ತವರು ಜಿಲ್ಲೆಗೆ ನಾಲ್ಕು ರೈಲು ಬಿಟ್ಟು, ಖರ್ಗೆ ಜನರ ಮನಸ್ಸನ್ನು ಗೆದ್ದರೂ, ವಿಭಾಗೀಯ ಕಚೇರಿ ಮಾಡದೇ ನಿರಾಸೆಗೊಳಿಸಿದರು
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಫೆ.12
ರೇಲ್ವೆ ಸಚಿವರಾಗಿ ಚೊಚ್ಚಲ ಬಜೆಟ್ (ಲೇಖಾನುದಾನ) ಮಂಡಿಸಿರುವ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗ ಜಿಲ್ಲೆ ಮೂಲಕ ಸಾಗಿ ಹೋಗುವಂಥ 4 ಹೊಸ ರೈಲುಗಳನ್ನು ಕೊಡುಗೆ ನೀಡುವ ಮೂಲಕ ಜನಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಆದರೆ ಗುಲ್ಬರ್ಗ ಕೇಂದ್ರವಾಗಿರುವಂತೆ ಪ್ರತ್ಯೇಕ ರೇಲ್ವೆ ವಿಭಾಗ ರಚನೆಯ ಕನಸು ಇಲ್ಲಿನ ಜನಮನದಲ್ಲಿತ್ತು, ಆ ಕನಸಿನ ವಿಚಾರವಾಗಿ ಲೇಖಾನುದಾನದಲ್ಲಿ ಯಾವುದೇ ಸಂಗತಿಗಳನ್ನು ಹೊಂದಿರದೆ ಹೋಗಿದ್ದು ನಿರಾಶೆ ಮೂಡಿಸಿದೆ
ಅದರ ಹೊರತಾಗಿಯೂ ಜನಸಾಮಾನ್ಯರು, ಹೈ-ಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಖರ್ಗೆ ಮಂಡಿಸಿರುವ ಚೊಚ್ಚಲ ಬಜೆಟ್ ಅಭಿವೃದ್ಧಿ ಪರ ಎಂದು ಕೊಂಡಾಡಿದ್ದಾರೆ.
ವಯಾ ಗುಲ್ಬರ್ಗ: ಗುಲ್ಬರ್ಗ ಸೇರಿದಂತೆ ಹೈ- ಕ ಜನತೆ ರಾಜಧಾನಿ ಬೆಂಗಳೂರು ಮತ್ತು ಹೈದರಾಬಾದ್ಗೆ ಹೋಗಿ ಬರಲು ಅನುಕೂಲವಾಗುವಂತೆ ವಾರಕ್ಕೊಮ್ಮೆ, 2 ಬಾರಿ ಸಂಚರಿಸುವ ಎಕ್ಸ್ಪ್ರೆಸ್, ಇಂಟರ್ಸಿಟಿ ರೈಲುಗಳ ಉಗಮ ಅನ್ಯ ಸ್ಥಳದಿಂದ ಆದರೂ ಅವು ವಯಾ ಗುಲ್ಬರ್ಗ ಸಾಗುವಂತೆ ಮಾಡಿದ್ದಾರೆ. ಇದಲ್ಲದೆ ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ನೈಋತ್ಯ ರೇಲ್ವೆ ಹುಬ್ಬಳ್ಳಿಯಿಂದ ಸಿಕಂದರಾಬಾದ್ಗೆ ವಾರಕ್ಕೆ 3 ಬಾರಿ ಓಡುತ್ತಿದ್ದ ರೈಲನ್ನು ನಿತ್ಯದ ರೈಲನ್ನಾಗಿ ಪರಿವರ್ತಿಸಲಾಗಿದೆ. ಗುಲ್ಬರ್ಗ ಸೇರಿದಂತೆ ಹೈ- ಕ ನೆಲದಿಂದ ಉತ್ತರ ಕರ್ನಾಟಕದ ಪ್ರಮುಖ ನಗರ ಹುಬ್ಬಳ್ಳಿ- ಧಾರವಾಡಕ್ಕೆ ಹಳಿ ಮೂಲಕ ಸಂಪರ್ಕ ಕಲ್ಪಿಸುವ ಈ ರೈಲು ನಿತ್ಯ ಸಂಚಾರಿಯಾಗಿರುವುದು ಜನರಲ್ಲಿ ಸಂತಸ ಮೂಡಿಸಿದೆ.
ಹುಸಿಯಾದ ನಿರೀಕ್ಷೆಗಳು: ಗುಲ್ಬರ್ಗದಲ್ಲಿ ಪ್ರತ್ಯೇಕ ರೇಲ್ವೆ ವಿಭಾಗ ರಚನೆಗೆ ಸರೀನ್ ಸಮಿತಿ 1984 ವರದಿ ನೀಡಿದ್ದರೂ ಈ ವಿಭಾಗ ಕಾರ್ಯಸಾಧುವಲ್ಲಿ ಎಂಬ ಇತ್ತೀಚೆಗೆ ಸಲ್ಲಿಸಲಾಗಿದ್ದ ವರದಿ ಅಭಿಪ್ರಾಯಪಟ್ಟಿರುವುದು ವಿಭಾಗ ಕನಸಿಗೆ ಪೆಟ್ಟು ನೀಡಿದೆ. ಗುಲ್ಬರ್ಗದಿಂದ ಬೆಂಗಳೂರಿಗೆ ಹಾಗೂ ಮುಂಬೈಗೆ ಜನರ ದಟ್ಟಣೆ ಹೆಚ್ಚಿರುವದರಿಂದ ಇಂಟರ್ಸಿಟಿ ಮಾದರಿಯಲ್ಲಿ ಹೊಸ ರೈಲು ಆರಂಭಿಸಬೇಕು ಎಂಬ ಬೇಡಿಕೆ ಈ ಭಾಗದ ಜನರಿಂದ ಇತ್ತು.ಈ ಬೇಡಿಕೆಯೂ ಈಡೇರಿಲ್ಲ. ಬದಲಾಗಿ ಹೈದರಾಬಾದ್ಗೆ ನಿತ್ಯ ಗುಲ್ಬರ್ಗದಿಂದ ಇಂಟರಸಿಟಿ ರೈಲನ್ನು ಆರಂಭಿಸಲಾಗಿದೆ.
ರೇಲ್ವೆ ಸಚಿವರಾಗಿ ಕಳೆದ 8 ತಿಂಗಳಲ್ಲಿ ಹತ್ತು ಹಲವು ಯೋಜನೆಗಳನ್ನು ಈ ಭಾಗಕ್ಕೆ ನೀಡಿದ್ದಲ್ಲದೆ, ಇಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ವೇಗವನ್ನೂ ನೀಡಿರುವ ಕೀರ್ತಿ ಖರ್ಗೆಯವರಿಗೆ ಸಲ್ಲುತ್ತದೆ. ಆದರೆ ಗುಲ್ಬರ್ಗ ಕೇಂದ್ರವಾಗಿರುವಂತೆ ಪ್ರತ್ಯೇಕ ರೇಲ್ವೆ ವಿಭಾಗದ ಕನಸು ಹೊತ್ತಿದ್ದ ಈ ಭಾಗದ ಜನತೆಗೆ ಲೇಖಾನುದಾನ ಬಜೆಟ್ಟಿನಲ್ಲಿ ಅಆದರ ಪ್ರಸ್ತಾಪವಿಲ್ಲದೆ ಹೋಗಿದ್ದು ತುಸು ನಿರಾಶೆಗೆ ಕಾರಣವಾಗಿದೆ. ಆದಾಗ್ಯೂ ಖರ್ಗೆಯವರ ಬಜೆಟ್ಟನ್ನು ಸ್ವಾಗತಾರ್ಹ ಎಂದು ಜನ ಹೇಳುತ್ತಿದ್ದಾರೆ.
ಎಚ್ಕೆಸಿಸಿಐ ಮಿಶ್ರ ಪ್ರತಿಕ್ರಿಯೆ: ಖರ್ಗೆಯವರು ಮಂಡಿಸಿರುವ ಚೊಚ್ಚಲ ಬಜೆಟ್ಗೆ ಇಲ್ಲಿನ ಹೈ- ಕ ವಾಣಿಜ್ಯೋದ್ಯಮ ಸಂಘಟನೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಗುಲ್ಬರ್ಗ ವಿಭಾಗೀಯ ಕಚೇರಿ ಬಗ್ಗೆ ಬಜೆಟ್ ಪ್ರಸ್ತಾಪಿಸಿಲ್ಲ, ಗುಲ್ಬರ್ಗದಿಂದ ಮುಂಬೈಗೆ, ಬೆಂಗಳೂರಿಗೆ ಇಂಟರ್ ಸಿಟಿ ರೈಲು ಓಡಿಸುವ ಸಂಗತಿಗಳು ಪ್ರಸ್ತಾಪವಾಗಿಲ್ಲ. ಆದರೆ ಗುಲ್ಬರ್ಗದಿಂದ ಹೈದರಾಬಾದ್ಗೆ ನಿತ್ಯ ಇಂಟರ್ಸಿಟಿ ರೈಲು ಶುರು ಮಾಡಿರುವ ನಿರ್ಧಾರ ಹಾಗೂ ಸಿಕಂದರಾಬಾದ್- ಹುಬ್ಬಳ್ಳಿ ರೈಲು ನಿತ್ಯ ಸಂಚರಿಸುವಂತೆ ಮಾಡಿರುವುದು ಸ್ವಾಗತಾರ್ಹ ನಿರ್ಧಾರ ಎಂದು ಎಚ್ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಕಾರ್ಯದರ್ಶಿ ಬಸವರಾಜ ಹಡಗಿಲ್ ಹೇಳಿದ್ದಾರೆ.
ರೇಲ್ವೇ ಬಜೆಟ್ ನಿಜಕ್ಕೂ
ನಾಚಿಕೆಗೇಡು. ಶೀಘ್ರದಲ್ಲಿ
ಅಧಿಕಾರದ ಅವಧಿ ಮುಕ್ತಾಯಗೊಳಿಸಲಿರುವ ಸರ್ಕಾರಕ್ಕೆ ಬಜೆಟ್
ಮಂಡಿಸಲು ಯಾವುದೇ ನೈತಿಕ ಹಕ್ಕು ಇಲ್ಲ. ಹೊಸ ಸರ್ಕಾರ ಬರುವ
ವರೆಗೆ ಇಲಾಖೆಯ ದೈನಂದಿನ ವೆಚ್ಚ
ಭರಿಸಲು ಇರುವ ಲೇಖಾನುದಾನ ಮಾತ್ರ ಆಗಿರಬೇಕಾಗಿತ್ತು.
ಮುಕುಲ್ ರಾಯ್,
ರೇಲ್ವೆ ಖಾತೆ ಮಾಜಿ ಸಚಿವ
ಕೇಂದ್ರ ಸರ್ಕಾರ ರೇಲ್ವೆ ಬಜೆಟ್ನಲ್ಲಿ ತಮಿಳುನಾಡಿಗೆ ಯಾವುದೇ ಯೋಜನೆಗಳನ್ನು ಪ್ರಕಟಿಸದೆ ಮಲತಾಯಿ ಧೋರಣೆ ಅನುಸರಿಸಿದೆ.ಸಮಾಧಾನದ ಅಂಶವೆಂದರೆ ಇದು ಮಧ್ಯಂತರ ಬಜೆಟ್. ಆದರೆ ಜೂನ್ನಲ್ಲಿ ಮಂಡಿಸಲಾಗುವ ಸಂಪೂರ್ಣ ಮುಂಗಡ ಪತ್ರದಲ್ಲಿ ಅನ್ಯಾಯ ನಿವಾರಣೆ ಆಗಲಿದೆ ಎಂಬ ವಿಶ್ವಾಸ ನನ್ನದು.
ಜಯಲಲಿತಾ,
ತಮಿಳುನಾಡು ಮುಖ್ಯಮಂತ್ರಿ
ಕೇಂದ್ರ ರೈಲ್ವೆ ಸಚಿವರಾದ ಎರಡನೇ ಕನ್ನಡಿಗ ಎಂಬ ಖ್ಯಾತಿ ಪಡೆದಿರುವ ಖರ್ಗೆ ಮಂಡಿಸಿರುವ ಮಧ್ಯಂತರ ಬಜೆಟ್ನಲ್ಲಿ ರಾಜ್ಯದ ಪರ ಹಾಗೂ ಮಾರ್ಗ ಪರಿವರ್ತನೆ ಸೇರಿದಂತೆ ಹಲವು ಕೊಡುಗೆ ನೀಡಿದ್ದಾರೆ. ರೈಲ್ವೆ ಪರಿಹಾರ ಪ್ರಕ್ರಿಯೆ ಗಣಕೀಕರಣ, ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಿದ್ದು, ಇದು ಬೆಳವಣಿಗೆಗೆ ಪೂರಕವಾದ ಬಜೆಟ್.
ಡಾ.ಜಿ.ಪರಮೇಶ್ವರ,
ಕೆಪಿಸಿಸಿ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

