ರಂಗನ್ ವರದಿ ಪರ ನುಡಿದ 'ನಾಡಿ'ಗೆ ತೀವ್ರ ವಿರೋಧ
ಮಡಿಕೇರಿ: ಮಲೆನಾಡಿನ ಪಾಲಿಗೆ ಮರಣ ಶಾಸನದಂತಿರುವ ಡಾ.ಕೆ. ಕಸ್ತೂರಿ ರಂಗನ್ ವರದಿಯ ಪರ ಮಾತನಾಡಿರುವ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿ'ಸೋಜಾ ಅವರಿದ್ದ ವೇದಿಕೆಗೆ ತೆರಳಿದ ಕಸ್ತೂರಿ ರಂಗನ್ ವರದಿ ವಿರೋಧಿ ಸಮಿತಿ ಪ್ರತಿಭಟನೆ ವ್ಯಕ್ತಪಡಿಸಿತು. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿ ಮುಗಿಯುತ್ತಿರುವಂತೆಯೇ ವೇದಿಕೆಗೆ ತೆರಳಿದ ಸಮಿತಿಯ ಸದಸ್ಯರು ನಾ. ಡಿ'ಸೋಜಾ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ವ್ಯಕ್ತಪಡಿಸಿದ ಹೇಳಿಕೆಗೆ ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾ. ಡಿ'ಸೋಜಾ, ತಾವು ಭಾಷಣದಲ್ಲಿ ಪರಿಸರವನ್ನು ಬೇಕಾಬಿಟ್ಟಿ ನಾಶ ಪಡಿಸಿದ ಕಾರಣದಿಂದಲೇ ಕಸ್ತೂರಿ ರಂಗನ್ ವರದಿ ಬಂದಿದೆ ಎಂದಿದ್ದೇನೆಯೇ ಹೊರತು ಆ ವರದಿ ಜಾರಿಯಾಗಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ವರದಿ ಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆಯಾಗಲಿ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಜಿಲ್ಲೆಯ ಕಸಾಪ ಜನವಿರೋಧಿ ಯೋಜನೆಗಳ ವಿರುದ್ಧವಾಗಿಯೇ ಇದೆ. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿಯೂ ಕಸಾಪ ವಿರೋಧ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಕಸಾಪ ರಾಜ್ಯ ಕಾರ್ಯಕಾರಣಿ ಸಭೆ ಬುಧವಾರ ರಾತ್ರಿ ಸಭೆ ಸೇರಲಿದ್ದು, ಮಡಿಕೇರಿ ಸಾಹಿತ್ಯ ಸಮ್ಮೇಳನದ ನಿರ್ಣಯದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ನಿರ್ಣಯ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಭರವಸೆ ನೀಡಿದರು. ದಿಢೀರನೆ, ವೇದಿಕೆಗೆ ಕೆಲವರು ಹತ್ತಿದ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷ ನಾ. ಡಿ'ಸೋಜಾ ಗಲಿಬಿಲಿಗೊಂಡರು. ಏಕಾಏಕಿ ಬೆಳವಣಿಗೆಯಿಂದಾಗಿ ಸಭಾಂಗಣದಲ್ಲಿದ್ದವರೂ ತುಸು ಕಾಲ ಕುತೂಹಲಕ್ಕೊಳಗಾದರು.
ವರದಿ ವಿರುದ್ಧ ನಿರ್ಣಯ ಕೈಗೊಳ್ಳಲಿ
ಡಾ. ಕೆ. ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಡಿಕೇರಿ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವಂತೆ ಕೊಡಗು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ. ತಪ್ಪಿದಲ್ಲಿ ಸಮ್ಮೇಳನಾಧ್ಯಕ್ಷರ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಶಾಸಕರು ಎಚ್ಚರಿಸಿದರು.
ಮಡಿಕೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ, 'ಸಮ್ಮೇಳನಾಧ್ಯಕ್ಷ ನಾ. ಡಿ'ಸೋಜಾ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಪರೋಕ್ಷವಾಗಿ ಕಸ್ತೂರಿ ರಂಗನ್ ವರದಿ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಈ ವರದಿ ನೆರವಾಗುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ವರದಿಯ ಪರವಾಗಿ ತಮ್ಮ ನಿಲವು ಪ್ರದರ್ಶಿಸಿದ್ದಾರೆ. ಅಲ್ಲದೇ ಬಾನುಲಿ ಸಂದರ್ಶನವೊಂದರಲ್ಲಿಯೂ ಪಶ್ಚಿಮಘಟ್ಟ ಸಂರಕ್ಷಣೆಗೆ ಕಸ್ತೂರಿ ರಂಗನ್ ವರದಿ ಅಗತ್ಯ ಎಂದು ನಾ.ಡಿ'ಸೋಜಾ ಹೇಳಿದ್ದಾರೆ. ಈ ನಿಲವನ್ನು ಬಿಜೆಪಿ ವಿರೋಧಿಸುತ್ತದೆ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

