ಪ್ರಧಾನ ಸುದ್ದಿ

ರೈತನ ಶ್ರಮಕ್ಕೆ ಬಳ್ಳಾರಿಗೆ ಸಿಕ್ತು ಸಾವಿರ ಎಕರೆ ಕಾಡು

Published On :

ಕನ್ನಡಪ್ರಭ ವಾರ್ತೆ   ಬಳ್ಳಾರಿ   ಜ.5
ಬಳ್ಳಾರಿ ಜಿಲ್ಲೆ ಎಂದ ತಕ್ಷಣ ಕಣ್ಮುಂದೆ ಬರುವುದು ಗಣಿ ಧೂಳು, ಆಳವಾದ ತಗ್ಗು, ಅದಿರು ಸಾಗಿಸುವ ಲಾರಿಗಳ ಅಬ್ಬರ. ಆದರೆ, ಇಂಥ ಕ್ಲಿಷ್ಟ ಪರಿಸರದಲ್ಲೂ ಬರೋಬ್ಬರಿ 1100 ಎಕರೆ ಪ್ರದೇಶದಲ್ಲಿ ಹಚ್ಚ ಹಸಿರಿನ ಅರಣ್ಯ ಪ್ರದೇಶ ಕಂಗೊಳಿಸುತ್ತಿದೆ!
ಸುಮ್ನೆ ಇರಿ. ತಮಾಷೆ ಮಾಡೋಕೂ ಒಂದು ಮಿತಿ ಇರಬೇಕು ಎಂದು ಮೂಗು ಮುರೀಬೇಡಿ. ಹೊಸಪೇಟೆ ತಾಲೂಕಿನ ಧರ್ಮಸಾಗರ ಸಮೀಪದಲ್ಲಿ ಬರುವ ಜೋಗ ಕಾಯ್ದಿಟ್ಟ ಅರಣ್ಯ ಪ್ರದೇಶದ ಸುಮಾರು 1,100ಕ್ಕೂ ಹೆಚ್ಚು ಎಕರೆ ವ್ಯಾಪ್ತಿಯಲ್ಲಿ ಮುಗಿಲೆತ್ತರದ ಮರಗಳು ಬೆಳೆದು ನಿಂತಿವೆ. ಗಣಿ ಧೂಳಿನ ನಡುವೆಯೂ ತಂಪು ಸೂಸುತ್ತಿವೆ. ಇದರ ರೂವಾರಿ ಧರ್ಮಸಾಗರದ ರೈತ ಮಾಲಿಂಗ ರೆಡ್ಡಿ.
ಇದು ಒಂದೆರಡು ದಿನದಲ್ಲಿ ಆದ ಕೆಲಸವಲ್ಲ. ರೈತ ಮಾಲಿಂಗ ರೆಡ್ಡಿ ಅವರ ಸುಮಾರು 20 ವರ್ಷಗಳ ಸದ್ದಿಲ್ಲದ ಕೈಂಕರ್ಯದ ಫಲ. 68 ವರ್ಷದ ಹಿರಿಯ ಜೀವ ರೆಡ್ಡಿ ಅವರು ಈಗಲೂ ದಿನಕ್ಕೆ ಎರಡು ಬಾರಿ ಸುಮಾರು ಆರೇಳು ಕಿ.ಮೀ.ನಷ್ಟು ಕಾಡಿನಲ್ಲಿ ಸುತ್ತಿ, ಕಾಯ್ದಿಟ್ಟ ಅರಣ್ಯ ಪ್ರದೇಶ ರಕ್ಷಣೆ ಮಾಡುತ್ತಾರೆ. ಇವರಿದ್ದಾರೆಂದರೆ ಆ ಅರಣ್ಯ ಪ್ರದೇಶಕ್ಕೆ ಯಾರೂ ಕಾಲಿಡುವುದಿಲ್ಲ. ಅವರ ಪರಿಶ್ರಮ ಕಂಡು ಸಾರ್ವಜನಿಕರೂ ಹುಬ್ಬೇರಿಸುತ್ತಾರೆ.
ನೀರೆರೆದು ಪೋಷಿಸಿದರು: ಹೊಸಪೇಟೆ ತಾಲೂಕಿನ ಜೋಗ ಕಾಯ್ದಿಟ್ಟ ಅರಣ್ಯದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಸುಮಾರು 1100ಕ್ಕೂ ಹೆಚ್ಚು ಎಕರೆ ಪ್ರದೇಶವಿದೆ. ಇದಕ್ಕೆ ಹೊಂದಿಕೊಂಡಂತೆ ಮಾಲಿಂಗ ರೆಡ್ಡಿ ಅವರ ಜಮೀನಿದೆ. 20 ವರ್ಷದ ಹಿಂದೆ ಈ ವಿಶಾಲ ವ್ಯಾಪ್ತಿಯಲ್ಲಿ ಅಲ್ಲೊಂದು ಇಲ್ಲೊಂದು ಮರಗಳಿದ್ದವು. ಹೊಲಕ್ಕೆ ಹೋದಾಗಲೆಲ್ಲ ಈ ಅರಣ್ಯ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಮಾಲಿಂಗ ರೆಡ್ಡಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಬೀಳು ಬಿದ್ದ ಭೂಮಿಯಲ್ಲಿ ಮರಗಳನ್ನು ನೆಟ್ಟರು. ನೀರೆರೆದು ಪೋಷಿಸಿದರು.            

ಕಾಡುಗಳ್ಳರ ಮೇಲೆ ನಿಗಾ ಇಟ್ಟರು. ಪ್ರತಿದಿನ ಮನೆಗಿಂತ ಹೆಚ್ಚಿನ ಕಾಲ ಅರಣ್ಯದಲ್ಲಿ ಕಳೆದರು. ಅದರ ಫಲವಾಗಿ ಈಗ ಇಡೀ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಹಿಂದೊಮ್ಮೆ ಕಳ್ಳರು ಶ್ರೀಗಂಧದ ಮರ ಕಡಿಯುತ್ತಿದ್ದಾಗ ಪ್ರಾಣದ ಹಂಗು ತೊರೆದು ಕದೀಮರನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ರಾತ್ರಿ 12.30ರ ಸುಮಾರಿಗೆ ಕಾಡುಗಳ್ಳರು ಬಂದಿದ್ದಾಗ ಗಾರ್ಡ್ ಕುಮಾರಸ್ವಾಮಿ, ಕಾವಲುಗಾರ ದುಗ್ಗಪ್ಪ ಅವರನ್ನು ಎಬ್ಬಿಸಿ ಕರೆದುಕೊಂಡು ಹೋಗಿ ಸುತ್ತಾಡಿದ್ದು ಇವರ ಅರಣ್ಯ ಪ್ರೀತಿಗೆ ಹಿಡಿದ ಕೈಗನ್ನಡಿ. ಮಾಲಿಂಗ ರೆಡ್ಡಿ ಅವರ ಅರಣ್ಯದ ಬಗೆಗಿನ ಕಾಳಜಿ ಕಂಡು ಅವರನ್ನು ಧರ್ಮಸಾಗರದ ವಿನಾಯಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿ ಪ್ರೋತ್ಸಾಹಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೂ ಇವರೆಂದರೆ ಎಲ್ಲಿಲ್ಲದ ಪ್ರೀತಿ. ಹಲವಾರು ಬಾರಿ ಕಾಡಿಗೆ ಧಕ್ಕೆ ಮಾಡುವ ಜನರೊಂದಿಗೂ ಜಗಳವಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಅರಣ್ಯ ಪ್ರದೇಶದಲ್ಲಿ ರಾತ್ರಿ ಹೊತ್ತಿನಲ್ಲಿ ಬೆಂಕಿ ಬಿದ್ದಾಗ ಗ್ರಾಮಸ್ಥರ ಸಹಕಾರ ಪಡೆದು ಬೆಂಕಿ ನಂದಿಸಿದ್ದಾರೆ.
ಸಸ್ಯ ಸಮೃದ್ಧಿ: ಕಾಡಿನ ಪಕ್ಕವೇ ತೋಟ ನಿರ್ಮಿಸಿಕೊಂಡಿದ್ದು ನಿತ್ಯ ಬೆಳಗ್ಗೆ 7 ಗಂಟೆಗೆ ತೋಟಕ್ಕೆ ಹೋಗುತ್ತಾರೆ. ಪಕ್ಕದಲ್ಲೇ ಇರುವ ಅರಣ್ಯದಲ್ಲಿ ನಿತ್ಯವೂ ಎರಡು ಮೂರು ಬಾರಿ ಆರೇಳು ಕಿ.ಮೀ. ಸುತ್ತಾಡುತ್ತಾರೆ. ಶ್ರೀಗಂಧ, ನೀಲಗಿರಿ, ಬೇವು, ಹುಣಸೆ, ಸೀನೆ, ತಂಗಡಿ ಸೇರಿದಂತೆ ನೂರಾರು ಜಾತಿ ಸಸ್ಯರಾಶಿಗಳು ಅವರ ರಕ್ಷಣೆಯಲ್ಲಿ ಸುರಕ್ಷಿತವಾಗಿವೆ. ಅರಣ್ಯ ಪ್ರದೇಶದಲ್ಲಿ ಕರಡಿ, ಚಿರತೆ, ನರಿ, ಕಾಡು ಹಂದಿಗಳು ಇದ್ದರೂ ಯಾವುದೇ ಭಯವಿಲ್ಲದೆ ಸುತ್ತಾಡುತ್ತಾರೆ. ಅರಣ್ಯದ ಇಂಚಿಂಚು ಜಾಗವೂ ಇವರಿಗೆ ಚಿರಪರಿಚಿತ. ಯಾವ್ಯಾವ ಗಿಡ-ಮರಗಳಿವೆ ಎಂಬ ಮಾಹಿತಿಯೂ ಇದೆ. ಅವರ ಕಾಳಜಿ ಕಂಡು ಅರಣ್ಯ ಅಧಿಕಾರಿಗಳೇ ನಿಬ್ಬೆರಗಾಗಿದ್ದಾರೆ. ಅವರಿಗೆ ಅರಣ್ಯ ರಕ್ಷಣೆ ಹಾಗೂ ನಿರ್ವಹಣೆಯಲ್ಲಿ ಅರಣ್ಯ ಇಲಾಖೆಯಿಂದಲೂ ಅನೇಕ ಪ್ರಶಸ್ತಿಗಳು ಲಭಿಸಿವೆ. ಇವರೊಂದಿಗೆ ಮಗ ಪರ್ವತರೆಡ್ಡಿ ಹಾಗೂ ಕಾವಲುಗಾರ ದುಗ್ಗಪ್ಪ ಸಾಥ್ ನೀಡಿದ್ದಾರೆ.
ಅಷ್ಟಾಗಿ ಅರಣ್ಯ ಸಂಪತ್ತು ಇಲ್ಲದ ಪ್ರದೇಶದಲ್ಲಿ ಉತ್ತಮವಾಗಿ ಅರಣ್ಯವನ್ನು ಅಭಿವೃದ್ಧಿಪಡಿಸಿದ್ದಾರೆ. ಅರಣ್ಯದ ಬಗ್ಗೆ, ಸಸ್ಯ ಸಂಪತ್ತಿನ ಬಗ್ಗೆ ಇವಗಿರುವ ಕಾಳಜಿ ಎಲ್ಲರಿಗೆ ಇದ್ದರೆ ಸಾಕಷ್ಟು ಕಾಡು ಬೆಳೆಸಬಹುದು. ಅರಣ್ಯದಲ್ಲಿ ಯಾರನ್ನೂ ಹೋಗುವುದಕ್ಕೆ ಬಿಡದೆ ಅರಣ್ಯ ರಕ್ಷಣೆ ಮಾಡಿದ್ದಾರೆ. ಅವರೆಂದರೆ ಅರಣ್ಯ ಇಲಾಖೆಗೆ ತುಂಬಾ ಗೌರವ.
- ಶ್ರೀಧರ ಎಂ.,
ವಲಯ ಅರಣ್ಯಾಧಿಕಾರಿ, ಹೊಸಪೇಟೆ.


ಯಾರಿಗೂ ಹೆದರುವುದಿಲ್ಲ
ಅರಣ್ಯ ರಕ್ಷಣೆ ವಿಷಯದಲ್ಲಿ ಯಾರಿಗೂ ಭಯ ಪಡುವುದಿಲ್ಲ. ಅರಣ್ಯ ಉಳಿಸುವ ಬಗ್ಗೆ ಕೆಲವರು ಸಾಕಷ್ಟು ಸಂದರ್ಭದಲ್ಲಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರು ನಿಂದಿಸಿದರೆಂದ ಮಾತ್ರಕ್ಕೆ ನಾನು ಅರಣ್ಯ ರಕ್ಷಣೆ ಮಾಡುವುದು ಬಿಟ್ಟಿಲ್ಲ. ಯಾರಾದರೂ ಮರ ಕಡಿಯುವುದಕ್ಕೆ ಬಂದರೆ ನಾನು ಅವರೊಂದಿಗೆ ಜಗಳಕ್ಕೆ ಇಳಿಯುತ್ತೇನೆ. ಮರ ಕಡಿಯುವುದಕ್ಕೆ ಮಾತ್ರ ಬಿಡುವುದಿಲ್ಲ. ಕೆಲವರಿಗೆ ಕೆಟ್ಟವನಾದರೂ ಪರವಾಗಿಲ್ಲ, ಅರಣ್ಯ ಉಳಿಯುತ್ತಲ್ಲ ಎಂಬ ಭಾವನೆ ನನ್ನದು. ಅರಣ್ಯ ರಕ್ಷಣೆಗೆ ಧರ್ಮಸಾಗರ ಗ್ರಾಮಸ್ಥರ ಸಹಕಾರವೂ ಇದೆ ಎನ್ನುತ್ತಾರೆ ಮಾಲಿಂಗ ರೆಡ್ಡಿ.

 ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.