ಸರ್ಕಾರ - ಲಾರಿ ಮಾಲೀಕರ ಮಾತು ಯಶಸ್ವಿ, ಸಂಪು ಅಂತ್ಯ, ವಾರದಲ್ಲಿ ಮರಳು ಸಾಗಣೆ ಶುರು

ಕನ್ನಡಪ್ರಭ ವಾರ್ತೆ , ಬೆಂಗಳೂರು , ಜ.13
ಮರಳು ಲಾರಿ ಮಾಲೀಕರ ಜೊತೆಗೆ ಸರ್ಕಾರ ನಡೆಸಿದ ಮಾತುಕತೆ ಸೋಮವಾರ ಫಲ ನೀಡಿದ್ದು, ಸರಕು ಸಾಗಣೆ ವಾಹನಗಳ ಸಂಚಾರ ಪುನಾರಂಭವಾಗಲಿದೆ. ಮರಳು ಲಾರಿಗಳ ಓಡಾಟ ಮಾತ್ರ ವಾರದ ಬಳಿಕ ಆರಂಭವಾಗಲಿದೆ.
ಸರ್ಕಾರ ಘೋಷಿಸಿರುವ ಕೆಲವು ರಿಯಾಯಿತಿಗಳನ್ನು ಒಪ್ಪಿರುವ ಲಾರಿ ಮಾಲೀಕರು ಅನಿರ್ದಿಷ್ಟ ಮುಷ್ಕರ ಕೈ ಬಿಡಲು ಒಪ್ಪಿದ್ದಾರೆ. ಮರಳು ಲಾರಿ ಮಾಲೀಕರಿಗೆ ಬೆಂಬಲ ಸೂಚಿಸಿ ಭಾನುವಾರ ರಾತ್ರಿಯಿಂದ ಸರಕು ಸಾಗಣೆ ವಾಹನಗಳ ಮಾಲೀಕರು ಸಹ ಮುಷ್ಕರ ಆರಂಭಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಗೃಹ ಸಚಿವ ಕೆ.ಜೆ.ಜಾರ್ಜ್, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಲೋಕೋಪಯೋಗಿ ಸಚಿವ ಡಾ. ಮಹಾದೇವಪ್ಪ, ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸಭೆಯಲ್ಲಿದ್ದರು.
ಸರ್ಕಾರ ಇನ್ನೊಂದು ವಾರದಲ್ಲಿ ಮರಳು ನಿಕ್ಷೇಪ ಗುರುತಿಸಲಿದ್ದು, ಆ ನಂತರವಷ್ಟೇ ಮರಳು ಸಾಗಣೆ ಆರಂಭಗೊಳ್ಳಲಿದೆ. ತಾವೇ ಮರಳು ನಿಕ್ಷೇಪ ಗುರುತಿಸಿ ಅಲ್ಲಿಂದ ಸಾಗಣೆ ಮಾಡುತ್ತೇವೆ ಎಂಬ ಲಾರಿ ಮಾಲೀಕರ ಬೇಡಿಕೆಗೆ ಸರ್ಕಾರ ಸೊಪ್ಪು ಹಾಕಿಲ್ಲ. ಇನ್ನು ಮುಂದೆ ಲೋಕೋಪಯೋಗಿ ಇಲಾಖೆ ವತಿಯಿಂದಲೇ ನಿಕ್ಷೇಪ ಗುರುತಿಸಿ ಮರಳು ತೆಗೆಯಲು ನಿರ್ಧರಿಸಲಾಗಿದ್ದು, ಪರ್ಮಿಟ್ ಪಡೆದು ಸ್ಟಾಕ್ ಯಾರ್ಡ್ಗಳಿಂದ ಸಾಗಣೆ ಮಾಡುವುದಷ್ಟೇ ಲಾರಿ ಮಾಲೀಕರ ಕೆಲಸವಾಗಿರುತ್ತದೆ.
5 ಗಂಟೆ ಕಾಲ ನಡೆದ ಸುದೀರ್ಘ ಸಭೆ ಯಶಸ್ವಿಯಾಗಿದೆ. ಸರ್ಕಾರದ ಸೂಚನೆಗಳನ್ನು ಲಾರಿ ಮಾಲೀಕರು ಒಪ್ಪಿಕೊಂಡಿದ್ದಾರೆ. ಮರಳು ಸರ್ಕಾರದ ಸ್ವತ್ತು. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ ನಾವು ಯಾವುದೇ ಕಾರಣಕ್ಕೂ ಅಕ್ರಮ ಮರಳು ದಂಧೆಗೆ ಅವಕಾಶ ನೀಡುವುದಿಲ್ಲ.
-ಟಿ.ಬಿ.ಜಯಚಂದ್ರ, ಕಾನೂನು ಸಚಿವ
ಲಾರಿ ಇದೆ ಅದಕ್ಕಾಗಿ ನಮ್ಮ ಇಚ್ಛೆಯಂತೆ ಮರಳು ಸಾಗಿಸುತ್ತೇವೆ ಎಂಬ ಅವರ ವರ್ತನೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ, ನಿಸರ್ಗದ ಶೋಷಣೆಯಾಗದ ರೀತಿ ಮರಳು ಗಣಿಗಾರಿಕೆ ನಡೆಸುತ್ತೇವೆ. ಇದಕ್ಕೆ ಲಾರಿ ಮಾಲೀಕರೂ ಒಪ್ಪಿದ್ದಾರೆ.
- ಡಾ.ಎಚ್.ಸಿ.ಮಹಾದೇವಪ್ಪ, ಲೋಕೋಪಯೋಗಿ ಸಚಿವ
ಸಭೆಯ ನಿರ್ಧಾರಗಳು ಹೀಗಿವೆ...
ಮರಳು ಸರ್ಕಾರದ ಸ್ವತ್ತು. ಇನ್ನು ಮುಂದೆ ಲೋಕೋಪಯೋಗಿ ಇಲಾಖೆಯೇ ನೇರವಾಗಿ ಪರಿಸರಕ್ಕೆ ಹಾನಿಯಾಗದಂತೆ, ಅಭಿವೃದ್ಧಿಗೆ ಅನುಕೂಲಕಾರಿಯಾಗಿ ಮರಳು ಗಣಿಗಾರಿಕೆ ನಡೆಸುತ್ತದೆ.
ಮರಳು ನಿಕ್ಷೇಪ ಗುರುತಿಸಲು ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ತಜ್ಞರ ಸಮಿತಿ. ವಾರದಲ್ಲಿ ನಿಕ್ಷೇಪ ಪತ್ತೆ.
ಮರಳುಗಾರಿಕೆ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿರ್ವಹಣಾ ಸಮಿತಿ ರಚನೆ.
ಸ್ಟಾಕ್ಯಾರ್ಡ್ಗಳಲ್ಲಿ ಇರುವ ಮರಳನ್ನು ನಿಗದಿತ ಪರವಾನಗಿಯೊಂದಿಗೆ ಸಾಗಣೆ ಮಾಡುವುದಷ್ಟೇ ಲಾರಿ ಮಾಲೀಕರ ಕೆಲಸ.
ಬೆಳಗ್ಗೆ 6ರಿಂದ ಸಾಯಂಕಾಲ 6 ಗಂಟೆವರೆಗೆ ಮಾತ್ರ ಮರಳು ತೆಗೆಯಬಹುದು. ಆದರೆ ಸಾಗಾಟಕ್ಕೆ ಇದ್ದ ನಿರ್ಬಂಧ ಸಡಿಲ.
ನಿಯಮ ಉಲ್ಲಂಘಿಸಿದ ಲಾರಿ ಮಾಲೀಕರ ವಿರುದ್ಧ ಹಿಂದೆ ಐಪಿಸಿ ಸೆಕ್ಷನ್ 379 ಅಡಿ ಸರ್ಕಾರಿ ಆಸ್ತಿ ಕಳ್ಳತನ ನಡೆಸಿದ್ದಾರೆಂದು ದೂರು ದಾಖಲಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಎಂಎಂಆರ್ಡಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಲು ನಿರ್ಧಾರ.
ಈ ನಿಯಮದ ಪ್ರಕಾರ ತಪ್ಪು ಮಾಡುವ ಲಾರಿಗಳ ಮಾಲೀಕರು ಹಾಗೂ ಚಾಲಕರ ವಿರುದ್ಧದ ಆರೋಪ ಸಾಬೀತಾದರೆ ರು. 25 ಸಾವಿರ ದಂಡ, 2 ವರ್ಷ ಶಿಕ್ಷೆ ವಿಧಿಸಲು ನಿರ್ಧಾರ.
ಐಪಿಸಿ ಸೆಕ್ಷನ್ 379ರ ಅಡಿ ದಾಖಲಾದ 1600 ಪ್ರಕರಣಗಳು, ವಶಪಡಿಸಿಕೊಂಡ 300ಕ್ಕೂ ಹೆಚ್ಚು ಲಾರಿಗಳನ್ನು ಕಾನೂನು ಪ್ರಕಾರ ಬಿಡುಗಡೆಗೊಳಿಸಲು ಕ್ರಮ.
ಪಿಲ್ಟರ್ ಮರಳು ಸಾಗಿಸದೇ ಇರಲು ಒಪ್ಪಿಗೆ ನೀಡಿದ ಲಾರಿ ಮಾಲೀಕರು.
10 ಟನ್ಗಿಂತ ಜಾಸ್ತಿ ಮರಳು ಸಾಗಿಸದೇ ಇರಲು ಸೂಚನೆ.
ಮೊದಲೇ ತೆಗೆದಿಟ್ಟಿದ್ದ ಮರಳು ಸಾಗಿಸಲು ಪಟ್ಟು
ಲಭ್ಯವಾಗಿರುವ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರ ಮರಳು ಗಣಿಗಾರಿಕೆ ನಿಯಂತ್ರಣ ಕಾಯಿದೆ ಜಾರಿಗೆ ತರುವ ಮುನ್ಸೂಚನೆ ಪಡೆದ ಲಾರಿ ಮಾಲೀಕರು ಮಿತಿಮೀರಿದ ಪ್ರಮಾಣದಲ್ಲಿ ಮರಳನ್ನು ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಗ್ರಹ ಮಾಡಿದ್ದರು. ಆದರೆ ಸ್ಟಾಕ್ಯಾರ್ಡ್ಗಳಿಂದ ಮಾತ್ರ ಮರಳು ಸಾಗಿಸಬೇಕು ಎಂಬ ನಿರ್ಬಂಧ ವಿಧಿಸಿದ್ದರಿಂದ ಈ ರೀತಿ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳು ಸಾಗಿಸುವುದು ಕಷ್ಟಕರವಾಗಿ ಪರಿಣಮಿಸಿತ್ತು. ಹೀಗಾಗಿ ಒಂದು ವಾರ ಕಾಲ ಅನುಮತಿ ನೀಡಿ. ಆ ನಂತರ ಬೇಕಾದರೆ ಸ್ಟಾಕ್ಯಾರ್ಡ್ನಿಂದಲೇ ಸಾಗಿಸುತ್ತೇವೆ ಎಂದು ಲಾರಿ ಮಾಲೀಕರು, ಏಜೆಂಟರ ಸಂಘದ ಪದಾಧಿಕಾರಿಗಳು ಸಿದ್ದರಾಮಯ್ಯ ಅವರ ಮುಂದೆ ಪರಿಪರಿಯಾಗಿ ಬೇಡಿಕೊಂಡರು. ಆದಾಗಿಯೂ ಸರ್ಕಾರ ಇದಕ್ಕೆ ಮಣಿದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


