ಕರ್ನಾಟಕದಲ್ಲಿ ಕಾಂಗ್ರೆಸ್ಗೆ 14, ಬಿಜೆಪಿಗೆ 12, ಜೆಡಿಎಸ್ಗೆ 2

ಕನ್ನಡಪ್ರಭ ಸಿ-ಫೋರ್ ಸಮೀಕ್ಷೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.19
ದೇಶಾದ್ಯಂತ ನರೇಂದ್ರ ಮೋದಿ ಅಲೆಯಲ್ಲಿ ಬಿಜೆಪಿ ತೇಲುತ್ತಿದ್ದರೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ಮಾತ್ರ 'ಕೈ'ಯತ್ತ ವಾಲುವ ಸುಳಿವು ಕಾಣುತ್ತಿದೆ.ಇದರ ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 14, ಬಿಜೆಪಿ 12 ಹಾಗೂ ಜೆಡಿಎಸ್ನ 2 ಸಂಸದರು ಗೆಲ್ಲಬಹುದು ಎಂದು ಕನ್ನಡಪ್ರಭ - ಸಿಫೋರ್ ಸಮೀಕ್ಷೆಯಿಂದ ತಿಳಿದುಬಂದಿದೆ. ಎಲ್ಲೆಡೆ ಯಿಪಿಎ ವಿರೋಧಿ ಮತ್ತು ಮೋದಿ ಪರ ಅಲೆ ಇದ್ದರೂ, ಲೋಕಸಭೆ ಹಿಂದಿನ ಚುನಾವಣೆಗಿಂತ ಆಡಳಿತಾರೂಢ ಕಾಂಗ್ರೆಸ್ ರಾಜ್ಯದಲ್ಲಿ ದುಪ್ಪಟ್ಟು ಸೀಟು ಪಡೆದರೆ, ಬಿಜೆಪಿ ಏಳು ಸೀಟುಗಳನ್ನು ಕಳೆದುಕೊಳ್ಳಲಿದೆ!
ರಾಜ್ಯದಲ್ಲಿ ಇಂದು ಚುನಾವಣೆ ನಡೆದರೆ ಮತದಾರ ಪ್ರಭುವಿನ 'ಲೋಕ' ಚಿತ್ತ ಹೀಗಿದೆ ಎಂದು 'ಕನ್ನಡಪ್ರಭ' ಮತ್ತು 'ಸಿ ಫೋರ್' ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಇದು ಬಹಿರಂಗಪಡಿಸಿದೆ. ಇತ್ತೀಚಿನ ಲೋಕಸಭೆ ಚುನಾವಣೆ ಫಲಿತಾಂಶದಂತೆ ರಾಜ್ಯದ ಮತದಾರರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಕ್ಕೆ ರಾಜ್ಯದಲ್ಲಿ ಹೆಚ್ಚಿನ ಸೀಟು ನೀಡುತ್ತಿಲ್ಲ, ಈ ಬಾರಿಯೂ ಇದೇ ಸಂಪ್ರದಾಯ ಮುಂದುವರಿಯುವ ಲಕ್ಷಣ ದಟ್ಟವಾಗಿದೆ.
ವಿಧಾನಸಭೆ ಚುನಾವಣೆಗಿಂತಲೂ ಶೇ.4ರಷ್ಟು ಮತದಾನ ಪ್ರಮಾಣ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ 2009ರ ಲೋಕಸಭೆ ಚುನಾವಣೆಗಿಂತ 8 ಸೀಟುಗಳನ್ನು ಹೆಚ್ಚು ಪಡೆಯಲಿದೆ. ಆದರೆ ಮತ ಹಂಚಿಕೆ ಪ್ರಮಾಣದ ಏರಿಕೆಗೆ ಸಮಾನವಾಗಿ ಸೀಟುಗಳು ಕಾಂಗ್ರೆಸ್ಗೆ ನಿರೀಕ್ಷೆಯಂತೆ ಹೆಚ್ಚಾಗುತ್ತಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಿದ್ದ ಬಿಜೆಪಿ ಮೋದಿ ಅಲೆಯಲ್ಲಿ ಅಲ್ಪ ಮಟ್ಟಿಗೆ ಚೇತರಿಸಿಕೊಂಡಿರುವುದನ್ನು ಸಮೀಕ್ಷೆ ಹೊರಗೆಡವಿದೆ.
ಏರಿದ ಕೈ, ಇಳಿದ ಕಮಲ, ಮಹಿಳೆಗೆ 2 ತೆನೆ: ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಶೇ.41ರಷ್ಟು ಮತಗಳಿಸಲಿರುವ ಕಾಂಗ್ರೆಸ್ ಕೇವಲ 14 ಕ್ಷೇತ್ರಗಳಿಗೆ ತೃಪ್ತಗೊಳ್ಳಬೇಕಿದೆ. ಕೇಂದ್ರ ಸರ್ಕಾರದ ಆಡಳಿತ ವೈಖರಿಗೆ ಜನ ಬೇಸರ ವ್ಯಕ್ತಪಡಿಸಿದ್ದರೂ, ರಾಜ್ಯ ಸರ್ಕಾರದ ಆಡಳಿತ ಹಾಗೂ ಬಿಜೆಪಿಯ ಆಂತರಿಕ ಸಮಸ್ಯೆಗಳ ಕಾರಣದಿಂದ ಕಾಂಗ್ರೆಸ್ನತ್ತಲೇ ಜನ ಒಲವು ತೋರಿದ್ದಾರೆ. ಹಳೆ ಮೈಸೂರು ಹಾಗೂ ಹೈ-ಕ ಭಾಗದಲ್ಲಿ ತನ್ನ ಅಧಿಪತ್ಯ ವಾಪಸ್ ಪಡೆದಿರುವುದು ಕಾಂಗ್ರೆಸ್ನ ಸೀಟುಗಳ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಕರಾವಳಿ ಭಾಗ ಹಾಗೂ ಹೈ-ಕದಲ್ಲಿ ಬಿಜೆಪಿ ಅಸ್ತಿತ್ವ ಮತ್ತೆ ಸಡಿಲಿಸಿರುವುದರಿಂದ ಮೋದಿ ಅಲೆಯೂ ಅಲ್ಲಿ ಕೆಲಸ ಮಾಡುತ್ತಿಲ್ಲ.
ಆದರೆ ಜೆಡಿಎಸ್ ಮಾತ್ರ ರಾಜ್ಯಾದ್ಯಂತ ತನ್ನ ನೆಲೆ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದು ಬಿಟ್ಟರೇ ಉಳಿದೆಡೆ ಪಕ್ಷವು ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ. ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವು ಪಡೆಯಬಹುದು ಎಂದು ಸಮೀಕ್ಷೆ ಹೇಳಿದ್ದರೂ ಮೂರು ಪಕ್ಷದಲ್ಲಿ ತುರುಸಿನ ಪೈಪೋಟಿ ಏರ್ಪಟ್ಟಿದೆ.
ಹೈಕ ಹಾಗೂ ಹಳೆ ಮೈಸೂರು ಭಾಗದಲ್ಲಿ ಕೈ ಅಬ್ಬರ, ಬೇರೆಡೆ ಏನಿಲ್ಲ: ಹಳೆ ಮೈಸೂರು ಹಾಗೂ ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ಲಕ್ಷಣ ತೋರುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ 371-ಜೆ ವಿಶೇಷ ಮಾನ್ಯತೆ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ನಿಚ್ಚಳವಾಗಿದೆ. ಹಳೆ ಮೈಸೂರು ಹಾಗೂ ಹೈದ್ರಾಬಾದ್-ಕರ್ನಾಟಕದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ 11 ಸೀಟುಗಳು ದಕ್ಕುತ್ತಿವೆ.
ಹಳೆ ಮೈಸೂರು ಭಾಗ ಹೊರತುಪಡಿಸಿ ಬೇರೆಡೆ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸುಮಾರು 13 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಎರಡಂಕಿ ಪ್ರಮಾಣದ ಮತದ ಪಾಲು ಸಿಗುವುದೂ ಕಷ್ಟ ಎನ್ನುತ್ತದೆ ಸಮೀಕ್ಷೆ. ಬೆಂಗಳೂರು, ಮುಂಬೈ- ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯ ಮುಂದುವರಿದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷ ತ್ಯಜಿಸಿದ ಪರಿಣಾಮದಿಂದ ಮುಂಬೈ-ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಚೇತರಿಕೆಯಾಗುವ ಲಕ್ಷಣ ಕಂಡಿದೆ.
ರಾಜಧಾನಿಯಲ್ಲಿ ಬಿಜೆಪಿ, ಕರಾವಳಿಯಲ್ಲಿ ನೇರ ಪೈಪೋಟಿ: ಕಳೆದ ಚುನಾವಣೆಯಲ್ಲಿ ರಾಜಧಾನಿಯ 3 ಸೀಟುಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಆದರೆ ಇಂದು ಚುನಾವಣೆ ನಡೆದರೆ ಬೆಂಗಳೂರು ಕೇಂದ್ರ ಹೊರತುಪಡಿಸಿ ಮತ್ತೆರಡು ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಳ್ಳಲಿದೆ. ನಗರ ಪ್ರದೇಶಗಳಲ್ಲಿ ಗಮನ ಕೇಂದ್ರೀಕರಿಸಿರುವ ಆಮ್ ಆದ್ಮಿ ಪಕ್ಷಕ್ಕೆ ಕೇವಲ ಶೇ.10ರಷ್ಟು ಮತ ಗಳಿಸಲಿದ್ದು, ರಾಜ್ಯ ರಾಜಕಾರಣದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಮತದಾರ ಅಭಿಪ್ರಾಯಪಟ್ಟಿದ್ದಾನೆ.
ಸ್ಥಾನ ಕಳೆದುಕೊಳ್ಳಲಿರುವ ಏಳು ಹಾಲಿ ಸಂಸದರು: ಏಳು ಹಾಲಿ ಸಂಸದರ ಕಾರ್ಯವೈಖರಿ ಬಗ್ಗೆ ಬೇಸರವ್ಯಕ್ತಪಡಿಸಿರುವ ಮತದಾರರು, ಮುಂಬರುವ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ಬೆಂಗಳೂರು ಕೇಂದ್ರ, ಬಳ್ಳಾರಿ, ಬೀದರ್, ರಾಯಚೂರು, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಸಂಸದರನ್ನು ಬದಲಿಸುವ ಯೋಚನೆ ಮಾಡಿದ್ದಾರೆ. ಇದರಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಬೀದರ್ನಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ವಿರೋಧಿ ಅಲೆ ಬೀಸುತ್ತಿದೆ. ಇದನ್ನು ಹೊರತುಪಡಿಸಿ ಉಡುಪಿ-ಚಿಕ್ಕಮಗಳೂರು, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿಯೇ ಮತದಾರರು ಬಿಜೆಪಿ ಹಾಗೂ ಜೆಡಿಎಸ್ ಬದಲಾಗಿ ಕಾಂಗ್ರೆಸ್ ಕಡೆ ಮುಖ ಮಾಡಿದ್ದರು.
ಅಹಿಂದ ಕಾಂಗ್ರೆಸ್ ಮತ್ತು ಬಿಜೆಪಿಯ ಮೇಲ್ವರ್ಗ: ಸಿದ್ದರಾಮಯ್ಯ ಅವರ ಅಹಿಂದ ಮಂತ್ರವು ಲೋಕಸಭೆ ಚುನಾವಣೆಯಲ್ಲಿ ಫಲ ನೀಡುವ ಲಕ್ಷಣ ಗೋಚರಿಸುತ್ತಿದೆ. ಬಹುತೇಕ ಎಲ್ಲ ಲೋಕಸಭೆ ಕ್ಷೇತ್ರಗಳಲ್ಲಿ ಅಹಿಂದ ಮತದಾರರು ಕಾಂಗ್ರೆಸ್ ಪರವಾಗಿಯೇ ನಿಂತಿದ್ದಾರೆ. ಆದರೆ ಲಿಂಗಾಯತ ಹಾಗೂ ಬ್ರಾಹ್ಮಣ ಕೋಮಿನವರು ಶೇ.65ಕ್ಕೂ ಅಧಿಕ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಆದರೆ ಅಹಿಂದ ಮತಗಳನ್ನು ಪಡೆಯಲು ಬಿಜೆಪಿ ಹಾಗೂ ಜೆಡಿಎಸ್ ವಿಫಲವಾಗಿವೆ. ಜೆಡಿಎಸ್ ಪ್ರಭಾವವಿಲ್ಲದ ಕಡೆ ಒಕ್ಕಲಿಗ ಮತಗಳು ಬಿಜೆಪಿ ಪಾಲಾಗಿವೆ.
ಪರಮೇಶ್ವರ್ ಡಿಸಿಎಂ ಆದರೆ ಲಾಭ
ಲೋಕಸಭೆ ಚುನಾವಣೆಗೂ ಮುಂಚೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿ ಹುದ್ದೆ ನೀಡಿದರೆ ಹೆಚ್ಚಿನ ಲಾಭವಾಗುತ್ತದೆ ಎನ್ನುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾದರೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟು ದೊರೆಯುತ್ತದೆ ಎಂದು ಶೇ.72ರಷ್ಟು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಕಾಂಗ್ರೆಸ್ನ ಮತ ಹಂಚಿಕೆಯೂ ಹೆಚ್ಚಾಗುವ ಸೂಚನೆ ದೊರೆತಿದೆ.
ಕೇಂದ್ರಕ್ಕೆ ವಿರೋಧ
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತಕ್ಕೆ ರಾಜ್ಯದ ಜನತೆ ಬೇಸರವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ಬಗ್ಗೆ ಬೇಸರಗೊಂಡಿರುವ ಮತದಾರರು ಕೇಂದ್ರ ಸರ್ಕಾರ ಬದಲಾವಣೆಯಾಗಬೇಕು. ಕಾಂಗ್ರೆಸ್ನ ಭ್ರಷ್ಟಮುಖಂಡರು ದೇಶದ ಅವನತಿಗೆ ಕಾರಣ ಎಂದಿದ್ದಾರೆ.
ಮೋದಿಗೇ ಒಲವು
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.40ರಷ್ಟು ಜನ ನರೇಂದ್ರ ಮೋದಿಯೇ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದಿದ್ದಾರೆ. ರಾಹುಲ್ ಗಾಂಧಿ ಪರ ಶೇ.30ರಷ್ಟು ಜನ ಒಲವು ತೋರಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಪರ ಶೇ.3 ಜನ ಆಸಕ್ತಿ ತೋರಿದ್ದಾರೆ.
- ಹಳೇ ಮೈಸೂರು, ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಬಂಪರ್
- ಬಿಜೆಪಿ ಬಲಿಷ್ಠ ಕೋಟೆ ಕರಾವಳಿ ಭಾಗಕ್ಕೂ ಲಗ್ಗೆ ಹಾಕಲಿರುವ ಕೈ
- ಬೆಂಗಳೂರು ಕೇಂದ್ರ, ಬಳ್ಳಾರಿ, ಗುಲ್ಬರ್ಗ, ರಾಯಚೂರು, ಕೊಪ್ಪಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ
- ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೀದರ್, ದಾವಣಗೆರೆ, ಹಾವೇರಿ ಬಿಜೆಪಿ ಮುನ್ನಡೆ
- ಶಿವಮೊಗ್ಗ, ಚಿಕ್ಕೋಡಿ, ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಉತ್ತರ ಕನ್ನಡದಲ್ಲೂ ಬಿಜೆಪಿಗೇ ಒಲವು
- ದಕ್ಷಿಣ ಕನ್ನಡ, ಉಡುಪಿ - ಚಿಕ್ಕಮಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗದಲ್ಲಿ ಕಾಂಗ್ರೆಸ್ಗೆ ಆಸೆ
- ಕೋಲಾರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರದಲ್ಲೂ ಕೈಚಳಕ ಸಾಧ್ಯತೆ
- ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಖಾತೆ ತೆರೆಯುವ ಸಂಭವ
- ಪ್ರಧಾನಿ ಅಭ್ಯರ್ಥಿಗಳ ಸಾಲಿನಲ್ಲಿ ಮೋದಿಗೇ ಹೆಚ್ಚಿನ ಒಲವು, ರಾಹುಲ್ಗೆ 2ನೇ ಸ್ಥಾನ
- ಪ್ರಧಾನಿ ಅಭ್ಯರ್ಥಿ ನೋಡಿ ಮತ ಹಾಕುವುದಕ್ಕಿಂತ, ಪಕ್ಷ ನೋಡಿ ಮತ ಹಾಕುತ್ತೇವೆ ಎಂದ ಜನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


