ಪ್ರಧಾನ ಸುದ್ದಿ

ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಕೂಟ ಇದೀಗ ಅಸ್ತಿತ್ವಕ್ಕೆ

ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಕೂಟ ಇದೀಗ ಅಸ್ತಿತ್ವಕ್ಕೆ
Published On :

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಮೂರನೇ ಶಕ್ತಿಯೊಂದರ ಉದಯವಾಗಿದೆ.
ಜೆಡಿಯು, ಜೆಡಿಎಸ್, ಎಐಎಡಿಎಂಕೆ ಸೇರಿದಂತೆ ಒಟ್ಟು 11 ಪ್ರಾದೇಶಿಕ ಪಕ್ಷಗಳು ಜನಪರ, ಕೋಮುವಿರೋಧಿ ಮತ್ತು ಒಕ್ಕೂಟ ವ್ಯವಸ್ಥೆಯ ಅಜೆಂಡಾದೊಂದಿಗೆ ಬುಧವಾರ ಪರ್ಯಾಯ ಕೂಟವೊಂದನ್ನು ರಚಿಸಲು ದೆಹಲಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿವೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಕೋಮುವಿರೋಧಿ ಸಮಾವೇಶದ ಬಳಿಕ ವಿವಿಧ ಪಕ್ಷಗಳು ಒಂದೇ ವೇದಿಕೆಯಡಿ ಬರುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ ಇದಾಗಿದೆ ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಮತ್ತು ಜೆಡಿಯು ಅಧ್ಯಕ್ಷ ಶರದ್ ಯಾದವ್ ತಿಳಿಸಿದ್ದಾರೆ.
ಜನರ ಮೇಲೆ ಪರಿಣಾಮ ಬೀರುವ ವಿಚಾರಗಳನ್ನು ಸಂಸತ್ತಿನಲ್ಲಿ ಎತ್ತುವುದೇ ಈ ಒಕ್ಕೂಟದ ಪ್ರಾಥಮಿಕ ಉದ್ದೇಶವಾಗಿದೆ ಎಂದ ಯೆಚೂರಿ ಅವರು ಇದು ತೃತೀಯರಂಗವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.
ಈ ಪರ್ಯಾಯ ಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ 2ನೇ ಹಂತದಲ್ಲಿ ಶೀಘ್ರದಲ್ಲೇ ಜಂಟಿ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು. ಜನರ ಜೀವನಾವಶ್ಯಕ ವಿಚಾರಗಳನ್ನು ಒಳಗೊಂಡಿರಲಿದೆ.   
ಮಮತಾ ನಿರ್ಧಾರ ಇನ್ನೂ ನಿಗೂಢ
ಚುನಾವಣೆಗೆ ಮೊದಲು ನಾಲ್ಕನೇ ಒಕ್ಕೂಟ ರಚನೆ ಸಾಧ್ಯತೆ ಕುರಿತ ಕನಸು ಹುಟ್ಟುಹಾಕಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ಈ ಪರ್ಯಾಯ ಒಕ್ಕೂಟದಿಂದ ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜತೆಗೆ, ಪರ್ಯಾಯ ಕೂಟಕ್ಕೆ ತೃಣಮೂಲ ಕಾಂಗ್ರೆಸ್ ಸೇರುತ್ತದೆಯೋ ಇಲ್ಲವೋ ಎನ್ನುವ ಕುರಿತೂ ಮೌನವಹಿಸಿದ್ದಾರೆ. ಚುನಾವಣೆಗೂ ಮುನ್ನ ಯಾವುದೇ ಒಕ್ಕೂಟದೊಂದಿಗೆ ಗುರುತಿಸಲು ಮಮತಾ ಇಷ್ಟಪಡುತ್ತಿಲ್ಲ. ಸದ್ಯ ಇದೇ ಟಿಎಂಸಿ ಪಕ್ಷದ ನಿಲುವು ಎಂದು ಪಕ್ಷದ ಸಂಸದ ಡೆರೆಕ್ ಒಬ್ರಿಯಾನ್ ಅವರು ತಿಳಿಸಿದ್ದಾರೆ.
ಜೆಡಿಎಸ್‌ನಿಂದ ದೇವೇಗೌಡ
ಈ ಪರ್ಯಾಯ ರಾಜಕೀಯ ಕೂಟದ ಸಭೆಯಲ್ಲಿ ಜೆಡಿಎಸ್‌ನಿಂದ ಎಚ್.ಡಿ. ದೇವೇಗೌಡ, ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಎಸ್ಪಿ ಮುಖಂಡ ರಾಮಗೋಪಾಲ್ ಯಾದವ್, ಜೆಡಿಯು ಮುಖಂಡ ಶರದ್ ಯಾದವ್, ಕೆ.ಸಿ. ತ್ಯಾಗಿ, ಸಿಪಿಐ ಮುಖಂಡ ಡಿ. ರಾಜಾ ಮತ್ತು ಗುರುದಾಸ್ ದಾಸಗುಪ್ತಾ, ಎಐಎಡಿಎಂಕೆ ಮುಖಂಡ ತಂಬಿದೊರೈ, ಆರ್‌ಎಸ್ಪಿಯಿಂದ ಮನೋಹರ್ ತಿರ್ಕೆ, ಫಾರ್ವರ್ಡ್ ಬ್ಲಾಕ್‌ನಿಂದ ಬರೂನ್ ಮುಖರ್ಜಿ ಅವರೂ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಜನವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ಇದೆ. ಬಿಜೆಪಿ ಬಳಿ ಜನರಿಗೆ ನೀಡಲು ಏನೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಎಡಪಕ್ಷಗಳು ಪರ್ಯಾಯ ಕೂಟ ರಚಿಸಲು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಾವು ರಾಜ್ಯ ಕೇಂದ್ರಿತ ಚುನಾವಣಾ ಮೈತ್ರಿಕೂಟ ರಚಿಸಲು ನಿರ್ಧರಿಸಿದ್ದೇವೆ.
-  ಎ. ರಾಜಾ, ಸಿಪಿಐ ಮುಖಂಡ
ನಮಗೆ ಯಾವುದೇ ಮೈತ್ರಿಕೂಟದ ಅಗತ್ಯ ಇದೆ ಎಂದು ಅನಿಸುತ್ತಿಲ್ಲ. ಬಿಜೆಪಿಯು ಮುಂಬರುವ ಚುನಾವಣೆಯಲ್ಲಿ 272ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಈ ಗುರಿ ಸಾಧಿಸುವಲ್ಲಿ ಪಕ್ಷ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ಇದೆ.
- ಸಿದ್ಧಾರ್ಥ ನಾಥ್, ಬಿಜೆಪಿ ಮುಖಂಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.