ಪ್ರಧಾನ ಸುದ್ದಿ

ದಿನಾಚರಣೆಗಷ್ಟೇ ಮೀಸಲಾದ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ

ದಿನಾಚರಣೆಗಷ್ಟೇ ಮೀಸಲಾದ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ
Published On :

ಆ ವೇದಿಕೆ ಹುಟ್ಟಿನ ಗುಟ್ಟೇ ರಾಷ್ಟ್ರೀಯ ಚಿಂತನೆ.
ಆದರೆ ವೇದಿಕೆ ಮೇಲೆ ಸದ್ಯಕ್ಕೆ ಉಳಿದಿರುವವರು ಇಬ್ಬರೇ ಇಬ್ಬರು..!
ರಾಜ್ಯದ ಮಾಜಿ ಮುಖ್ಯಮಂತ್ರಿ, ಮೌಲ್ಯಾಧಾರಿತ ರಾಜಕಾರಣದ ಪ್ರವರ್ತಕ ಎಂದೇ ಹೆಸರಾದ ದಿ. ರಾಮಕೃಷ್ಣ ಹೆಗಡೆ ಅವರು ರಾಜಕೀಯೇತರ ಉದ್ದೇಶಕ್ಕಾಗಿ ಆರಂಭಿಸಿದ 'ರಾಷ್ಟ್ರೀಯ ನವ ನಿರ್ಮಾಣ ವೇದಿಕೆ'ಯ ಪ್ರಸ್ತುತ ಸ್ಥಿತಿ ಇದು.
ರಾಜಕೀಯ ವೇದಿಕೆಯಲ್ಲಿ ಹೆಗಡೆಯವರ ಕನಸು, ಆಶಯ, ಮೌಲ್ಯ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವುದಕ್ಕೆ ಸಾವಿರಾರು ಜನರಿದ್ದಾರೆ. ಆದರೆ ಅವರೇ ಸ್ಥಾಪಿಸಿದ್ದ ರಾಷ್ಟ್ರೀಯ ನವನಿರ್ಮಾಣ ವೇದಿಕೆಯಲ್ಲಿ ಸದ್ಯಕ್ಕೆ ಭರ್ತಿಯಾಗಿರುವ ಆಸನ ಕೇವಲ ಎರಡು. ಸಂಸ್ಥೆಯ ಅಧ್ಯಕ್ಷರೂ ಹೆಗಡೆಯವರ ಪುತ್ರಿಯೂ ಆದ ಮಮತಾ ನಿಚ್ಚಾನಿ, ಕಾರ್ಯದರ್ಶಿ ಡಾ.ಎಂ.ಪಿ. ನಾಡಗೌಡ ಅವರನ್ನು ಬಿಟ್ಟರೆ ಈ ವೇದಿಕೆಯ ಬಹುಪಾಲು ಆಸನಗಳು ಖಾಲಿಯಾಗಿವೆ. ಮಾತ್ರವಲ್ಲ ಹೆಗಡೆಯವರ ಜನ್ಮ ದಿನಾಚರಣೆ ಹಾಗೂ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಮಾತ್ರ ಇದರ ಚಟುವಟಿಕೆ ಸೀಮಿತವಾಗಿದೆ.
ದೇಶದ ಪರ್ಯಾಯ ರಾಜಕೀಯ ಶಕ್ತಿ ಎಂದು ಪರಿಗಣಿಸಲ್ಪಟ್ಟಿದ್ದ ಜನತಾ ಪರಿವಾರದ ನಾಯಕರೇ ಪರಸ್ಪರ ರಚ್ಚೆ ಹಿಡಿದು ಬಡಿದಾಟಕ್ಕೆ ನಿಂತಾಗ ಹೊಸ ಸಾಧ್ಯತೆಯ ನಿರೀಕ್ಷೆ ಹುಟ್ಟಿಸಿದ್ದು ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ. ಆದರೆ ಅವರನ್ನೇ ಜನತಾ ದಳದಿಂದ ಉಚ್ಚಾಟನೆ ಮಾಡಲಾಗಿತ್ತು.
ಆಗ ಹುಟ್ಟಿಕೊಂಡಿತ್ತು: ಆಗ ರಾಜಕೀಯ ನೆಲೆ ಕಳೆದುಕೊಂಡ ಹೆಗಡೆ, ದೇಶದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲು ಹುಟ್ಟು ಹಾಕಿದ್ದ ರಾಜಕೀಯೇತರ ಸಂಸ್ಥೆ 'ರಾಷ್ಟ್ರೀಯ ನವ ನಿರ್ಮಾಣ ವೇದಿಕೆ'. ಆದರೆ ಈ ವೇದಿಕೆ ಈಗ ಸಂಪೂರ್ಣ ನೆಲೆ ಕಳೆದುಕೊಂಡಿದೆ. ರಾಮಕೃಷ್ಣ ಹೆಗಡೆ ಅವರ ರಾಜಕೀಯ ಗೂಡಿನಿಂದ ಒಂದೊಂದೆ ಹಕ್ಕಿಗಳು ಹಾರಿ ಹೋಗಿ ಬೇರೆ ಬೇರೆ ಮರದ ಆಶ್ರಯ ಪಡೆದು ಇಂದಿಗೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ರಾಷ್ಟ್ರೀಯ ಚಿಂತನೆ ಉದ್ದೇಶದಿಂದ ಅವರು ಆರಂಭಿಸಿದ ನವ ನಿರ್ಮಾಣ ವೇದಿಕೆ ಮಾತ್ರ ಹೆಗಡೆಯವರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಸುವುದಕ್ಕಷ್ಟೇ ಸೀಮಿತವಾಗಿದೆ!
ರಾಮಕೃಷ್ಣ ಹೆಗಡೆ ಅವರು 90ರ ದಶಕದಲ್ಲಿ ಆರಂಭಿಸಿದ್ದ ರಾಷ್ಟ್ರೀಯ ನವನಿರ್ಮಾಣ ವೇದಿಕೆ ಈಗ ಏನು ಮಾಡುತ್ತಿದೆ? ಅದರ ಕಾರ್ಯ ಚಟುವಟಿಕೆ ಏನು? ಎಂದು ಶಿರಸಿಯ ದೀಪರಾಜ್ ಹಕ್ಕಿಮನೆ ಎಂಬುವರು ಬರೆದ ಪತ್ರದ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಿದ 'ಕನ್ನಡಪ್ರಭ'ಕ್ಕೆ ಲಭ್ಯವಾದ ವಿಚಾರಗಳಿವು.
ಬೇರೆ ಬೇರೆ ಪಕ್ಷಕ್ಕೆ:  ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಅಸ್ತಿತ್ವ ಈಗ ಹೆಚ್ಚು- ಕಡಿಮೆ ಮಾಯವಾಗಿದೆ. ಹೆಗಡೆಯವರ ಆಶಯ ಜೀವಂತವಾಗಿಡಲು ಇದೇ ಸೂಕ್ತ ವೇದಿಕೆ ಎಂದು ಹೇಳಿದ್ದ ಅವರ ಶಿಷ್ಯರೆಲ್ಲರೂ ಈಗ ಬೇರೆ ಬೇರೆ ಪಕ್ಷ ಸೇರಿದ್ದಾರೆ. ವೇದಿಕೆಗೆ ಹೆಗಡೆಯವರ ಪುತ್ರಿ ಮಮತಾ ನಿಚ್ಚಾನಿ ಅವರೇ ಅಧ್ಯಕ್ಷರಾದರೂ ಎಲ್ಲವನ್ನೂ ಅವರೊಬ್ಬರೇ ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ವೇದಿಕೆ ಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ 'ಕನ್ನಡಪ್ರಭ'ದ ಜತೆ ಮಾತನಾಡಿದ ವೇದಿಕೆ ಕಾರ್ಯದರ್ಶಿ ಹಾಗೂ ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂ.ಪಿ. ನಾಡಗೌಡ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
'ರಾಷ್ಟ್ರದ ರಾಜಕೀಯ ಸ್ಥಿತ್ಯಂತರ ಸಂದರ್ಭದಲ್ಲಿ ಹೆಗಡೆ ಅವರನ್ನು ಜನತಾ ದಳದಿಂದ ಉಚ್ಚಾಟಿಸಲಾಯಿತು. ಅಂದು ಎಚ್.ಡಿ. ದೇವೇಗೌಡರು ದೇಶದ ಪ್ರಧಾನಿಯಾಗಿದ್ದರು. ಲಾಲು ಪ್ರಸಾದ್ ಯಾದವ್ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ರಾಜಕೀಯ ನೆಲೆ ಕಳೆದುಕೊಂಡ ಹೆಗಡೆ ಪರ್ಯಾಯ ತಾಣವನ್ನು ಹುಡುಕಲಿಲ್ಲ. ಲೋಕಶಕ್ತಿ ಪಕ್ಷವನ್ನು ಕಟ್ಟುವುದಕ್ಕೆ ಮುನ್ನ ಅವರು ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚಿಸಲು ನವನಿರ್ಮಾಣ ವೇದಿಕೆಯನ್ನು ರಾಜಕೀಯೇತರ ಚಿಂತನೆಗಾಗಿ ಸ್ಥಾಪಿಸಿದ್ದರು.
ಆರಂಭಕ್ಕೆ ಚೆನ್ನಾಗಿತ್ತು: ಮೊದಲು ಹೆಗಡೆಯವರೇ ಇದರ ಅಧ್ಯಕ್ಷರಾಗಿದ್ದರು. ದಿ. ಕೃಷ್ಣ ಅಯ್ಯರ್, ವಿಶ್ವನಾಥ್ ರೆಡ್ಡಿ ಮುದ್ನಾಳ್, ಜೀವರಾಜ್ ಆಳ್ವಾ, ಶ್ರೀಕಂಠಮೂರ್ತಿ, ಗಣೇಶ್, ಧರ್ಮಪ್ಪ, ಆರ್.ವಿ.ದೇಶಪಾಂಡೆ ಮೊದಲಾದವರು ಜತೆಗಿದ್ದರು. ಆದರೆ ಈ ವೇದಿಕೆಗೆ ನಿಶ್ಚಿತವಾದ ಸ್ಥಳ ಇರಲಿಲ್ಲ. ಆರಂಭದಲ್ಲಿ ಚೆನ್ನಾಗಿಯೇ ನಡೆಯಿತು.
ತೆಹಲ್ಕಾ ಪತ್ರಿಕೆ ಬಹಿರಂಗಪಡಿಸಿದ ಲಂಚ ಪ್ರಕರಣದಲ್ಲಿ ಕರೆವೆಣ್ಣುಗಳನ್ನು ಬಳಸಿದ್ದು ಸೂಕ್ತವೇ? ಸಂವಿಧಾನ ತಿದ್ದುಪಡಿ ಸೇರಿದಂತೆ ಮಹತ್ವದ ವಿಚಾರದ ಬಗ್ಗೆ ರಾಷ್ಟ್ರಮಟ್ಟದ ಚರ್ಚೆ ಈ ವೇದಿಕೆಯಲ್ಲಿ ನಡೆದಿತ್ತು. ಆದರೆ ಹೆಗಡೆ ಅವರು ಮೃತಪಟ್ಟ ನಂತರ ಸಂಸ್ಥೆ ಬಡವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಮೊದಲು ಕೃಷ್ಣ ಅಯ್ಯರ್ ಅವರ ಮನೆಯಲ್ಲಿ ಸಂಸ್ಥೆಯ ಕಚೇರಿ ಇತ್ತು. ಈಗ ಅದೂ ಇಲ್ಲ. ನಾನು ಹಾಗೂ ಮಮತಾ ಸಂಸ್ಥೆಯನ್ನು ಉಳಿಸಿಕೊಳ್ಳುವುದಕ್ಕೆ ತಕ್ಕಮಟ್ಟಿನ ಪ್ರಯತ್ನ ನಡೆಸಿದ್ದೇವೆ. ಆದರೂ ವೇದಿಕೆ ಆಶಯ ಈಡೇರಿಲ್ಲ ಎಂಬ ಚಿಂತೆ ಇದೆ ಎಂದು ಹೇಳಿದರು. ಹೆಗಡೆಯವರು ಜಾರಿಗೆ ತಂದಿದ್ದ ಅಭಿವೃದ್ಧಿ ಕಾರ್ಯಗಳು ಇಂದು ಬೇರೆ ಬೇರೆ ಸ್ವರೂಪದಲ್ಲಿ ಜಾರಿಗೆ ಬರುತ್ತಿವೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಅವರ ಶಿಷ್ಯಂದಿರು ಬೇಕಾದಷ್ಟು ಮಂದಿ ಇದ್ದಾರೆ. ಆದರೂ ವೇದಿಕೆ ಬಡವಾಗಿರುವುದು ವಿಷಾದ ತಂದಿದೆ ಎನ್ನುವಾಗ ನಾಡಗೌಡರ ಕಣ್ಣಾಲಿಗಳಲ್ಲಿ ನೀರಾಡಿತು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.