ಗುಲ್ಬರ್ಗದಲ್ಲಿ ರೇಲ್ವೆ ವಿಭಾಗೀಯ ಕಚೇರಿಗೆ ಕೇಂದ್ರ ಹಸಿರು ನಿಶಾನೆ ಹೈ-ಕ ಗೆ ಮಲ್ಲಿಕಾರ್ಜುನ ಯೋಗ

ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.22
ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಹೈದರಾಬಾದ್- ಕರ್ನಾಟಕಕ್ಕೆ ಕಾಂಗ್ರೆಸ್ ಮತ್ತೊಂದು ಕೊಡುಗೆ ನೀಡಲು ಸಜ್ಜಾಗಿದ್ದು, ರೇಲ್ವೆ ಖಾತೆ ಸಚಿವರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಕ್ಷೇತ್ರ ಗುಲ್ಬರ್ಗದಲ್ಲಿ ರೇಲ್ವೆ ವಿಭಾಗೀಯ ಕಚೇರಿಯ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ವಿಭಾಗೀಯ ಕಚೇರಿ ಸ್ಥಾಪನೆ ಮಾಡುವ ಕುರಿತು ರೇಲ್ವೆ ಬಜೆಟ್ನಲ್ಲಿ ಮಂಡನೆಯಾಗಿಲ್ಲ. ಆದರೆ, ರೇಲ್ವೆ ಸಚಿವಾಲಯವು ರಾಜ್ಯದ ಗುಲ್ಬರ್ಗ ಸೇರಿದಂತೆ ದೇಶದ ಮೂರು ಕಡೆ ವಿಭಾಗೀಯ ಕಚೇರಿ ಸ್ಥಾಪನೆ ಮಾಡುವ ಕುರಿತು ಅಗತ್ಯ ಪ್ರಸ್ತಾವನೆಯನ್ನು ಮಂಡಿಸಿತ್ತು. ಇದಕ್ಕೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರೂ ಸಮ್ಮತಿ ನೀಡಿದ್ದಾರೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ನಡೆದರೆ, ವಾರದೊಳಗೆ ಈ ಕುರಿತು ಆದೇಶ ಹೊರಬೀಳಲಿದೆ. ಕರ್ನಾಟಕದ ಗುಲ್ಬರ್ಗ, ಈಶಾನ್ಯ ಭಾಗದ ಆಸ್ಸಾಂನ ಸಿಲ್ಚಾರ್ ಹಾಗೂ ಜಮ್ಮು- ಕಾಶ್ಮೀರದ ಉಧಂಪುರ ನಗರಗಳಲ್ಲಿ ಪ್ರತ್ಯೇಕ ರೇಲ್ವೆ ವಿಭಾಗೀಯ ಕಚೇರಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಶನಿವಾರ ಗುಲ್ಬರ್ಗ ರೈಲು ನಿಲ್ದಾಣದಲ್ಲಿ 48 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದ ನಂತರ ಮಾತನಾಡಿದ ಖರ್ಗೆ, ಈ ದಿಸೆಯಲ್ಲಿ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಎಲ್ಲವೂ ಅಂದುಕೊಂಡಂತೆ ನಡೆದದ್ದೇ ಆದಲ್ಲಿ ವಾರದೊಳಗೆ ಹೊಸ ರೇಲ್ವೆ ವಿಭಾಗೀಯ ಕಚೇರಿಗಳ ರಚನೆಯ ಆದೇಶ ಹೊರಬೀಳಲಿದೆ. ಅಧಿಕೃತ ಆದೇಶದ ನಂತರ ರೇಲ್ವೆ ಇಲಾಖೆ ಸಾರ್ವಜನಿಕ ಸಮಾಲೋಚನಾ ಸಭೆ ನಡೆಸಿ, ಸಿಬ್ಬಂದಿ ಅಭಿಪ್ರಾಯ ಆಲಿಸುತ್ತದೆ. ಜೊತೆಗೆ ಹೊಸ ವಿಭಾಗಗಳ ಸ್ಥಾಪನೆಗೂ ಮುನ್ನ ಪೂರ್ವಸಿದ್ಧತೆ ಕೈಗೊಳ್ಳಬೇಕಾಗುತ್ತದೆ ಎಂದರು.
ಏನಿದು ಕಚೇರಿ?
ಭಾರತೀಯ ರೇಲ್ವೆ ಆಡಳಿತವು ವಿಭಾಗೀಯ ಹಂತದಲ್ಲಿ ವಿಕೇಂದ್ರಿಕೃತವಾಗಿದೆ. ವಿಭಾಗೀಯ ವ್ಯವಸ್ಥಾಪಕರು ಈ ಕಚೇರಿಯ ಆಡಳಿತಾಧಿಕಾರಿ. ಈ ಕಚೇರಿ ಅಡಿಯಲ್ಲಿ ರೇಲ್ವೆಯ ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿಗ್ನಲ್, ಟೆಲಿಕಮ್ಯೂನಿಕೇಷನ್, ಅಕೌಂಟ್, ಪರ್ಸನಲ್, ಕಮರ್ಷಿಯಲ್, ಸುರಕ್ಷತೆ, ವೈದ್ಯಕೀಯ ಹೀಗೆ ಎಲ್ಲಾ ಮಹತ್ವದ ವಿಭಾಗಗಳನ್ನು ಒಳಗೊಂಡಿರುತ್ತದೆ. ರೇಲ್ವೆ ವಿಭಾಗೀಯ ವ್ಯವಸ್ಥಾಪಕರ ಕೆಲಸ ಕಾರ್ಯದಲ್ಲಿ ಹೆಚ್ಚುವರಿ ವ್ಯವಸ್ಥಾಪಕರೊಬ್ಬರ ಹುದ್ದೆ ಇದ್ದು ಇವರು ವ್ಯವಸ್ಥಾಪಕರಿಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ನೆರವಾಗುತ್ತಾರೆ. ವಿಭಾಗೀಯ ಕಚೇರಿಗೆ ಇಂತಿಷ್ಟು ಕಿ.ಮೀ. ರೇಲ್ವೆ ಮಾರ್ಗ ನಿರ್ವಹಣೆಗೆ ವಹಿಸಿಕೊಡಲಾಗುತ್ತದೆ. ಜೊತೆಗೆ ಈ ಮಾರ್ಗದಲ್ಲಿನ ಎಲ್ಲಾ ನಿಲ್ದಾಣಗಳ ಯೋಗಕ್ಷೇವು, ಪ್ರಯಾಣಿಕರ ಸೌಕರ್ಯಗಳ ಜವಾಬ್ದಾರಿಯೂ ಆಯಾ ವಿಭಾಗೀಯ ಕಚೇರಿಗಳೇ ನಿರ್ವಹಿಸಬೇಕು. ವಿಭಾಗೀಯ ಕಚೇರಿ ವ್ಯವಸ್ಥಾಪಕರು ವಲಯ ರೇಲ್ವೆ ಕಚೇರಿಯ ಪ್ರಧಾನ ವ್ಯವಸ್ಥಾಪಕರ ಆಣತಿಯಂತೆ ಕೆಲಸ ನಿರ್ವಹಿಸುತ್ತಾರೆ.
1984ರಲ್ಲೇ ಪ್ರಸ್ತಾಪ
1984 ರಲ್ಲೇ ರೇಲ್ವೆ ಸುಧಾರಣೆ ಸಮಿತಿ ಹಾಗೂ ಎಚ್.ಸಿ. ಸರೀನ್ ಸಮಿತಿಗಳು ಗುಲ್ಬರ್ಗ ಕೇಂದ್ರವಾಗಿರುವಂತೆ ಪ್ರತ್ಯೇಕ ರೇಲ್ವೆ ವಿಭಾಗ ರಚನೆಗೆ ಶಿಫಾರಸು ಮಾಡಿದ್ದವು. ಆದರೆ, ಗುಲ್ಬರ್ಗ ವಿಭಾಗ ರಚನೆ ಕಾರ್ಯಸಾಧುವಲ್ಲ ಎಂದು ರೇಲ್ವೆ ಲೆಕ್ಕಪತ್ರ ಸಮಿತಿ ಹೊಸತಾಗಿ ಶಿಫಾರಸು ಮಾಡಿದ್ದರಿಂದ ಈ ಬೇಡಿಕೆ ಈಡೇರದೆ ಕಗ್ಗಂಟಾಗಿತ್ತು. ಖರ್ಗೆ ರೇಲ್ವೆ ಸಚಿವರಾದ ನಂತರ ಮತ್ತೆ ಈ ಕನಸು ಚಿಗುರಿತ್ತು. ಖರ್ಗೆಯವರು ಆಡಳಿತಾತ್ಮಕ ಕಚೇರಿ ಮಾಡಿ, ಲೇಖಾನುದಾನದಲ್ಲಿ 5 ಕೋಟಿ ಮಂಜೂರು ಮಾಡಿ ಗುಲ್ಬರ್ಗಕ್ಕೆ ಆಡಳಿತಾತ್ಮಕ ಕಚೇರಿ ಮಂಜೂರು ಮಾಡಿದ್ದರು. ಆದರೀಗ ಪೂರ್ಣ ಪ್ರಮಾಣದ ರೇಲ್ವೆ ವಿಭಾಗೀಯ ಕಚೇರಿ ಬರುತ್ತಿರುವುದು ಇಲ್ಲಿನ ಜನಕ್ಕೆ ನಿಜಕ್ಕೂ ಸಂತಸ ತಂದಿದೆ.
28ರಂದು ವಾಡಿ- ಗದಗ ಮಾರ್ಗಕ್ಕೆ ಶಿಲಾನ್ಯಾಸ
ಹೈ- ಕ ಹಾಗೂ ಮುಂಬೈ ಕರ್ನಾಟಕ ನಡುವೆ ರೇಲ್ವೆ ಸಂಪರ್ಕ ಬೆಸೆಯುವ ಮಹತ್ವದ ವಾಡಿ- ಗದಗ ರೇಲ್ವೆ ಮಾರ್ಗ ಕಾಮಗಾರಿಗೆ ಫೆ.28 ರಂದು ಶಿಲಾನ್ಯಾಸ ನೆರವೇರಿಸಲಾಗುತ್ತಿದೆ. ಈ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಹರಿಹರ- ಕೊಟ್ಟೂರು ರೈಲು ಮಾರ್ಗದಲ್ಲಿ ಕೆಲವು ಸುರಕ್ಷತಾ ಲೋಪಗಳು ಕಂಡು ಬಂದಿದ್ದರಿಂದ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಿರಲಿಲ್ಲ. ಮಾರ್ಚ್ 3 ರಂದು ಈ ಮಾರ್ಗ ರೈಲು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ ಎಂದು ಖರ್ಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


