ಸಮ್ಮೇಳನದಲ್ಲಿ ಕವಿತೆ ಓದುವ ಚಟದಿಂದ ಕಾವ್ಯ ಉದ್ಧಾರವಾಗದು
ಗೌರಮ್ಮ ವೇದಿಕೆ, ಮಡಿಕೇರಿ: ಅರ್ಥರಹಿತ ಕವಿತೆ, ತೂಕರಹಿತ ಮಾತು, ಗೊಣಗುಟ್ಟುವಿಕೆಗೆ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಗಳು ಸಾಕ್ಷಿಯಾಗಬಾರದು. ಜಿಲ್ಲಾ ಸಾಹಿತ್ಯ ಪರಿಷತ್ತುಗಳ, ಸಮ್ಮೇಳನ ಸಮಿತಿಗಳಿಂದ ಲಾಬಿ ಮಾಡಿ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಯುವಕವಿಗಳಿಗೆ ಮಾತಿನ ಚಾಟಿ ಬೀಸಿದವರು ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ನಿರೂಪಕ, ಕವಿ ಅಬ್ದುಲ್ ರಶೀದ್.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನ ಗುರುವಾರ ಸಮಾನಾಂತರ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 34ರಲ್ಲಿ 33 ಮಂದಿ ಕವಿತೆ ವಾಚಿಸಿದರು. ಪ್ರೀತಿ, ಪ್ರೇಮ, ಪ್ರಣಯದಿಂದ ತೊಡಗಿ, ಕಂದಾಚಾರ ನಿಷೇಧ, ಕಾವೇರಿ ವಿವಾದ, ಮೊಬೈಲ್‌ಬಳಕೆ, ಮಹಿಳಾ ಸುರಕ್ಷತೆ, ನಕ್ಸಲ್ ಬಾಧೆ, ನೇತ್ರಾವತಿ ತಿರುವು, ಗಡಿ ನಾಡು ಕಾಸರಗೋಡು ಸಮಸ್ಯೆ, ಮಡೆಸ್ನಾನ, ಉರುಳುಸೇವೆ, ಗೋಧ್ರಾ, ಮುಂಬೈಸ್ಫೋಟ, ತಾಲಿಬಾನ್ ಕೃತ್ಯ, ಗಣಿ ವಿಚಾರ ಹೀಗೆ ಪ್ರಚಲಿತ ಸಮಸ್ಯೆಗಳು ಕವನಗಳಲ್ಲಿ ಪ್ರಸ್ತುತಗೊಂಡವು.
ಸಂಘಟಕರಿಂದ ಮುಚ್ಚುಮರೆ
ಈ ಎಲ್ಲರ ಕವನ ಕುರಿತು ಉಪಸಂಹಾರ ಮಾಡಿದ ಅಬ್ದುಲ್ ರಶೀದ್, 'ಈಗ ಕನ್ನಡ ಕವಿತೆಯ ಮರ್ಯಾದೆ ಕಾಪಾಡುವ ಪರಿಸ್ಥಿತಿ ಬಂದಿದೆ. ಸಮ್ಮೇಳನದ ಮುಖ್ಯವೇದಿಕೆಯಲ್ಲಿ ಹಾಗೂ ಈ ವೇದಿಕೆಯಲ್ಲಿ ಏಕಕಾಲಕ್ಕೆ ಎರಡು ಕವಿಗೋಷ್ಠಿ ಏರ್ಪಡಿಸಿದ್ದಾರೆ. ಹೀಗೆ ಯಾಕೆ ಎಂದು ಪ್ರಶ್ನಿಸಿದರೆ ಸಂಘಟಕರು ಎಲ್ಲ ಹೇಳುವಂತಿಲ್ಲ ಎಂದು ಏನೋ ಮುಚ್ಚಿಡುತ್ತಾರೆ. ಕೊನೆಗೆ ಪ್ರತಿ ಜಿಲ್ಲೆಗೆ ತಲಾ ನಾಲ್ಕು ಮಂದಿಗೆ ಅವಕಾಶ ಇದೆ. ಹಾಗಾಗಿ ಎರಡು ವೇದಿಕೆಯಲ್ಲಿ ತಲಾ ಇಬ್ಬರಿಗೆ ಅವಕಾಶ ಕಲ್ಪಿಸಿದ್ದೇವೆ ಎನ್ನುತ್ತಾರೆ. ಇದು ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿ' ಎಂದರು. ಚಟ ಬಿಟ್ಟರೆ ಕಾವ್ಯ ಉದ್ಧಾರ- ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ಓದಲೇಬೇಕು ಎಂಬ ಚಟ ಬೇಡ, ಇಂಥ ಚಟ ಬಿಡುವ ವರೆಗೆ ಕಾವ್ಯ ಉದ್ಧಾರವಾಗುವುದಿಲ್ಲ. ಕವಿತೆ ಓದಲು ಶಿಫಾರಸು ಪತ್ರ ತರುವುದು ನಿಲ್ಲಬೇಕು ಎಂದರು.
ಯಾಕೆ ಪ್ರತಿಭಟಿಸಿಲ್ಲ?
ಬಂಡಾಯ, ದಲಿತ, ನವ್ಯ, ನವೋದಯ, ಪ್ರಗತಿಪರದ ಬಗ್ಗೆ ಮಾತನಾಡುವ ಸಾಹಿತಿಗಳು ಸಮ್ಮೇಳನ ಸರ್ವಾಧ್ಯಕ್ಷರ ಭಾಷಣವನ್ನು ಬೇಗನೆ ಮುಗಿಸಲು ಚೀಟಿ ಕಳುಹಿಸುವಾಗ ಎಲ್ಲಿಗೆ ಹೋಗಿದ್ದರು ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡ ಅಬ್ದುಲ್ ರಶೀದ್, ಮಾತುಮಾತಿಗೆ ಬಂಡಾಯ ಮಾತನಾಡುವವರು ಯಾಕೆ ಪ್ರತಿಭಟಿಸಿಲ್ಲ ಎಂದು ಪ್ರಶ್ನಿಸಿದರು. ಸಮ್ಮೇಳನ ಗೋಷ್ಠಿಯಲ್ಲಿ ಮಲೆಕುಡಿಯ ಹೆಸರಿಗೆ ಕಾರಣ ಅವರು ಶಿವನ ಅಂಶಸಂಭೂತರು ಎಂದು ತಪ್ಪಾಗಿ ಸಂಶೋಧನೆ ಮಾಡಿದಂತೆ ಒಬ್ಬರು ಮಾತನಾಡಿದ್ದಾರೆ. ವಾಸ್ತವದಲ್ಲಿ ಮಲೆ(ಕಾಡು)ಗಳಲ್ಲಿ ಇರುವವರು ಮಲೆಕುಡಿಯರು ಎಂದು ಹೆಸರು ಬಂದಿದೆ. ಹೀಗೆ ಸಂಶೋಧಕರೆಂದು ತಪ್ಪುತಪ್ಪಾಗಿ ವಿಚಾರ ಮಂಡಿಸಿ ಮಲೆಕುಡಿಯರ ಹಾದಿತಪ್ಪಿಸುತ್ತಿದ್ದಾರೆ. ಕುಳಿತಲ್ಲೇ ಕವಿತೆ, ಸಂಶೋಧನೆ ನಡೆಸುವವರು ಈ ಬಗ್ಗೆ ಎಚ್ಚರ ವಹಿಸಬೇಕಾದ್ದು ಅಗತ್ಯ ಎಂದು ಹೇಳಿದರು.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

