ಅಪ್ಪಳಿಸಲಿದೆ ಜಲ ಗಂಡಾಂತರ, ನೀರಿನ ಖಾಸಗೀಕರಣಕ್ಕೆ ಸರ್ಕಾರದ ಹೂಂಕಾರ, ಪಾಲಿಕೆ ವ್ಯಾಪ್ತಿಯಲ್ಲಿನ್ನು ಪಾವತಿಸಲೇ ಬೇಕು ಹೆಚ್ಚಿನ ಕರ
ಕ.ಪ್ರ.ವಾರ್ತೆ , ಬೆಂಗಳೂರು , ಜ. 11
ಬಾಟಲಿ ನೀರು 8 ರಿಂದ 18 ಆಗಿದೆ. ಟ್ಯಾಂಕರ್ ನೀರು 200ರಿಂದ 1000 ತಲುಪುತ್ತಿದೆ. ಏಕೆಂದರೆ ಇದು ಖಾಸಗಿ ಕಂಪನಿಗಳು ಒದಗಿಸುವುದಂತಹದ್ದು. ಇದೇ ಖಾಸಗೀಕರಣ ರಾಜ್ಯದಲ್ಲಿ ಮನೆಗೆ ತಲುಪುವ ಮುನಿಸಿಪಾಲಿಟಿ ನೀರನ್ನೂ ಆವರಿಸಿಕೊಳ್ಳಲು ಅಜಾನುಬಾಹುಗಳನ್ನು ತೆರೆಯುತ್ತಿದೆ.
ರಾಜ್ಯ ಸರ್ಕಾರ ನೀರು ಖಾಸಗೀಕರಣಕ್ಕೆ ಮುಂದಾಗುತ್ತಿದೆ. ಇದು ಅಸ್ತಿತ್ವಕ್ಕೆ ಬಂದದ್ದೇ ಆದರೆ ಮುನಿಸಿಪಾಲಿಟಿಯಿಂದ ಮನೆಗೆ ಸರಬರಾಜಾಗುವ ನೀರಿನ ದರದ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ. ನೀರಿನ ಮೂಲಗಳು ಖಾಸಗಿ ಪಾಲಾಗುವ ಕಂಟಕವೂ ಎದುರಾಗಿದೆ.
ದೆಹಲಿಯಲ್ಲಿ ಜನರಿಗೆ ಉಚಿತ ನೀರು ಕೊಡುವ ಯೋಜನೆ ಜಾರಿಯಾಗುತ್ತಿದ್ದರೆ, ರಾಜ್ಯದಲ್ಲಿ ನೀರಿನ ಖಾಸಗೀಕರಣ ಪ್ರಾರಂಭವಾಗುತ್ತಿದೆ. ಮಹಾನಗರ ಪಾಲಿಕೆಗಳಲ್ಲಿ ಅಲ್ಲಿನ ಮುನಿಸಿಪಾಲಿಟಿಯಿಂದ ನೀರು ನೀಡಲಾಗುತ್ತಿದೆ. ಬೆಂಗಳೂರಿನ ಜಲಮಂಡಳಿಯೇ ಪ್ರತ್ಯೇಕವಾಗಿದೆ. ಆದರೆ, ಇವೆಲ್ಲವೂ ಮುಚ್ಚಿ ನೀರು ಸರಬರಾಜನ್ನು ವಿದೇಶಿ ಸಂಸ್ಥೆಗಳ ಕೈಗಿಡಲು ಸರ್ಕಾರ ಮುಂದಾಗುತ್ತಿದೆ.
ರಾಜ್ಯದಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು 7000 ಕೋಟಿ ಸಾಲವನ್ನು ಪಡೆದಿರುವುದಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರೇ ತಿಳಿಸಿದ್ದಾರೆ. ಅಂದರೆ, ಸರ್ಕಾರಕ್ಕೆ ನೀರು ಸರಬರಾಜು ಹಾಗೂ ದರದಲ್ಲಿ ಯಾವುದೇ ನಿಯಂತ್ರಣ ಇರುವುದಿಲ್ಲ. ಎಲ್ಲವೂ ಖಾಸಗೀಕರಣ. ಅವರದ್ದೇ ಆಟ. ಅವರು ಬೇಕಾದಾಗ ದರ ಏರಿಸಬಹುದು. ಇಷ್ಟು ಹಣ ನೀಡಿದರೆ ನೀರು ಕೊಡುತ್ತೇವೆ ಎಂದು ಷರತ್ತು ವಿಧಿಸಬಹುದು.
ಸರ್ಕಾರದ ಅಧೀನದಲ್ಲಿರುವ ಜಲಮಂಡಳಿಯೇ ವರ್ಷಕ್ಕೆ ನಾಲ್ಕು ಬಾರಿ ನೀರು ದರ ಏರಿಸಬೇಕು ಎಂದು ಪಟ್ಟುಹಿಡಿಯುತ್ತದೆ. ಇವರನ್ನು ಸಮಾಧಾನಪಡಿಸಲು ಸರ್ಕಾರ ಅಥವಾ ಮುಖ್ಯಮಂತ್ರಿ ಮಧ್ಯಪ್ರವೇಶಿಸಬೇಕು. ಇನ್ನು ಖಾಸಗಿ ಕಂಪನಿಗಳಿಗೆ ಎಲ್ಲ ಅಧಿಕಾರ ಇದ್ದರೆ ಜನರ ಪಾಡೇನು ಎಂಬ ಬಗ್ಗೆ ಯಾರೂ ಯೋಚನೆ ಮಾಡಿದಂತಿಲ್ಲ.
ಖಾಸಗಿ ಕಂಪನಿಗಳು ನೀರು ಸರಬರಾಜು ಮಾಡುವ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಎಲ್ಲ ರೀತಿಯ ಒಪ್ಪಂದಗಳನ್ನೂ ಮಾಡಿಕೊಳ್ಳುತ್ತವೆ. ಆರಂಭದಲ್ಲಿ ಕೇವಲ ಸರಬರಾಜು ಮಾತ್ರ ಮಾಡುತ್ತೇವೆ ಎಂದು ನಂತರ ತಮ್ಮ ಜಾಲ ವಿಸ್ತರಿಸಿಕೊಳ್ಳುತ್ತಾ ಹೋಗುತ್ತವೆ. ವಿದೇಶದಿಂದ ಸಾಲ ತಂದು ರಾಜ್ಯದಲ್ಲಿ ನೀರು ಸರಬರಾಜನ್ನು ಖಾಸಗೀಕರಣ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. 7000 ಕೋಟಿ ಸಾಲ ಪಡೆದು ಅದನ್ನು ಖಾಸಗಿ ಕಂಪನಿಗಳ ಮೇಲೇಕೆ ಹೂಡಬೇಕು ಎಂಬುದು ಪ್ರಮುಖ ಪ್ರಶ್ನೆ.
ಇನ್ನು ಖಾಸಗಿ ಕಂಪನಿಗಳು ನೀರು ಸರಬರಾಜಿನ ಎಲ್ಲ ಪ್ರಕ್ರಿಯೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡ ಮೇಲೆ ಲಾಭ-ನಷ್ಟದ ಲೆಕ್ಕಾಚಾರ ಶುರುವಾಗುತ್ತದೆ. ಸಾರ್ವಜನಿಕ ನಲ್ಲಿಗಳು ಇಲ್ಲವಾದಂತಾಗುತ್ತವೆ. ಪ್ರತಿ ಹನಿ ನೀರಿಗೂ ದುಡ್ಡು ಕೊಟ್ಟೇ ಪಡೆಯಬೇಕು. ನೀರಿನ ದರ ಐದಾರು ಪಟ್ಟು ಹೆಚ್ಚಾಗುತ್ತದೆ. ಇಂತಹ ಎಲ್ಲ ವಿಷಯಗಳನ್ನು ಮುಚ್ಚಿಡಲಾಗುತ್ತಿದೆ. ಕೇವಲ ನೀರು ಸರಬರಾಜನ್ನು ಖಾಸಗಿ ಕಂಪನಿಗೆ ನೀಡಿ ದಕ್ಷತೆ ಹೆಚ್ಚಿಸಲಾಗುತ್ತದೆ ಎಂದು ಮಾತ್ರ ಹೇಳಲಾಗುತ್ತಿದೆ ಎಂದು ನೀರಿನ ಹಕ್ಕಿಗಾಗಿ ಹೋರಾಡುತ್ತಿರುವ ಎಂ.ಆರ್. ಪ್ರಭಾಕರ್, ಈಶ್ವರಪ್ಪ, ವಿನಯ್ ದೂರುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ನಿರಾಕರಿಸುತ್ತಾರೆ.
ರಾಜ್ಯದ ನೀರು ಸರಬರಾಜು ಹಕ್ಕನ್ನೇ ಖಾಸಗೀಕರಣ ಮಾಡುವ ಸರ್ಕಾರದ ಈ ಯೋಜನೆಯ ಹಿಂದೆ, ಜಲ ಮೂಲಗಳೂ ಅವರ ಪಾಲಾಗುವ ಆಂತಕ ಎದುರಾಗಿದೆ. ಕೆರೆ-ಕುಂಟೆಗಳು ಸೇರಿದಂತೆ ಜಲಮೂಲಗಳೆನಿಸಿದ ತಾಣಗಳೂ ಖಾಸಗೀಕರಣಗೊಂಡು ಎಲ್ಲವೂ ಸಾರ್ವಜನಿಕರ ಕೈತಪ್ಪುವ ಲಕ್ಷಣಗಳಿವೆ. ಇದೆಲ್ಲ ವಾಸ್ತವವಾಗುವ ಮುನ್ನ ಸರ್ಕಾರ, ಮಂಡಳಿಗಳು ಎಚ್ಚೆತ್ತುಕೊಳ್ಳಬೇಕಿದೆ.
ನಾಳೆಯಿಂದ 'ನಮ್ಮ ನೀರು' ಹೋರಾಟ
ರಾಜ್ಯದಲ್ಲಿ ಎಲ್ಲ ರೀತಿಯ ನೀರಿನ ಖಾಸಗೀಕರಣವನ್ನು ತಕ್ಷಣವೇ ನಿಲ್ಲಿಸಬೇಕು. ಎಲ್ಲ ನಾಗರಿಕರಿಗೂ ನೀರಿನ ಭದ್ರತೆ ಒದಗಿಸುವ ಕಾಯ್ದೆ ಜಾರಿಗೆ ತರಬೇಕು. ಸರ್ಕಾರ ದಿನಂಪ್ರತಿ ವ್ಯಕ್ತಿಯೊಬ್ಬರಿಗೆ 135 ಲೀಟರ್ ನೀರನ್ನು ಉಚಿತವಾಗಿ ಒದಗಿಸಬೇಕು. ನೀರು ಸರಬರಾಜು ಮಾಡಲು ಸರ್ಕಾರಿ ಸಂಸ್ಥೆಗಳನ್ನು ಪ್ರಜಾತಂತ್ರಗೊಳಿಸಿ ಸಮರ್ಪಕ ಕಾರ್ಯನಿರ್ವಹಿಸಲು ಕ್ರಮ ಜರುಗಿಸಬೇಕು. ನೀರಿನ ಹಕ್ಕಿಗಾಗಿ ಜನಾಂದೋಲನ ಸಂಸ್ಥೆಯ ಬೇಡಿಕೆಗಳಿವು. ರಾಜ್ಯದಲ್ಲಿ ನೀರಿನ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದು 'ನಮ್ಮ ನೀರು' ಆಂದೋಲವನ್ನು ರಾಜ್ಯಾದ್ಯಂತ ಆರಂಭಿಸುತ್ತಿದೆ. ಇದರ ಪ್ರಥಮ ಹೆಜ್ಜೆಯಾಗಿ ನೀರಿನ ಖಾಸಗೀಕರಣದ ವಿರುದ್ಧ ರಾಜ್ಯಾದ್ಯಂತ ಒಂದು ಲಕ್ಷ ಸಹಿ ಸಂಗ್ರಹದ ಆಂದೋಲನವನ್ನು ಜನವರಿ 13ರಿಂದ ಆರಂಭಿಸುತ್ತಿದೆ. ಒಂದು ತಿಂಗಳ ಆಂದೋಲನ ಇದಾಗಿದ್ದು, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬೆಂಗಳೂರಿನ ಪುರಭವನದ ಮುಂದೆ ಸೋಮವಾರ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ. ಈ ಎಲ್ಲ ಸಹಿ ಸಂಗ್ರಹವಾದ ಮೇಲೆ ಸಾರ್ವಜನಿಕರ ಬೇಡಿಕೆಯನ್ನು ಫೆಬ್ರವರಿಯಲ್ಲಿ ನಡೆಯುವ ಸಾರ್ವಜನಿಕ ವೇದಿಕೆ ಮೂಲಕ ಮುಖ್ಯಮಂತ್ರಿ ಅವರಿಗೆ ತಲುಪಿಸಲಾಗುತ್ತದೆ ಎಂದು ನೀರಿನ ಹಕ್ಕಿಗಾಗಿ ಜನಾಂದೋಲನ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಪ್ರಭಾಕರ್ ತಿಳಿಸಿದ್ದಾರೆ. ಬೆಳಗಾವಿ, ಚಾಮರಾಜನಗರ, ಗುಲ್ಬರ್ಗ, ಮಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ ಜಿಲ್ಲೆಗಳಲ್ಲಿ ಈ ಆಂದೋಲನ ಏಕ ಕಾಲದಲ್ಲಿ ನಡೆಯಲಿದೆ.
-ಕೆರೆ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

