ಪ್ರಧಾನ ಸುದ್ದಿ

ಚಾರ್‌ಲೀ ಕಹಾನಿ

ಚಾರ್‌ಲೀ ಕಹಾನಿ
Published On :

ಎಲ್ಲರೂ ಹೇಳೋದು ಒಂದೇ ಮಾತು.. 'ಸಿಂಹ ಅಂತ ಹೆಸರಿದ್ದಿದ್ದು ಅಷ್ಟೇ. ನೋಡೋಕೆ ದೊಡ್ಡ ಆಕಾರ.. ದೊಡ್ಡ ದನಿ ಎಲ್ಲವೂ ಇದ್ದರೂ ಮನಸು ಮಾತ್ರ ಪುಣ್ಯಕೋಟಿಯಂಥದ್ದು'. ಇನ್ನು ಕೆಲವರು ಹೇಳುವುದು ಹೀಗೆ.. 'ಅವರು ಹೆಸರಿನಿಂದ ಮಾತ್ರ  ಶೇರ್ ಆಗಿರಲಿಲ್ಲ. ಶೇರಿಂಗ್ ಮತ್ತು ಕೇರಿಂಗ್ ಮೂಲಕವೂ ಎಲ್ಲರ ಹೃದಯಕ್ಕೆ ಹತ್ತಿರವಾಗಿದ್ದರು'.
ಸಿಂಹ ಅವರ ಮಾತುಗಳಲ್ಲಿ ಪದೇಪದೇ ರಾಜ್‌ಕುಮಾರ್‌ರೊಂದಿಗಿನ ಒಡನಾಟದ ನೆನಪುಗಳು ಹಾದುಹೋಗುತ್ತಿದ್ದವು. ಸಿಂಹದ ಗುಹೆಯ ಬಗ್ಗೆ ಎಲ್ಲರಿಗೂ ಗೊತ್ತಿರೋದೇ. ರಂಗಕರ್ಮಿಯಾಗಿ ಬೆಳೆದ ಸಿಂಹ ಅತಿಯಾಗಿ ಆರಾಧಿಸುವ ನಟ ಚಾರ್ಲಿ ಚಾಪ್ಲಿನ್. ಅವರ ನೆನಪಿನಲ್ಲಿ ಮನೆಯಲ್ಲಿ ಚಾಪ್ಲಿನ್ ಕಂಬವೊಂದನ್ನು ಕೆತ್ತಿಸಿದ್ದಾರೆ. ರಾಜ್‌ಕುಮಾರ್‌ಗೆ  ಪ್ರತಿ ಸಲ ಸಿ. ಆರ್. ಸಿಂಹ ಸಿಕ್ಕಿದಾಗಲೂ 'ನಿಮ್ಮ ಮನೆಗೊಮ್ಮೆ ಕರ್ಕೊಂಡು ಹೋಗಿ. ನಿಮ್ಮ ಮನೆ ಬಗ್ಗೆ ತುಂಬಾ ಕೇಳಿದ್ದೀನಿ ಆದರೆ ನೋಡೋ ಭಾಗ್ಯ ಮಾತ್ರ ಇನ್ನೂ ಒದಗಿಲ್ಲ ನೋಡಿ..'  ಅಂತಿದ್ರಂತೆ. ಕೊನೆಗೂ  ಒಂದು ದಿನ ಅವರನ್ನು ಮನೆಗೆ ಕರೆದುಕೊಂಡು ಹೋಗೋ ಅದೃಷ್ಟ ಕೂಡಿ ಬಂದಿತಂತೆ. ಸಿಮೆಂಟು ಕಾಂಕ್ರೀಟು ಇತ್ಯಾದಿಗಳಿಲ್ಲದೆ ಥೇಟ್ ಗುಹೆಯಂತೆ ಬರೀ ಕಲ್ಲು ಮಣ್ಣುಗಳಿಂದ ಕಟ್ಟಿದ ಆ ಮನೆಯನ್ನು ನೋಡಿ ಪ್ರತಿ ಸೆಕೆಂಡಿಗೊಮ್ಮೆ ರಾಜ್ ಆಶ್ಚರ್ಯದ ಉದ್ಗಾರ ತೆಗೆಯುತ್ತಿದ್ದರಂತೆ. ಹಾಗೆ ನೋಡುತ್ತಿದ್ದಾಗ ರಾಜ್ ಕಣ್ಣಿಗೆ ಬಿದ್ದದ್ದೇ ಈ ಚಾರ್ಲಿ ಚಾಪ್ಲಿನ್ ಕಂಬ. ಅದನ್ನು ನೋಡಿದ ಕೂಡಲೇ ರಾಜ್ ಅವರ ಮುಖವೊಮ್ಮೆ ಮಿನುಗಿತಂತೆ. ರಾಜ್ ಕೂಡ ಚಾಪ್ಲಿನ್ ಅವರ ಚಿತ್ರಗಳ ಅಭಿಮಾನಿ ಎಂದು ಸಿಂಹ ಅವರಿಗೆ ಗೊತ್ತಾಗಿದ್ದೇ ಆಗ. ಅದೇ ಸ್ಥಳದಲ್ಲಿ ನಿಂತು ಸಿಂಹ ಅವರು ರಾಜ್‌ಕುಮಾರ್‌ಗೆ 'ನಿಮ್ಮದೊಂದು ಆಟೋಗ್ರಾಫ್ ಬೇಕು' ಅಂದರಂತೆ. ಪೇಪರ್ರು ಪೆನ್ನು ಇಲ್ಲದೆ ನಿಂತಿದ್ದ ಸಿಂಹ ಅವರನ್ನು ನೋಡಿ ರಾಜ್ ಮೊಗದಲ್ಲಿ ಪ್ರಶ್ನೆ! ಆಟೋ ಗ್ರಾಫ್ ಹಾಕೋದು ಎಲ್ಲಿ? ಸಿಂಹ ಅವರು ಚಾಪ್ಲಿನ್ ಕಂಬದ ಕಡೆ ತೋರಿಸಿ 'ನಿಮ್ಮ ಹಸ್ತಾಕ್ಷರ ಇಲ್ಲಿ ಬೇಕು' ಅಂದರಂತೆ. ರಾಜ್ ಮರುಮಾತಾಡದೆ ಅಚ್ಚಕನ್ನಡದಲ್ಲಿ 'ರಾಜ್ ಕುಮಾರ್‌' ಅಂತ ರುಜು ಮಾಡೇ ಬಿಟ್ಟರು. ಅದನ್ನು ಸಿ. ಆರ್. ಸಿಂಹ  ಒಮ್ಮೆ ಸ್ಪರ್ಶಿಸಿ ಧನ್ಯತೆ ವ್ಯಕ್ತಪಡಿಸಿದರಂತೆ.  ಆ ನಂತರ ಅದನ್ನು  ಕೆತ್ತನೆ ಮಾಡಿಸಿ ಶಾಶ್ವತಗೊಳಿಸಿಬಿಟ್ಟರಂತೆ. ಸಿಂಹದ ಗುಹೆಯಿಂದ ತಮ್ಮ ಮನೆಗೆ ಬಂದ ರಾಜ್, ಹೆಚ್ಚೂಕಮ್ಮಿ  ಅವರು ಬದುಕಿರುವ ತನಕವೂ ತಮ್ಮ ಮನೆಗೆ ಬರುತ್ತಿದ್ದ ಎಲ್ಲ ಸಿನಿಮಾ ಗೆಳೆಯರಿಗೆ ಇದೊಂದು ವಿಷಯ ತಪ್ಪದೇ ಹೇಳುತ್ತಿದ್ದರಂತೆ.. 'ಆ.... ಸಿ.ಆರ್ ಸಿಂಹ ಅವರ ಗುಹೆ ಇದೆ ನೋಡಿ ... ಅಲ್ಲಿ ... ಅಲ್ಲಿ..  ಚಾರ್ಲಿ ಚಾಪ್ಲಿನ್ ಕಂಬ ಇದೆ...  ಅದರ ಮೇಲೆ ನನ್ನ ಸಹಿ ಇದೆ ..  ನನ್ನ ಸಹಿ ಇದೆ ..'
ರಾಜ್ ನೆನಪಿಸಿಕೊಂಡು ಸಂಭ್ರಮಿಸುತ್ತಿದ್ದರು ಎಂಬ ಈ ಸುದ್ದಿಯನ್ನು ಸಿ.ಆರ್. ಸಿಂಹ  ಮತ್ತೆ ಮತ್ತೆ ನೆನೆದು ಸಂಭ್ರಮಿಸುತ್ತಿದ್ದರು.
ಕೆರಳಿದ ಸಿಂಹ, ಸಾಹಸ ಸಿಂಹ, ಈಗ ಸಿ.ಆರ್.ಸಿಂಹ ಹೀಗೆ ಎಲ್ಲ ಸಿಂಹಗಳೂ ಈಗ ಸ್ವರ್ಗ ಸೇರಿಕೊಂಡು ಅಲ್ಲಿನ ಲಯನ್ಸ್ ಕ್ಲಬ್‌ನ ಸದಸ್ಯತ್ವದ ಸಂಖ್ಯೆ ಏರಿಸುತ್ತಿದ್ದರೆ, ಇತ್ತ ಸಿನ್ಮಾ ರಂಗದ ಸಿಂಹಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ಬಣಬಣವೆನಿಸುತ್ತಿದೆ. ಇಲ್ಲಿರುವ ಆ ಲಯನ್ಸ್' 'ಕಬ್‌'ಗಳು ಇನ್ನಷ್ಟು ಬೆಳೆದು ಸಿಂಹಗಳ  ಹೆಸರುಳಿಸಲಿ ಎಂಬುದಷ್ಟೇ ಸದ್ಯದ ಮಟ್ಟಿಗಿನ ಪ್ರಾರ್ಥನೆ.


 ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.