ಮುಸ್ಲಿಂ ಹೆಣ್ಮಕ್ಕಳ ನೃತ್ಯಕ್ಕೆ ಫತ್ವಾ ಅಡ್ಡಿ
ಕನ್ನಡಪ್ರಭ ವಾರ್ತೆ , ಮಂಗಳೂರು , ಫೆ.4
ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಭಾಗವಹಿಸಕೂಡದು ಎಂದು ಕೊಡಿಪ್ಪಾಡಿ ಪಳ್ಳಿ ಉಸ್ತಾದ್ (ಮಸೀದಿ ಧರ್ಮಗುರು) ಫತ್ವಾ ಹೊರಡಿಸಿದ್ದಾರೆ. ಪರಿಣಾಮ ಪುತ್ತೂರು ಕೊಡಿಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಈ ವಿಚಾರವನ್ನು ಶಾಲೆ ಮುಖ್ಯಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪತ್ರ ಬರೆದು ತಿಳಿಸಿದ್ದಾರೆ. 'ಮಕ್ಕಳಿಗೆ ಇಷ್ಟ ಇಲ್ಲದಿದ್ದರೆ ಬಲವಂತ ಮಾಡಬೇಡಿ' ಎಂಬ ಉತ್ತರ ಬಂದಿದೆ. ಪರಿಣಾಮ ಶಾಲೆಯ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಕ್ಕಳೆಲ್ಲ ವೇದಿಕೆಯಲ್ಲಿ ನೃತ್ಯ, ಹಾಡು, ಅಭಿನಯದಲ್ಲಿ ಮಿಂಚುತ್ತಿದ್ದರೆ, ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ದೂರದಲ್ಲಿ ಬೇಸರದಿಂದ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
'ಕ್ರೀಡೆಯಲ್ಲಿ ಒಂದು ಸಮುದಾಯದ ವಿದ್ಯಾರ್ಥಿನಿಯರು ಭಾಗವಹಿಸುತ್ತಿಲ್ಲ. ಅವರಿಗೆ ತುಂಬಾ ಆಸಕ್ತಿ ಇದೆ. ಆದರೆ ನಿರ್ಬಂಧ ವಿಧಿಸಿರುವುದರಿಂದ ಬರುತ್ತಿಲ್ಲ. ಸಮುದಾಯದ ಹುಡುಗರು ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ನಾಟಕ, ನೃತ್ಯ, ಹಾಡು ಇದರಲ್ಲಿ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಹುಡುಗರಿಗೂ ನಿರ್ಬಂಧ ಇದೆ' ಎಂದು ಶಾಲೆ ದೈಹಿಕ ಶಿಕ್ಷಕರು ವಿವರಿಸಿದ್ದಾರೆ.
ಉಸ್ತಾದ್ಗಳಿಗೆ ತಿಳಿ ಹೇಳಿ: 'ಕೊಡಿಪ್ಪಾಡಿ ಶಾಲೆ ಮಾತ್ರವಲ್ಲ, ಇಂಥ ನಿರ್ಬಂಧ ಗ್ರಾಮೀಣ ಶಾಲೆಗಳಲ್ಲಿ ಹೆಚ್ಚುತ್ತಿದೆ. ಇದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ತಂದೆ, ತಾಯಿಯೇ ಮಕ್ಕಳಿಗೆ ನಿಂದಿಸಬಾರದು ಎಂಬಲ್ಲಿವರೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಕಾನೂನಿನಲ್ಲಿದೆ. ಇದನ್ನು ಪಳ್ಳಿಗಳ ಉಸ್ತಾದ್ಗಳು ತಿಳಿದುಕೊಳ್ಳಬೇಕು' ಎಂದು ತಾಪಂ ಸದಸ್ಯೆ ಝೋಹ್ರಾ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಎಲ್ಲರಿಗೂ ಧರ್ಮದ ಮೇಲೆ ಅಭಿಮಾನ ಇದೆ. ಬೇರೆ ಮಕ್ಕಳು ನಲಿದಾಡುವಾಗ ನಮ್ಮ ಮಕ್ಕಳು ದೂರ ನಿಂತು ಸಂಭ್ರಮದಿಂದ ವಂಚಿತರಾಗುವುದನ್ನು ನೋಡಲು ಸಾಧ್ಯವಿಲ್ಲ. ಇವರಿಗೆ ಶ್ರೀಮಂತ ಖಾಸಗಿ ಶಾಲೆಗಳಲ್ಲಿ ಇಂಥ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗೆ ಹೋಗುವ ಬಡ ಮಕ್ಕಳೇ ಇವರ ಫತ್ವಾಗಳಿಗೆ ಬಲಿಪಶು. ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಮಕ್ಕಳ ಹಕ್ಕು ಕಲ್ಯಾಣ ಸಮಿತಿ ಮಧ್ಯಪ್ರವೇಶ ಮಾಡಿ, ಮಕ್ಕಳ ಹಕ್ಕುಗಳನ್ನು ಎಲ್ಲ ಉಸ್ತಾದ್ಗಳಿಗೆ ತಿಳಿ ಹೇಳುವ ಕೆಲಸ ಮಾಡಬೇಕು ಎಂದು ಝೋಹ್ರಾ ಮನವಿ ಮಾಡಿದ್ದಾರೆ.
ಸರ್ಕಾರವೇ ಮತಾಂಧತೆಯನ್ನು ಪೋಷಿಸುತ್ತಿದೆ. ಮತ ಬ್ಯಾಂಕ್ ಹುಟ್ಟಿ ಕೊಂಡು ಪಾಪದವರಿಗೆ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ. ಇದನ್ನೆಲ್ಲ ನಿಯಂತ್ರಿಸಬೇಕಾದ, ಅಧಿಕಾರ ಸ್ಥಾನದಲ್ಲಿ ಇರುವವರು ವಿಫಲರಾಗುತ್ತಿರುವುದರಿಂದ ಇಂಥ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ, ಅಧಿಕಾರಿಗಳು, ಧಾರ್ಮಿಕ ವಿಚಾರ ಎಂದು ಸುಮ್ಮನೆ ಉಳಿಯುತ್ತಾರೆ. ಇಂಥ ಫತ್ವಾಗಳನ್ನು ಸ್ಥಳೀಯರೇ ಮೊದಲು ವಿರೋಧಿಸಬೇಕು.
- ಸಾರಾ ಅಬೂಬಕ್ಕರ್, ಸಾಹಿತಿ
ಮಕ್ಕಳಿಗೆ ಬಣ್ಣ ಹಚ್ಚಿ ಕುಣಿಸುವುದಿಲ್ಲ , ಕೋಲಾಟ ನೃತ್ಯ ಮಾತ್ರ ಮಾಡಿಸುತ್ತೇವೆ' ಎಂದು ಧರ್ಮಗುರುಗಳನ್ನು ಭೇಟಿಯಾಗಿ ಮನವರಿಕೆ ಮಾಡಿದೆವು. ಆದರೆ ಅವರು 'ನಮ್ಮ ಧರ್ಮಗ್ರಂಥದಲ್ಲಿ ಅದಕ್ಕೆಲ್ಲ ಅವಕಾಶ ಇಲ್ಲ' ಎಂದರು. ಮಕ್ಕಳಿಗೆ ಆಸಕ್ತಿ ಇದೆ. ಹೆತ್ತವರು ಏನೂ ಹೇಳುವುದಿಲ್ಲ.
- ನಾರಾಯಣ ಜೋಯಿಸ್
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

