ಕೋಲ್ ಬ್ಲಾಕ್ ಹಂಚಿಕೆ ರದ್ದು, ಸುಪ್ರೀಂಗೆ ಕೇಂದ್ರ ಮುಚ್ಚಳಿಕೆ

ನವದೆಹಲಿ: 1993ರಿಂದ 2009ರ ನಡುವೆ ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡಲಾದ 41 ಕಲ್ಲಿದ್ದಲು ಬ್ಲಾಕ್ಗಳ ಹಂಚಿಕೆಯನ್ನು ರದ್ದು ಮಾಡುವ ಕ್ರಮ ಆರಂಭಿಸಿದ್ದಾಗಿ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಈ ಸಂಬಂಧ ಹಂಚಿಕೆ ಯಾಕೆ ರದ್ದು ಮಾಡಬಾರದು ಎಂದು ಕೇಳಿ ನೋಟಿಸ್ ನೀಡಲಾಗಿದ್ದು, ಕಂಪನಿಗಳಿಗೆ ಉತ್ತರಿಸಲು ಮೂರು ವಾರಗಳ ಗಡುವು ನೀಡಲಾಗಿದೆ. ಕಂಪನಿಯ ಉತ್ತರ ನೋಡಿಕೊಂಡು ವಾರದೊಳಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಸರ್ಕಾರ ತಿಳಿಸಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಸಿಬಿಐ ಸುಪ್ರೀಂಗೆ ಸ್ಥಿತಿಗತಿ ವರದಿ ಸಲ್ಲಿಸಿದ ಬೆನ್ನಲ್ಲೇ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ಕಲ್ಲಿದ್ದಲು ಗಣಿ ಹಂಚಿಕೆ ರದ್ದತಿಗೆ ಸಂಬಂಧಿಸಿದ ನಿಯಮಾವಳಿ ಕುರಿತು ಚರ್ಚಿಸಿತ್ತು.
ಮಾನದಂಡಗಳೇನು?: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿತು. ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ಪರಿಶೀಲನಾ ಸಮಿತಿ ಅನುಸರಿಸಿದ ಮಾನದಂಡಗಳೇನು ಎಂಬುದನ್ನು ವಿವರಿಸುವಂತೆ ಸೂಚಿಸಿತು.
ಕೇಂದ್ರ ವಿದ್ಯುತ್ ಪ್ರಾಧಿಕಾರ(ಸಿಇಎ) ಹಾಗೂ ಇಂಧನ ಇಲಾಖೆ ಶಿಫಾರಸು ಮಾಡದ ಕೆಲ ಖಾಸಗಿ ಕಂಪನಿಗಳಿಗೂ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಮಾಡಲಾಗಿದೆ ಎಂದು ನ್ಯಾ. ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯ ಪೀಠವು ಅಟಾರ್ನಿ ಜನರಲ್ ಜಿ.ಇ. ವಾಹನ್ವತಿ ಅವರನ್ನು ಪ್ರಶ್ನಿಸಿತು. ಕಲ್ಲಿದ್ದಲು ಬ್ಲಾಕ್ಗಳನ್ನು ಬೇಕಾಬಿಟ್ಟಿ ಹಾಗೂ ಲಾಬಿ ಮಾಡಿದವರಿಗಷ್ಟೇ ಹಂಚಿಕೆ ಮಾಡಲಾಗಿದೆ ಎನ್ನುವ ಆರೋಪ ಇದೆ. ಹಾಗಾಗಿ ಪರಿಶೀಲನಾ ಸಮಿತಿ ಯಾವ ಆಧಾರದ ಮೇಲೆ ಬ್ಲಾಕ್ಗಳನ್ನು ಹಂಚಿಕೆ ಮಾಡಿತು ಎನ್ನುವುದನ್ನು ನಾವು ತಿಳಿಯ ಬಯಸುತ್ತೇವೆ ಎಂದರು.
ಸಿಇಎ, ಇಂಧನ ಸಚಿವಾಲಯದ ಪಟ್ಟಿಯಲ್ಲಿ 28 ಕಂಪನಿಗಳ ಹೆಸರಿತ್ತು. ಇವುಗಳಲ್ಲಿ 20ಕ್ಕೆ ಮಾತ್ರ ಬ್ಲಾಕ್ ಹಂಚಿಕೆ ಮಾಡಲಾಯಿತು. ಎಂಟನ್ನು ತಿರಸ್ಕರಿಸಲಾಯಿತು. ಯಾವ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು?ಶಿಫಾರಸು ಪಟ್ಟಿಯಲ್ಲಿಲ್ಲದ 11 ಕಂಪನಿಗಳಿಗೆ ಹೇಗೆ ಬ್ಲಾಕ್ ಹಂಚಲಾಯಿತು? ಈ ಕುರಿತು ವಿವರಣೆ ನೀಡಿ ಎಂದು ಕೋರ್ಟ್ ಸೂಚಿಸಿತು.
ಸಿಬಿಐಗೆ ಇನ್ನಷ್ಟು ಸ್ವಾತಂತ್ರ್ಯ
ಕೇಂದ್ರ ಸರ್ಕಾರ ಸಿಬಿಐಗೆ ಇನ್ನಷ್ಟು ಆರ್ಥಿಕ ಸ್ವಾತಂತ್ರ್ಯ ನೀಡಲು ಕ್ರಮ ಕೈಗೊಂಡಿದೆ. ಸಿಬಿಐ ನಿರ್ದೇಶಕರಿಗೆ ಕಾರ್ಯದರ್ಶಿ ಸ್ಥಾನಮಾನ ನೀಡಿರುವುದಾಗಿ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಅದರಂತೆ ಇನ್ನು ಮುಂದೆ 15 ಕೋಟಿ ವರೆಗಿನ ವೆಚ್ಚಕ್ಕೆ ಸಿಬಿಐ ನಿರ್ದೇಶಕರೇ ಒಪ್ಪಿಗೆ ನೀಡಬಹುದಾಗಿದೆ. ಅಂದರೆ ಇನ್ನು ಮುಂದೆ ಪ್ರತಿಯೊಂದು ಸಣ್ಣ ಸಣ್ಣ ಅಗತ್ಯಗಳಿಗೂ ಸಿಬಿಐ ಸರ್ಕಾರದ ಮೇಲೆ ಅವಲಂಬಿಸುವುದು ತಪ್ಪಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


