ಪ್ರಧಾನ ಸುದ್ದಿ

ಎಸ್.ಆರ್. ಹಿರೇಮಠ್ ವಿರುದ್ಧ ತನಿಖೆಗೆ ಪರಿಶೀಲನೆ: ಜಾರ್ಜ್

ಎಸ್.ಆರ್. ಹಿರೇಮಠ್ ವಿರುದ್ಧ ತನಿಖೆಗೆ ಪರಿಶೀಲನೆ: ಜಾರ್ಜ್
Published On :

ವಿಧಾನಸಭೆ: ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಕಾನೂನು ಪರಿಮಿತಿಯಲ್ಲಿ ಪರಿಶೀಲನೆ ನಡೆಸುವುದಾಗಿ ಗೃಹ ಸಚಿವ ಕೆ.ಜೆ. ಜಾರ್ಜ್ ವಿಧಾನಸಭೆಯಲ್ಲಿ ಗುರುವಾರ ಪ್ರಕಟಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್‌ನ ರಮೇಶ್‌ಕುಮಾರ್, ಹಿರೇಮಠ್ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಿಸಿರುವುದಕ್ಕೆ ನನ್ನ ಬಳಿ ದಾಖಲೆ ಇದೆ. ಈ ಬಗ್ಗೆ ಸಭಾಧ್ಯಕ್ಷರು ಪರಿಶೀಲನೆ ನಡೆಸಿ ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಜಾರ್ಜ್ ಈ ವಿಷಯ ತಿಳಿಸಿದರು.

ಹಿರೇಮಠ್ ವಿರುದ್ಧದ ಆರೋಪಗಳ ಬಗ್ಗೆ ಇರುವ ದಾಖಲೆಗಳನ್ನು ಅವರು ಕಳುಹಿಸಿಕೊಡಲಿ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ತನಿಖೆ ನಡೆಸುವುದಕ್ಕೆ ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಈ ವಿಷಯ ರಾಜ್ಯ ಸರ್ಕಾರದ ವ್ಯಾಪ್ತಿಗೆ ಮೀರಿದ್ದರೆ, ತನಿಖೆ ನಡೆಸುವುದಕ್ಕೆ ಅವಕಾಶವಿದ್ದರೆ ನಾವು ಪರಿಶೀಲನೆ ನಡೆಸಿ ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಆದರೆ ಈ ವಿಷಯ ಸಂಬಂಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ರಮೇಶ್‌ಕುಮಾರ್ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಧ್ಯೆ ತುರುಸಿನ ವಾಗ್ವಾದವೂ ನಡೆಯಿತು. ಬಜೆಟ್‌ನಲ್ಲಿ ಪ್ರಸ್ತಾಪವಾದ ವಿಷಯಗಳ ಬಗ್ಗೆ ರಮೇಶ್‌ಕುಮಾರ್ ಸುದೀರ್ಘ ವ್ಯಾಖ್ಯಾನ ಮಾಡುತ್ತಾ, ಪೊಲೀಸ್ ಇಲಾಖೆ ಸುಧಾರಣೆ ವಿಚಾರ ಬಂದಾಗ ಹಿರೇಮಠ್ ವಿಚಾರ ಪ್ರಸ್ತಾಪಿಸಿದರು. ಹಿರೇಮಠ್ ಅವರು ನನಗೆ ಅಧಿಕಾರದ ದಾಹ ಎಂದು ಆರೋಪಿಸಿದ್ದಾರೆ. ಸ್ಪೀಕರ್ ಕಾಗೋಡು ತಿಮ್ಮಪ್ಪ, 52 ವರ್ಷಗಳ ಸಂಸದೀಯ ಅನುಭವ ಹೊಂದಿರುವ ಎಸ್.ಎಂ. ಕೃಷ್ಣ, ಎನ್. ಧರ್ಮಸಿಂಗ್ ಆದಿಯಾಗಿ ಎಲ್ಲರ ವಿರುದ್ಧವೂ ಆರೋಪ ಮಾಡುತ್ತಿದ್ದಾರೆ.

ಆದರೆ ಇವರ ವಿರುದ್ಧವೇ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಸಿ ಹಣ ತೆಗೆದುಕೊಂಡ ಆರೋಪವಿದೆ. ಅವರೇ ನಿಯೋಜನೆ ಮಾಡಿಕೊಂಡ ಚಾರ್ಟೆಡ್ ಅಕೌಂಟೆಂಟ್ ಅವರು ಈ ಆರೋಪ ಮಾಡಿದ್ದಾರೆ. ಆದರೆ ಹಿರೇಮಠ್ ವಿರುದ್ಧ ಇದುವರೆಗೆ ನಮ್ಮ ಪೊಲೀಸರು ತನಿಖೆ ನಡೆಸಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ತಾವು ನಡೆಸುವ ಹೋರಾಟವನ್ನು ಪ್ರಾಜೆಕ್ಟ್ ಎಂದು ಕರೆದುಕೊಂಡಿದ್ದಾರೆ. ಸುಮಾರು ಲಕ್ಷ ಡಾಲರ್ ಹಣವನ್ನು ವಿದೇಶದಿಂದ ಪಡೆದುಕೊಂಡಿದ್ದಾರೆ. ಆದರೆ ನಿಯಮ ಪ್ರಕಾರ ಇದಕ್ಕೆ ಅವಕಾಶವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ಮಧ್ಯಪ್ರವೇಶ ಮಾಡಿದ ಕುಮಾರಸ್ವಾಮಿ, ರಮೇಶ್‌ಕುಮಾರ್ ಅವರು ಈ ಸದನದ ಸ್ಪೀಕರ್ ಆಗಿ ಕೆಲಸ ಮಾಡಿದ್ದಾರೆ. ಅವರಿಗೆ ಈ ಸದನದ ನಿಯಮಗಳು ಚೆನ್ನಾಗಿ ಗೊತ್ತು. ಇಲ್ಲಿನ ಸದಸ್ಯರಲ್ಲದ ವ್ಯಕ್ತಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಸಿಕ್ಕ ಅವಕಾಶವನ್ನು ಈ ರೀತಿ ಬಳಸಿಕೊಳ್ಳುತ್ತಾರೆ. ಬೇಕಿದ್ದರೆ ಬೇರೆ ರೂಪದಲ್ಲಿ ಚರ್ಚೆಗೆ ತರಲಿ. ಅಷ್ಟಕ್ಕೂ ಕೇಂದ್ರದಲ್ಲಿ ಅವರದ್ದೇ ಪಕ್ಷದ ಸರ್ಕಾರವಿದೆ. ಸುಮ್ಮನೆ ಪೊಲೀಸರು ತನಿಖೆ ಮಾಡುತ್ತಿಲ್ಲ ಎನ್ನುವ ಬದಲು ನೀವೇ ದೂರು ಕೊಡಿ. ಸಿಬಿಐ ತನಿಖೆಗೆ ಒತ್ತಾಯಿಸಲಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಪೊಲೀಸ್ ಕಾರ್ಯವೈಖರಿ ಬಗ್ಗೆ ವ್ಯಾಖ್ಯಾನ ಮಾಡುತ್ತಾ ರಮೇಶ್‌ಕುಮಾರ್ ಪ್ರಾಸಂಗಿಕವಾಗಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಮಾತನಾಡುವುದಕ್ಕೆ ಅವಕಾಶ ಕೊಡಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.