ರಾಜ್ಯದಲ್ಲಿ ಮತ್ತೆ ಗ್ಯಾಸ್ಟ್ರಬಲ್
ಬೆಂಗಳೂರು: ಕೇಂದ್ರ ಸರ್ಕಾರ ಅಡುಗೆ ಅನಿಲ ಸಿಲಿಂಡರ್ ಮಿತಿಯನ್ನು 9ರಿಂದ 12ಕ್ಕೆ ಏರಿಕೆ ಮಾಡುತ್ತಿದ್ದಂತೆ ರಾಜ್ಯದಲ್ಲಿ ಗ್ಯಾಸ್ ಬಂದ್ ಆಗಿದೆ. ಅಷ್ಟೇ ಅಲ್ಲ. ಇದೇ ಪರಿಸ್ಥಿತಿ ಇನ್ನೂ ಮೂರು ದಿನ ಮುಂದುವರಿಯುವ ಸಾಧ್ಯತೆ ಕಾಣುತ್ತಿದ್ದು, ಸಿಲಿಂಡರ್ಗಾಗಿ ಪರದಾಟ ಶುರುವಾಗುವ ಅಪಾಯವಿದೆ.
ಸಿಲಿಂಡರ್ ವಿತರಣೆ ಕೋಟಾ ಬದಲಾದ ಹಿನ್ನೆಲೆಯಲ್ಲಿ ಬುಕ್ಕಿಂಗ್ ಸ್ವೀಕರಿಸುವ ವ್ಯವಸ್ಥೆಯನ್ನೂ ಬದಲಿಸಬೇಕಿದೆ. ಹೀಗಾಗಿ ಹಿಂದುಸ್ಥಾನ ಪೆಟ್ರೋಲಿಯಂ, ಇಂಡೇನ್, ಭಾರತ್ ಸೇರಿದಂತೆ ಯಾವುದೇ ಕಂಪನಿಗಳ ಏಜೆನ್ಸಿಗಳೂ ಗ್ಯಾಸ್ ಬುಕ್ಕಿಂಗ್ ತೆಗೆದುಕೊಳ್ಳುತ್ತಿಲ್ಲ. ಅಷ್ಟೇ ಏಕೆ, ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡುವ ವೆಬ್ಸೈಟ್ ಸ್ಥಗಿತವಾಗಿದ್ದು, ದೂರವಾಣಿ ಮೂಲಕ ಬುಕ್ಕಿಂಗ್ ಮಾಡುವ ಐವಿಆರ್ಎಸ್ ಕೂಡ ಪ್ರತಿಕ್ರಿಯೆ ನೀಡದಂತಾಗಿದೆ. ಕೆಲವೊಮ್ಮೆ ಐವಿಆರ್ಎಸ್ನಲ್ಲಿ ಬುಕ್ಕಿಂಗ್ ಆದರೂ ವಿತರಣಾ ಕೇಂದ್ರಗಳು ಮಾತ್ರ ಸಿಲಿಂಡರ್ ಸದ್ಯಕ್ಕೆ ಸಿಗಲಾರದು ಎನ್ನುತ್ತಿದ್ದಾರೆ.
ಅಂದರೆ, ಈತನಕ 9 ಸಿಲಿಂಡರ್ಗೆ ಅನುಗುಣವಾಗಿ ಸಿದ್ಧಪಡಿಸಿದ್ದ ಸಾಫ್ಟ್ವೇರ್ ಬದಲಿಸಬೇಕಿದೆ. ಸಿಲಿಂಡರ್ ಕೋಟಾವನ್ನು 12ಕ್ಕೆ ವಿಸ್ತರಿಸಬೇಕಿದೆ. ಇದಕ್ಕಾಗಿ ಹೊಸ ಸಾಫ್ಟ್ವೇರ್ ಮಾಡಲಾಗಿದ್ದು, ದೇಶದ ಎಲ್ಲಾ ಗ್ಯಾಸ್ ವಿತರಕರಿಗೂ ಸಿಗುವಂತೆ ಮಾಡಬೇಕಿದೆ. ಇದು ಮುಂಬೈನಲ್ಲಿರುವ ಪೆಟ್ರೋಲಿಯಂ ಸಚಿವಾಲಯಕ್ಕೆ ಸಂಬಂಧಿಸಿದ ಕಚೇರಿಯಿಂದಲೇ ಆಗಬೇಕಿದ್ದು, ಆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಹೀಗಾಗಿ ಗ್ಯಾಸ್ ವಿತರಕರು ಬಳಸುತ್ತಿದ್ದ ಸಾಫ್ಟ್ವೇರ್ ಸ್ಥಗಿತವಾಗಿದ್ದು, ಬುಕ್ಕಿಂಗ್ ಬಂದ್ ಆಗಿದೆ. ಇನ್ನು ಹೊಸ ಸಾಫ್ಟ್ವೇರ್ ಅಳವಡಿಸಿದ ನಂತರ ಅದರಿಂದಾಗುವ ದೋಷಗಳನ್ನು ಪರಿಶೀಲಿಸಬೇಕಿದ್ದು, ನಂತರವಷ್ಟೇ ಗ್ಯಾಸ್ ಏಜೆನ್ಸಿಗಳು ಸಾಫ್ಟ್ವೇರ್ ಬಳಕೆಗೆ ಮುಂದಾಗಬೇಕು. ಆದರೆ ಗ್ಯಾಸ್ ಏಜೆನ್ಸಿಗಳಿಗೆ ಸಾಫ್ಟ್ವೇರ್ ಜೋಡಣೆ ಕಾರ್ಯ ಯಾವಾಗ ಮುಗಿಯುತ್ತದೆ. ಬುಕ್ಕಿಂಗ್ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಈತನಕ ಸಿಲಿಂಡರ್ ಬುಕ್ಕಿಂಗ್ ಜತೆಗೆ ಆಧಾರ್ ಕಾರ್ಡ್ ಜೋಡಣೆ ಅರ್ಜಿ ಸ್ವೀಕರಿಸುವಲ್ಲೇ ನಿರತರಾಗಿದ್ದ ಗ್ಯಾಸ್ ವಿತರಣಾ ಏಜೆನ್ಸಿಗಳಿಗೆ ಈಗ ತಾತ್ಕಾಲಿಕ ರಜೆ ಸಿಕ್ಕಿದಂತಾಗಿದೆ.
ಬುಕ್ಕಿಂಗ್ ಬ್ಯಾಕ್ಲಾಗ್ ಗೋಳು: ರಾಜ್ಯದಲ್ಲಿ 700ಕ್ಕೂ ಹೆಚ್ಚು ಗ್ಯಾಸ್ ಏಜೆನ್ಸಿಗಳಿದ್ದು, ಇವುಗಳ ಮೂಲಕ ನಿತ್ಯ 85,000ಕ್ಕೂ ಅಧಿಕ ಸಿಲಿಂಡರ್ಗಳು ವಿತರಣೆಯಾಗುತ್ತಿವೆ. ಬುಕ್ಕಿಂಗ್ ಬಂದ್ ಆಗಿರುವುದರಿಂದ ಒಂದು ಏಜೆನ್ಸಿಯಲ್ಲಿ ಕನಿಷ್ಠ 1000 ಸಿಲಿಂಡರ್ಗಳ ವಿತರಣೆ ಬಾಕಿ ಉಳಿಯುತ್ತದೆ. ಅಂದರೆ ಮೂರು ದಿನಗಳಿಗೆ ಸುಮಾರು 2.5ಲಕ್ಷಕ್ಕೂ ಹೆಚ್ಚು ಸಿಲಿಂಡರ್ ವಿತರಣೆ ಬಾಕಿ ಉಳಿಯಲಿದೆ. ನಂತರ ಸಿಲಿಂಡರ್ ಬುಕ್ಕಿಂಗ್ ಆರಂಭವಾದಾಗ ಗ್ರಾಹಕರು ಒಮ್ಮೆಲೆ ಬುಕ್ಕಿಂಗ್ ಮತ್ತು ಸಿಲಿಂಡರ್ಗಾಗಿ ಮುಗಿ ಬೀಳುತ್ತಾರೆ. ಆಗ ಒತ್ತಡ ನಿವಾರಿಸಲು ಏಜೆನ್ಸಿಗಳಿಗೆ ಒಂದು ತಿಂಗಳೇ ಬೇಕಾಗುತ್ತದೆ. ಹಾಗೆಯೇ ಸಿಲಿಂಡರ್ ಬುಕ್ ಮಾಡಿದರೂ ಸಿಗುವುದು ತುಂಬಾ ವಿಳಂಬವಾಗಲಿದೆ.
ಬದಲಾಗುತ್ತಿರುವ ಸಿಲಿಂಡರ್ ಕೋಟಾ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಸಬ್ಸಿಡಿದರದಲ್ಲಿ ಸಿಗುವುದು 10 ಸಿಲಿಂಡರ್ ಮಾತ್ರ. ಸಿಬ್ಸಿಡಿ ಸಿಲಿಂಡರ್ ಸಂಖ್ಯೆ 12ಕ್ಕೆ ಏರಬೇಕಾದರೆ ಗ್ರಾಹಕರು ಮಾರ್ಚ್ ವರೆಗೂ ಕಾಯಬೇಕು. ಆದ್ದರಿಂದ ಈಗ ಈಗಾಗಲೇ 9 ಸಿಲಿಂಡರ್ ಪಡೆದಿರುವವರಿಗೆ ಹೆಚ್ಚುವರಿವಾಗಿ ಒಂದು ಸಿಲಿಂಡರ್ ಮಾತ್ರ ಸಿಗಲಿದೆ ಎಂದು ಗ್ಯಾಸ್ ವಿತರಣಾ ಸಂಸ್ಥೆ ಮಾಲೀಕರು ಹೇಳುತ್ತಾರೆ.
ಆಧಾರ್ ಕೂಡ ಬಂದ್
ಸಿಲಿಂಡರ್ ಸಬ್ಸಿಡಿಸಿಗೆ ಆಧಾರ್ ಆತುರವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡುತ್ತಿದ್ದಂತೆ ರಾಜ್ಯದಲ್ಲಿ ಗ್ಯಾಸ್ ವಿತರಕರು ಆಧಾರ್ ಕಾರ್ಡ್ ಸಹಿತ ಲಿಂಕ್ ಅರ್ಜಿ ಸ್ವೀಕಾರ ಸ್ಥಗಿತ ಮಾಡಿದ್ದಾರೆ. ಆದರೂ ಅನೇಕ ಕಡೆ ಗ್ರಾಹಕರು ಆಧಾರ್ ಕಾರ್ಡ್ ಲಿಂಕ್ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದು, ಇದನ್ನು ಗ್ಯಾಸ್ ವಿತರಣಾ ಕೇಂದ್ರಗಳು ಸ್ವೀಕರಿಸುತ್ತಿಲ್ಲ
ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

