ಚಾಲುಕ್ಯ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ
ರಾಯಬಾಗ: ಮುಂಬೈಗೆ ಹೊರಟಿದ್ದ ಚಾಲುಕ್ಯ ಎಕ್ಸಪ್ರೆಸ್ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ರಾಯಬಾಗ ತಾಲೂಕಿನ ಚಿಂಚಲಿ ಬಳಿ ಬುಧವಾರ ರಾತ್ರಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ರೇಲ್ವೆ ಸಿಬ್ಬಂದಿ, ಸ್ಥಳೀಯರು, ಪ್ರಯಾಣಿಕರು ಸೇರಿ ಬೆಂಕಿ ಆರಿಸಿದ್ದು 25 ನಿಮಿಷಗಳ ನಿಲುಗಡೆ ಬಳಿಕ ರೈಲು ಮುಂದೆ ಪ್ರಯಾಣ ಬೆಳೆಸಿತು.
6.20ಕ್ಕೆ ಬೆಳಗಾವಿಯಿಂದ ಹೊರಟಿದ್ದ ಯಶವಂತಪುರ- ದಾದರ ಚಾಲುಕ್ಯ ಎಕ್ಸಪ್ರೆಸ್ ರೈಲು, 7.50 ಕ್ಕೆ ರಾಯಬಾಗ ರೈಲು ನಿಲ್ದಾಣ ತಲುಪಿತ್ತು. 7.55ಕ್ಕೆ ನಿಲ್ದಾಣದಿಂದ ಹೊರಟಾಗ ರೈಲಿನ ಎರಡನೇ ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಕಮಟು ವಾಸನೆ ಬರಲಾರಂಭಿಸಿತು. ಇದರಿಂದ ಭಯಭೀತಿಗೊಂಡ ಪ್ರಯಾಣಿಕರು ಎಲ್ಲಿ ಬೆಂಕಿ ಹೊತ್ತಿದೆ ಎಂದು ಹುಡುಕಲಾರಂಭಿಸಿದರು. ಅಷ್ಟೊತ್ತಿಗೆ ಏರಪೈಪ್ ಸೋರಿಕೆ ಉಂಟಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿರುವುದು ಪ್ರಯಾಣಿಕರಿಗೆ ಕಂಡುಬಂತು. ಕೂಡಲೇ ಬೋಗಿಯಲ್ಲಿನ ಸುರಕ್ಷತಾ ಚೈನ್ ಎಳೆದು ಪ್ರಯಾಣಿಕರು ರೈಲನ್ನು ನಿಲ್ಲಿಸಿದರು. ಬೆಂಕಿ ಹೊತ್ತಿರುವುದರಿಂದ ಗಾಬರಿಯಾಗಿದ್ದ ಪ್ರಯಾಣಿಕರು ದಿಕ್ಕಾಪಾಲಾಗಿ ಕಲ್ಲು ಮುಳ್ಳು ಎನ್ನದೇ ರೈಲು ಬಿಟ್ಟು ಓಡಿ ಹೋದರು. ಆದರೆ, ರೈಲಿನಲ್ಲಿ ಚಹಾ ಮಾರುವ ಹುಡುಗರು, ಕೆಲವು ಪ್ರಯಾಣಿಕರು ಹಾಗೂ ರೈಲಿನ ಸಿಬ್ಬಂದಿ ಸೇರಿಕೊಂಡು ತಮ್ಮ ಬಳಿ ಇದ್ದ ಚಹಾವನ್ನು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಚಹಾ ಖಾಲಿಯಾದ ಬಳಿಕ ನೀರನ್ನು ಸುರಿದು ಬೆಂಕಿಯನ್ನು ನಂದಿಸಿದರು ಎಂದು ಪ್ರತ್ಯಕ್ಷದರ್ಶಿಗಳು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ರೈಲಿನಲ್ಲಿದ್ದ ಪ್ರಯಾಣಿಕರು ಸರ್ಕಾಲದಲ್ಲಿ ಬೆಂಕಿ ನಂದಿಸಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ರೈಲ್ವೆ ಸಿಬ್ಬಂದಿ ತುರ್ತು ದುರಸ್ತಿ ಕಾರ್ಯ ಕೈಗೊಂಡಿದ್ದರಿಂದ ರೈಲು ಪ್ರಯಾಣ ಸುರಕ್ಷಿತವಾಗಿ ತೆರಳಿದೆ.
- ಎನ್.ಜಯರಾಂ, ಬೆಳಗಾವಿ ಜಿಲ್ಲಾಧಿಕಾರಿ
ಬೆಂಕಿ ಹೊತ್ತಿದ್ದು ಹೇಗೆ?
ಬ್ರೇಕ್ ಲೈನರ್ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಏರ್ಪೈಪ್ನಲ್ಲಿ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ರೇಲ್ವೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ರಾಯಬಾಗ, ಚಿಂಚಲಿಯಿಂದ ಸುರಕ್ಷತಾ ಸಿಬ್ಬಂದಿ ಆಗಮಿಸಿ ಏರಪೈಪ್ ಹಾಗೂ ಬ್ರೇಕ್ಲೈನರ್ ಸರಿಪಡಿಸಿದ ಬಳಿಕ ಚಾಲುಕ್ಯ ಎಕ್ಸಪ್ರೆಸ್ ಸಂಚಾರ ಮುಂದುವರಿಸಿತು ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

