ಪ್ರಧಾನ ಸುದ್ದಿ

ಅಪಘಾತಕ್ಕೆ 10 ಬಲಿ

Published On :

ಗದಗ/ಮುಂಡರಗಿ: ಮದುವೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ 10 ಜನ ಮೃತಪಟ್ಟಿದ್ದು, 26 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಹಾಗೂ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಉರುಳಿ ಬಿದ್ದು 8 ಜನರು ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಟ್ರ್ಯಾಕ್ಟರ್‌ನಲ್ಲೇ ಇದ್ದ ವಧು, ವರನಿಗೆ ತೀವ್ರ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.
ಗದಗ ತಾಲೂಕಿನ ನಾಗಸಮುದ್ರ ಗ್ರಾಮದ ಪ್ರಜ್ವಲ್ ಕೆಂಗಾರ (ಒಂದೂವರೆ ವರ್ಷ), ಪ್ರಶಾಂತ ಕೆಂಗಾರ(6), ಅಂಜನಾ ಹಾದಿಮನಿ(5), ಸುದೀಪ ಹಾದಿಮನಿ(6), ರೇಣುಕಾ ಹೊಳಿಯಪ್ಪ ಹಾದಿಮನಿ(22), ರೇಣುಕಾ ನಿಂಗಪ್ಪ ಹಾದಿಮನಿ(26), ಮುತ್ತಪ್ಪ ಹಾದಿಮನಿ(26), ರೇವಣೆಪ್ಪ ಯಲ್ಲಕ್ಕನವರ(25) ಎಂದು ಗುರುತಿಸಲಾಗಿದೆ.               
ಜಿಲ್ಲಾ ಆಸ್ಪತ್ರೆಯಲ್ಲಿ ಹನುಮಂತಪ್ಪ ಪೂಜಾರ ಹಾಗೂ ಅನ್ನಪೂರ್ಣಾ ಪೂಜಾರ ಮೃತಪಟ್ಟಿದ್ದಾರೆ. ಕಿಮ್ಸ್‌ನಲ್ಲಿ ದಾಖಲಾಗಿರುವ 26 ಜನರ ಪೈಕಿ ದುರ್ಗಮ್ಮ, ಶೈಲಾ, ಭೀಮಪ್ಪ ಸ್ಥಿತಿ ಚಿಂತಾಜನಕವಾಗಿದೆ.
ಏನಾಯ್ತು?: ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಲಕ್ಷ್ಮಣ ದೊಡ್ಡಮನಿ ಅವರ ಅಳಿಯ ನೀಲಕಂಠಪ್ಪ ದೊಡ್ಡಮನಿ ಎಂಬವರ ಮದುವೆ ಗದಗ ತಾಲೂಕಿನ ನಾಗಸಮುದ್ರ ಗ್ರಾಮದ ಗಂಗಮಾಳವ್ವ ಬಾಲಪ್ಪ ಹಾದಿಮನಿ ಜತೆ ನಿಶ್ಚಯವಾಗಿತ್ತು. ಬುಧವಾರ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕಂದಗಲ್‌ಪುರದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹ ನಿಶ್ಚಯವಾಗಿತ್ತು.
ಮದುವೆಗೆ ತೆರಳಲು ಮದುಮಕ್ಕಳು ಸೇರಿದಂತೆ ಸಂಬಂಧಿಕರು ಬುಧವಾರ ಬೆಳಗ್ಗೆ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದರು. ಬೆಳಗ್ಗೆ 7.45ರ ಸುಮಾರಿಗೆ ಡಂಬಳದಿಂದ ಸುಮಾರು 3 ಕಿ.ಮೀ. ದೂರರದಲ್ಲಿರುವ ಡಂಬಳ-ಮೇವುಂಡಿ ರಸ್ತೆಯಲ್ಲಿ ಬಳಿ ಆಗಮಿಸುತ್ತಿದ್ದಂತೆ ಲಾರಿಯೊಂದು ಆಗಮಿಸಿದೆ. ಟ್ರ್ಯಾಕ್ಟರ್‌ನ್ನು ಹಿಂದಿಕ್ಕುವ ಭರದಲ್ಲಿ ವೇಗದಲ್ಲೇ ಟ್ರ್ಯಾಕ್ಟರ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಮುಗುಚಿ ರಸ್ತೆ ಬದಿಯ ಗುಂಡಿಗೆ ಬೋರಲಾಗಿ ಬಿದ್ದಿದೆ. ಕ್ಷಣಾರ್ಧದಲ್ಲೇ ಮೂವರು ಮಕ್ಕಳು ಸೇರಿದಂತೆ 8 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಡಂಬಳ ಗ್ರಾಮದ ಜನತೆ ಆಗಮಿಸಿ ಟ್ರ್ಯಾಕ್ಟರ್ ಹಾಗೂ ಲಾರಿ ಚಕ್ರದಡಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಗದಗ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 26 ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ. ಇದೇ ಟ್ರ್ಯಾಕ್ಟರ್‌ನಲ್ಲಿದ್ದ ಮದುಮಕ್ಕಳು ಬದುಕುಳಿದಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಭೇಟಿ ನೀಡಿ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.