ಕೇಂದ್ರದ ಎಐಬಿಪಿ ಯೋಜನೆಗೆ ಮತ್ತೆ ಆರು ಜಿಲ್ಲೆಗಳು ಸೇರ್ಪಡೆ
ಬೆಂಗಳೂರು: ಕೇಂದ್ರ ಸರ್ಕಾರದ ಎಐಬಿಪಿ ಯೋಜನೆಯಡಿ (ಆಕ್ಸಲರೇಟೆಡ್ ಇರ್ರಿಗೇಷನ್ ಬೆನಿಫಿಟ್ ಪ್ರೋಗ್ರಾಮ್) ರಾಜ್ಯದ ಇನ್ನೂ ಆರು ಜಿಲ್ಲೆಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಎಐಬಿಪಿ ಯೋಜನೆಯಡಿ ರಾಜ್ಯದ ಬಾಗಲಕೋಟೆ, ಬಿಜಾಪುರ, ಬಳ್ಳಾರಿ, ದಾವಣಗೆರೆ ಜಿಲ್ಲೆಯ ಹರಪನಹಳ್ಳಿ, ಕೊಪ್ಪಳ ಹಾಗೂ ರಾಯಚೂರುಗಳನ್ನು ಸೇರಿಸಿಕೊಳ್ಳಲು ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಇದರಿಂದ ನೀರಾವರಿ ಯೋಜನೆಗಳು ಇನ್ನಷ್ಟು ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳಲು ಅನುಕೂಲವಾಗಲಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ರಾಜ್ಯದ 15 ಜಿಲ್ಲೆಗಳು ಎಐಬಿಪಿ ಯೋಜನೆಯಡಿ ಬರುತ್ತಿದ್ದವು. ಇದೀಗ ಆರು ಜಿಲ್ಲೆಗಳು ಹೊಸದಾಗಿ ಸೇರಿಕೊಳ್ಳುತ್ತಿದ್ದು, ಒಟ್ಟು 21 ಜಿಲ್ಲೆಗಳಿಗೆ 2014-15ನೇ ಸಾಲಿಗೆ 1 ಸಾವಿರ ಕೋಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ಬೆಳಗಾವಿ, ಚಿತ್ರದುರ್ಗ, ಧಾರವಾಡ, ಹಾವೇರಿ, ಗದಗ, ಕೋಲಾರ, ತುಮಕೂರು, ಗುಲ್ಬರ್ಗ, ಬೀದರ್, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಎಐಬಿಪಿ ಯೋಜನೆಯಡಿ ಬರುತ್ತಿವೆ. ಪ್ರಸಕ್ತ ಸಾಲಿನಲ್ಲಿ 200 ಕೋಟಿ ರುಪಾಯಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 250 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ತಿಂಗಳ ಅಂತ್ಯದೊಳಗೆ ಹಣ ಬಿಡುಗಡೆ ಮಾಡುವುದಾಗಿ ಕೇಂದ್ರ ನೀರಾವರಿ ಸಚಿವರು ತಿಳಿಸಿದ್ದಾರೆ. ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಶೇ. 90ರಷ್ಟು ಅನುದಾನ ನೀಡುತ್ತಿದ್ದು, ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದು ವಿವರಿಸಿದರು.
ರಾಜ್ಯದ ಪಾಲು ಹೆಚ್ಚಳ
ಮುಂದಿನ ಆರ್ಥಿಕ ವರ್ಷದಿಂದ (2014-15) ಎಐಬಿಪಿ ಯೋಜನೆಯಡಿ ರಾಜ್ಯದ ಪಾಲು ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಈಗ ನೀಡುತ್ತಿರುವ ಶೇ. 90ರ ಅನುದಾನದ ಬದಲು ಶೇ. 75 ಅನುದಾನ ನೀಡಲಿದ್ದು, ರಾಜ್ಯ ಸರ್ಕಾರ ಶೇ. 10ರ ಬದಲು ಶೇ. 25ರಷ್ಟು ಮೊತ್ತವನ್ನು ಭರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಬಜೆಟ್ನಲ್ಲಿ ಈ ಕುರಿತು ನಿರ್ಧಾರ ಕೈಗೊಂಡು 2014-15ನೇ ಸಾಲಿಗೆ ಈ ಯೋಜನೆಯಡಿ 1 ಸಾವಿರ ಕೋಟಿ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಉಳಿದ 250 ಕೋಟಿಯನ್ನು ಬಜೆಟ್ನಲ್ಲಿ ಒದಗಿಸಲಾಗುವುದು ಎಂದು ಸಚಿವ ತಂಗಡಗಿ ತಿಳಿಸಿದರು.ನೀರಾವರಿ ಸೌಲಭ್ಯ ಹೊಂದಿಲ್ಲದ ಜಿಲ್ಲೆಗಳು ಅಥವಾ ತಾಲೂಕುಗಳನ್ನು ಮಾತ್ರ ಎಐಬಿಪಿ ಯೋಜನೆಯಡಿ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ನೀರಾವರಿ ಸೌಲಭ್ಯ ಹೊಂದಿಲ್ಲದ ತಾಲೂಕುಗಳನ್ನು ಪಟ್ಟಿ ಮಾಡಿ ಇವುಗಳನ್ನು ಕೂಡ ಎಐಬಿಪಿ ಯೋಜನೆಯಡಿ ಪರಿಗಣಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

