ಸಂಸತ್ತಲ್ಲಿ ರಮ್ಯಾ ಚೊಚ್ಚಲ ಭಾಷಣ

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಹದಿನೈದನೆಯ ಲೋಕಸಭೆಯ ಅಂತಿಮ ಅಧಿವೇಶನದ ಕೊನೆಯ ದಿನ ತಮ್ಮ ಚೊಚ್ಚಲ ಭಾಷಣ ಮಾಡಿ ಮಂಡ್ಯ ಸಂಸದೆ ರಮ್ಯಾ ಮಿಂಚಿದರು.
ಅವರು ಮಿಂಚಿದ್ದು ಅವರಷ್ಟೆ ಅಂದವಾದ, ಚಿಕ್ಕದಾದ, ಚೊಕ್ಕದಾದ, ಅರ್ಥವತ್ತಾದ ಭಾಷಣದಿಂದ.
27ರ ಹರೆಯದ ರಮ್ಯಾ ಕಬ್ಬು ಬೆಳೆಗಾರರ ಸಮಸ್ಯೆಗೂ ರಾಷ್ಟ್ರದ ಕಚ್ಚಾ ತೈಲ ಆಮದಿಗೂ ರಾಷ್ಟ್ರದ ಆರ್ಥಿಕತೆಗೂ ಸಂಬಂಧ ಕಲ್ಪಿಸಿ ಹಿರಿ- ಕಿರಿಯ ಸದಸ್ಯರೆಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಬರಬೇಕು. ಕಬ್ಬು ಬೆಳೆಗಾರರಿಗೆ ನೆರವಾಗ ಬೇಕಾದರೆ ರಾಷ್ಟ್ರದಲ್ಲಿ ಹಸಿರು ಇಂಧನವಾದ ಎಥೆನಾಲ್ ಬಳಕೆ ಹೆಚ್ಚಾಗಬೇಕು ಎಂದು ಗಮನ ಸೆಳೆದರು.
ಆತಂಕದಿಂದಲೇ ಮಾತನಾಡಿದ ರಮ್ಯ ಹೇಳಿದ್ದಿಷ್ಟು: ಕಬ್ಬು ವಾಣಿಜ್ಯ ಬೆಳೆ, ಸೂಪರ್ ಬೆಳೆ. ಆದರೆ, ಪ್ರತಿಬಾರಿಯ ರೈತರಿಗೆ ಪ್ರತಿಫಲ ಸಿಗುವುದಿಲ್ಲ. ಕಬ್ಬಿಗೆ ಪ್ರತಿ ವರ್ಷ ಕನಿಷ್ಠ ಬೆಂಬಲ ನಿಗದಿ ಮಾಡುತ್ತದೆ. ಇದು ವಿಳಂಬವಾಗುವುದರಿಂದ ರೈತರಿಗೆ ಅನನುಕೂಲವಾಗುತ್ತದೆ. ಒಳ್ಳೆ ಬೆಳೆ ಬಂದಾಗ ಸಕ್ಕರೆ ಕಾರ್ಖಾನೆಗಳು ಲಾಭ ಮಾಡಿಕೊಳ್ಳುತ್ತವೆ. ಇಂಥ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿ ಶೇ.5ರಷ್ಟು ಸಂಚಿತ ನಿಧಿಯನ್ನಾಗಿ ಇಡಬೇಕು. ರೈತರು ಸಂಕಷ್ಟದಲ್ಲಿದ್ದಾಗ ಆ ನಿಧಿಯನ್ನು ಬಳಸಿಕೊಳ್ಳುವ ವ್ಯವಸ್ಥೆಬೇಕು. ಕಬ್ಬು ಬೆಳೆಗಾರರಿಗೆ ಸಬ್ಸಿಡಿ ನೀಡಿದರೆ ಎಲ್ಲರೂ ಹನಿ ನೀರಾವರಿ ಸೌಲಭ್ಯ ಪಡೆಯಬಹುದು. ಹನಿ ನೀರಾವರಿ ಸೌಲಭ್ಯ ಇದ್ದರೆ, ಹವಾಮಾನ ವೈಪರಿತ್ಯವಾದರೂ ಬೆಳೆ ನಷ್ಟ ಆಗುವುದಿಲ್ಲ.
ಹೆದರಿದ್ದೇನೆ: ಈ ಹಂತದಲ್ಲಿ ನನ್ನ ಸಹ ಸದಸ್ಯರೆಲ್ಲ ಮಾತನಾಡುತ್ತಿದ್ದಾರೆ, ನಾನು ಕೊಂಚ ಹೆದರಿಕೊಂಡಿದ್ದೇನೆ. ಸರ್ಕಾರ ಕಬ್ಬು ಬೆಳೆಗಾರರ ನೆರವಿಗೆ ಬರಬೇಕೆಂದು ಮನವಿ ಮಾಡುತ್ತೇನೆಂದರು. ಆಗ ಕೆಲವು ಸಹ ಸದಸ್ಯರು ಕೂಗಿದರು.
ಬಳಿಕ ಕೊಂಚ ತಡೆದ ರಮ್ಯಾ, ಬ್ರೆಜಿಲ್ ದೇಶದಲ್ಲಿ ಶೇ.44ರಷ್ಟು ಎಥೆನಾಲ್ ಬಳಸುತ್ತಾರೆ. ನಮ್ಮಲ್ಲಿ ಎಥೆನಾಲ್ ಬಳಕೆ ಪ್ರಮಾಣ ಅತ್ಯಲ್ಪ. ಎಥೆನಾಲ್ ಬಳಕೆಗೆ ಆದ್ಯತೆ ನೀಡಬೇಕು. ಕಬ್ಬು ಬೆಳೆಗಾರರಿಗೂ ಎಥೆನಾಲ್ನಿಂದಾಗುವ ಲಾಭದ ಬಗ್ಗೆ ತಿಳುವಳಿಕೆ ನೀಡಬೇಕು. ನಾವು ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದಿಸಿದರೆ, ನಾವು ಕಚ್ಚಾ ತೈಲಕ್ಕಾಗಿ ವಿನಿಯೋಗಿಸುತ್ತಿರುವ ವಿದೇಶಿ ವಿನಿಮಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು ಎಂದರು.
ನಾನು ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದು ಸದನಕ್ಕೆ ಬಂದಾಗ ಆತ್ಮೀಯವಾದ ಸ್ವಾಗತ ನೀಡಿದ ನಿಮಗೆಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ ಎಂದೂ ಸಹ ಸದಸ್ಯರಿಗೆ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


