ರೇಲ್ವೆ ಅಭಿವೃದ್ಧಿ ಯೋಜನೆ ಜಾರಿಗೆ ಇಲ್ಲ ಹಣಕಾಸು ನಮ್ಮ ರೈಲಿಗೆ ವಿದೇಶಿ ಹೂಡಿಕೆದಾರ ಆಗುವನೇ ಬಾಸು?
ಸಾರ್ವಜನಿಕ, ಖಾಸಗಿ ಸಹಭಾಗಿತ್ವ
ವಿತ್ತೀಯ ಕೊರತೆಯಿಂದಾಗಿ ರೇಲ್ವೆ ಇಲಾಖೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ರೇಲ್ವೆ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದ ಹೂಡಿಕೆಯ ಜಾರಿ ಜತೆಗೆ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಸ್ತಾವವನ್ನೂ ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಇದಕ್ಕೆ ಕೇಂದ್ರದಿಂದ ಒಪ್ಪಿಗೆ ದೊರೆತಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ. ಬಂಡಾವಳ ಹೂಡಿಕೆಗಾಗಿ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇದಕ್ಕಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದ ಮೂಲಕ ರೋಲಿಂಗ್ ಸ್ಟಾಕ್ ಉತ್ಪಾದನಾ ಘಟಕ, ರೇಲ್ವೆ ನಿಲ್ದಾಣದ ಆಧುನೀಕರಣ, ಬಹುಕಾರ್ಯೋಪಯೋಗಿ ಸಂಕೀರ್ಣ, ಸರಕು ಸಾಗಣೆ ಘಟಕ, ಖಾಸಗಿ ಸರಕು ನಿಲ್ದಾಣ, ಖಾಸಗಿ ಬಂಡವಾಳ ಹೂಡಿಕೆ ನೀತಿಯಲ್ಲಿ ಸಡಿಲೀಕರಣ ಮತ್ತು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಖಾಸಗಿ ಹೂಡಿಕೆಗಾಗಿ ಉತ್ತಮ ಅವಕಾಶವನ್ನು ಕಲ್ಪಿಸಲು ಸರಕು ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 2013-14 ನೇ ಸಾಲಿನ ರೇಲ್ವೆ ಬಜೆಟ್ನಲ್ಲಿ 1000 ಕೋಟಿ ಹಣ ನೀಡುವಂತೆ ರೇಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ ಒತ್ತಾಯಿಸಿತ್ತು. ಈ ಪ್ರಾಧಿಕಾರ ಈಗಾಗಲೇ 937 ಕೋಟಿ ನಿಧಿ ಸಂಗ್ರಹಿಸಿದೆ ಎಂದು ಖರ್ಗೆ ತಿಳಿಸಿದ್ದಾರೆ.
1.6 ಲಕ್ಷ ಕೋಟಿ ಆದಾಯ ನಿರೀಕ್ಷೆ
ಸರಕು ಸಾಗಣೆ ಮತ್ತು ಪ್ಯಾಸೆಂಜರ್ ರೈಲು ದರಗಳನ್ನು ಏರಿಸದಿರುವ ನಡುವೆಯೂ ರೇಲ್ವೆ ಇಲಾಖೆ ಪ್ರಸಕ್ತ 2014-15ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 1.6 ಲಕ್ಷ ಕೋಟಿ ಆದಾಯ ಪಡೆಯುವ ಗುರಿ ಹೊಂದಿದೆ. ಸರಕಿನಿಂದ 1,05,770 ಕೋಟಿ, ಪ್ರಯಾಣಿಕರಿಂದ 45,255 ಕೋಟಿ ಸೇರಿದಂತೆ ಇತರೆ ಮೂಲಗಳಿಂದ ಇನ್ನುಳಿದ 9700 ಕೋಟಿ ಆದಾಯದ ನಿರೀಕ್ಷೆ ಹೊಂದಲಾಗಿದೆ. ದರ ಏರಿಕೆ ನಡುವೆಯೂ ಕಳೆದ ಬಾರಿ ಅಂದರೆ 2013-14ನೇ ವರ್ಷದಲ್ಲಿ ಸರಕು ಮತ್ತು ಪ್ರಯಾಣಿಕ ರೈಲಿನಿಂದ 1,31,500 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಬಾರಿ ಅದಕ್ಕಿಂತದರ ಏರಿಸದಿದ್ದರೂ ಈ ಕಳೆದ ಬಾರಿಗಿಂತ ಹೆಚ್ಚು ಆದಾಯದ ಗುರಿ ಹೊಂದಲಾಗಿದೆ. ಈ ಬಾರಿ ಅಪಾಯವನ್ನು ಎದುರಿಸಲು ಹಾಗೂ ಸುರಕ್ಷತೆಗಾಗಿ 2014-15ನೇ ಸಾಲಿನಲ್ಲಿ ಒಟ್ಟು 64,305 ಕೋಟಿ ಹಣ ನಿಗದಿಪಡಿಸಲಾಗಿದೆ. ಕಳೆದ ಬಾರಿ 63,363 ಕೋಟಿ ನಿಗದಿ ಮಾಡಲಾಗಿತ್ತಾದರೂ, ನಂತರ ಈ ಮೊತ್ತವನ್ನು 59,359 ಕೋಟಿಗೆ ಇಳಿಸಲಾಗಿತ್ತು.
17 ಹೊಸ ಎಸಿ ಪ್ರೀಮಿಯಂ ರೈಲುಗಳು
ರಾಜಧಾನಿ ದೆಹಲಿ ಮತ್ತು ಮುಂಬೈನಲ್ಲಿ ಎಸಿ ಪ್ರೀಮಿಯಂ ರೈಲುಗಳ ಓಡಾಟ ಯಶಸ್ವಿಯಾಗಿರುವುದನ್ನು ಮನಗಂಡಿರುವ ರೇಲ್ವೆ ಇಲಾಖೆಯು ದೇಶದ ಸಂಚಾರ ದಟ್ಟಣೆಯ ಮಾರ್ಗಗಳಲ್ಲಿ ಇದೇ ರೀತಿ 17 ಎಸಿ ಪ್ರೀಮಿಯಂ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಇದರ ಜೊತೆಗೆ ದೆಹಲಿಯಿಂದ ಚಂಡೀಗಡ ಮತ್ತು ಆಗ್ರಾಗೆ ಪ್ರತಿ ಗಂಟೆಗೆ 160-200 ಕಿ.ಮೀ. ವೇಗದಲ್ಲಿ ಸೆಮಿ ಹೈಸ್ಪೀಡ್ ರೈಲನ್ನು ಓಡಿಸುವ ಪ್ರಸ್ತಾಪವಿದೆ. ಅಲ್ಲದೆ, ಹೆಚ್ಚು ಸಂಚಾರ ದಟ್ಟಣೆಯಾಗುವ ಕ್ರಿಸ್ಮಸ್ ಮತ್ತು ಹೊಸ ವರ್ಷದದಂತಹ ಸಂದರ್ಭದಲ್ಲಿ ಮುಂಬೈಗೆ ಎಸಿ ಪ್ರೀಮಿಯಂ ಓಡಾಟವನ್ನು ಹೆಚ್ಚುಗೊಳಿಸಲು ನಿರ್ಧರಿಸಲಾಗಿದೆ. ಈ ಎಸಿ ಪ್ರೀಮಿಯಂ ರೈಲುಗಳು ನಿತ್ಯ ಓಡಾಟ ಇರುವುದಿಲ್ಲ. ಆಯಾ ಮಾರ್ಗಗಳ ಆಧಾರದ ಮೇಲೆ ವಾರಕ್ಕೊಮ್ಮೆ ಅಥವಾ ವಾರಕ್ಕೆ ಎರಡು ಬಾರಿ ಇರುತ್ತವೆ. ಹೌರಾ-ಪುಣೆ, ಹೌರಾ-ಮುಂಬೈ, ಕಾಮಾಕ್ಯ-ಚೆನ್ನೈ, ಮುಂಬೈ- ಪಟನಾ, ನಿಜಾಮುದ್ದಿನ್-ಮಡಗಾಂ, ಸೀಲ್ದಾ-ಜೋಧಪುರ್, ತಿರುವಂತನಪುರಂ- ಬೆಂಗಳೂರು, ಅಹಮದಾಬಾದ್-ದೆಹಲಿವರೆಗೆ ಈ ರೈಲುಗಳು ಸಂಚಾರ ನಡೆಸಲಿವೆ. ಜೊತೆಗೆ ಖಾತ್ರಾನಂತಹ ಪವಿತ್ರ ಕ್ಷೇತ್ರಗಳಿಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಈ ರೈಲು ಸಂಚರಿಲಿವೆ ಎಂದು ರೇಲ್ವೆ ಸಚಿವ ಖರ್ಗೆ ಲೇಖಾನುದಲ್ಲಿ ತಿಳಿಸಿದ್ದಾರೆ. ದೆಹಲಿ-ಆಗ್ರಾ ಮತ್ತು ದೆಹಲಿ-ಚಂಡೀಗಡಗಳಿಗೆ ಅತಿ ಕಡಿಮೆ ದರದಲ್ಲಿ ಸೆಮಿ ಸ್ಪೀಡ್ ರೈಲು (ಪ್ರತಿ ಗಂಟೆಗೆ 160-200 ಕಿ.ಮೀ.) ಜಾರಿಗೆ ತರಲು ಉದ್ದೇಶಿಸಲಾಗಿದೆ.
ಹಾಲು ಪಾರ್ಸೆಲ್ಗೆ ರೈಲು
ಹಾಲನ್ನು ಪ್ರತ್ಯೇಕವಾಗಿ ರವಾನಿಸಲೆಂದು ರೇಲ್ವೆ ಇಲಾಖೆ ಈ ಬಾರಿ ವಿಶೇಷ ಒತ್ತು ನೀಡಿದೆ. ಇದಕ್ಕಾಗಿ ಖರ್ಗೆ ಅವರು ದೇಶದ ಉದ್ದಗಲಕ್ಕೂ ಹಾಲನ್ನು ಪಾರ್ಸೆಲ್ ಮಾಡಲು ವಿಶೇಷ ಪಾರ್ಸೆಲ್ ರೈಲುಗಳನ್ನು ಓಡಿಸಲು ನಿರ್ಧರಿ ಸಿದ್ದಾರೆ. ಅಲ್ಲದೆ, ಈ ಪಾರ್ಸೆಲ್ ಟ್ರಾಫಿಕ್ ಮೇಲೆ ಹೊಸ ನೀತಿಯನ್ನು ರೂಪಿಸಲು ಯೋಜನೆ ಇದೆ ಎಂದಿರುವ ಖರ್ಗೆ, ದೇಶದ ವಿವಿಧೆಡೆ ರೈಲಿನ ಮೂಲಕ ಹಾಲು ಸಾಗಣೆಗೆ ಉತ್ತೇಜಿಸುವ ಉದ್ದೇಶ ಇದೆ ಎಂದಿದ್ದಾರೆ. ದೇಶದ ಕೆಲವು ಸೂಚ್ಯಿತ ಪ್ರದೇಶಗಳಿಂದ ಪಾರ್ಸೆಲ್ ರೈಲುಗಳನ್ನು ಪ್ರಕಟಿಸಲಾಗಿದೆ.
ಇನ್ನು ಎಲ್ಲ ರೈಲುಗಳಲ್ಲಿ ಬೆಂಕಿ ತಡೆ ವ್ಯವಸ್ಥೆ
ಇತ್ತೀಚೆಗೆ ಹೆಚ್ಚುತ್ತಿರುವ ರೈಲು ದುರಂತಗಳು ಹಾಗೂ ಸಾಲು ಸಾಲು ಅಪಘಾತಗಳಿಂದಾಗಿ ಎಚ್ಚೆತ್ತುಕೊಂಡಿರುವ ರೇಲ್ವೆ ಇಲಾಖೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ. ಬೋಗಿಗಳಲ್ಲಿ ಬೆಂಕಿ ನಿರೋಧಕ ವಸ್ತುಗಳನ್ನು ಬಳಸಿಕೊಂಡು ಬೋಗಿಗಳನ್ನು ನಿರ್ಮಿಸಲಾಗುತ್ತದೆ. ಎಲೆಕ್ಟ್ರಿಕಲ್ ಸರ್ಕ್ಯೂಟ್ಗೆ ವಿಶೇಷ ಕವಚ, ಎಸಿ ಕೋಚ್ಗಳಲ್ಲಿ ಅತ್ತಿತ್ತ ಸಾಗಿಸಬಲ್ಲ ಬೆಂಕಿ ನಂದಿಸುವ ಸಾಧನಗಳು, ಗಾರ್ಡ್ ಕಂ ಲಗೇಜ್ ಬ್ರೇಕ್ ವ್ಯಾನ್ಗಳು, ರೇಲ್ವೆ ಅಡುಗೆ ಮನೆ ಮತ್ತು ಲೋಕೋಮೋಟಿವ್ಗಳನ್ನು ಪರಿಚಯಿಸಲಾಗುವುದು. ರೇಲ್ವೆ ಅಡುಗೆ ಮನೆಯಲ್ಲಿ ಎಲ್ಪಿಜಿ ಬದಲು ಇಂಡಕ್ಷನ್ ಆಧರಿತ ಎಲೆಕ್ಟ್ರಿಕಲ್ ಸಾಧನಗಳನ್ನು ಬಳಸಲೂ ಉದ್ದೇಶಿಸಲಾಗಿದೆ. ಪಾರ್ಸೆಲ್ ವ್ಯಾನ್ ಹಾಗೂ ಗಾರ್ಡ್ ಕಂ ಲಗೇಜ್ ಬ್ರೇಕ್ ವ್ಯಾನ್ಗಳಲ್ಲಿ ಸ್ಫೋಟಕಗಳು ಹಾಗೂ ದಹ್ಯವಸ್ತುಗಳನ್ನು ಪತ್ತೆಹಚ್ಚಲು ತಪಾಸಣೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು. ದೇಶೀಯವಾಗಿ ನಿರ್ಮಿತ ರೈಲು ಅಪಘಾತ ತಡೆ ವ್ಯವಸ್ಥೆ(ಟಿಸಿಎಎಸ್)ಯನ್ನು ಎಲ್ಲ ರೈಲುಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಪರೀಕ್ಷಾರ್ಥ ಪ್ರಯೋಗದ ಯಶಸ್ಸನ್ನು ನೋಡಿಕೊಂಡು ಈ ಸಾಧನಗಳನ್ನು ಉಳಿದ ರೈಲುಗಳಲ್ಲಿ ಅಳವಡಿಸಲಾಗುವುದು. ಇದರ ಜತೆಗೆ, ಸುಧಾರಿತ ಸುರಕ್ಷಾ ಸಾಧನಗಳು ಅದರಲ್ಲೂ ಮುಖ್ಯವಾಗಿ ಲೆವೆಲ್ ಕ್ರಾಸಿಂಗ್ಗಳಲ್ಲಿ ರೈಲಿನ ಆಗಮನದ ಕುರಿತು ಧ್ವನಿ ಮತ್ತು ದೃಶ್ಯದ ಮೂಲಕ ಎಚ್ಚರಿಕೆ ನೀಡುವ ವ್ಯವಸ್ಥೆ ಅಳವಡಿಸಲಾಗುವುದು. ಅಪಘಾತದ ತೀವ್ರತೆಯನ್ನು ತಾಳಿಕೊಳ್ಳಬಲ್ಲಂಥ ಬೋಗಿಗಳನ್ನು ವಿನ್ಯಾಸಗೊಳಿಸಲು ಕ್ರಮಕೈಗೊಳ್ಳಲಾಗುವುದು. ಎಲೆಕ್ಟ್ರಿಕ್ ಮತ್ತು ಡೀಸೆಲ್ ಟ್ರೈನ್ಗಳಲ್ಲಿ ಚಾಲಕನ ಪ್ರಜ್ಞೆಯನ್ನು ಪರೀಕ್ಷಿಸುವ ವಿಜಿಲೆನ್ಸ್ ಕಂಟ್ರೋಲ್ ಡಿವೈಸ್(ವಿಸಿಡಿ)ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಬೆಂಕಿ ಅವಘಡ ಪತ್ತೆ ವ್ಯವಸ್ಥೆ: ಬೆಂಕಿ ದುರಂತದಂಥ ಅವಘಡಗಳು ಪದೇ ಪದೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಕಿ ಹಾಗೂ ಹೊಗೆ ಪತ್ತೆ ವ್ಯವಸ್ಥೆಯನ್ನು ಹಂತ ಹಂತವಾಗಿ ಎಲ್ಲ ರೈಲುಗಳಲ್ಲಿ ಅಳವಡಿಸಲಾಗುವುದು. ಸದ್ಯ ಈ ವ್ಯವಸ್ಥೆಯನ್ನು ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಪರೀಕ್ಷಾರ್ಥವಾಗಿ ಅಳವಡಿಸಲಾಗಿದೆ. ಇದರ ಯಶಸ್ಸನ್ನು ನೋಡಿಕೊಂಡು ಎಲ್ಲ ಪ್ರಮುಖ ರೈಲುಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು.
ಮುಂದಿನ ನಿಲ್ದಾಣ, ನಿಲ್ದಾಣ ತಲುಪುವ ವೇಳೆ ಕುರಿತು ಮಾಹಿತಿ ನೀಡುವ ಎಲೆಕ್ಟ್ರಾನಿಕ್ ಬೋರ್ಡ್ ರೈಲುಗಳಲ್ಲಿ ಅಳವಡಿಕೆ.
ಗಂಟೆಗೆ 160 ರಿಂದ 200 ಕಿ.ಮೀ. ವೇಗದಲ್ಲಿ ಸಂಚರಿಸುವ ಕಡಿಮೆ ವೆಚ್ಚದ ಸೆಮಿ ಹೈಸ್ಪೀಡ್ ರೈಲುಗಳನ್ನು ಪರಿಚಯಿಸಲು ಚಿಂತನೆ.
ಮೇಘಾಲಯದ ದುಧ್ನೋನಿ- ಮೆಹಂದಿಪತ್ತರ್ ನಡುವಿನ ಹೊಸ ರೈಲು ಮಾರ್ಗ ಯೋಜನೆ ಈ ವರ್ಷ ಮಾರ್ಚ್ನಲ್ಲಿ ಪೂರ್ಣ.
ರಂಗಿಯಾ- ಮುರ್ಕೊಂಗ್ಸೆಲೆಕ್ ನಡುವಿನ 510 ಕಿ.ಮೀ. ಉದ್ದದ ಮೀಟರ್ ಗೇಜ್ ಅನ್ನು ಬ್ರಾಡ್ಗೇಜ್ ಆಗಿ ಪರಿವರ್ತನೆ.
ಕರ್ನಾಟಕ, ಉತ್ತರಪ್ರದೇಶ, ಅಸ್ಸಾಂ, ತ.ನಾಡು, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ 19,214 ಕಿ.ಮೀ. ಬ್ರಾಡ್ಗೇಜ್ ಆಗಿ ಪರಿವರ್ತನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

