ಪ್ರಧಾನ ಸುದ್ದಿ

ಲಾಲ್‌ಬಾಗಲ್ಲಿ ಬಿಎಸ್ಸೆಫ್ ಯೋಧರ ಗೂಂಡಾಗಿರಿ ಚುಡಾಯಿಸಬೇಡಿ ಎಂದ ಸಿಬ್ಬಂದಿಗೆ ಥಳಿತ

Published On :

ಕನ್ನಡಪ್ರಭ ವಾರ್ತೆ  ಬೆಂಗಳೂರು  ಜ.5
ಮದ್ಯದ ಅಮಲಿನಲ್ಲಿ ಲಾಲ್‌ಬಾಗ್‌ನಲ್ಲಿ ಯುವತಿಯರನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸರು ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ ಮೇಲ ಬಿಎಸ್‌ಎಫ್ ಯೋಧರು ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.
ಭಾನುವಾರ ಸಂಜೆ 4ರ ವೇಳೆಗೆ  ಗಡಿ ಭದ್ರತಾ ಪಡೆಯ ಸುಮಾರು 40 ಯೋಧರು ಲಾಲ್‌ಬಾಗ್ ವೀಕ್ಷಣೆಗೆ ಆಗಮಿಸಿದ್ದರು. ಕೆಲವರು ಉದ್ಯಾನಕ್ಕೆ ಬರುವ ಮೊದಲೇ ಮದ್ಯಪಾನ ಮಾಡಿದ್ದರೆ, ಮತ್ತೆ ಕೆಲವರು ಅಲ್ಲೇ ಮದ್ಯಪಾನ ಮಾಡಲು ಆರಂಭಿಸಿದರು. ಗುಂಪಿನಲ್ಲಿದ್ದ ಕೆಲವರು ಯುವತಿಯರನ್ನು ಚುಡಾಯಿಸುತ್ತಿದ್ದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅನುಚಿತ ವರ್ತನೆ ನಿಲ್ಲಿಸಿ ಎಂದು ಹೇಳಿದ್ದಾರೆ.
ಈ ವೇಳೆ ಗುಂಪಿನಲ್ಲಿದ್ದವರು 'ನೀನ್ಯಾರು ಕೇಳಲು ಸುಮ್ಮನೆ ಹೋಗು' ಎಂದು ಬೆದರಿಸಿ ಕಳುಹಿಸಿದ್ದಾರೆ. ಹೀಗಾಗಿ ಭದ್ರತಾ ಸಿಬ್ಬಂದಿ ಲಾಲ್‌ಬಾಗ್‌ನಲ್ಲಿ ಗಸ್ತಿನಲ್ಲಿದ್ದ ಸಿದ್ದಾಪುರ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಸುರೇಶ್ ಹಾಗೂ ಅಣವೀರ ಎಂಬುವರಿಗೆ ತಿಳಿಸಿದರು.ಸ್ಥಳಕ್ಕೆ ಆಗಮಿಸಿದ ಅವರು ಯುವತಿಯರೊಂದಿಗೆ ಅನುಚಿತ ವರ್ತನೆ ಮಾಡಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ. ಪೊಲೀಸರ ಮಾತಿಗೂ ಕ್ಯಾರೆ ಎನ್ನದ ಬಿಎಸ್‌ಎಫ್ ಸಿಬ್ಬಂದಿ ದುಂಡಾವರ್ತನೆ ಮಂದುವರಿಸಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸ್ ಜತೆ ಸೇರಿದ ಪ್ರವಾಸಿಗರು ಅನುಚಿತ ವರ್ತನೆ ಖಂಡಿಸಿದ್ದಾರೆ.
ಕುಪಿತಗೊಂಡ ಬಿಎಸ್‌ಎಫ್ ಸಿಬ್ಬಂದಿ ಕಾನ್ಸ್‌ಟೇಬಲ್‌ಗಳಾದ ಸುರೇಶ್, ಅಣವೀರ, ಭದ್ರತಾ ಸಿಬ್ಬಂದಿ ಸಮದ್ ಹಾಗೂ ವಾಯು ವಿಹಾರಿಗಳಿಗೆ ಥಳಿಸಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ ಸುರೇಶ್‌ರನ್ನು ತುಳಿದಿದ್ದಾರೆ ಎಂದು ವಾಯುವಿಹಾರಿ ಶ್ರೀನಾಥ್ ತಿಳಿಸಿದರು. 'ವಾಯುವಿಹಾರ ಮಾಡುತ್ತಿದ್ದ ವೇಳೆ ಯೋಧರು ಯುವತಿಯರಿಗೆ ಕೀಟಲೆ ಕೊಡುತ್ತಿದ್ದರು. ಆದರೆ ಇದನ್ನು ಪ್ರಶ್ನಿಸಿದ್ದೆ ತಪ್ಪು ಎನ್ನುವಂತೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದರು' ಎಂದರು ಶ್ರೀನಾಥ್.

ಪೊಲೀಸ್ ತುಕಡಿ ನಿಯೋಜನೆ
ಸಾರ್ವಜನಿಕರು, ಪೊಲೀಸರ ಮೇಲೆ ದಾಳಿ ನಡೆಸಿದ ಯೋಧರ ಪುಂಡಾಟ ನಿಯಂತ್ರಿಸಲು ಪೊಲೀಸ್ ತುಕಡಿಯನ್ನು ಸ್ಥಳಕ್ಕೆ ಕರೆಯಿಸಲಾಯಿತು. ಒಂದು ಪೊಲೀಸ್ ಬಸ್, ಗಸ್ತು ತಿರುಗುತ್ತಿದ್ದ ಪೊಲೀಸರು ಲಾಲ್‌ಬಾಗ್ ಬಳಿ ಬಂದು ದುರ್ವರ್ತನೆ ತೋರಿದ ಕೆಲ ಬಿಎಸ್‌ಎಫ್ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡರು. ಮತ್ತೆ ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಸುರೇಶ, ಅಣವೀರ, ಸಮದ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಘಟನೆ ಸಂಬಂಧ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ರೇವಣ್ಣ, 'ಹಲ್ಲೆ ನಡೆಸಿರುವ ಕೆಲವು ಯೋಧರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಈ ಸಂಬಂಧ ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿ ಸಮದ್ ದೂರು ನೀಡಿದ್ದಾರೆ. ಹಲ್ಲೆ ನಡೆಸಿರುವ ಯೋಧರ ವಿರುದ್ಧ ಪೊಲೀಸರ ಮೇಲೆ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕರ ಮೇಲೆ ಹಲ್ಲೆ, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.