ಪ್ರಧಾನ ಸುದ್ದಿ

ಇನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಪಂಪ್‌ಗನ್

Published On :

ಕ.ಪ್ರ.ವಾರ್ತೆ ,  ಶಿವಮೊಗ್ಗ ,  ಫೆ. 4
ಅರಣ್ಯ ಇಲಾಖೆ ಸಿಬ್ಬಂದಿ ಈಗ ಹೊಂದಿರುವ ಡಬಲ್ ಬ್ಯಾರಲ್ ಬಂದೂಕುಗಳ ಜತೆಗೆ ಅತ್ಯಾಧುನಿಕವಾದ ಅಮೆರಿಕದ ಪಂಪ್‌ಗನ್‌ಗಳನ್ನು ನೀಡಲಾಗುವುದು. ಈ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸುಮಾರು 400 ಪಂಪ್‌ಗನ್‌ಗಳು ಮಾರ್ಚ್ ಒಳಗೆ ಬರಲಿವೆ ಎಂದರು.
ಪೊಲೀಸ್ ಇಲಾಖೆಯೊಂದಿಗೆ ಒಪ್ಪಂದ: ಡಬಲ್ ಬ್ಯಾರಲ್ ಬಂದೂಕುಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ನಮ್ಮ ಗಮನದಲ್ಲಿದೆ. ಸುಮಾರು 1,200 ಬಂದೂಕುಗಳು ನಮ್ಮಲ್ಲಿವೆ. ಜೊತೆಗೆ ಅತ್ಯಾಧುನಿಕ ವಾಹನಗಳನ್ನು ಇಲಾಖೆಗೆ ಒದಗಿಸಲಾಗುವುದು. ಇವುಗಳ ಬಳಕೆಯಿಂದ ಕಾಡನ್ನು ಇನ್ನಷ್ಟು ಸಮರ್ಥವಾಗಿ ರಕ್ಷಿಸುವ ಕಾರ್ಯ ಮಾಡಬಹುದು ಎಂದರು.
ದಿನಗೂಲಿ ಸಮಸ್ಯೆಗೆ ಪರಿಹಾರ: ಅರಣ್ಯ ಇಲಾಖೆ ದಿನಗೂಲಿಗಳ ಸಮಸ್ಯೆ ಬಗ್ಗೆ ಅರಿವಿದೆ. 2006ರವರೆಗೆ 10 ವರ್ಷ ಕೆಲಸ ಮಾಡಿರುವ ಎಲ್ಲ ದಿನಗೂಲಿಗಳ ಪಟ್ಟಿ ಮಾಡಲಾಗಿದ್ದು, ಅವರಿಗೆ ಕ್ಷೇಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಲಭ್ಯವಿರುವ ಎಲ್ಲ ಸವಲತ್ತು ನೀಡಲಾಗುವುದು ಎಂದರು. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕುಪತ್ರ ವಿತರಿಸುವ ಕಾರ್ಯ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಬಂದಿರುವ ಅರ್ಜಿಗಳಲ್ಲಿ ಈಗಾಗಲೇ ಶೇ.16ರಷ್ಟು ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಬಹಳಷ್ಟು ಅರ್ಜಿಗಳು ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ ಎಂದರು.
ಡಿವೈಎಸ್ಪಿ ಧರ್ಮೇಂದ್ರ ಕೇಸು: ಡಿವೈಎಸ್ಪಿ ಧರ್ಮೇಂದ್ರ ಅವರು ಜಿಂಕೆ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅವರು ಎಷ್ಟೇ ದೊಡ್ಡವರಾಗಿದ್ದರೂ ಸರಿ ಎಂದರು.
ಮಾನವ-ವನ್ಯಪ್ರಾಣಿ ಸಂಘರ್ಷ ಪ್ರಕರಣಗಳನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿಗೆ ಸೌರ ವಿದ್ಯುತ್ ಬೇಲಿ ಹಾಕಿಕೊಳ್ಳುವುದಾದರೆ ಸರ್ಕಾರ ಶೇ.50ರಷ್ಟು ಸಹಾಯಧನ ನೀಡಲಿದೆ ಎಂದರು.
ಹುಲಿ, ಆನೆ ಸಂತತಿರಾಜ್ಯವೇ ನಂ.1
ಹುಲಿ ಹಾಗೂ ಆನೆಗಳ ಸಂತತಿ ರಾಜ್ಯದಲ್ಲಿ ವೃದ್ಧಿಯಾಗಿದ್ದು, ಈಗ ನಾವೇ ನಂ.1 ಎಂದು ಅರಣ್ಯ ಖಾತೆ ಸಚಿವ ರಮಾನಾಥ ರೈ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಲಿ ಗಣತಿ ನಡೆಯುತ್ತಿದೆ. ಅವುಗಳ ನಿರ್ದಿಷ್ಟ ಸಂಖ್ಯೆ ಎಷ್ಟೆಂದು ಇನ್ನೂ ಗೊತ್ತಾಗಿಲ್ಲ. ಆದರೆ, ಸಂತತಿ ವೃದ್ಧಿಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಹಾಲಿ ಸುಮಾರು 6000 ಆನೆಗಳಿವೆ. ಸಂತತಿ ಹೆಚ್ಚಾಗಿರುವುದೂ ಸಹ  ಅವು ಊರೊಳಗೆ ಬರಲು ಕಾರಣವಿರಬಹುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.