ಗುಂಡೇಟು ಬಿದ್ದಿದ್ದ ಸಬ್ಇನ್ಸ್ಪೆಕ್ಟರ್ ಬಂಡೆ ವಿಧಿವಶ

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜ.15-
ಭೂಗತ ಪಾತಕಿ, ಸುಫಾರಿ ಕಿಲ್ಲರ್ ಗುಂಡಿಗೆ ಎದೆಯೊಡ್ಡಿದ್ದ ಗುಲ್ಬರ್ಗ ಸ್ಟೇಷನ್ ಬಜಾರ್ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯರಾತ್ರಿ ಹೈದರಾಬಾದ್ನ ಯಶೋದಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
'ಬಂಡೆ ಬದುಕಿ ಬಾ' ಎಂದು ಪ್ರಾರ್ಥಿಸಿ, ಹರಕೆ ಹೊತ್ತಿದ್ದ ಗುಲ್ಬರ್ಗ ಜಿಲ್ಲೆಯ ಜನರೆಲ್ಲ ಯಾವ ಸುದ್ದಿಗೆ ಕಿವಿ ನೀಡಬಾರದು ಎಂದಿದ್ದರೋ ಆದೇ ಸುದ್ದಿ ಸುಗ್ಗಿ ಹಬ್ಬ ಸಂಕ್ರಮಣದ ಸಂಭ್ರಮದಲ್ಲಿದ್ದಾಗಲೇ ಅವರ ಕಿವಿಗೆ ಬಂದು ಅಪ್ಪಳಿಸಿದೆ.
ಭೂಗತ ಪಾತಕಿ ಮುನ್ನಾ ಜತೆಗಿನ ಗುಂಡಿನ ಕಾಳಗದಲ್ಲಿ ಮೆದುಳಿಗೆ ಹಾನಿಯಾಗಿದ್ದರಿಂದ ಕಳೆದೊಂದು ವಾರದಿಂದ ಪ್ರಜ್ಞಾಹೀನರಾಗಿ ಹೈದರಾಬಾದ್ನ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಜ್ಞ ವೈದ್ಯರು ಎಷ್ಟೇ ಪ್ರಯತ್ನ ಮಾಡಿದರೂ ಚಿಕಿತ್ಸೆ ಫಲಿಸದೆ ಮಂಗಳವಾರ ಮಧ್ಯರಾತ್ರಿ 12.45ರ ಸುಮಾರಿಗೆ ಮೃತಪಟ್ಟಿದ್ದಾರೆ. ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮ ಆಳಂದ ತಾಲೂಕಿನ ಖಜೂರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ತಲೆಹೊಕ್ಕು ಪಾರಾಗಿದ್ದವು 2 ಗುಂಡು: ಜ.8ರಂದು ಮಧ್ಯಾಹ್ನ ಗುಲ್ಬರ್ಗ ನಗರದ ಛೋಟಾ ರೋಜಾ ಬಡಾವಣೆಯ ಮನೆಯೊಂದರ ಕೋಣೆಯಲ್ಲಿ ಭೂಗತ ಪಾತಕಿ ಮುನ್ನಾ ಅಡಗಿದ್ದಾನೆಂಬ ಮಾಹಿತಿ ಆಧರಿಸಿ ಪಿಎಸ್ಐ ಬಂಡೆ ಅವರ ತಂಡ ಕಾರ್ಯಾಚರಣೆ ನಡೆಸಲು ತೆರಳಿತ್ತು. ಪೊಲೀಸರ ಆಗಮನ ಅರಿತ ಮುನ್ನಾ ಗುಂಡಿನ ದಾಳಿ ಮಾಡಲು ಆರಂಭಿಸಿದ್ದರಿಂದ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸುತ್ತಿದ್ದರು. ಆಗ ಮುನ್ನಾ ಹಾರಿಸಿದ್ದ ಗುಂಡುಗಳಲ್ಲಿ ಎರಡು ಗುಂಡುಗಳು ಬಂಡೆ ಅವರ ತಲೆ ಹೊಕ್ಕು ಪಾರಾಗಿದ್ದವು. ಇದರಿಂದಾಗಿ ಅವರ ಮೆದುಳು, ತಲೆಗೆ ಭಾರಿ ಪೆಟ್ಟಾಗಿತ್ತು. ಮೆದುಳಿನ ರಕ್ತನಾಳಗಳು ತೀವ್ರವಾಗಿ ಘಾಸಿಗೊಂಡಿದ್ದವಲ್ಲದೆ ಬ್ರೇನ್ ಸ್ಟೇಮ್ಗೂ ಹಾನಿಯಾಗಿತ್ತು.
ತಕ್ಷಣ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರರೋಗ ತಜ್ಞರಾದ ಡಾ. ಶಶಾಂಕ್ ರಾಮದುರ್ಗ, ಸಂತೋಷ ಅವರಿದ್ದ ವೈದ್ಯರ ತಂಡ ಸಕಾಲಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಅವರ ಮೆದುಳಿನಲ್ಲಾಗುತ್ತಿದ್ದ ಭಾರಿ ಪ್ರಮಾಣದ ರಕ್ತಸ್ರಾವ ತಡೆಯುವಲ್ಲಿ ಯಶಸ್ವಿಯಾಗಿತ್ತು. ಜ.9ರಂದು ಬಂಡೆ ಅವರನ್ನು ಹೈದರಾಬಾದ್ನ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲದೆ ಅಲ್ಲಿ ಖ್ಯಾತ ನರಶಸ್ತ್ರಜ್ಞ ಡಾ. ರಂಗನಾಥಂ ಅವರ ನೇತೃತ್ವದ ಪರಿಣತ ವೈದ್ಯರ ತಂಡ ಚಿಕಿತ್ಸೆ ನಡೆಸಿತ್ತಾದರೂ ಯಾವುದೂ ಬಂಡೆ ಪ್ರಾಣ ಉಳಿಸುವಲ್ಲಿ ಫಲಕಾರಿಯಾಗಲಿಲ್ಲ.
ದಿನದಿಂದ ದಿನಕ್ಕೆ ಬಿಗಡಾಯಿಸಿತು ಆರೋಗ್ಯ: ತೀವ್ರ ರಕ್ತಸ್ರಾವದಿಂದ ಬಂಡೆ ಪ್ರಜ್ಞಾಹೀನರಾಗಿದ್ದರು. ಅದೇ ಸ್ಥಿತಿಯಲ್ಲಿ ವಾರಕಾಲ ಆಸ್ಪತ್ರೆಯಲ್ಲಿದ್ದ ಅವರ ದೇಹಸ್ಥಿತಿ ದಿನದಿಂದ ವಿಷಮಿಸುತ್ತಲೇ ಸಾಗಿತ್ತು. ಕೃತಕ ಉಸಿರಾಟದಲ್ಲೇ ಮುಂದುವರಿದಿದ್ದರೂ ರಕ್ತದೊತ್ತಡದಲ್ಲಿ ಸುಧಾರಣೆ ಕಾಣಲೇ ಇಲ್ಲ. ಇದಲ್ಲದೆ ಸೋಮವಾರ ರಾತ್ರಿಯಿಂದಲೇ ಅವರ ಮೂತ್ರಪಿಂಡಗಳು ಕೆಲಸ ನಿಲ್ಲಿಸಿದ್ದವಲ್ಲದೆ, ಹೃದಯ ಬಡಿತದಲ್ಲೂ ಏರಿಳಿತವಾಗಿತ್ತು. ಹೀಗಾಗಿ ಇವರ ನಾಡಿಬಡಿತದಲ್ಲಿಯೂ ಸಾಕಷ್ಟು ಏರಿಳಿತ, ಕ್ಷೀಣತೆ ಕಂಡಿತ್ತು ಎಂದು ಇವರ ಆರೈಕೆ ಹೊಣೆ ಹೊತ್ತಿದ್ದ ವೈದ್ಯ ಡಾ. ರಂಗನಾಥಂ 'ಕನ್ನಡಪ್ರಭ' ತಿಳಿಸಿದ್ದಾರೆ.
ಗುಂಡುಗಳು ತಲೆಹೊಕ್ಕು ಪಾರಾಗುವ ದಾರಿಯಲ್ಲಿ ಮೆದುಳಿನ ರಕ್ತನಾಳಗಳು, ಅಲ್ಲಿನ ಮಹತ್ವದ ಅಂಗಾಂಶಗಳನ್ನೆಲ್ಲ ನಾಶಪಡಿಸಿ ಸಾಗಿದ್ದರಿಂದ ಕ್ಲಿಷ್ಟಕರ ಸಮಸ್ಯೆ ಮೆದುಳನ್ನೇ ಬಲವಾಗಿ ಕಾಡಿತ್ತು. ಇದರಿಂದಾಗಿ ಉಂಟಾದ ಬಹುಅಂಗ ವೈಫಲ್ಯ (ಮಲ್ಟಿಪಲ್ ಅರ್ಗನ್ ಫೆಲ್ಯೂವರ್)ದಿಂದಾಗಿ ಬಂಡೆ ಸಾವನ್ನಪ್ಪಿದ್ದಾರೆ ಎಂದು ಯಶೋದಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪತ್ನಿ, ಇಬ್ಬರು ಮಕ್ಕಳು: ಮಲ್ಲಿಕಾರ್ಜುನ ಬಂಡೆ 2001ರಲ್ಲಿ ಮಲ್ಲಮ್ಮ (ಮಧು) ಜತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶಿವಾನಿ (6), ಸಾಯಿ ದರ್ಶನ್ (2) ಎರಡು ಮಕ್ಕಳ ತುಂಬು ಸಂಸಾರ. ತಂದೆ ಕರಿಬಸಪ್ಪ ಜತೆಗೆ ಗುಲ್ಬರ್ಗದಲ್ಲಿ ಮನೆ ಮಾಡಿಕೊಂಡಿದ್ದರು. ಇವರ ಸಹೋದರ ಪ್ರಭು ಬಂಡೆ ಸಹ ಪೊಲೀಸ್ ಇಲಾಖೆಯಲ್ಲೇ ಸೇವೆಯಲ್ಲಿದ್ದಾರೆ.
ವಿದೇಶಕ್ಕೆ ಕರೆದೊಯ್ಯುವ ಸ್ಥಿತಿಯಲ್ಲಿರಲಿಲ್ಲ!
ತುಂಬ ಹತ್ತಿರದಿಂದ (ಕ್ಲೋಸ್ಡ್ ರೇಂಜ್ ಫೈರಿಂಗ್) ಗುಂಡಿನ ಕಾಳಗವಾಗಿರುವ ಈ ಪ್ರಕರಣದಲ್ಲಿ ಬಂಡೆ ತಲೆ ಹೊಕ್ಕ ಗುಂಡುಗಳು ಕಂಪನದೊಂದಿಗೆ ವೇಗದಲ್ಲಿ ಒಳಹೊಕ್ಕಿದ್ದಲ್ಲದೆ ಅಷ್ಟೇ ವೇಗದಲ್ಲಿ ಪಾರಾಗಿರುತ್ತವೆ. ಈ ಸಂದರ್ಭದಲ್ಲಿ ದಾರಿಗೆ ಅಡ್ಡಲಾಗಿರುವ ಎಲ್ಲಾ ಅಂಗಾಂಶಗಳನ್ನು ಬಲಿ ಪಡೆದಿರುತ್ತವೆ. ಇಂಥ ಕ್ಲಿಷ್ಟಕರ ಸಂದರ್ಭವನ್ನು ತಜ್ಞ ವೈದ್ಯರ ಸೂಚನೆಯಂತೆ ಗುಲ್ಬರ್ಗ ಮೂಲದ ನರರೋಗ ತಜ್ಞ ಡಾ. ಶಶಾಂಕ್ ರಾಮದುರ್ಗ, ಸಂತೋಷ ಅವರಿದ್ದ ತಂಡ ಯಶಸ್ವಿಯಾಗಿ ನಿಭಾಯಿಸಿದ್ದರಿಂದ ಹಾಗೂ ಅಗತ್ಯ ತುರ್ತು ಚಿಕಿತ್ಸೆ ತಕ್ಷಣ ನೀಡಿದ್ದರಿಂದಲೇ ಬಂಡೆ ಅವರಿಗೆ ಹೈದರಾಬಾದ್ಗೆ ರವಾನಿಸಲು ಅನುಕೂಲವಾಗಿತ್ತು. ಆದರೆ ಹೈದರಾಬಾದ್ನಿಂದ ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ರವಾನಿಸಲಾಗಲಿ, ವಿದೇಶದಿಂದ ತಜ್ಞರನ್ನು ಇಲ್ಲಿಗೆ ಕರೆಯಿಸಿಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರ ಯಶೋದಾ ಆಸ್ಪತ್ರೆ ತಜ್ಞ ವೈದ್ಯರ ತೀರ್ಪನ್ನೇ ಆಧಾರವಾಗಿಟ್ಟುಕೊಳ್ಳುವುದಾಗಿ ಹೇಳಿತ್ತು. ಆದರೆ ಯಶೋದಾ ಆಸ್ಪತ್ರೆ ವೈದ್ಯರಂತೂ ತಾವು ನೀಡುತ್ತಿದ್ದ ಚಿಕಿತ್ಸೆಯಲ್ಲದೆ ವಿಡಿಯೋ ಕಾನ್ಫ್ರೆನ್ಸ್ ಮೂಲಕ ವಿದೇಶಗಳಲ್ಲಿನ ತಜ್ಞರೊಂದಿಗೆ ಸತತ ಸಂಪರ್ಕದಲ್ಲಿದ್ದು ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಬಂಡೆ ಅವರು ಈಗಿರುವ ಸ್ಥಿತಿಯಲ್ಲಿ ಅವರನ್ನು ಎಲ್ಲಿಯೂ ಸ್ಥಳಾಂತರ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರಿಂದ ಎಲ್ಲರೂ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂಬ ನಿರೀಕ್ಷೆಯಲ್ಲಿದ್ದರು. ರೀಕ್ಷೆ ಹುಸಿಯಾಗಿಸಿ ವಿಧಿ ಬಂಡೆ ಬದುಕಿನ ಜಟಕಾ ಬಂಡಿ ತನ್ನಿಚ್ಛೆಯಂತೆಯೇ ಸಾಗಿಸಿತು.
ಚಿಕಿತ್ಸೆಗೆ ಪ್ರಾಮಾಣಿಕ ಪ್ರಯತ್ನ: ಸಿಎಂ
ಮೈಸೂರು: ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಚಿಕಿತ್ಸೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿತ್ತು. ಆದರೂ ಅವರು ನಿಧನವಾಗಿರುವುದು ನೋವು ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವೈದ್ಯರೂ ಬಹಳ ಪರಿಶ್ರಮಪಟ್ಟಿದ್ದರು. ಬಂಡೆ ಅವರು ಕೋಮಾದಲ್ಲಿ ಇದ್ದರಿಂದ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಬೇಕು ಎಂಬ ಪ್ರಯತ್ನ ವಿಫಲವಾಗಿತ್ತು. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ಬಂಡೆ ಕುಟುಂಬಕ್ಕೆ 15 ಲಕ್ಷ ಪರಿಹಾರ
ಬೆಂಗಳೂರು: ಗುಲ್ಬರ್ಗದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಸ್ಟೇಷನ್ ಬಜಾರ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಬಂಡೆ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ರು. 15 ಲಕ್ಷ ಪರಿಹಾರ ಘೋಷಿಸಿದ್ದು, ಅವರ ಇಬ್ಬರು ಮಕ್ಕಳನ್ನು ದತ್ತು ಪಡೆಯಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಕೆ.ಜೆ. ಜಾರ್ಜ್ ಈ ವಿಷಯ ತಿಳಿಸಿದ್ದು, ಬಂಡೆ ಅವರ ಸಾವಿನಿಂದ ಇಡಿ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದೆ. ಕೆಚ್ಚೆದೆಯಿಂದ ಕರ್ತವ್ಯ ನಿರ್ವಹಿಸಿದ ಬಂಡೆ ಅವರ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಿನಲ್ಲಿ ಗುರುವಾರ ನಡೆಸಲಾಗುವುದು ಎಂದು ಹೇಳಿದರು. ಹೈದ್ರಾಬಾದ್ನ ಆಸ್ಪತ್ರೆಯಿಂದ ಬಂಡೆ ಅವರ ಪಾರ್ಥಿವ ಶರೀರವನ್ನು ಗುರುವಾರ ಹೆಲಿಕಾಫ್ಟರ್ ಮೂಲಕ ಗುಲ್ಬರ್ಗಕ್ಕೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಆಳಂದ ತಾಲೂಕಿನಲ್ಲಿರುವ ಅವರ ಹುಟ್ಟೂರಾದ ಖಜೂರಿಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು. ಜನರ ದುಃಖದಲ್ಲಿ ಸರ್ಕಾರವೂ ಭಾಗಿಯಾಗಿದ್ದು, ಶಾಂತಿ ಕಾಪಾಡುವಂತೆ ನಾಗರಿಕರಲ್ಲಿ ಸಚಿವರು ಮನವಿ ಮಾಡಿದ್ದಾರೆ. ಬಂಡೆ ಅವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಇದರ ಜತೆಗೆ ಇಬ್ಬರು ಮಕ್ಕಳನ್ನು ಸರ್ಕಾರ ದತ್ತು ತೆಗೆದುಕೊಂಡು ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚ ಭರಿಸುತ್ತದೆ ಎಂದು ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


