ಪ್ರಧಾನ ಸುದ್ದಿ

ಡಿಕೆಶಿ ಸಂಪುಟ ಸೇರ್ಪಡೆ ಪ್ರಶ್ನಿಸಿ ಮುಖ್ಯಮಂತ್ರಿಗೆ ದೊರೆಸ್ವಾಮಿ ಪತ್ರ

Published On :

ಕ.ಪ್ರ.ವಾರ್ತೆ ಬೆಂಗಳೂರು ಜ. 3
ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ಪ್ರಶ್ನಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ತೆರೆದ ಅಂಚೆ ಕಾರ್ಡ್‌ನಲ್ಲಿ ಪತ್ರ ಬರೆದಿರುವ ಅವರು, 100 ವರ್ಷಗಳ ಇತಿಹಾಸ ಹೊಂದಿರುವ ಆರ್ಯ ವಿದ್ಯಾ ಶಾಲೆಯ ಆಸ್ತಿ ಕಬಳಿಸಲು ಶಿವಕುಮಾರ್ ಹಾಗೂ ಅವರ ಸೋದರ ಡಿ.ಕೆ.ಸುರೇಶ್ ಪ್ರಯತ್ನಿಸಿದ್ದರು.  ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸಹಕಾರ ಇಲಾಖೆ ನಿಬಂಧಕರು ತನಿಖೆಗೆ ಮುಂದಾಗಿದ್ದರು. ಇದನ್ನು ರದ್ದುಗೊಳಿಸುವಂತೆ ಶಿವಕುಮಾರ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಆದರೆ ತನಿಖೆ ರದ್ದು ಮಾಡುವುದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಆರೋಪ ಎದುರಿಸುತ್ತಿರುವ ಶಿವಕುಮಾರ್ ಅವರನ್ನು ನಿಮ್ಮ ಸಂಪುಟಕ್ಕೆ ಸೇರಿಸಿಕೊಂಡಿರುವುದು ಸರಿಯೇ? ಎಂದು ದೊರೆಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಈ ಮೂಲಕ ಸಂಪುಟಕ್ಕೆ ಸೇರಿದ ಮೂರೇ ದಿನಕ್ಕೇ ಶಿವಕುಮಾರ್, ದೊರೆಸ್ವಾಮಿ ಅವರ ಜತೆ ಪತ್ರ ಸಮರ ನಡೆಸುವಂತಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವರ ವಿರುದ್ಧ ಪ್ರಕರಣಗಳು ಇರುವುದರಿಂದ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ದೊರೆಸ್ವಾಮಿ ಪತ್ರ ಬರೆದಿದ್ದರು. ಆದರೆ ಈ ಎಲ್ಲ ವಿದ್ಯಮಾನಗಳನ್ನು ಮೆಟ್ಟಿನಿಂತ ಶಿವಕುಮಾರ್ ಸಂಪುಟಕ್ಕೆ ಸೇರಿದ್ದಾರೆ. ಮಾತ್ರವಲ್ಲ ಸಿಎಂ ಸಿದ್ದರಾಮಯ್ಯ ಅವರೇ ಶಿವಕುಮಾರ್ ಕಳಂಕಿತರಲ್ಲ ಎಂದು ಹೇಳಿದ್ದಾರೆ. ಹೀಗಾಗಿ ದೊರಸ್ವಾಮಿ ಅವರ ಪತ್ರ ತೀವ್ರ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರು ಕಳಂಕಿತರನ್ನು ತೆಗೆದುಕೊಳ್ಳದೇ ದೊರೆಸ್ವಾಮಿಯವರಂತಹ ಹಿರಿಯರ ಮಾತನ್ನು ಗೌರವಿಸಿದ್ದೇವೆ ಎಂದಿದ್ದರು. ದೊರೆಸ್ವಾಮಿಯವರ ಪತ್ರ ಮುಖ್ಯಮಂತ್ರಿಗಳಿಗೂ ಇರಿಸುಮುರಿಸು ಉಂಟುಮಾಡುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.