ಪ್ರಧಾನ ಸುದ್ದಿ

ಹೊಸ ರೈಲುಗಳ ಸಂಚಾರ, ರಾಜ್ಯ ಸರ್ಕಾರಗಳ ಸಹಕಾರ, ಇದು ಸಚಿವ ಖರ್ಗೆ ರೇಲ್ವೆ ಲೇಖಾನುದಾನದ ಚಮತ್ಕಾರ

Published On :

13,800 ಕೋಟಿ ಸಾಲ
ರೇಲ್ವೆ ಇಲಾಖೆ ಈ ಬಾರಿ ಖರ್ಚು ವೆಚ್ಚಗಳನ್ನು ನೀಗಿಸಲು 13,800 ಕೋಟಿ ಹಣವನ್ನು ಸಾಲವಾಗಿ ಪಡೆದುಕೊಳ್ಳಲು ನಿರ್ಧರಿಸಿದೆ. ಈ ಹಣವನ್ನು ತನ್ನ ಸಂಸ್ಥೆಗಳಾದ ಇಂಡಿಯನ್ ರೇಲ್ವೆ ಫೈನಾನ್ಸ್ ಕಾರ್ಪೊರೇಷನ್ (ಐಆರ್‌ಎಫ್‌ಸಿ) ಮತ್ತು ರೈಲ್ ವಿಕಾಸ್ ನಿಗಮ ಲಿ. (ಆರ್‌ವಿಎನ್‌ಎಲ್)ನಿಂದ ಈ ಸಾಲ ಪಡೆದುಕೊಳ್ಳಲು ತೀರ್ಮಾನಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಎರಡೂ ಕಂಪನಿಗಳು ಮಾರುಕಟ್ಟೆಯಿಂದ 14,942 ಕೋಟಿ ಹಣವನ್ನು ಸಂಗ್ರಹಿಸುವ ಗುರಿ ಹೊಂದಿವೆ. ಈ ಪೈಕಿ ಐಆರ್‌ಎಫ್‌ಸಿ ಹಳಿಬಂಡಿ ಮತ್ತು ರೇಲ್ವೆ ಯೋಜನೆಗಳ ಉದ್ದೇಶಕ್ಕಾಗಿ ಮಾರುಕಟ್ಟೆಯಿಂದ 12,800 ಕೋಟಿ ಹೂಡಿಕೆ ನಿರೀಕ್ಷೆ ಮಾಡಿದ್ದು, ಉಳಿದಂತೆ ರೈಲ್ ವಿಕಾಸ್ ನಿಗಮ ಲಿ. 1000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಬಜೆಟ್‌ನಲ್ಲಿ ನಿಗದಿಪಡಿಸಿದ ಹಣ ಹಾಗೂ ಐಆರ್‌ಎಫ್‌ಸಿ, ಆರ್‌ವಿಎನ್‌ಎಲ್, ಪಿಪಿಪಿ ಸೇರಿದಂತೆ ಒಟ್ಟು 19,805 ಕೋಟಿ ಸಾಲ ಪಡೆಯುವ ಉದ್ದೇಶ ಹೊಂದಲಾಗಿದೆ ಎಂದು ಖರ್ಗೆ ತಿಳಿಸಿದರು.
ತಂತ್ರಜ್ಞಾನ ಉತ್ತೇಜನ
ರೇಲ್ವೆ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವತ್ತ ಇಲಾಖೆ ಮುಂದಾಗಿದೆ. ಇದಕ್ಕಾಗಿ ಈ ಬಾರಿಯೂ ಹಲವಾರು ಬಗೆಯ ವಿವಿಧ ಬಗೆಯ ತಂತ್ರಜ್ಞಾನ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ...
1.     ನಗದು ರೂಪದ ಹಣ ಪ್ರಸರಣವನ್ನು ತಡೆದು, ಸ್ವಯಂಚಾಲಿತ ಟಿಕೆಟ್ ನೀಡುವ ಯಂತ್ರಗಳ ಮೂಲಕವೇ ಇಲಾಖೆಗೆ ಹಣ ಬರುವಂತೆ ಮಾಡುವುದು
2.     ಮೊಬೈಲ್ ಮೂಲಕವೂ ಕಾಯ್ದಿರಿಸದ ಟಿಕೆಟ್‌ಗಳನ್ನು ಪಡೆಯುವ ವ್ಯವಸ್ಥೆಗೆ ಒತ್ತು
3.     ಪ್ರಸ್ತುತ ಪಿಎನ್‌ಆರ್ ಸ್ಥಿತಿಗತಿ, ರೈಲುಗಳ ಮಾಹಿತಿ ಸೇರಿದಂತೆ ಇತರೆ ಮಾಹಿತಿ ಕುರಿತು ಆಗಾಗ್ಯೆ ಪ್ರಯಾಣಿಕರ ಮೊಬೈಲ್‌ಗೆ ಸಂದೇಶ ರವಾನಿಸುವ ವ್ಯವಸ್ಥೆ.
4.     ಆಯ್ಕೆಗೊಂಡ ಕೆಲವು ರೈಲು ನಿಲ್ದಾಣಗಳಲ್ಲಿ ಆಹಾರವನ್ನೂ ಆನ್‌ಲೈನ್ ಮೂಲಕ ಕಾದಿರಿಸುವ ವ್ಯವಸ್ಥೆ.
5.     ಸರಕು ಸಾಗಣೆದಾರರಿಗಾಗಿ ಯಾಂತ್ರೀಕೃತ ರಸೀದಿ ಕಳುಹಿಸುವುದು ಹಾಗೂ ಇ ಟಿಪ್ಪಣಿ ಪತ್ರ ನೀಡುವ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ.
6.     ರೇಲ್ವೆ ಇಲಾಖೆಯ ಪರಿಹಾರ ಪ್ರಗತಿ ಕುರಿತ ಮಾಹಿತಿಯನ್ನು ಗಣಕೀಕೃತ ಮಾಡುವ ಉದ್ದೇಶ ಹೊಂದಲಾಗಿದೆ.
ಸಿಬ್ಬಂದಿಗೆ ಲಕ್ಷ ಕೋಟಿ ಪಾವತಿ
ರೇಲ್ವೆ ಸಚಿವಾಲಯ ಆರನೇ ವೇತನ ಆಯೋಗವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ಇದರಿಂದ 2006ರ ಜ.1ರಿಂದ ಅರಿಯರ್ಸ್ ಸೇರಿ ಸಿಬ್ಬಂದಿಗೆ ಹೆಚ್ಚುವರಿ 1ಲಕ್ಷ ಕೋಟಿ ಪಾವತಿಸಲಾಗಿದೆ. ಸರ್ಕಾರದ ಇತರೆ ಇಲಾಖೆಗಳಿಗೆ ಹೋಲಿಸಿದರೆ ರೇಲ್ವೆ ಇಲಾಖೆ ಈ ಹೆಚ್ಚುವರಿ ಹೊರೆಯನ್ನು ತನ್ನದೇ ಆದಾಯದಿಂದ ಸರಿಹೊಂದಿಸಿಕೊಂಡಿದೆ. ಇಷ್ಟೊಂದು ಬೃಹತ್ ಮೊತ್ತ ಹೊಂದಿಸಿಕೊಳ್ಳುವಾಗ ಇಲಾಖೆಗೆ ಒಂದಷ್ಟು ಸಮಸ್ಯೆಗಳಾಯಿತು. ಆದರೆ, ಅವುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂದು ಖರ್ಗೆ ಹೇಳಿದ್ದಾರೆ.
ಅರುಣಾಚಲ, ಮೇಘಾಲಯಕ್ಕೆ ರೈಲು
ಈಶಾನ್ಯ ರಾಜ್ಯಗಳ ಇನ್ನಷ್ಟು ಪ್ರದೇಶಗಳನ್ನು ರೇಲ್ವೆ ಸಂಪರ್ಕ ಜಾಲಕ್ಕೆ ತರಲು ಈ ಬಾರಿಯ ಮಧ್ಯಂತರ ರೇಲ್ವೆ ಬಜೆಟ್‌ನಲ್ಲಿ ಉತ್ತೇಜನ ನೀಡಲಾಗಿದೆ. ಅರುಣಾಚಲ ಪ್ರದೇಶ ಹಾಗೂ ಮೇಘಾಲಯಗಳನ್ನೂ ರೈಲು ಜಾಲಕ್ಕೆ ಶೀಘ್ರವೇ ಸೇರ್ಪಡೆಗೊಳ್ಳಲಿವೆ. ಇದರ ಜತೆಗೆ ರಕ್ಷಣೆಯ ದೃಷ್ಟಿಯಿಂದ ಮಹತ್ವದ್ದೆನ್ನಲಾದ ರಂಗಿಯಾ ಮತ್ತು ಮೌರ್‌ಕಾಂಗ್‌ಸೆಲೆಕ್ ನಡುವಿನ 510 ಕಿ.ಮೀ. ಉದ್ದದ ಮೀಟರ್ ಗೇಜ್ ಮಾರ್ಗವನ್ನು ಬ್ರಾಡ್‌ಗೇಜ್ ಆಗಿ ಪರಿವರ್ತಿಸುವ ಕಾರ್ಯವನ್ನು ಈ ಹಣಕಾಸು ವರ್ಷದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಹರ್ಮುಟಿ- ನಹರ್ಲಾಗುನ್ ನಡುವಿನ ಹೊಸ ರೈಲು ಮಾರ್ಗ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಮೇಘಾಲಯದ ದುಧುನೊಯಿ- ಮೆಹೆಂದಿಪಥರ್ ನಡುವಿನ ನೂತನ ಮಾರ್ಗ ಈ ವರ್ಷ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ.
ರೇಲ್ವೆ ಕ್ರೀಡಾಪಟುಗಳ ಸಾಧನೆ
ರೇಲ್ವೆ ಇಲಾಖೆ ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದು, ಕ್ರೀಡಾಪಟುಗಳೂ ಉತ್ತಮ ಸಾಧನೆಯನ್ನು ತೋರುತ್ತಿದ್ದಾರೆ.  2012-13ನೇ ಸಾಲಿನಲ್ಲಿ 500 ಕ್ರೀಡಾಪಟುಗಳನ್ನು ನೇಮಿಸಿಕೊಳ್ಳಲಾಗಿದ್ದು, ಅವರು ರಾಷ್ಟ್ರಮಟ್ಟದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಹಲವಾರು ರಾಷ್ಟ್ರೀಯ ಕ್ರೀಡಾಕೂಟದ 23 ಕ್ರೀಡಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರೆ, 9 ವಿಭಾಗಗಳಲ್ಲಿ ಎರಡನೇ ಸ್ಥಾನ ಸಿಕ್ಕಿದೆ. ಜತೆಗೆ ಹಲವಾರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲೂ ಭಾಗವಹಿಸಿ 2 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕವನ್ನು ಪಡೆದಿದ್ದಾರೆ ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಟಿಕೆಟ್ ದರ ನಿಗದಿಗೆ ಪ್ರಾಧಿಕಾರ
ರೇಲ್ವೆ ದರ ನಿಗದಿಪಡಿಸಲು ಸ್ವತಂತ್ರ ರೇಲ್ವೆದರ ನಿಗದಿ ಪ್ರಾಧಿಕಾರ(ಆರ್‌ಟಿಎ) ಸ್ಥಾಪಿಸುವ ಘೋಷಣೆಯನ್ನು ಖರ್ಗೆ ಮಾಡಿದ್ದಾರೆ. ಈ ನೂತನ ಪ್ರಾಧಿಕಾರವು ರೇಲ್ವೆ ದರ ನಿಗದಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆರ್‌ಟಿಎಯು ಪ್ರಯಾಣ ಹಾಗೂ ಸರಕುಸಾಗಣೆಗೆ ಸಂಬಂಧಿಸಿ ದರ ನಿಗದಿಪಡಿಸುವ ವೇಳೆ ಸರ್ಕಾರಕ್ಕೆ ಸಲಹೆ ನೀಡಲಿದೆ. ನೂತನ ಪ್ರಾಧಿಕಾರದ ಸ್ಥಾಪನೆ ರೇಲ್ವೆ ಇಲಾಖೆ ವಿಚಾರದಲ್ಲಿ ಹೊಸ ಮೈಲಿಗಲ್ಲಾಗಲಿದೆ.
ಶೀಘ್ರವಾಗಿ ಸವೆಯದ, ಹಗುರವಾದ ಆದರೆ ಹೆಚ್ಚು ಭಾರವನ್ನು ಹೊತ್ತೊಯ್ಯಬಲ್ಲ ಮತ್ತು 100 ಕಿ.ಮೀ. ವೇಗವನ್ನು ತಾಳಿಕೊಳ್ಳಬಲ್ಲ ವ್ಯಾಗನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಬನ್ಹಿಹಾಲ್- ಕ್ವಾಜಿಕುಂಡ್ ಕಣಿವೆ ನಡುವಿನ 11.3 ಕಿ.ಮೀ. ಉದ್ದದ ಸುರಂಗ ಮಾರ್ಗ ಯೋಜನೆ ಕಾಶ್ಮೀರದಲ್ಲಿ ರೇಲ್ವೆ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಸಾಧನೆ
11ನೇ ಯೋಜನಾ ಅವಧಿಯಲ್ಲಿ ರೇಲ್ವೆಯು 2000 ಕಿ.ಮೀ. ಹೊಸ ಮಾರ್ಗ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ರೇಲ್ವೆಯು 2,207 ಕಿ.ಮೀ. ನಷ್ಟು ಹೊಸ ಮಾರ್ಗ ನಿರ್ಮಿಸಿದೆ.
ಪರಿಸರಕ್ಕೆ ಪೂರಕವಾದ ಹಸಿರು ಶೌಚಾಲಯಗಳನ್ನು ಇನ್ನಷ್ಟು ರೈಲುಗಳಲ್ಲಿ ಅಳವಡಿಕೆ. ಮತ್ತಷ್ಟು ನಿಲ್ದಾಣಗಳಲ್ಲಿ ಜನ್ ಆಹಾರ್ ಮಳಿಗೆಗಳ ಸ್ಥಾಪನೆ, ಎಸ್ಕಲೇಟರ್ ಅಳವಡಿಕೆ.
ಏರಿಕೆಯಿಂದಾಗಿ ಆದಾಯ ಖೋತಾ
ಡೀಸೆಲ್ ದರ ಏರಿಕೆ, ಎಲೆಕ್ಟ್ರಿಕ್ ಇಂಧನ ವೆಚ್ಚದಲ್ಲಿನ ಹೆಚ್ಚಳ, ಸುರಕ್ಷತೆ ವಿಭಾಗದಲ್ಲಿ ಹೊಸ ನೇಮಕಾತಿ, ಪಿಂಚಣಿ, ಅರಿಯರ್ರ್ಸ್‌ನಿಂದಾಗಿ ರೇಲ್ವೆ ಆದಾಯದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಸುಧಾರಿತ ರಸ್ತೆಗಳು ಹಾಗೂ ಐಷಾರಾಮಿ ಸಾರಿಗೆ ಬಸ್‌ಗಳೂ ರೇಲ್ವೆಗೆ ಸ್ಪರ್ಧೆವೊಡ್ಡುತ್ತಿದೆ. ಇದರಿಂದ ರೇಲ್ವೆ ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಕುಂಟಿತವಾಗುತ್ತಿದೆ. ಇಷ್ಟಾದರೂ ಸರಕುಸಾಗಣೆ ಮೂಲಕ ರೇಲ್ವೆ ಇಲಾಖೆ ಈ ಬಾರಿ ನಿಗದಿಪಡಿಸಲಾದ 94 ಸಾವಿರ ಕೋಟಿ ಗುರಿಯನ್ನು ದಾಟಲಿದೆ ಎಂದು ಸಚಿವ ಖರ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ವೈಷ್ಣೋದೇವಿಗೆ ರೈಲು ಸಂಚಾರ ಶೀಘ್ರ
ಮಾತೆ ವೈಷ್ಣೋದೇವಿ ದರ್ಶನಕ್ಕೆ ತೆರಳುವ ಭಕ್ತರಿಗೊಂದು ಸಿಹಿ ಸುದ್ದಿ. ಕಾಶ್ಮೀರದ ತಪ್ಪಲಿನಲ್ಲಿರುವ ವೈಷ್ಣೋದೇವಿಯ ಬೇಸ್ ಕ್ಯಾಂಪ್ ಆದ ಕಾಟ್ರಾವನ್ನು ಸಂಪರ್ಕಿಸುವ ರೇಲ್ವೆ ಮಾರ್ಗ ಈಗಾಗಲೇ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರೇಲ್ವೆ ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ. ಉಧಂಪುರ- ಕಾಟ್ರಾ ನಡುವೆ ರೇಲ್ವೆ ಇಲಾಖೆಯ ಮಹತ್ವಾಕಾಂಕ್ಷೆಯ ಮಾರ್ಗ ನಿರ್ಮಾಣ ಯೋಜನೆ ಈಗಾಗಲೇ ಪೂರ್ಣಗೊಂಡಿದೆ. ಈ ಮಾರ್ಗದ ನಿರ್ಮಾಣದಿಂದಾಗಿ ದೇಶಾದ್ಯಂತ ವೈಷ್ಣೋದೇವಿ ದರ್ಶನಕ್ಕೆ ತೆರಳುವ ಕಾಶ್ಮೀರಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾದಂತಾಗಿದೆ. ಈ ಮಾರ್ಗದಲ್ಲಿ ಈಗಾಗಲೇ ಪರೀಕ್ಷಾರ್ಥ ರೈಲು ಸಂಚಾರ ನಡೆಯುತ್ತಿದೆ. ಶೀಘ್ರದಲ್ಲೇ ಅಧಿಕೃತವಾಗಿ ರೈಲುಗಳ ಸಂಚಾರ ಆರಂಭವಾಗಲಿದೆ. ಕಾಶ್ಮೀರವನ್ನು ಗಮನದಲ್ಲಿಟ್ಟುಕೊಂಡು ಪ್ರತಿಕೂಲ ಹವಾಮಾನದಲ್ಲೂ ಕಾರ್ಯಾಚರಣೆಗೆ ಅನುಕೂಲಕರವಾದ ಬೋಗಿಗಳನ್ನು ಸಿದ್ಧಪಡಿಸಲಾಗಿದೆ.
ರಾಜ್ಯ ಸರ್ಕಾರಗಳ ಸಹಕಾರ
ರೇಲ್ವೆ ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿ ದೇಶದ ವಿವಿಧ ರಾಜ್ಯಗಳು ಕೂಡ ಕೈಚಾಚಿವೆ. ಈ ವಿಷಯವನ್ನು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಲೇಖಾನುದಾನದಲ್ಲಿ ತಿಳಿಸಿದ್ದಾರೆ. ರೇಲ್ವೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೊಸ ರೈಲು ಯೋಜನೆಗಳಿಗಾಗಿ ಕರ್ನಾಟಕ, ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಹರ್ಯಾಣ ರಾಜ್ಯಗಳು ತಮ್ಮ ಪಾಲನ್ನು ಸಹ ನೀಡುತ್ತಿವೆ. ಇದರಿಂದ ರಾಷ್ಟ್ರ ಒಟ್ಟಾರೆ ಅಭಿವೃದ್ಧಿಯಲ್ಲಿ ಇದು ಸಹ ಉತ್ತಮ ಬೆಳವಣಿಗೆಯಾಗಿದ್ದು, ಇತರೆ ರಾಜ್ಯಗಳು ಕೂಡ ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಖರ್ಗೆ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.