ನಟ, ಸಚಿವ ಅಂಬರೀಷ್ ಆರೋಗ್ಯದಲ್ಲಿ ಚೇತರಿಕೆ
ಬೆಂಗಳೂರು: ವಸತಿ ಸಚಿವ ಹಾಗೂ ಚಿತ್ರನಟ ಅಂಬರೀಷ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರ ಸೂಚನೆ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯ ನುರಿತ ವೈದ್ಯರೊಬ್ಬರು ಬೆಂಗಳೂರಿಗೆ ಆಗಮಿಸಿದ್ದಾರೆ. ಏಮ್ಸ್ ವೈದ್ಯ ಡಾ.ರಂಜಿತ್ ಬುಲೇರಿಯಾ ಅವರು ಶುಕ್ರವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಆಗಮಿಸಿದ್ದು, ಅಂಬರೀಷ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜತೆ ಚರ್ಚೆ ನಡೆಸಿದರು. ನಂತರ ಅವರ ಆರೋಗ್ಯ ಪರಿಶೀಲನೆ ನಡೆಸಿದ ಡಾ.ಬುಲೇರಿಯಾ ಅಗತ್ಯ ಸಲಹೆ ನೀಡಲು ಮುಂದಾಗಿದ್ದಾರೆ. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಂಬರೀಷ್ ಅವರ ಆರೋಗ್ಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ವೈದ್ಯರ ಜತೆ ನಾನು ಸತತ ಸಂಪರ್ಕದಲ್ಲಿರುತ್ತೇನೆ. ಅವರ ದೇಹಸ್ಥಿತಿ ಈಗ ಸುಧಾರಿಸುತ್ತಿದೆ ಎಂದು ಹೇಳಿದರು. ಶ್ವಾಸಕೋಶದ ಸೋಂಕಿನಿಂದ ಅಂಬರೀಷ್ ಇನ್ನೂ ಹೊರಬರಬೇಕಿದೆ. ಸದ್ಯಕ್ಕೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಸಿಂಗಾಪುರಕ್ಕೆ: ಈ ಮಧ್ಯೆ ಅಂಬರೀಷ್ ಅವರನ್ನು ಸಿಂಗಾಪುರಕ್ಕೆ ಕರೆದೊಯ್ದು ಅಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸುವ ಬಗ್ಗೆ ಅವರ ಕುಟುಂಬ ವರ್ಗ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಷ್ಟು ಮಾತ್ರವಲ್ಲ ದಕ್ಷಿಣ ಭಾರತದ ಜನಪ್ರಿಯ ನಟ ರಜನಿಕಾಂತ್ ಕೂಡಾ ಕುಟುಂಬ ವರ್ಗವನ್ನು ಸಂಪರ್ಕಿಸಿದ್ದು, ಅಗತ್ಯ ಬಿದ್ದರೆ ಅಂಬರೀಷ್ ಅವರನ್ನು ಸಿಂಗಾಪುರಕ್ಕೆ ಕರೆದೊಯ್ದು ಚಿಕಿತ್ಸೆ ನೀಡುವುದಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯರ ಪ್ರಕಾರ ಅಂಬರೀಷ್ ಅವರಿಗೆ ಇನ್ನೂ ಎರಡು ವಾರ ಕಾಲ ವಿಶ್ರಾಂತಿ ಹಾಗೂ ತುರ್ತು ಚಿಕಿತ್ಸೆ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

