ರಾಜೀವ್ ಹಂತಕರ ಬಿಡುಗಡೆ ಏಕೆ?

ನವದೆಹಲಿ/ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ಮೂರು ದಿನಗಳೊಳಗೆ ಬಿಡುಗಡೆ ಮಾಡುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿರ್ಧಾರಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಿಡಿಯಾಗಿದ್ದಾರೆ.
ಪ್ರಧಾನಮಂತ್ರಿಗಳ ಹಂತಕರನ್ನೇ ಬಿಡುಗಡೆ ಮಾಡಿದರೆ ಇನ್ನು ಜನಸಾಮಾನ್ಯರಿಗೆ ಹೇಗೆ ನ್ಯಾಯ ಸಿಗಲು ಸಾಧ್ಯ? ನಮ್ಮ ದೇಶದಲ್ಲಿ ಪ್ರಧಾನಿಗೂ ನ್ಯಾಯ ಸಿಗುವುದಿಲ್ಲವೇ?
ನನ್ನ ತಂದೆಯ ಹಂತಕರಿಗೆ ಗಲ್ಲುಶಿಕ್ಷೆಯಾಗಬೇಕೆಂದು ನಾನೇನು ಆಗ್ರಹಿಸುತ್ತಿಲ್ಲ. ಅದರಿಂದ ನನ್ನ ತಂದೆ ಹಿಂತಿರುಗಿ ಬರುವುದೂ ಇಲ್ಲ. ಇದು ಇಡೀ ದೇಶಕ್ಕೆ ಸಂಬಂಧಪಟ್ಟ ವಿಚಾರ. ತಮಿಳುನಾಡು ಸರ್ಕಾರದ ಈ ನಿರ್ಧಾರದಿಂದ ತೀವ್ರ ಬೇಸರವಾಗಿದೆ. ಇದನ್ನು ಮನಸ್ಸಿಂದ ಹೇಳುತ್ತಿದ್ದೇನೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ರಾಜೀವ್ ಗಾಂಧಿ ಹಂತಕರಿಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಬುಧವಾರ ಏಳೂ ಮಂದಿ ಹಂತಕರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅಚ್ಚರಿಯೆಂಬಂತೆ ಸರ್ಕಾರದ ಈ ನಿರ್ಧಾರಕ್ಕೆ ಜಯಲಲಿತಾ ಕಡು ವಿರೋಧಿಯೂ ಆಗಿರುವ ಡಿಎಂಕೆ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ. ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾತ್ರ ಇದು ಚುನಾವಣಾ ತಂತ್ರ ಎಂದು ಆರೋಪಿಸಿದೆ.
ಸಚಿವ ಸಂಪುಟದ ನಿರ್ಧಾರ: ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಸಚಿವ ಸಂಪುಟದ ವಿಶೇಷ ಸಭೆ ಕರೆದ ಮುಖ್ಯಮಂತ್ರಿ ಜಯಲಲಿತಾ ಅವರು ಏಳೂ ಮಂದಿ ಹಂತಕರನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡರು. ಬಳಿಕ ವಿಧಾನಸಭೆಯಲ್ಲಿ ಈ ವಿಚಾರ ಪ್ರಕಟಿಸಿದರು.
ಸಚಿವ ಸಂಪುಟದ ನಿರ್ಣಯದಂತೆ ಹಂತಕರನ್ನು ಬಿಡುಗಡೆ ಮಾಡಬೇಕೆನ್ನುವ ಪ್ರಸ್ತಾಪವನ್ನು ಕೇಂದಕ್ಕೆ ಕಳುಹಿಸಿಕೊಡಲಾಗುವುದು. ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದರೂ, ಸೂಚಿಸದಿದ್ದರೂ ಮೂರು ದಿನಗಳ ಬಳಿಕ 7 ಮಂದಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಜಯಲಲಿತಾ ತಿಳಿಸಿದರು. ಸರ್ಕಾರದ ನಿರ್ಧಾರ ಹೊರಬರುತ್ತಿದ್ದಂತೆ ಈಳಂ ಬೆಂಬಲಿಗರು ಸಂಭ್ರಮ ಆಚರಿಸಿದರು.
2 ದಶಕದಿಂದ ಜೈಲು
ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ಆದ ವಿಳಂಬ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ರಾಜೀವ್ ಹಂತಕರಾದ ಮುರುಗನ್, ಶಾಂತನ್(ಶ್ರೀಲಂಕಾ ತಮಿಳರು), ಎ.ಜಿ. ಪೆರಾರಿವಾಲನ್ ಗಲ್ಲುಶಿಕ್ಷೆಯನ್ನು ಜೀವಾವಧಿಗಿಳಿಸಿತ್ತು. ಈ ನಾಲ್ವರು ಸೇರಿ ಕಳೆದ 23 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಉಳಿದ ನಾಲ್ವರು ಹಂತಕರಾದ ನಳಿನಿ, ರಾಬರ್ಟ್, ಜಯಕುಮಾರ್, ರವಿಚಂದ್ರನ್ ಅವರನ್ನೂ ಬಿಡುಗಡೆ ಮಾಡಲಾಗುವುದು.
ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರ ಏಳೂ ಹಂತಕರನ್ನು ಬಿಡುಗಡೆ ಮಾಡುವ ತಮಿಳುನಾಡು ಸರ್ಕಾರದ ನಿರ್ಧಾರ ದುರದೃಷ್ಟಕರ.
ಟಿ ಆರ್.ಪಿ.ಎನ್.ಸಿಂಗ್,
ಗೃಹಖಾತೆ ರಾಜ್ಯ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


