ಪ್ರಧಾನ ಸುದ್ದಿ

ಸಿಇಟಿ ಕೌನ್ಸೆಲಿಂಗ್ನಲ್ಲಿ ವಂಚನೆ, 70 ಮಂದಿ ಸೀಟು ರದ್ದು ಸಂಭವ

ಸಿಇಟಿ ಕೌನ್ಸೆಲಿಂಗ್ನಲ್ಲಿ ವಂಚನೆ, 70 ಮಂದಿ ಸೀಟು ರದ್ದು ಸಂಭವ
Published On :

ಕನ್ನಡಪ್ರಭ ವಾರ್ತೆ     ಬೆಂಗಳೂರು     ಫೆ.3
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಸಕ್ತ ಸಾಲಿನ ಕೌನ್ಸೆಲಿಂಗ್ನಲ್ಲಿ ಅತಿದೊಡ್ಡ ವಂಚನೆಯಾಗಿದೆ. 70 ವಿದ್ಯಾರ್ಥಿಗಳಿಂದ ನೋಟಿಸ್ಗೆ ಉತ್ತರ ಪಡೆದು ಸೀಟುಗಳನ್ನು ರದ್ದುಗೊಳಿಸಲಾಗುವುದು.
ಕಳೆದ ಜೂನ್ನಿಂದ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿರುವ ವೈದ್ಯ, ದಂತವೈದ್ಯ ಹಾಗೂ ಎಂಜಿನಿಯರಿಂಗ್ ಪದವಿ ಕೋರ್ಸ್ಗಳ ಕೌನ್ಸೆಲಿಂಗ್ ಅನ್ನು ಸ್ವತಃ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ವ್ಯಾಖ್ಯಾನಿಸಿದ ಪರಿಯಿದು.
ವೃತ್ತಿ ಶಿಕ್ಷಣ ಪ್ರವೇಶ ಕಾಯಿದೆ ನಿಯಮ 7ನ್ನು ಉಲ್ಲಂಘಿಸಿ 122 ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ತಿದ್ದಲಾಗಿದೆ. ನಿಯಮದ ಪ್ರಕಾರ ದಾಖಲೆ ಪರಿಶೀಲನೆ ಬಳಿಕ ಜಾತಿ, ಕೆಟಗರಿ ಅಥವಾ ಆದಾಯ ಮಿತಿಯನ್ನು ತಿದ್ದಲು ಅವಕಾಶವಿರುವುದಿಲ್ಲ. ಆದರೆ 122 ಅಭ್ಯರ್ಥಿಗಳ ದಾಖಲೆಗಳನ್ನು ತಿದ್ದಿ 70 ವಿದ್ಯಾರ್ಥಿಗಳಿಗೆ ಸೀಟು ವಿತರಿಸಲಾಗಿದೆ. ಈ ಅಕ್ರಮವನ್ನು ಏನೆಂದು ಹೇಳಬೇಕೆಂದು ತಿಳಿಯುತ್ತಿಲ್ಲ. ಇದೊಂದು ದೊಡ್ಡ ವಂಚನೆ ಎಂದು ಅವರು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.      


ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈಗಾಗಲೇ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ. ಕುಲಕರ್ಣಿ ಅವರನ್ನು ಅಮಾನತುಗೊಳಿಸಲಾಗಿದ್ದು, ಶೀಘ್ರವೇ ಸಿಐಡಿ ತನಿಖೆ ಆರಂಭಿಸಲಾಗುವುದು. ತನಿಖೆ ವ್ಯಾಪ್ತಿಗೆ ಯಾವ ವರ್ಷದ ಕೌನ್ಸೆಲಿಂಗ್ ಸೇರಿಸಬೇಕು ಹಾಗೂ ಯಾವ ಕೋರ್ಸ್ನ ಕೌನ್ಸೆಲಿಂಗ್ ಸೇರಿಸಬೇಕು ಎಂದು ಚರ್ಚಿಸಲಾಗುತ್ತಿದೆ ಎಂದು ದೇಶಪಾಂಡೆ ಸ್ಪಷ್ಟಪಡಿಸಿದರು.
ದಾಖಲೆ ಪರಿಶೀಲನೆಗಾಗಿ ಮೇ 24ರಂದು ಒಂದು ಆದೇಶ ಹೊರಡಿಸಲಾಗಿದ್ದು, ಇದರ ಪ್ರಕಾರ ದಾಖಲೆ ಪರಿಶೀಲನೆಯ ಅವಧಿಯೊಳಗೆ ರಾಜ್ಯದ 13 ಕೇಂದ್ರಗಳಲ್ಲಿ ಜಾತಿ, ಕೆಟಗರಿ ಹಾಗೂ ಆದಾಯ ಮಿತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಯಾವುದೇ ಬದಲಾವಣೆಯಿದ್ದರೂ ದಾಖಲೆ ಪರಿಶೀಲನೆ ವೇಳಾಪಟ್ಟಿಯ ಸಮಯದಲ್ಲಿಯೇ ಮಾಡಿಕೊಳ್ಳಬೇಕು.
ಆದರೆ ಅಧಿಕೃತ ದಾಖಲೆ ಪರಿಶೀಲನೆ ಬಳಿಕ 122 ವಿದ್ಯಾರ್ಥಿಗಳು ಜಾತಿ, ಕೆಟಗರಿ ಹಾಗೂ ಆದಾಯ ಮಿತಿ ಬದಲಿಸಲು ಅರ್ಜಿ ಸಲ್ಲಿಸಿದ್ದಾರೆ. ಅನಧಿಕೃತವಾಗಿ ಈ ಅರ್ಜಿಗಳನ್ನು ಪುರಸ್ಕರಿಸಿರುವ ಪ್ರಾಧಿಕಾರದ ಆಡಳಿತಾಧಿಕಾರಿ ಕೌನ್ಸೆಲಿಂಗ್ನ ನಿಯಮ ಉಲ್ಲಂಘಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಅರ್ಜಿಗಳನ್ನು ಒಪ್ಪಿಕೊಳ್ಳಬಾರದಿತ್ತು. ಅರ್ಜಿಯನ್ನು ನೇರವಾಗಿ ತಿರಸ್ಕರಿಸಬೇಕಿದ್ದ ಆಡಳಿತಾಧಿಕಾರಿ, ಎಲ್ಲ ಅರ್ಜಿಗಳ ಮೇಲೆ 'ಪರಿಶೀಲಿಸಿ ಮತ್ತು ಸರಿಪಡಿಸಿ' ಎಂದು ಷರಾ ಬರೆದಿದ್ದಾರೆ ಎಂದು ದೇಶಪಾಂಡೆ ವಿವರಿಸಿದರು.
ಕಾನೂನು ಸಮಿತಿ ರಚನೆ:
ಇಲಾಖೆ ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿರುವ 70 ಪ್ರಕರಣಗಳಿಗೆ ಸಂಬಂಧಿಸಿ ಎಲ್ಲ ವಿದ್ಯಾರ್ಥಿಗಳಿಗೆ, ಜಾತಿ ಪ್ರಮಾಣಪತ್ರ ನೀಡಿರುವ ತಹಶೀಲ್ದಾರ್ಗೆ ಹಾಗೂ ಅಂಕಪಟ್ಟಿ ನೀಡಿರುವ ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇವರು ನೀಡುವ ಉತ್ತರವನ್ನು ಪರಿಶೀಲಿಸಲು ಕಾನೂನು ಸಮಿತಿ ರಚಿಸಲಾಗಿದೆ.
ಇದಲ್ಲದೇ ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಮಾಹಿತಿಗಳನ್ನು ತಿದ್ದಲು ಸಹಾಯ ಮಾಡಿರುವ ಪ್ರಾಧಿಕಾರದ ಇತರ ಸಿಬ್ಬಂದಿಯನ್ನು ಗುರುತಿಸಿ ನೋಟಿಸ್ ಜಾರಿ ಮಾಡಲಾಗುವುದು. ಇನ್ನು ಮುಂದೆ ಪ್ರಾಧಿಕಾರದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಎಚ್ಚರವಹಿಸಲಾಗುವುದು ಎಂದು ದೇಶಪಾಂಡೆ ಹೇಳಿದರು.



ಕುಲಕರ್ಣಿ ಮರುನೇಮಕಕ್ಕೆ ವಿವರಣೆ ನೀಡಿ
ಪ್ರಾಧಿಕಾರದಲ್ಲಿ ಕುಲಕರ್ಣಿ ಅವರನ್ನು ಮುಂದುವರಿಸಿದರೆ ಪಾರದರ್ಶಕ ಕೌನ್ಸೆಲಿಂಗ್ ನಡೆಸಲಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ನಿನ್ನೆ ಮಾಧ್ಯಮದಲ್ಲಿ ಓದಿದ ಬಳಿಕ ಗೊತ್ತಾಯಿತು. 2012ರ ಕೌನ್ಸೆಲಿಂಗ್ ಸಂದರ್ಭದಲ್ಲಿ ಇದೇ ಆರೋಪದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಿದ ಬಳಿಕ ಮತ್ತೆ ಆಡಳಿತಾಧಿಕಾರಿಯಾಗಿ ನೇಮಿಸಲು ಕಾರಣವೇನು? ಉನ್ನತ ಶಿಕ್ಷಣ ಇಲಾಖೆ ಇದನ್ನು ಏಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಈಗಾಗಲೇ ವಿವರಣೆ ಕೇಳಿದ್ದೇನೆ. ಈ ಸಂಬಂಧವೂ ತನಿಖೆ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಆ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಚಕ್ರವರ್ತಿ ಮೋಹನ್ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುತ್ತದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಕ್ರವರ್ತಿ ಮೋಹನ್ ಅವರ ಗಮನಕ್ಕೆ ಬಂದು ದಾಖಲೆ ತಿದ್ದಲಾಗಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದ್ದರಿಂದ ಯಾವುದೇ ಅಧಿಕಾರಿ ವಿರುದ್ಧ ಆರೋಪ ಮಾಡುವುದಿಲ್ಲ. ಒಂದೊಮ್ಮೆ ಸರ್ಕಾರದ ಗಮನಕ್ಕೆ ಬಂದಿದ್ದರೆ ತಪ್ಪಿತಸ್ಥರಾಗಿರುವ ಯಾವುದೇ ಅಧಿಕಾರಿಗಳ ಬಗ್ಗೆ ಕರುಣೆ ತೋರುವುದಿಲ್ಲ ಎಂದು ದೇಶಪಾಂಡೆ ಹೇಳಿದರು.
ಗುಂಬಿ ಸಂಸ್ಥೆ ಜತೆಗಿನ ಒಪ್ಪಂದ ಕುರಿತು ತನಿಖೆ
ಸಿಇಟಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ತಯಾರಿಗಾಗಿ ದೂರಶಿಕ್ಷಣ ವ್ಯವಸ್ಥೆ ಮಾಡಲು ಗುಂಬಿ ಸಂಸ್ಥೆಗೆ 13 ಕೋಟಿ ಗುತ್ತಿಗೆ ನೀಡಲಾಗಿದೆ. ಈ ಪ್ರಕರಣದಲ್ಲಿಯೂ ಅವ್ಯವಹಾರವಾಗಿರುವ ಬಗ್ಗೆ ಸಂಶಯವಿದೆ. ಇದರಲ್ಲಿಯೂ ಕುಲಕರ್ಣಿ ಕೈವಾಡವಿದೆ ಎಂಬ ಬಗ್ಗೆ ನನಗೂ ದೂರು ಬಂದಿದೆ. ಈಗಾಗಲೇ ಪರಿಶೀಲನೆ ನಡೆಸಲಾಗುತ್ತಿದೆ ಎಂದು ದೇಶಪಾಂಡೆ ಹೇಳಿದರು.


ಬೆಳಕಿಗೆ ತಂದಿದ್ದ ಕ.ಪ್ರ.
'ವೈದ್ಯ ಸೀಟಿಗಾಗಿ ಜಾತಿಯೇ ಬದಲು' ಎಂದು 'ಕನ್ನಡಪ್ರಭ'ವು ಸೆ.11ರಂದೇ ವಿಶೇಷ ವರದಿ ಪ್ರಕಟಿಸಿತ್ತು. ಇದಲ್ಲದೇ ಸುಮಾರು 50ಕ್ಕೂ ಅಧಿಕ ಸೀಟುಗಳ ಹಂಚಿಕೆಗೆ ಸಂಬಂಧಿಸಿ ದಾಖಲೆಗಳು ಅದಲು ಬದಲಾಗಿದೆ ಎಂದು ಪತ್ರಿಕೆ ಅಂದೇ ಎಚ್ಚರಿಸಿತ್ತು. ಆ ಸಂದರ್ಭದಲ್ಲಿಯೇ ಶಿಕ್ಷಣ ಇಲಾಖೆ ಎಚ್ಚೆತ್ತಿದ್ದರೆ ಸುಮಾರು 70 ಸೀಟುಗಳು ಅರ್ಹ ವಿದ್ಯಾರ್ಥಿಗಳ ಪಾಲಾಗುತ್ತಿತ್ತು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಅವರನ್ನು ಪ್ರಶ್ನಿಸಿದಾಗ, ಆ ವಿದ್ಯಾರ್ಥಿನಿಯ ಸೀಟನ್ನು ಹಿಂಪಡೆಯಲಾಗಿದೆ ಎಂದಷ್ಟೇ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.