ಸಂಸತ್ ಕಲಾಪಕ್ಕೆ ತೆಲಂಗಾಣ ಕಾಟ, ಆಡಳಿತ ಪಕ್ಷದಲ್ಲೇ ಗದ್ದಲ, ಗೊಂದಲ ಜಾತಿ ಆಧರಿತ ಮೀಸಲಿಗೂ ವಿರೋಧ

ನವದೆಹಲಿ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ, ಕೋಮುಹಿಂಸೆ ನಿಯಂತ್ರಣ ಮಸೂದೆ ಹಾಗೂ ಬಹುಕೋಟಿ ಕಾಪ್ಟರ್ ಹಗರಣ ಸಂಸತ್ತಿನ ಉಭಯಸದನಗಳಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.
ಚಳಿಗಾಲದ ಅಧಿವೇಶನದ ವಿಸ್ತರಣೆಯ ಭಾಗವಾಗಿ ಬುಧವಾರದಿಂದ ಆರಂಭವಾದ ಎರಡನೇ ಹಂತದ ಕಲಾಪ ಮೊದಲ ದಿನವೇ ಪ್ರತಿಪಕ್ಷಗಳ ಗದ್ದಲಕ್ಕೆ ಆಹುತಿಯಾಯಿತು. ಲೋಕಸಭೆ ಕಲಾಪ ಮಧ್ಯಾಹ್ನವೇ ದಿನದ ಮಟ್ಟಿಗೆ ಮುಂದೂಡಲ್ಪಟ್ಟರೆ, ರಾಜ್ಯಸಭೆ ಪದೇ ಪದೆ ಗದ್ದಲಕ್ಕೆ ಸಾಕ್ಷಿಯಾಯಿತು. ಪ್ರತಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಸರ್ಕಾರ ಸಾಕಷ್ಟು ಸಮರ್ಥನೆಗೆ ಪ್ರಯತ್ನಿಸಿದರೂ ತೆಲಂಗಾಣ ಪರ, ವಿರೋಧದ ಕೂಗಿನ ಮುಂದೆ ಸರ್ಕಾರದ ಧ್ವನಿ ಕೇಳದಂತಾಯಿತು.
ಕಿರಣ್ ಧರಣಿ
ಪ್ರತ್ಯೇಕ ತೆಲಂಗಾಣ ಮಸೂದೆ ವಿಚಾರ ಸಂಸತ್ತಿನ ಒಳಗಷ್ಟೇ ಅಲ್ಲ ಹೊರಗೂ ತೀವ್ರ ತಿಕ್ಕಾಟ, ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ತೆಲಂಗಾಣ ಮಸೂದೆ ವಿರೋಧಿಸಿ ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ ಜಂತರ್ಮಂತರ್ನಲ್ಲಿ ಮೌನಪ್ರತಿಭಟನೆ ನಡೆಸಿದರು. ಈ ವೇಳೆ ಸೀಮಾಂಧ್ರದ ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರೂ ಹಾಜರಿದ್ದರು. ನಂತರ ಕಿರಣ್ ರೆಡ್ಡಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಮಸೂದೆಯನ್ನು ತಿರಸ್ಕರಿಸುವಂತೆ ಮನವಿ ಸಲ್ಲಿಸಿದರು.
ಆಂಧ್ರಭವನದಲ್ಲಿ ಘರ್ಷಣೆ
ಈ ನಡುವೆ, ದೆಹಲಿಯ ಆಂಧ್ರಭವನದ ಎದುರು ತೆಲಂಗಾಣ ಪರ- ವಿರೋಧ ಗುಂಪುಗಳು ಪ್ರತ್ಯೇಕ ಪ್ರತಿಭಟನೆ ನಡೆಸಿದವು. ಈ ವೇಳೆ ಎರಡೂ ಗುಂಪುಗಳು ವಾಗ್ವಾದಕ್ಕಿಳಿದು ಪರಸ್ಪರ ಘರ್ಷಣೆಗೆ ಮುಂದಾದವು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರುಪರಿಸ್ಥಿತಿ ಶಾಂತಗೊಳಿಸಿದರು.
ತೆಲಂಗಾಣ ಮತ್ತೆ ಅನುರಣನ
ಫೆ.21ರ ವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ತೆಲಂಗಾಣ ಮಸೂದೆಯನ್ನು ಮಂಡಿಸುವುದಾಗಿ ಸರ್ಕಾರ ಈಗಾಗಲೇ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಮಾತ್ರವಲ್ಲದೆ ಸ್ವತಃ ಆಡಳಿತಾರೂಢ ಕಾಂಗ್ರೆಸ್ ಸಂಸದರೂ ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಗದ್ದಲ ಎಬ್ಬಿಸಿದರು. ಈ ಗದ್ದಲಕ್ಕೆ ಪ್ರತಿಪಕ್ಷಗಳ ಸಂಸದರೂ ಸಾಥ್ ನೀಡಿದರು. ಲೋಕಸಭೆಯಲ್ಲಿ ಸೀಮಾಂಧ್ರದ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಮೀರಾ ಕುಮಾರ್ ಅವರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡುವುದು ಅನಿವಾರ್ಯವಾಯಿತು.
ಕಾಪ್ಟರ್ ಡೀಲ್: ಸೋನಿಯಾ ಪಾತ್ರ ಇಲ್ಲ- ಆ್ಯಂಟನಿ
ವಿವಿಐಪಿ ಕಾಪ್ಟರ್ ಡೀಲ್ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಾತ್ರ ಇಲ್ಲ ಎಂದು ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಹಗರಣದಲ್ಲಿ ಸೋನಿಯಾ ಹಾಗೂ ಸರ್ಕಾರದ ಪಾತ್ರವಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರು ಈ ಕುರಿತು ಸಂಸತ್ತಿಗೆ ಸ್ಪಷ್ಟನೆ ನೀಡಿದ್ದಾರೆ. ಡೀಲ್ ಕುದುರಿಸಲು ಸೋನಿಯಾ ಹಾಗೂ ಅವರ ಆಪ್ತರಲ್ಲಿ ಲಾಬಿ ಮಾಡಿ ಎನ್ನುವ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ನ ಟಿಪ್ಪಣಿಯ ಅಧಿಕೃತತೆ ಇನ್ನೂ ಸಾಬೀತಾಗಿಲ್ಲ. ಅದಿನ್ನೂ ಇಟಲಿಯ ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದು ಆ್ಯಂಟನಿ ತಿಳಿಸಿದ್ದಾರೆ.
ತಾನಿಯಂ ಸಾವಿಗೆ ಖಂಡನೆ
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಈಶಾನ್ಯ ರಾಜ್ಯದ ವಿದ್ಯಾರ್ಥಿ ನಿಡೋ ತಾನಿಯಂ ಸಾವಿಗೆ ಸಂಸತ್ತಿನಲ್ಲಿ ತೀವ್ರ ಖಂಡನೆ ವ್ಯಕ್ತವಾಯಿತು. ತಾನಿಯಂ ಸಾವಿಗೆ ಪಕ್ಷಭೇದ ಮರೆತು ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು.
ಕೋಮುಹಿಂಸೆ ನಿಯಂತ್ರಣ ಮಸೂದೆಗೆ ತಡೆ
ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಸಭೆಯಲ್ಲಿ ಕೋಮು ಹಿಂಸೆ ನಿಯಂತ್ರಣ ಮಸೂದೆ ಮಂಡಿಸುವ ಸರ್ಕಾರದ ಪ್ರಯತ್ನಕ್ಕೆ ಪ್ರತಿಪಕ್ಷಗಳು ಅಡ್ಡಿಯಾದವು. ಈ ಕಾಯ್ದೆ ಜಾರಿಗೊಳಿಸಲು ಸಂಸತ್ತಿಗೆ ಅಧಿಕಾರವೇ ಇಲ್ಲ ಎಂದು ವಾದಿಸಿದ ಬಿಜೆಪಿ, ಇದರಿಂದ ಒಕ್ಕೂಟ ವ್ಯವಸ್ಥೆ ಹಾದಿತಪ್ಪಲಿದೆ ಎಂದು ಆರೋಪಿಸಿತು. ಬಿಜೆಪಿಯ ಈ ವಾದಕ್ಕೆ ತೃಣಮೂಲ ಕಾಂಗ್ರೆಸ್, ಎಐಎಡಿಎಂಕೆ, ಎಡಪಕ್ಷಗಳು ಸೇರಿದಂತೆ ಇತರೆ ಪಕ್ಷಗಳೂ ದನಿಗೂಡಿಸಿದವು.
ಈ ವೇಳೆ, ಮಸೂದೆಗೆ ಸಂಬಂಧಿಸಿ ವಕೀಲರೂ ಆಗಿರುವ ಕಾನೂನು ಸಚಿವ ಕಪಿಲ್ ಸಿಬಲ್, ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಪರಸ್ಪರ ವಾಗ್ವಾದಕ್ಕಿಳಿದರು. ಈ ರೀತಿಯ ಕಾನೂನು ರೂಪಿಸಲು ಸಂಸತ್ತಿಗೆ ಯಾವುದೇ ಅಧಿಕಾರ ಇಲ್ಲ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಜೇಟ್ಲಿ ವಾದಿಸಿದರು. ಜೇಟ್ಲಿ ವಾದ ತಿರಸ್ಕರಿಸಿದ ಸಿಬಲ್, ಆತಂಕಪಡುವ ಅವಶ್ಯಕತೆಯೇ ಇಲ್ಲ. ರಾಜ್ಯ ಸರ್ಕಾರದ ಒಮ್ಮತ ಪಡೆದೇ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಮಜಾಯಿಷಿ ನೀಡಿದರು. ಈ ವೇಳೆ ಗುಜರಾತ್ ಕೋಮುಗಲಭೆಯ ವಿಚಾರ ಪ್ರಸ್ತಾಪಿಸಿದ ಸಿಬಲ್, ರಾಜ್ಯಸರ್ಕಾರಗಳ ಪ್ರಾಯೋಜಿತ ಗಲಭೆಯನ್ನು ನಿಯಂತ್ರಿಸಲು ಈ ರೀತಿಯ ಮಸೂದೆ ಅಗತ್ಯವಿದೆ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಜಾತಿ ಮೀಸಲು ಎಬ್ಬಿಸಿದ ಗದ್ದಲ
ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ಕೈಬಿಟ್ಟು, ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಮೀಸಲು ಕಲ್ಪಿಸಬೇಕೆನ್ನುವ ಕಾಂಗ್ರೆಸ್ ಮುಖಂಡ ಜನಾರ್ದನ ದ್ವಿವೇದಿ ಹೇಳಿಕೆ ಸಂಸತ್ತಿನಲ್ಲಿ ಕೆಲಕಾಲ ಗದ್ದಲ ಸೃಷ್ಟಿಸಿತು. ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳ ಚುನಾವಣೆ ಹೊಸ್ತಿಲಲ್ಲಿ ಈ ರೀತಿಯ ಹೇಳಿಕೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದರೆ ಎಸ್ಪಿ ಹಾಗೂ ಬಿಎಸ್ಪಿ ಸಂಸದರು ಕಲಾಪಕ್ಕೆ ಅಡ್ಡಿಪಡಿಸಿದರು. ಕಾಂಗ್ರೆಸ್ ಸಾಮಾಜಿಕ ನ್ಯಾಯ ವ್ಯವಸ್ಥೆಗೆ ಅಂತ್ಯ ಹಾಡಲು ನಿರ್ಧರಿಸಿದೆ ಎಂದು ಆರೋಪಿಸಿದರು. ಈ ಹೇಳಿಕೆ ತೀವ್ರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಜಾತಿ ಆಧರಿತ ಮೀಸಲು ರದ್ದುಪಡಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ರಾಜೀವ್ ಶುಕ್ಲಾ ರಾಜ್ಯಸಭೆಗೆ ಸ್ಪಷ್ಟನೆ ನೀಡಿದರು. ಜತೆಗೆ ಕಾಂಗ್ರೆಸ್ ಕೂಡ ದ್ವಿವೇದಿ ಅವರದು ವೈಯಕ್ತಿಕ ಅಭಿಪ್ರಾಯ. ಅದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿತು.
ದ್ವಿವೇದಿ ಹೇಳಿಕೆಗೆ ಸೋನಿಯಾ ಗರಂ: ದ್ವಿವೇದಿ ಅವರ ಮೀಸಲಾತಿ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗರಂ ಆಗಿದ್ದಾರೆ. ಜಾತಿ ಆಧಾರಿತ ಮೀಸಲು ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್. ಆ ವಿಚಾರದಲ್ಲಿ ಯಾವುದೇ ಬದಲಾವಣೆ ತರುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


