ಪರೀಕ್ಷೆಯಲ್ಲಿ ಫೇಲ್; ಫಲಿತಾಂಶದಲ್ಲಿ ಪಾಸ್!
ಕ.ಪ್ರ.ವಾರ್ತೆ ಬೆಂಗಳೂರು ಜ. 4
ಹಗರಣಗಳಿಂದಲೇ ಅತಿ ಹೆಚ್ಚು ಸುದ್ದಿಯಲ್ಲಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತೊಮ್ಮೆ ಸುದ್ದಿಯಲ್ಲಿದೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಕಂಪ್ಯೂಟರ್ನಲ್ಲಿ ಉತ್ತೀರ್ಣಗೊಳಿಸಿ ಪ್ರಮಾಣಪತ್ರವನ್ನೇ ನೀಡಿ ವಿವಿಯ ಅಧಿಕಾರಿಗಳು ಮ್ಯಾಜಿಕ್ ಮಾಡಿದ್ದಾರೆ. ಆದರೆ ವೈದ್ಯ ಶಿಕ್ಷಣ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಪೊಲೀಸ್ ತನಿಖೆಗೆ ಆದೇಶಿಸಿದೆ. ವಿವಿಯ ಕುಲಸಚಿವ(ಶಿಕ್ಷಣ) ಎನ್.ಎಸ್.ಅಶೋಕ್ಕುಮಾರ್ ಹಾಗೂ ಪರೀಕ್ಷಾ ಪ್ರಕ್ರಿಯೆಯನ್ನು ನಿಭಾಯಿಸುವ ಸಾಫ್ಟವೇರ್ ಸಂಸ್ಥೆಯ ಮುಖ್ಯಸ್ಥ ರಮೇಶ್ ವಿರುದ್ಧ ಬೆಂಗಳೂರಿನ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಒಂದೆಡೆ ಅಂಕವನ್ನು ತಿದ್ದಿರುವ ಆರೋಗ್ಯ ವಿವಿಯ ಶಿಕ್ಷಣ ವಿಭಾಗದ ಸಿಬ್ಬಂದಿ, ಮತ್ತೊಂದೆಡೆ ಕಾಲೇಜಿಗೆ ಆಗಲೇ ವಾಪಸ್ ಕಳುಹಿಸಿದ್ದ ಉತ್ತರ ಪ್ರತಿಯನ್ನು ಹಿಂಪಡೆದು ಅಂಕ ತಿದ್ದಲಾಗಿದೆ ಎಂದು ವೈದ್ಯ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ದೂರು ದಾಖಲಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿರುವ ತಿಲಕ್ನಗರ ಪೊಲೀಸರು, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿ ಮುಂದಿನಕ್ರಮ ಜರುಗಿಸಲಾಗುವುದು ಎಂದು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಸರ್ಕಾರ ದಾಖಲಿಸಿರುವ ದೂರಿನಲ್ಲೇನಿದೆ?: ಕೆಲ ವಿದ್ಯಾರ್ಥಿಗಳ ಅಂಕ ಬದಲಿಸುವ ಸಲುವಾಗಿ ಆಯಾ ಕಾಲೇಜುಗಳಿಗೆ ಕಳುಹಿಸಿದ್ದ ಉತ್ತರ ಪ್ರತಿಯನ್ನು ವಾಪಸ್ ಪಡೆಯಲು ವಿವಿಯ ಕುಲಸಚಿವ ಅಶೋಕ್ಕುಮಾರ್ ನಿರ್ಧರಿಸಿದ್ದರು. ಆದರೆ ಇದಕ್ಕೆ ವಿವಿಯ ಶಿಕ್ಷಣ ವಿಭಾಗದ ಬಹುತೇಕ ಅಧಿಕಾರಿಗಳು ವಿರೋಧವ್ಯಕ್ತಪಡಿಸಿದ್ದರು. ನ.16ರಂದು ಎಲ್ಲ ಉತ್ತರ ಪ್ರತಿಗಳನ್ನು ಕಾಲೇಜಿಗೆ ಕಳುಹಿಸಲಾಗಿತ್ತು. ಆದರೆ ಮತ್ತೆ ನ.18ರಂದು ಕುಲಸಚಿವರು ಏಕಾಏಕಿ ನಿರ್ಧಾರ ಬದಲಿಸಿ ಎಲ್ಲ ಉತ್ತರ ಪ್ರತಿಗಳನ್ನು ಹಿಂಪಡೆದಿದ್ದಾರೆ. ಈ ಪ್ರಕ್ರಿಯೆಗೆ ಅನವಶ್ಯಕವಾಗಿ ಸುಮಾರು 20 ಲಕ್ಷ ಹಣವನ್ನು ಕೋರಿಯರ್ ಸೇವೆಗೆ ವಿವಿಯಿಂದ ಖರ್ಚು ಮಾಡಲಾಗಿದೆ. ಬೆರಳೆಣಿಕೆ ವಿದ್ಯಾರ್ಥಿಗಳ ಅಂಕ ಬದಲಿಸುವ ಸಲುವಾಗಿ ಈ ಕ್ರಮವನ್ನು ವಿವಿಯ ಶಿಕ್ಷಣ ವಿಭಾಗ ತೆಗೆದುಕೊಂಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇಲಾಖೆ ನೀಡಿರುವ ದೂರಿನಲ್ಲಿ ಮೂವರು ವಿದ್ಯಾರ್ಥಿಗಳ ಅಂಕ ಬದಲಾವಣೆ ದಾಖಲಿಸಲಾಗಿದೆ. ಈ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಹಾಗೂ ಮರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಇದಲ್ಲದೇ ಮರುಎಣಿಕೆಗೂ ಅರ್ಜಿ ಸಲ್ಲಿಸಿದ್ದರು. ಮರುಎಣಿಕೆಯ ಬಳಿಕ 'ಅಂಕದಲ್ಲಿ ಯಾವುದೇ ಬದಲಾವಣೆಯಿಲ್ಲ' ಎಂದು ಮೌಲ್ಯಮಾಪಕರು ಷರಾ ಹಾಕಿದ್ದಾರೆ. ಆದಾಗ್ಯೂ ನ.18ರ 'ಗೋಲ್ಮಾಲ್' ಬಳಿಕ ಕಂಪ್ಯೂಟರ್ನಲ್ಲಿ ಈ ಅಂಕವನ್ನು ತಿದ್ದಲಾಗಿದೆ. ಅಂಕ ತಿದ್ದಲು ಪರೀಕ್ಷೆ ಪ್ರಕ್ರಿಯೆಯನ್ನು ನಿರ್ವಹಿಸುವ ಸಾಫ್ಟವೇರ್ ಕಂಪನಿ ನೆರವು ನೀಡಿದೆ. ಈ ಸಾಫ್ಟವೇರ್ ಸಂಸ್ಥೆ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ದಾಖಲಾಗಿದ್ದರೂ ಗುತ್ತಿಗೆಯನ್ನು ವಿವಿಯು ನವೀಕರಿಸಿತ್ತು.
ಮರುಎಣಿಕೆಯಲ್ಲೂ ಅಂಕ ಬದಲಾಗದಿದ್ದರೂ ಪ್ರಮಾಣಪತ್ರ ನೀಡುವಾಗ 'ಉತ್ತೀರ್ಣ' ಎಂದು ನೀಡಲಾಗಿತ್ತು. ಹೆಚ್ಚಿನ ಅಂಕ ಬರದಿದ್ದರೂ ಪ್ರಮಾಣಪತ್ರದಲ್ಲಿ ಅಂಕ ತಿದ್ದಲಾಗಿತ್ತು. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹಣದ ವ್ಯವಹಾರ ನಡೆದಿರಬಹುದು ಎಂದು ದೂರಿನಲ್ಲಿ ಉಪಕಾರ್ಯದರ್ಶಿ ಹೇಳಿದ್ದಾರೆ. ಅನುತ್ತೀರ್ಣವಾಗಿದ್ದ ರಾಜರಾಜೇಶ್ವರಿ ಕಾಲೇಜಿನ ಹರ್ಷಿತಾ ಹಾಗೂ ಕಿಮ್ಸ್ ಕಾಲೇಜಿನ ಶಿಬಾನಿ ಮತ್ತು ವರ್ಷಾ ಎಂಬ ವಿದ್ಯಾರ್ಥಿಗಳೇ ಅಂತಿಮವಾಗಿ ಉತ್ತೀರ್ಣವಾಗಿರುವ ಪ್ರಮಾಣಪತ್ರ ಪಡೆದವರು. ಈ ವಿದ್ಯಾರ್ಥಿಗಳನ್ನು ಸೇರಿಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ವೈದ್ಯ ಶಿಕ್ಷಣ ಇಲಾಖೆ ದೂರು ದಾಖಲಿಸಿದ ಬಳಿಕ ಎಚ್ಚೆತ್ತುಕೊಂಡಿರುವ ಆರೋಗ್ಯ ವಿವಿಯು ಆಂತರಿಕ ತನಿಖೆ ನಡೆಸಲು ಮುಂದಾಗಿದೆ. ಸಮಿತಿಯ ವರದಿ ಬಳಿಕ ಕ್ರಮ ಜರುಗಿಸಲು ನಿರ್ಧರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

