ಪ್ರಧಾನ ಸುದ್ದಿ

ಕಾವೇರಿ ಕಲುಷಿತ; ಜೀವಕಾರಕವಾಗಿ ಪರಿವರ್ತಿತ!

Published On :

ಕ.ಪ್ರ.ವಾರ್ತೆ , ಕುಶಾಲನಗರ , ಜ. 15
ನಾಡಿನ ಜೀವನದಿ ಎನಿಸಿಕೊಂಡಿರುವ ಕಾವೇರಿ ಬಹುತೇಕ ಕಲುಷಿತಗೊಂಡಿದ್ದು ತನ್ನ ಪಾವಿತ್ರ್ಯತೆ ಮತು ಶುದ್ಧತೆ ಕಳೆದುಕೊಳ್ಳುವಂತಾಗಿದೆ.
ಸಮೀಕ್ಷಾ ವರದಿ ಪ್ರಕಾರ ಮೂಲ ಕಾವೇರಿಯಿಂದಲೇ ನೀರಿನ ಗುಣಮಟ್ಟ ಸಿ ಮತ್ತು ಡಿ ದರ್ಜೆಗೆ ತಲುಪಿದೆ ಎನ್ನುವುದು ದೃಢಪಟ್ಟಿದೆ. ಕೊಡಗಿನ ತಲಕಾವೇರಿಯಿಂದ ಹುಟ್ಟಿ ರಾಜ್ಯ, ನೆರೆ ರಾಜ್ಯಗಳ ಲಕ್ಷಗಟ್ಟಲೆ ಎಕರೆ ಭೂಮಿಗೆ ನೀರುಣಿಸುವ ಕಾವೇರಿ ಸುಮಾರು 8 ಕೋಟಿ ಜನರಿಗೆ ಜಲದಾತೆ.
ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಒತ್ತಡ ಹೆಚ್ಚುವುದರೊಂದಿಗೆ ನದಿ ಪಾತ್ರದಲ್ಲಿ ಸ್ಟೇ ಹೋಂಗಳು, ಪ್ರವಾಸಿ ಕೇಂದ್ರಗಳು ತಲೆ ಎತ್ತಿ ಈ ಮೂಲಕ ಉಂಟಾಗುವ ತ್ಯಾಜ್ಯಗಳು ನೇರವಾಗಿ ನದಿ ಸೇರುತ್ತಿರುವುದು ಎಲ್ಲೆಡೆಯ ಸಾಮಾನ್ಯ ದೃಶ್ಯ. ಜನತೆ ಬಳಸುವ ಕುಡಿಯುವ ನೀರು ಇದೀಗ ವಿಷಪೂರಿತವಾಗಿ ಪರಿವರ್ತನೆಗೊಳ್ಳುತ್ತಿರುವ ವರದಿ ಬಗ್ಗೆ ಆತಂಕ ವ್ಯಕ್ತಗೊಂಡಿದೆ.
ಕಳೆದ ಮೇಯಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಮತ್ತು ಲೋಕ ಅದಾಲತ್ ಸದಸ್ಯರಾದ ಎ.ಎನ್. ಯಲ್ಲಪ್ಪ ರೆಡ್ಡಿ ಸೂಚನೆ ಮೇರೆಗೆ ಪರಿಸರ ಮಾಲಿನ್ಯ ಮಂಡಳಿಯ ಸಹಕಾರದೊಂದಿಗೆ ಮೈಸೂರಿನ ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ ನೇತೃತ್ವದ ಸಮಿತಿ ಅಧ್ಯಯನ ನಡೆಸಿ ನೀರಿನ ಕಲುಷಿತ ಪ್ರಮಾಣದ ಬಗ್ಗೆ ನೀಡಿದ ವರದಿ ಕಾವೇರಿ ನಾಡಿನ ಜನರನ್ನು ಬೆಚ್ಚಿ ಬೀಳಿಸಿದೆ.
ಕಸದ ತೊಟ್ಟಿಯಾಗಿದೆ: ಕಾವೇರಿ ಹರಿಯುವ ವಿವಿಧ ಪ್ರದೇಶಗಳಲ್ಲಿ ಯಾವ ಮಟ್ಟಕ್ಕೆ ನದಿಯನ್ನು ಬಳಸಲಾಗುತ್ತದೆ ಎಂದರೆ ಮುಂದಿನ ದಿನಗಳಲ್ಲಿ ಕಾವೇರಿಯನ್ನು ಶುದ್ಧಗೊಳಿಸಲು ಯಾವುದೇ ಯೋಜನೆಗಳಿಂದ ಅಸಾಧ್ಯ ಎನ್ನುವಂತಹ ದೃಶ್ಯಗಳು ಗೋಚರಿಸುತ್ತವೆ. ಮೂಲ ಕಾವೇರಿ ವ್ಯಾಪ್ತಿಯಲ್ಲಿ ನದಿಯನ್ನು ಪ್ರವಾಸಿಗರು ಕಸದ ತೊಟ್ಟಿಯಂತೆ ಬಳಸಲಾಗುತ್ತಿದೆ.
ನದಿ ಹರಿಯುವ ತಟಗಳಲ್ಲಿರುವ ಪಟ್ಟಣವಾದ ಕುಶಾಲನಗರದಲ್ಲಿ ಕೆಲವು ಹೊಟೇಲ್‌ಗಳಿಂದ ಬಹುತೇಕ ಶೌಚ ನೀರು ಸೇರಿದಂತೆ ಕೊಳಚೆ ನೀರು ನೇರವಾಗಿ ನದಿ ಪಾಲಾಗುತ್ತಿದೆ. ಸಿದ್ದಾಪುರ ನೆಲ್ಯುಹುದಿಕೇರಿ ವ್ಯಾಪ್ತಿಯಲ್ಲಿ ದನ ಸೇರಿದಂತೆ ಇತರ ಪ್ರಾಣಿಗಳ ತ್ಯಾಜ್ಯಗಳು ಕೂಡ ಕಾವೇರಿ ಒಡಲಿಗೆ ಸೇರ್ಪಡೆಗೊಳ್ಳುತ್ತಿದೆ. ದುಬಾರೆ ಬಳಿ ಪ್ರವಾಸಿಗರನ್ನು ಸಾಕಾನೆ ಕೇಂದ್ರಕ್ಕೆ ಕರೆದೊಯ್ಯುವ ಬೋಟ್‌ಗಳು ಬಳಸುವ ಸೀಮೆಎಣ್ಣೆ, ಇಂಧನ ಬಹುತೇಕ ಕಾವೇರಿ ನದಿ ಪಾಲಾಗುತ್ತಿದ್ದು, ವಿವಿಧ ಜಲಚರಗಳ ಅವನತಿಯೊಂದಿಗೆ ನದಿ ನೀರು ಪಾವಿತ್ರ್ಯತೆಯೊಂದಿಗೆ ಶುದ್ಧತೆಯನ್ನು ಕೂಡ ಕಳೆದುಕೊಂಡು ಜನರ ಬಳಕೆಗೆ ಅಯೋಗ್ಯವಾಗುತ್ತಿದೆ.
ಪ್ರಾಣಿಗಳು ಕುಡಿಯಲು ಮಾತ್ರ ಯೋಗ್ಯ
ಸಮೀಕ್ಷಾ ವರದಿ ಪ್ರಕಾರ ಕಾವೇರಿ ನದಿ ನೀರಿನ ಗುಣಮಟ್ಟ ಸಿ ಮತ್ತು ಡಿ ದರ್ಜೆಗೆ ತಲುಪಿದೆ ಎನ್ನುವುದು ದೃಢಪಟ್ಟಿದೆ. ಸಾಮಾನ್ಯವಾಗಿ ನದಿ ನೀರು ಎ ದರ್ಜೆಯಲ್ಲಿದ್ದರೆ ಶುದ್ಧೀಕರಿಸದೆ ಬಳಸಬಹುದು. ಬಿ ದರ್ಜೆಯಲ್ಲಿದ್ದರೆ ಸ್ನಾನಕ್ಕೆ ಉಪಯೋಗಿಸಬಹುದು. ಸಿ ದರ್ಜೆಯಲ್ಲಿದ್ದರೆ ಶುದ್ಧೀಕರಿಸಿ ಕುಡಿಯುವ ನೀರಿಗೆ ಬಳಸಬಹುದು. ಗುಣಮಟ್ಟ ಡಿ ದರ್ಜೆಯಾದಲ್ಲಿ ವನ್ಯ ಪ್ರಾಣಿಗಳಿಗೆ ಮಾತ್ರ ಕುಡಿಯಲು ಯೋಗ್ಯ. ಅದು ಇ ದರ್ಜೆಯಲ್ಲಿದ್ದರೆ ಕೈಗಾರಿಕೆಗಳಿಗೆ ಮಾತ್ರ ಬಳಕೆ ಮಾಡಬಹುದು ಎಂಬುದು ಪರಿಸರ ನಿಯಂತ್ರಣ ಮಾಲಿನ್ಯ ಮಂಡಳಿಯ ನಿಯಮ ಹೇಳುತ್ತದೆ.



-ಕೀರ್ತನಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.