ಕೃಷ್ಣಾ ನ್ಯಾಯಾಧಿಕರಣ ತೀರ್ಪು: ಹತ್ತು ದಿನ ಬಳಿಕ ಮೇಲ್ಮನವಿ ಸಲ್ಲಿಕೆಗೆ ನಿರ್ಧಾರ
ನವದೆಹಲಿ: ಕೃಷ್ಣಾ ನ್ಯಾಯಾಧಿಕರಣದ ಎರಡನೇ ತೀರ್ಪಿನ ಕುರಿತು ಸ್ಪಷ್ಟನೆ ಕೋರಿ ರಾಜ್ಯಗಳು ಸಲ್ಲಿಸಿದ್ದ ಅರ್ಜಿಗಳ ವಿಲೇವಾರಿ ಮಾಡಿ, ನ್ಯಾಯಾಧಿಕರಣ ನೀಡಿರುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಬೇಡವೇ ಎಂಬುದೂ ಸೇರಿದಂತೆ ವಿವಿಧ ಕಾನೂನು ಮಾರ್ಗಗಳ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲವನ್ನು ಹತ್ತು ದಿನಗಳ ನಂತರ ಕೈಗೊಳ್ಳಲಿದೆ.
ಈ ವಿಚಾರದಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕಿದ್ದ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ನೇತೃತ್ವದ ಕಾನೂನು ತಜ್ಞರ ತಂಡ ನ್ಯಾಯಾಧಿಕರಣದ ತೀರ್ಪು ಅಧ್ಯಯನ ಮಾಡಲು ಮತ್ತಷ್ಟು ಕಾಲಾವಕಾಶ ಕೋರಿದೆ. ಕಾನೂನು ತಜ್ಞರು ನ್ಯಾಯಾಧಿಕರಣದ ತೀರ್ಪು ಅಧ್ಯಯನ ಮಾಡಿ, ನೀಡುವ ಅಭಿಪ್ರಾಯವನ್ನಾಧರಿಸಿ ರಾಜ್ಯ ಸರ್ಕಾರ ತನ್ನ ನಿಲವು ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಕುರಿತಂತೆ ಸರ್ವಪಕ್ಷಗಳ ನಾಯಕರೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದ್ದರು. ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದಾಗಿ ಸಿದ್ದರಾಮಯ್ಯ ಗುರುವಾರ ಫಾಲಿ ನಾರಿಮನ್ ಅವನ್ನು ಭೇಟಿ ಮಾಡಿದ್ದರು. ತೀರ್ಪಿನ ಸಾಧಕ ಭಾದಕಗಳ ಬಗ್ಗೆ ಚರ್ಚಿಸಿದರು. ಚರ್ಚೆ ವೇಳೆ ಫಾಲಿ ನಾರಿಮನ್ ಅವರು, ತೀರ್ಪು ಅಧ್ಯಯನಕ್ಕೆ ಎಂಟ್ಹತ್ತು ದಿನಗಳ ಕಾಲಾವಕಾಶ ಕೋರಿದ್ದಾರೆ. ಹತ್ತು ದಿನಗಳ ನಂತರ ಫಾಲಿ ನಾರಿಮನ್ ರಾಜ್ಯಕ್ಕೆ ಸಲಹೆ ನೀಡಲಿದ್ದಾರೆ. ಫಾಲಿ ನಾರಿಮನ್ ಭೇಟಿಗೂ ಮುನ್ನ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲರೊಂದಿಗೆ ಸಿದ್ದರಾಮಯ್ಯ ಅವರು ಸಮಾಲೋಚನೆ ನಡೆಸಿದ್ದರು. ಅದಾದ ನಂತರ ಕೇಂದ್ರ ಜಲಸಂಪನ್ಮೂಲ ಸಚಿವ ಹರೀಶ್ ರಾವತ್ ಅವರನ್ನು ಭೇಟಿ ಮಾಡಿದ್ದರು. ಕೃಷ್ಣಾ ನ್ಯಾಯಾಧಿಕರಣ ತೀರ್ಪು ಹೊರ ಬಿದ್ದ ನಂತರ ಆಂಧ್ರಪ್ರದೇಶದ ಸಂಸದರು ಪ್ರಧಾನಿ ಭೇಟಿ ಮಾಡಿದ್ದು ಸೇರಿದಂತೆ ವಿವಿಧ ಬೆಳವಣಿಗೆ ಕುರಿತಂತೆ ಚರ್ಚಿಸಿದರು. ಆಂಧ್ರಪ್ರದೇಶ ಈಗಾಗಲೇ ತನಗೆ ಅನ್ಯಾಯವಾಗಿದೆ ಎಂದು ಬೊಬ್ಬೆಹಾಕಿದೆ. ಆ ರಾಜ್ಯವಿನ್ನೂ ವಿಶೇಷ ಮೇಲ್ಮನವಿ ಸಲ್ಲಿಸಿಲ್ಲ. ಆದೇಶ ಹೊರಬಿದ್ದ ಮೂರು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಬೇಕು. ಹೀಗಾಗಿ ಫೆಬ್ರವರಿ ಕೊನೆವಾರದವರೆಗೂ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಇದೆ. ಇನ್ನು ಹತ್ತು ದಿನಗಳಲ್ಲಿ ಕಾನೂನು ತಜ್ಞರು ಸಲಹೆ ನೀಡಲಿದ್ದು, ಅದನ್ನಾಧರಿಸಿ ರಾಜ್ಯ ಸರ್ಕಾರ ತನ್ನ ನಿಲವು ತಳೆಯಲಿದೆ.
- ಕನ್ನಡಪ್ರಭ ಪ್ರತಿನಿಧಿಯಿಂದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

