ಪಡೆದು ಜನಕಲ್ಯಾಣ ಯೋಜನೆಗಳು ಸಿಹಿ ಫಲ ನೀಡಲಿಲ್ಲ ಎಂದು ಆರೋಪಿಸಿದರು.
ಹೈ-ಕ ಪ್ರಗತಿಗೆ ನೆರವಾಗಲಿ: ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಸರ್ಕಾರ ಹೈ-ಕ ಭಾಗಕ್ಕೆ ನೀಡಿರುವ ಕೊಡುಗೆಗಳ ಪಟ್ಟಿ ಮಾಡುತ್ತ 8ನೇ ಹಣಕಾಸು ಆಯೋಗದಡಿಯಲ್ಲಿ ಈ ಭಾಗಕ್ಕೂ ವಿದರ್ಭ, ತೆಲಂಗಾಣ ಮಾದರಿಯಲ್ಲೇ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ವಾರ್ಷಿಕ ಬಜೆಟ್ನಲ್ಲಿ ಈ ಭಾಗಕ್ಕೆ ಕನಿಷ್ಠ 2000 ಕೋಟಿ ಅನುದಾನ ಮೀಸಲಿಟ್ಟು ಹೈ-ಕ ಪ್ರಗತಿಗೆ ನೆರವಾಗಲಿ ಎಂದರು.
ಭಿನ್ನರಾಗ ಮೌನ!
ಮಂತ್ರಿಗಿರಿ ಸಿಕ್ಕಿಲ್ಲ ಎಂದು ಬಹಿರಂಗ ಹೇಳಿಕೆ ನೀಡುತ್ತ ಚರ್ಚೆಗೆ ಗ್ರಾಸವಾಗಿದ್ದ ಅಫಜಲ್ಪೂರ ಶಾಸಕ ಮಾಲೀಕಯ್ಯಾ ಗುತ್ತೇದಾರ್ ಗುಲ್ಬರ್ಗದಲ್ಲಿ ನಡೆದ ಸೋನಿಯಾ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಕುತೂಹಲ ಮೂಡಿಸಿದರು. ಸೋನಿಯಾ ಆಗಮನಕ್ಕೂ ಮುನ್ನ ನಡೆದ ಸ್ಥಳೀಯ ನಾಯಕರ ಭಾಷಣದಲ್ಲಿ ಮೊದಲಿಗೆ ಭಾಷಣ ಮಾಡಿದರು. ಇವರಲ್ಲದೇ ಮಂತ್ರಿಗಿರಿ ಸಿಕ್ಕಿಲ್ಲ ಎಂದು ಅತೃಪ್ತರ ಪಟ್ಟಿಯಲ್ಲಿದ್ದ ಹಲವು ಶಾಸಕರು ಭಾಗವಹಿಸಿದ್ದು ವಿಶೇಷವಾಗಿತ್ತು.
ಭಗನಗೌಡಾ ಜಿ..!
ವೇದಿಕೆಯಲ್ಲಿದ್ದವರ ಹೆಸರು ಹೇಳುವಲ್ಲಿ ಸೋನಿಯಾಗೆ ತೊಡರಾಗಿದ್ದರಿಂದ ನಗೆಗಡಲಿನ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭಾಗಣಗೌಡ ಪಾಟೀಲ್ ಸಂಕನೂರ್ ಅವರ ಹೆಸರು ಉಚ್ಛರಿಸುವಾಗ ಸೋನಿಯಾ ತಡವರಿಸುತ್ತ ಭಗನ ಗೌಡಾಜಿ... ಎಂದಾಗ ಸಮಾರಂಭದಲ್ಲಿ ನಗೆಗಡಲಿಗೆ ಕಾರಣವಾಯ್ತು.
ಬದ್ಧತೆಗೆ ಇನ್ನೊಂದು ಹೆಸರೇ ಕಾಂಗ್ರೆಸ್: ಸಿಎಂ
ಕಾಂಗ್ರೆಸ್ ಬದ್ಧತೆ ಇರುವ ಪಕ್ಷ. ಬಿಜೆಪಿ ಸೇರಿದಂತೆ ಅನ್ಯ ಪಕ್ಷಗಳಿಗೆ ಬದ್ಧತೆ ಇಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಆಶೀರ್ವದಿಸಿ ಸೋನಿಯಾ ಅವರಿಗೆ ಶಕ್ತಿ ತುಂಬಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದರು.
ಸೋನಿಯಾ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಜನಕಲ್ಯಾಣದ ಮತ್ತೊಂದು ಹೆಸರೇ ಕಾಂಗ್ರೆಸ್. ವಾಜಪೇಯಿ ಪ್ರಧಾನಿಯಾಗಿದ್ದಾಗ ಆಡ್ವಾಣಿಯವರೇ ಕಲಂ 371 ಅನುಷ್ಠಾನಕ್ಕೆ ತರಲಾಗದು ಎಂದು ತಿರಸ್ಕರಿಸಿದ್ದರು. ಆದರೆ ಕಾಂಗ್ರೆಸ್,ಸೋನಿಯಾ ಗಾಂಧಿಯವರು ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದಾರೆ. ಮಾತೆತ್ತಿದರೆ ಹೈ- ಕ ಅಭಿವೃದ್ಧಿ ಮಾತನಾಡುವ ಈಶ್ವರಪ್ಪ, ಅನಂತಕುಮಾರ್, ಸದಾನಂದಗೌಡ, ಜಗದೀಶ ಶೆಟ್ಟರ್ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ನಮೋ ಅಂದ್ರೆ ನರಹಂತಕ ಮೋದಿ!: ಬಿ.ಕೆ. ಹರಿಪ್ರಸಾದ್ ಮಾತನಾಡಿ, ನಮೋ ರ್ಯಾಲಿ, ನಮೋ ಟೀ ಸ್ಟಾಲ್ ಅಂತ ಹೇಳ್ತಿದ್ದಾರೆ. 'ನಮೋ' ಅಂದ್ರೆ ನರೇಂದ್ರ ಮೋದಿ ಅಲ್ಲ, 'ನರಮೇಧದ ಮೋದಿ'. ಗೋಧ್ರಾ ನರಮೇಧ ಮುಂದಿಟ್ಟುಕೊಂಡು ರಾಜಕೀಯ ಮಾಡಿದವರು ಪ್ರಧಾನಿ ಆಗಲಾರರು. ಅಂತಹವರು ದೇಶದ ಪ್ರಧಾನಿ ಕುರ್ಚಿ ಹತ್ತುವ ಕನಸು ಸಹ ಕಾಣಬಾರದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


