ಸಾಹಿತ್ಯ ಜಾತ್ರೆ ಯಶಸ್ಸಿಗೆ ಸ್ವಯಂ ಸೇವಕ ಪಡೆ ಸಜ್ಜು
ಮಡಿಕೇರಿ: ಮಡಿಕೇರಿ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 6 ದಿನ ಉಳಿದಿರುವಂತೆಯೇ ಸಮರೋಪಾದಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಸಮ್ಮೇಳನದ ಯಶಸ್ಸಿಗೆ ನೂರಾರು ಸ್ವಯಂಸೇವಕರು ಟೊಂಕಕಟ್ಟಿ ನಿಂತಿದ್ದಾರೆ.
ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಯುವಪಡೆ ಸಮ್ಮೇಳನದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲಿದ್ದು, ಈ ತಂಡಕ್ಕೆ ಸೂಕ್ತ ತರಬೇತಿ ನೀಡಲಾಗಿದೆ. ಜಿಲ್ಲಾದ್ಯಂತ ಪ್ರತಿಯೊಂದು ಶಾಲಾ ಕಾಲೇಜುಗಳಿಗೆ ಹೋಗಿ ಅಲ್ಲಿನ ಸ್ಕೌಟ್ಸ್, ಗೈಡ್ಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ಎನ್ಸಿಸಿ ಕೆಡೆಟ್ಗಳು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಲು ಪ್ರೇರಣೆ, ತರಬೇತಿ,ಸಮ್ಮೇಳನದ ಮಹತ್ವ ತಿಳಿಸುವುದರ ಮೂಲಕ ಸಮಿತಿ ಯಶಸ್ವಿಯಾಗಿದೆ ಎಂದು ಸಮಿತಿ ಸಂಚಾಲಕ ಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಮಡಿಕೇರಿ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 150 ವಿದ್ಯಾರ್ಥಿಗಳು, ಸರ್ಕಾರಿ ಪಿಯು ಕಾಲೇಜಿನಿಂದ 100 ವಿದ್ಯಾರ್ಥಿಗಳು, ಜನರಲ್ ತಿಮ್ಮಯ್ಯ ಪ್ರೌಢಶಾಲೆ 50 ವಿದ್ಯಾರ್ಥಿಗಳು, ಸಂತ ಮೈಕಲರ್ ಕಾಲೇಜಿನಿಂದ 100 ವಿದ್ಯಾರ್ಥಿಗಳು, ಸಂತ ಮೈಕಲರ್ ಪ್ರೌಢಶಾಲೆಯಿಂದ 150 ವಿದ್ಯಾರ್ಥಿಗಳು ಸೇರಿದಂತೆ ಸುಮಾರು 2 ಸಾವಿರ ವಿದ್ಯಾರ್ಥಿ ಕಾರ್ಯಕರ್ತರಿಗೆ ಎರಡು ಬಾರಿ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಸ್ವಯಂ ಸೇವಕರ ನಡವಳಿಕೆ, ಸೇವಾ ಮನೋಭಾವ, ತಾಳ್ಮೆ, ಸಹಕರಿಸುವ ವಿಧಾನಗಳ ಮಾಹಿತಿ ನೀಡಲಾಗಿದೆ.
ವೇಳಾ ಪಟ್ಟಿ ತಯಾರಿಗೆ ಪ್ರತ್ಯೇಕ ತಂಡ: ಸಮ್ಮೇಳನದ ದಿನಗಳಲ್ಲಿ ಸ್ವಯಂಸೇವಕರು ಕೆಲಸ ನಿರ್ವಹಿಸಲು ಒಂದು ಸ್ಪಷ್ಟ ಮತ್ತು ಸಮಗ್ರ ವೇಳಾಪಟ್ಟಿ ತಯಾರಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ಈ ಜವಾಬ್ದಾರಿಯನ್ನು ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಗಳು ಮತ್ತು ನುರಿತ ಅನುಭವಿ ಅಧ್ಯಾಪಕರಿಗೆ ವಹಿಸಲಾಗಿದೆ. 20 ಸ್ವಯಂ ಸೇವಕರಿಗೆ ಒಬ್ಬ ನಾಯಕನನ್ನು ತಯಾರು ಮಾಡಿದ್ದು, 50 ಜನರಿಗೆ ಒಬ್ಬ ಅಧ್ಯಾಪಕ ಅಥವಾ ಅಧಿಕಾರಿ, ಸಮಿತಿಯ ಸದಸ್ಯರನ್ನು ನೇಮಿಸಲಾಗಿದೆ. ಒಬ್ಬ ಸ್ವಯಂ ಸೇವಕ ಪ್ರತಿ ದಿನ 6ರಿಂದ 8 ಗಂಟೆ ಕರ್ತವ್ಯ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ.
1750 ಸ್ವಯಂ ಸೇವಕರು ಅಗತ್ಯ: ಸಮ್ಮೇಳನಕ್ಕೆ ಸುಮಾರು 1,750 ಸ್ವಯಂ ಸೇವಕರ ಅವಶ್ಯಕತೆ ಇದೆ. ಸಮ್ಮೇಳನದ ದಿನ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತರಾಗಿ ಸಾರ್ವಜನಿಕರು, ಶಿಕ್ಷಕರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಸ್ವಇಚ್ಛೆಯಿಂದ 1,000 ಜನ ನೋಂದಣಿ ಮಾಡಿದ್ದು ಶ್ಲಾಘನೀಯ. ಸ್ವಯಂಸೇವಕರ ಸಮಿತಿ ವತಿಯಿಂದ ಆಹಾರ ಸಮಿತಿಯವರಿಗೆ ಸಾವಿರ ಜನರನ್ನು, ಪುಸ್ತಕ ಮಳಿಗೆಗೆ 70, ಮಾಧ್ಯಮ ಸಮಿತಿಗೆ 40, ಮೆರವಣಿಗೆ ಸಮಿತಿಗೆ 100 ಒದಗಿಸಲಿದ್ದೇವೆ. ಸೂಕ್ತ ತರಬೇತಿ ನೀಡಿದ್ದೇವೆ ಎಂದು ಸಮಿತಿ ಸಂಚಾಲಕ ಕುಮಾರ್ ತಿಳಿಸಿದ್ದಾರೆ.
ಅನಿಲ್ ಎಚ್.ಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

