ಪ್ರತ್ಯೇಕ ಅಪಘಾತ: ಎಂಟು ಮಂದಿ ಸಾವು
ಸಿಂದಗಿ/ಆಲೂರು: ರಾಜ್ಯದ ಎರಡು ಕಡೆ ಶುಕ್ರವಾರ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ.
ಖಾಸಗಿ ಬಸ್ಸೊಂದು ಒಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಇದೇ ವೇಳೆ ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಹೊರವಲಯದ ಚೌಧರಿ ವಸತಿ ಶಾಲೆ ಹತ್ತಿರದ ರಾ.ಹೆದ್ದಾರಿ 218ರಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸೇರಿದಂತೆ ನಾಲ್ವರು ಅಸುನೀಗಿದ್ದಾರೆ. ಆಲೂರಿನಲ್ಲಿ ನಡೆದ ಅಪಘಾತದಲ್ಲಿ ಮಂಡ್ಯ ಜಿಲ್ಲೆ ಬೆಳ್ಳೂರು ಗ್ರಾಮದವರಾದ ಮೋಹನ್‌ಕುಮಾರ್ (35), ಇವರ ಪತ್ನಿ ಪುಷ್ಪಾ (30), ಪುತ್ರಿ ಲಿಖಿತಾ (7) ಮತ್ತು ಪುತ್ರ ಕುಶಾಲ್ (8) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕುಟುಂಬ ಸಮೇತರಾಗಿ ಒಮಿನಿ ವಾಹನದಲ್ಲಿ ಧರ್ಮಸ್ಥಳಕ್ಕೆ ಹೋಗಿ ಶುಕ್ರವಾರ ಬೆಳಗಿನ ಜಾವ ವಾಪಸಾಗುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದು ಒಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರೂ ಸ್ಥಳದಲ್ಲಿಯೇ ಅಸುನೀಗಿದರು.
ಲಾರಿಯಲ್ಲಿ ವಾಪಸಾಗುತ್ತಿದ್ದರು: ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿಯ ರಾ. ಹೆದ್ದಾರಿ 218ರಲ್ಲಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಮಳ್ಳಿ ಗ್ರಾಮದ ಸಿದ್ದಪ್ಪ ಗುರುವಿನ (35), ಇವರ ಪತ್ನಿ ಶ್ರುತಿ ಗುರುವಿನ (30) ಹಾಗೂ ಸಿಂದಗಿ ತಾಲೂಕಿನ ನಾಗಾವಿ ಬಿ.ಕೆ ಗ್ರಾಮದ ಸಿದ್ದಪ್ಪ ಬದಿನಾಳ (50), ಶಹಾಬಾದ್ ನಿವಾಸಿ ಅಲಿ ಅಹ್ಮದ್ ಹಾಜಿ ಮಲಂಗ (28) ಮೃತಪಟ್ಟವರು.
ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಮತ್ತೊಂದು ಲಾರಿಯ ಚಾಲಕ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಗುರುವಿನ ದಂಪತಿ ಮಹಾರಾಷ್ಟ್ರದ ಕರಾಡಕ್ಕೆ ದುಡಿಯಲು ಹೋಗಿ, ಶುಕ್ರವಾರವಷ್ಟೇ ಲಾರಿಯ ಮೂಲಕ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದರು. ಅಪಘಾತದಿಂದಾಗಿ ಲಾರಿ ಬಹುತೇಕ ನುಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ತರಕಾರಿ ಮೂಟೆಗಳು, ತೊಗರಿ ಚೀಲಗಳು ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬೆಲ್ಲ ಹರಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

