ಎಚ್ಚರ..! ಮೂಲ ಮಾಹಿತಿ ಬದಲಿಲ್ಲ
ಕ.ಪ್ರ.ವಾರ್ತೆ , ಬೆಂಗಳೂರು , ಫೆ. 5
ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳೇ ಎಚ್ಚರದಿಂದಿರಿ. ಮೂಲ ಅರ್ಜಿಯಲ್ಲಿ ದಾಖಲಿಸಿರುವ ಮಾಹಿತಿಯನ್ನು ಬದಲಿಸಲು ಅವಕಾಶವಿರದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿಯಮ ಬದಲಿಸುತ್ತಿದೆ.
ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಕಳೆದ ಸಾಲಿನ ಕೌನ್ಸೆಲಿಂಗ್ ಸಮಯದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಚಕ್ರವರ್ತಿ ಮೋಹನ್ ಹಾಗೂ ಆಡಳಿತಾಧಿಕಾರಿ ಎಸ್.ಪಿ.ಕುಲಕರ್ಣಿ ಮಾಡಿದ್ದ ಎಡವಟ್ಟುಗಳನ್ನು ಸರಿಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಅಕ್ರಮಕ್ಕೆ ಆಸ್ಪದ ಕೊಡುವ ದುರುದ್ದೇಶದಿಂದಲೇ ಹೊರಡಿಸಿದ್ದ ಮೇ 24ರ ಸುತ್ತೋಲೆಯನ್ನು ರದ್ದುಗೊಳಿಸಿ ಮೂಲ ಅರ್ಜಿಯಲ್ಲಿ ಸಲ್ಲಿಸಿರುವ ಮಾಹಿತಿಯನ್ನೇ ಅಂತಿಮ ಎಂದು ಪರಿಗಣಿಸಲು ಇಲಾಖೆ ನಿರ್ಧರಿಸಿದೆ.
ಫೆಬ್ರವರಿ ಅಂತ್ಯದಲ್ಲಿ ನಡೆಯಲಿರುವ ಪಿಜಿಸಿಇಟಿಯಿಂದಲೇ ಈ ಬದಲಾವಣೆಯು ಅನ್ವಯವಾಗಲಿದೆ. ಈ ಮೂಲಕ ಜಾತಿ, ಆದಾಯ ಪ್ರಮಾಣಪತ್ರ ಹಾಗೂ ಕೆಟಗರಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಪ್ರಾಧಿಕಾರದಲ್ಲಿ ಅಕ್ರಮವಾಗದಂತೆ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ಇದಲ್ಲದೇ ತಹಶೀಲ್ದಾರ್ಗಳು ನೀಡುವ ಪ್ರಮಾಣಪತ್ರವನ್ನು ಪರಿಶೀಲಿಸಲು ಒಬ್ಬ ವಿಶೇಷ ಅಧಿಕಾರಿಯನ್ನು ನೇಮಿಸಲು ಕೂಡ ಪ್ರಾಧಿಕಾರ ನಿರ್ಧರಿಸಿದೆ.
2012ರ ಕೌನ್ಸೆಲಿಂಗ್ ಸಂದರ್ಭದಲ್ಲಿಯೂ ಇದೇ ವ್ಯವಸ್ಥೆ ಜಾರಿಯಲ್ಲಿತ್ತು. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಯಾವುದೇ ಮಾಹಿತಿಗಳನ್ನು ಬದಲಿಸಲು ಅವಕಾಶವಿರಲಿಲ್ಲ. ಇದಲ್ಲದೇ ಈ ಸಂಬಂಧ ಸುತ್ತೋಲೆಯಲ್ಲಿಯೂ ಸ್ಪಷ್ಟ ಸಂದೇಶ ನೀಡಲಾಗಿತ್ತು. ಆದರೆ ಅವ್ಯವಹಾರಕ್ಕೆಂದೇ ಇಲಾಖೆಯಲ್ಲಿ ಕುಳಿತಿದ್ದ ಅಧಿಕಾರಿಗಳು ನಿಯಮಕ್ಕೆ ತಿದ್ದುಪಡಿ ತಂದಿದ್ದರು.
ವಿದ್ಯಾರ್ಥಿಗಳಿಂದ ಕಡ್ಡಾಯ ಪ್ರಮಾಣಪತ್ರ: ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಘೋಷಣಾ ಪತ್ರದಲ್ಲಿ ಪ್ರತಿ ವಿದ್ಯಾರ್ಥಿಯಿಂದಲೂ ಕಳೆದ 2 ವರ್ಷಗಳಿಂದ ಸಹಿ ಹಾಕಿಸಿಕೊಳ್ಳಲಾಗುತ್ತಿತ್ತು. ಪ್ರತಿ ಅರ್ಜಿಯ ಕೊನೆಯಲ್ಲಿ ಈ ಘೋಷಣಾ ಪತ್ರವಿರುತ್ತದೆ. ಆದರೆ ಇನ್ನು ಮುಂದೆ ನೋಟರಿ ಸಹಿತವಾಗಿ ಕಡ್ಡಾಯ ಪ್ರಮಾಣಪತ್ರವನ್ನು ಪ್ರತಿ ವಿದ್ಯಾರ್ಥಿಯು ಸಲ್ಲಿಸಬೇಕಾಗುತ್ತದೆ. ಅರ್ಜಿಯಲ್ಲಿ ತಾನು ಸಲ್ಲಿಸಿರುವ ಪ್ರತಿ ಮಾಹಿತಿಯೂ ಸಮರ್ಪಕವಾಗಿದೆ, ಒಂದೊಮ್ಮೆ ತಪ್ಪಾಗಿರುವುದು ಗಮನಕ್ಕೆ ಬಂದರೆ ಸೀಟು ರದ್ದುಗೊಳಿಸಿ ಕಾನೂನು ಕ್ರಮ ಜರುಗಿಸಬಹುದೆಂದು ಈ ಪ್ರಮಾಣಪತ್ರದಲ್ಲಿ ವಿದ್ಯಾರ್ಥಿಗಳು ದಾಖಲಿಸಬೇಕಾಗುತ್ತದೆ. ಪ್ರಸ್ತುತ ವೈದ್ಯ ಸೀಟುಗಳನ್ನು ಪಡೆಯುವಾಗ ಗ್ರಾಮೀಣ ಸೇವೆಗಾಗಿ ಪ್ರಮಾಣಪತ್ರ ಪಡೆಯಲಾಗುತ್ತಿತ್ತು.
ಈ ಪ್ರಮಾಣಪತ್ರ ಹಾಗೂ ಮೂಲ ಅರ್ಜಿಯ ಮಾಹಿತಿಯನ್ನು ಬದಲಿಸದ ನಿಯಮವು ಕೇವಲ ಎಂಬಿಬಿಎಸ್, ಬಿಡಿಎಸ್ ಹಾಗೂ ಬಿಇ ಕೋರ್ಸ್ಗಳಿಗೆ ಸೀಮಿತಗೊಳಿಸದೇ ಪ್ರಾಧಿಕಾರದಲ್ಲಿ ನಡೆಯುವ ಎಲ್ಲ ಕೌನ್ಸೆಲಿಂಗ್ಗಳಿಗೂ ಅನ್ವಯಮಾಡಲಾಗುತ್ತಿದೆ.
ಕಾನೂನು ಸಮಿತಿ ರಚನೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಕ್ರಮಗಳ ಇಲಾಖೆ ತನಿಖೆ ಹಾಗೂ ಸರಳ ನಿರ್ವಹಣೆಗಾಗಿ ಕಾನೂನು ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಆಯುಶ್, ತಾಂತ್ರಿಕ ಶಿಕ್ಷಣ, ವೈದ್ಯ ಶಿಕ್ಷಣ, ಪದವಿಪೂರ್ವ ಶಿಕ್ಷಣದ ನಿರ್ದೇಶಕರು ಹಾಗೂ ಪ್ರಾಧಿಕಾರದ ವಕೀಲರು ಇರುತ್ತಾರೆ. ರಾಜ್ಯ ಸರ್ಕಾರದ ಆದೇಶದಂತೆ ಅಕ್ರಮ ಸೀಟು ಹಂಚಿಕೆ ಪ್ರಕರಣದ ಜವಾಬ್ದಾರಿಯನ್ನು ಸಿಐಡಿಗೆ ನೀಡಿದ ಬೆನ್ನಲ್ಲೇ ಇಲಾಖಾ ವಿಚಾರಣೆ ನಡೆಸಲು ಕೂಡ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ವಿದ್ಯಾರ್ಥಿಗಳು ನೀಡುವ ಉತ್ತರವನ್ನು ಪರಿಗಣಿಸಿ ಇದೇ ಕಾನೂನು ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಇದರ ಜತೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ 7693 ಅಭ್ಯರ್ಥಿಗಳ ದಾಖಲೆ ಬದಲು ಕುರಿತಂತೆಯೂ ವಿಚಾರಣೆ ಆರಂಭವಾಗಿದೆ.
ದಾಖಲೆ ಪರಿಶೀಲನೆ ಮಾಡುವವರ ಹಣೆಬರಹ ನಿರ್ಧಾರ
ಈ ವರ್ಷದ ದಾಖಲೆ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಪಟ್ಟಿಯನ್ನು ಶಿಕ್ಷಣ ಇಲಾಖೆ ತಯಾರಿಸಿದ್ದು, ವಿಶೇಷವಾಗಿ 122 ಸೀಟುಗಳ ದಾಖಲೆ ತಿದ್ದಲು ಸಹಾಯ ಮಾಡಿರುವ ಅಧಿಕಾರಿಗಳು ಹಾಗೂ ಉಪನ್ಯಾಸಕರ ಪಟ್ಟಿ ತಯಾರಿಸಲಾಗುತ್ತಿದೆ. ಮುಂಬರುವ ಕೌನ್ಸೆಲಿಂಗ್ನಲ್ಲಿ ಈ ಉಪನ್ಯಾಸಕರನ್ನು ದಾಖಲೆ ಪರಿಶೀಲನೆಯಿಂದ ಹೊರಗಿಡಲು ಪ್ರಾಧಿಕಾರ ನಿರ್ಧರಿಸಿದೆ. ಮತ್ತೊಂದೆಡೆ ರಾಜ್ಯದ 13 ಕೇಂದ್ರಗಳಿಗೆ ದಾಖಲೆ ಪರಿಶೀಲನೆ ಮಾಡುವ ಅಧಿಕಾರಿಗಳನ್ನು ಆಯ್ಕೆ ಮಾಡುವಾಗ ಇಲಾಖಾ ವಿಚಾರಣೆ ನಡೆಸಿ ಅವರ ಇತಿಹಾಸ ತಿಳಿದ ಬಳಿಕವೇ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿದೆ ಎಂದು ನಿರ್ದೇಶಕ ರಾಮೇಗೌಡ ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕಳೆದ ವರ್ಷದ ನಿಯಮವನ್ನು ಯಾವ ಕಾರಣದಿಂದ ಬದಲಿಸಿ ಮೇ 24ರಂದು ಸುತ್ತೋಲೆ ಹೊರಡಿಸಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಈ ನಿಯಮವನ್ನು ತುರ್ತಾಗಿ ಬದಲಿಸಿ ಮೂಲ ಅರ್ಜಿ ಸಲ್ಲಿಸುವಾಗ ನೀಡಿದ ಮಾಹಿತಿಯೇ ಅಂತಿಮ ಎಂದು ನಿಯಮ ರೂಪಿಸಲಾಗುತ್ತಿದೆ.
- ರಾಮೇಗೌಡ, ನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ
-ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

