ಪ್ರಧಾನ ಸುದ್ದಿ

ಕಪಟಿ ಅಪ್ಪಯ್ಯ ಸ್ವಾಮಿ ನ್ಯಾಯಾಂಗ ವಶಕ್ಕೆ: ಮಠಕ್ಕೆ ಪೊಲೀಸ್ ಕಾವಲು

Published On :

ಅಥಣಿ: ಬಾಲಕಿಯನ್ನು ಸಮಾಧಿಯೊಳಗಿಟ್ಟು ಸುಡಲು ಮಂದಾಗಿದ್ದ ಝುಂಜರವಾಡದ ಅಪ್ಪಯ್ಯ ಸ್ವಾಮಿಯನ್ನು ಶುಕ್ರವಾರ (ಫೆ.28) ದವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೇ ವೇಳೆ, ಈ ಸ್ವಾಮಿಯ ಆಶ್ರಮದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಅಥಣಿ ತಾಲೂಕಿನ ಐಗಳಿ ಠಾಣೆಯಲ್ಲಿ ಅಪ್ಪಯ್ಯ ಸ್ವಾಮಿ ವಿರುದ್ಧ ಸೆಕ್ಷನ್ 32-2014, ಕಲಂ 336,354(ಬಿ),342,344 ಹಾಗೂ ಐ.ಪಿ.ಸಿ.11,12, ಪ್ರೊಟಕ್ಷನ್ ಚೈಲ್ಡ್ ಫ್ರಾಮ್ ಸೆಕ್ಸುವಲ್ ಒಪೆನ್ಸಸ್ ಆಕ್ಟ್ಟ್-2012 (ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಅಪರಾಧದಿಂದ ತಡೆಗಟ್ಟುವ ಕಾಯ್ದೆ- 2012) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ, ಝುಂಜರವಾಡ ಮಠದ ಸುತ್ತ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ ಎಂದು ತಹಸೀಲ್ದಾರ್ ಅರ್ಪಣಾ ಪಾವಟೆ ತಿಳಿಸಿದ್ದಾರೆ. ಅಕ್ರಮ ಕಟ್ಟಡಗಳನ್ನು ಕಂದಾಯ ಇಲಾಖೆಯ ಅಧೀನಕ್ಕೆ ಪಡೆದುಕೊಂಡು ಜಪ್ತಿ ಮಾಡಲಾಗಿದೆ. ಬೀಗ ಜಡಿಯಲಾಗಿದೆ. ಅಕ್ರಮ ಕಟ್ಟಡಗಳ ತೆರವು ಸಂಬಂಧ ಜಿಲ್ಲಾಡಳಿತದಿಂದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.  
ಜಿಲ್ಲಾಸ್ಪತ್ರೆಗೆ ಬಾಲಕಿ ಸ್ಥಳಾಂತರ: ಕಪಟ ಸ್ವಾಮಿಯ ಕುಕೃತ್ಯದಿಂದ ಬಳಲಿ ಬೆಂಡಾದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಥಣಿ ತಾಲೂಕು ಆಸ್ಪತ್ರೆಯಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ಬಾಲಕಿ ಆರೋಗ್ಯ ಸ್ಥರವಾಗಿದೆ, ಸುಧಾರಿಸುತ್ತಿದ್ದಾಳೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಆಶ್ರಮದಲ್ಲಿದ್ದ ಐವರು ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಮಕ್ಕಳನ್ನು ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಿಮಾಂಡ್ ಹೋಮ್‌ನಲ್ಲಿಡಲಾಗಿದೆ.
ಮುರಾಘಶ್ರೀಯಿಂದ ಬಾಲಕಿ ಆರೋಗ್ಯ ವಿಚಾರಣೆ
ಝುಂಜರವಾಡದ ಅಪ್ಪಯ್ಯ ಸ್ವಾಮಿ ಹುಚ್ಚಾಟಕ್ಕೆ ನರಳಿದ ಬಾಲಕಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಸಮಾಜದಲ್ಲಿ ಮೂಢನಂಬಿಕೆ, ಢೋಂಗಿತನ ಬೆಳೆಸಿ, ಜನರ ಭಾವನೆ ಜೊತೆ ಚೆಲ್ಲಾಟವಾಡಿ ಅದನ್ನು ಬೆಂಬಲಿಸುವುದು ಸರಿಯಲ್ಲ. ಇದು ಹೇಯ, ಖಂಡನೀಯ ಕೃತ್ಯ. ಸಮಾಜ ಘಾತುಕ ಕಾರ್ಯ ಎಂದಿದ್ದಾರೆ. ಜಿಲ್ಲಾಡಳಿತ ಒಪ್ಪಿದರೆ ಈ ಎಲ್ಲ ಮಕ್ಕಳ ಪಾಲನೆ, ಪೋಷಣೆಯ ಜವಾಬ್ದಾರಿಯನ್ನು ತಮ್ಮ ಮಠ ವಹಿಸಿಕೊಳ್ಳಲು ಸಿದ್ಧವಿದೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.