ಕೆಆರ್ಎಸ್ಗೆ ಭೇಟಿ ನೀಡಿದ ರವಾಂಡ ಹೈಕಮಿಷನರ್ ತಂಡ
ಶ್ರೀರಂಗಪಟ್ಟಣ: ರವಾಂಡ ದೇಶದ ವಿದ್ಯಾರ್ಥಿ ಅನುಮಾನಸ್ಪದವಾಗಿ ಸಾವಿಗೀಡಾದ ಪ್ರಕರಣದ ವಿಚಾರಣೆ ನಡೆಸಲು ರವಾಂಡ ದೇಶದ ಹೈಕಮಿಷನರ್ಗಳ ತಂಡ ಬುಧವಾರ ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ರವಾಂಡದ ಹೈಕಮಿಷನರ್ಗಳಾದ ಮುಚು ಮತ್ತು ಎರ್ನಸ್ಟ್ ಅವರು ರವಾಂಡದಲ್ಲಿನ ಭಾರತದ ರಾಯಭಾರಿ ಮೋಹನ್ ಸುರೇಶ್ ಅವರೊಂದಿಗೆ ವಿದ್ಯಾರ್ಥಿಯ ಶವ ದೊರಕಿದ ಕೆಆರ್ಎಸ್ ಹಿನ್ನೀರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ವಿದ್ಯಾರ್ಥಿ ಶವವನ್ನು ಹೂತಿರುವ ಸ್ಥಳವನ್ನು ವೀಕ್ಷಿಸಿದ ತಂಡ, ಪೊಲೀಸ್ ಅಧಿಕಾರಿಗಳಿಗೆ ಶವವನ್ನು ರವಾಂಡ ದೇಶಕ್ಕೆ ಕೊಂಡೊಯ್ಯುವ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಡಿವೈಎಸ್ಪಿ ಗೀತಾ ಪ್ರಸನ್ನ, ಸಿಪಿಐ ಜಯಕುಮಾರ್, ಸಬ್ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಹಾಜರಿದ್ದರು. ರವಾಂಡ ಅಧಿಕಾರಿಗಳ ವಿಚಾರಣೆಗೆ ಅಗತ್ಯ ನೆರವು ನೀಡುತ್ತಿದ್ದೇವೆ. ಅಲ್ಲದೆ ಮೃತ ವಿದ್ಯಾರ್ಥಿಯ ಸ್ನೇಹಿತರು ಹೈಕಮಿಷನರ್ ಎದುರು ವಿಚಾರಣೆಗೆ ಒಳಪಟ್ಟಿರುವುದು ಗೊತ್ತಾಗಿದೆ. ಶವವನ್ನು ಆ ದೇಶಕ್ಕೆ ತೆಗೆದುಕೊಂಡು ಹೋಗುವುದಾದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಾನೂನಿನ ಸಾಧಕ ಬಾಧಕಗಳನ್ನು ಪರಿಶೀಲಿಸಿ ಶವವನ್ನು ಹಸ್ತಾಂತರಿಸಲಾಗುವುದು ಎಂದು ಶ್ರೀರಂಗಪಟ್ಟಣ ಡಿವೈಎಸ್ಪಿ ಗೀತಾ ಪ್ರಸನ್ನ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ವಿದ್ಯಾರ್ಥಿಯ ಮೂಲ ಪತ್ತೆ: ಕೆಆರ್ಎಸ್ನಲ್ಲಿ ವಿದೇಶಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಾಧ್ಯಮಗಳಲ್ಲಿ ಬಿತ್ತರವಾದ ಒಂದು ವಾರದ ಬಳಿಕ ಆ ವ್ಯಕ್ತಿಯ ವಿಳಾಸ ಕೊನೆಗೂ ಪತ್ತೆಯಾಗಿದೆ. ಮೃತ ವಿದ್ಯಾರ್ಥಿ ರವಾಂಡ ದೇಶದ ಕಿಗಾಲಿ ಗ್ರಾಮದ ಎಲಿಸ್ಫಾನ್ ತುಗ್ರಿಮಾನ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಬೊಮ್ಮಸಂದ್ರದ ಬೃಂದಾವನ ಕಾಲೇಜಿ 3ನೇ ವರ್ಷದ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

