ಪ್ರಧಾನ ಸುದ್ದಿ

ಇದನ್ನು ನೀವು ನಂಬಲೇಬೇಕು, ಆಸ್ಕರ್ ಭರವಸೆ ನಿಜವಾಯ್ತು, ಶಿರಾಡಿ ರಸ್ತೆ ದುರಸ್ತಿಯಾಯ್ತು

ಇದನ್ನು ನೀವು ನಂಬಲೇಬೇಕು, ಆಸ್ಕರ್ ಭರವಸೆ ನಿಜವಾಯ್ತು, ಶಿರಾಡಿ ರಸ್ತೆ ದುರಸ್ತಿಯಾಯ್ತು
Published On :

ನಿಜಕ್ಕೂ ಇದೊಂದು ಅದ್ಭುತ. ಪವಾಡ ಸದೃಶ.
ಹೌದು, ನಂಬಲು ಅಸಾಧ್ಯವಾದರೂ ಇದನ್ನೂ ನಂಬಲೇಬೇಕು..!
ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ಶುಕ್ರವಾರ ಸಂಜೆ ಪ್ರಯಾಣಿಸಿದಾಗ ನನ್ನ ಕಣ್ಣುಗಳನ್ನೂ ನಾನೇ ನಂಬದಾದೆ. ಇದೇನು ಕನಸೋ, ನನಸೋ ಎಂದು ಕ್ಷಣಕಾಲ ಅವಕ್ಕಾದೆ. 25 ದಿನಗಳ ಹಿಂದೆ ಇದೇ ರಸ್ತೆಯಲ್ಲಿ ಸಾಗಿದಾಗ ಆದ ನರಕಯಾತನೆ ಅಷ್ಟಿಷ್ಟಲ್ಲ. ಮೂಡುಬಿದಿರೆಯಲ್ಲಿ ಏರ್ಪಡಿಸಿದ್ದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮಕ್ಕೆ ಶಿರಾಡಿ ಮೂಲಕ ಪ್ರಯಾಣಿಸಿದಾಗ ಇದೇನು ರಸ್ತೆಯೋ ಗುಡ್ಡಗಾಡೋ ಎಂಬಷ್ಟರ ಮಟ್ಟಿಗೆ ಪ್ರಯಾಸ, ಹಿಂಸೆಯಾಗಿತ್ತು. ಅಡಿಗಡಿಗೆ ಎರಡು ಅಡಿಗಳಷ್ಟು ಆಳದ ಗುಂಡಿಗಳನ್ನು ದಾಟಿ ಘಾಟ್ ಇಳಿಯುವಷ್ಟರಲ್ಲಿ ಶರೀರವನ್ನು ಸಲಾಕೆಯಿಂದ ತಟ್ಟಿದಂತಾಗಿತ್ತು. ನಮ್ಮ ಸರಕಾರ, ಆಡಳಿತ ವ್ಯವಸ್ಥೆಯ ಲೋಪದೋಷಗಳು ಆ ಹಳ್ಳದಿಬ್ಬಗಳಲ್ಲಿ ಅನುರಣಿಸುತ್ತಿದ್ದವು.
ಅಲ್ಲಿಂದ ಬೆಂಗಳೂರಿಗೆ ಬಂದಿಳಿಯುತ್ತಿಂತೆಯೇ 'ಕನ್ನಡಪ್ರಭ'ದ ನವೆಂಬರ್ 26 ರ ಸಂಚಿಕೆಯ ನನ್ನ 'ನೂರೆಂಟು ನೋಟ' ಅಂಕಣದಲ್ಲಿ ಶಿರಾಡಿಘಾಟ್ ಪ್ರಯಾಣದ ಅನುಭವವನ್ನು ದಾಖಲಿಸಿದ್ದೆ. 'ಆಸ್ಕರ್, ಮೊಯ್ಲಿ ಶಿರಾಡಿ ಘಾಟ್‌ನಲ್ಲಿ ಪ್ರಯಾಣಿಸಿದರೆ ಬೆಟ್ಸ್‌' ಎಂಬ ಶೀರ್ಷಿಕೆಯಡಿ ಸವಿಸ್ತಾರವಾಗಿ ಹೇಳಿದ್ದೆ. ಅದರ ಬೆನ್ನಲ್ಲೇ ಪತ್ರಿಕೆಯಲ್ಲಿ 'ಶಿರಾಡಿ ದರ್ಶನ' ಶೀರ್ಷಿಕೆಯಡಿ ಅಭಿಯಾನವನ್ನೇ ಆರಂಭಿಸಲಾಯಿತು. ಮಂಗಳೂರಿನ ಪ್ರಧಾನ ವರದಿಗಾರ ಜಿತೇಂದ್ರ ಕುಂದೇಶ್ವರ ಸ್ಥಳಕ್ಕೆ ಹೋಗಿ ಮೂರು ದಿನ ವರದಿ ಮಾಡಿದ್ದರು. ಈ ಅಭಿಯಾನಕ್ಕೆ ಜನರಿಂದ ಅಪಾರ ಪ್ರತಿಕ್ರಿಯೆ, ಮೆಚ್ಚುಗೆ ವ್ಯಕ್ತವಾಗಿತ್ತು. ರಸ್ತೆ ದುರವಸ್ಥೆ ಮತ್ತು ಅದರತ್ತ ಗಮನ ಹರಿಸದ ಜನಪ್ರತಿನಿಧಿಗಳ ಬಗ್ಗೆ ಭಾರಿ ಆಕ್ರೋಶವೂ ಪ್ರತಿಧ್ವನಿಸಿತ್ತು.
ಪತ್ರಿಕೆಯ ಅಭಿಯಾನಕ್ಕೆ ಜನರ ಸಿಟ್ಟು ಜತೆಯಾಗಿದ್ದು ಸರಕಾರ ಕಣ್ಣು ಬಿಡುವಂತೆ ಮಾಡಿತ್ತು. ಪತ್ರಿಕೆಯ ಕಾಳಜಿ, ಜನರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಅವರು ಶಿರಾಡಿಘಾಟ್ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲ, ಡಿಸೆಂಬರ್ 30 ರಂದು ಇದಕ್ಕಾಗಿ ವಿಶೇಷ ಸಭೆ ಕರೆಯುವುದಾಗಿ ಹೇಳಿದರು. ಹೇಳಿದ್ದಷ್ಟೇ ಅಲ್ಲಿ ಆ ಪ್ರಕಾರ ಅವರು ಸಭೆಯನ್ನೂ ಕರೆದರು. ಆ ಸಭೆಯಲ್ಲಿ ರಸ್ತೆ ದುರಸ್ತಿ ಕುರಿತು ವಿಸ್ತೃತ ಚರ್ಚೆಯೂ ನಡೆಯಿತು. ಜನವರಿ 30 ರೊಳಗೆ ರಸ್ತೆ  ದುರಸ್ತಿ ಕಾಮಗಾರಿ ಪೂರ್ಣಗೊಳಿಸುವ ಹಾಗೂ ಮೇ ತಿಂಗಳೊಳಗೆ ಶಾಶ್ವತ ಪರಿಹಾರ ಕಲ್ಪಿಸುವ ತೀರ್ಮಾನವನ್ನೂ ಆ ಸಭೆಯಲ್ಲಿ ಕೈಗೊಳ್ಳಲಾಯಿತು.
ಸರಕಾರದ ತೀರ್ಮಾನಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆ ಭರವಸೆ ಕೊಟ್ಟಿದ್ದಷ್ಟೇ ಪುಣ್ಯ ಎನ್ನುವುದಕ್ಕೆ ನಮ್ಮ ಮುಂದೆ ಅನೇಕ ನಿದರ್ಶನಗಳಿವೆ. ಅದೇ ರೀತಿ ಈ ಭರವಸೆ ಕೂಡ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಅಸಾಧ್ಯ ಎಂದೇ ಎಲ್ಲರೂ ಭಾವಿಸಿದ್ದರು. ಪತ್ರಿಕೆ ಕೂಡ ಅದಕ್ಕೆ ಹೊರತಾಗಿರಲಿಲ್ಲ. ಹೀಗಾಗಿ ಕೇಂದ್ರ ಸಚಿವರು ಬರೀ ಭರವಸೆ ಕೊಟ್ಟರಷ್ಟೇ ಸಾಲದು. ಅದನ್ನು ಅನುಷ್ಠಾನಕ್ಕೆ ತರಬೇಕು. ಪತ್ರಿಕೆ ಕೂಡ ಭರವಸೆಯನ್ನು ನಂಬಿಕೊಂಡು ಸುಮ್ಮನೆ ಕೂರುವುದಿಲ್ಲ. ನಿತ್ಯ ಅಲ್ಲಾಗುತ್ತಿರುವ ಕಾಮಗಾರಿ ಬಗ್ಗೆ ಕಣ್ಗಾವಲು ಇಡುತ್ತದೆ. ಕೆಲಸದ ಪ್ರಗತಿ ಬಗ್ಗೆ ಜನರಿಗೆ ಸಾಕ್ಷಾತ್ ವರದಿ ಕೊಡುತ್ತದೆ ಎಂದು ಹೇಳಿತ್ತು. ಆ ಪ್ರಕಾರ ಒಂದೆರಡು ವರದಿಗಳು ಪ್ರಕಟವಾದವು ಕೂಡ.            
ಅದರೂ ಒಮ್ಮೆ ಶಿರಾಡಿ ದುರಸ್ತಿ ಕಾಮಗಾರಿಯನ್ನು ಖುದ್ದು ನೋಡಿಬರಬೇಕು ಎಂದು ನನಗೆ ಅನಿಸಿತ್ತು. ಉಡುಪಿ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದದ್ದು ಇದಕ್ಕೆ ಪೂರಕವೂ ಆಯಿತು. ಆ ಪ್ರಕಾರ ಶುಕ್ರವಾರ ಶಿರಾಡಿಘಾಟ್ ಮೂಲಕ ಉಡುಪಿಯತ್ತ ಪ್ರಯಾಣಿಸಿದಾಗ ಆಚ್ಚರಿ, ಸಂತೋಷ ಒಟ್ಟೊಟ್ಟಿಗೆ ಆದವು. ವಾಸ್ತವವಾಗಿ ಶಿರಾಡಿಘಾಟ್ ತಲುಪುವ ಮೊದಲು ಹಳೆಯ ಅನುಭವ ಮತ್ತೆ ನೆನಪಿಗೆ ಬಂದು ಒಂದು ರೀತಿ ಭಯವೂ ಆಗಿತ್ತು. ಆದರೆ ನನ್ನ ಕಾರು ಸಕಲೇಶಪುರ ದಾಟಿ, ಶಿರಾಡಿಘಾಟ್‌ನಲ್ಲಿ ಇಳಿಯುತ್ತಿದ್ದಂತೆ ತಿಂಗಳ ಹಿಂದೆ ನಾನು ಪ್ರಯಾಣಿಸಿದ್ದು ಇದೇ ರಸ್ತೆಯಲ್ಲಾ ಎಂದು ನನ್ನನ್ನೇ ನಾನು ಕೇಳಿಕೊಳ್ಳುವಂತಾಯಿತು. ಇದಕ್ಕೆ ಕಾರಣ ಅಲ್ಲಾಗಿರುವ ಕಾಮಗಾರಿ. ಆದರಲ್ಲಿ ಪ್ರತಿಫಲಿಸ್ತುತ್ತಿರುವ ಆಸ್ಕರ್ ಫರ್ನಾಂಡಿಸ್ ಅವರ ಭರವಸೆಯ ಸಾಕಾರ, ಆ ಸಾಕಾರದಲ್ಲಿ ಸರಾಕಾರದ ಬದ್ಧತೆಯ ಸಾಕ್ಷಾತ್ಕಾರ. ಅಲ್ಲಾಗಿರುವ ಕೆಲಸ ಕಂಡು ನಾನು ನಿಬ್ಬೆರಗಾಗಿ ಹೋದೆ. ಸರಕಾರಿ ವ್ಯವಸ್ಥೆ ಹೀಗೂ ಕೆಲಸ ಮಾಡುವುದು ಉಂಟೇ ಎಂದು. ನಿಜಕ್ಕೂ ನನ್ನ ಅನುಭವದಲ್ಲಿ ಇದೊಂದು ಕೌತುಕ, ಪವಾಡವೇ ಸರಿ.
ತಿಂಗಳೊಳಗೆ ದುರಸ್ತಿ ಕೆಲಸ ಮುಗಿಸುವುದಾಗಿ ಆಸ್ಕರ್ ಭರವಸೆ ಕೊಟ್ಟಿದ್ದರು. ಆ ಪ್ರಕಾರ ಜನವರಿ 1 ರಿಂದಲೇ ಕೆಲಸ ಆರಂಭವಾಗಿತ್ತು. ಇದೀಗ ಅರ್ಧ ಕಿ.ಮೀ. ಹೊರತುಪಡಿಸಿ 18 ಕಿ.ಮೀ. ಉದ್ದದ ರಸ್ತೆಯ ಕೆಲಸ ಮುಗಿದು ಹೋಗಿದೆ. ಇನ್ನರ್ಧ ಕಿ.ಮೀ. ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅಂದರೆ ಹತ್ತು ದಿನ ಮೊದಲೇ ಕಾಮಗಾರಿ ಪೂರ್ಣ! ಅದ್ಭುತ, ಕೌತುಕ, ಪವಾಡ ಉಪಮೇಯಗಳನ್ನು ನಾನು ಬಳಸಿದ್ದು ಇದೇ ಕಾರಣಕ್ಕಾಗಿ.
ಕಳೆದ ತಿಂಗಳು ನಾನು ಇದೇ ರಸ್ತೆಯಲ್ಲಿ ಸಂಚರಿಸಿದಾಗ ಒಂದರಿಂದ ಎರಡೂವರೆ ಅಡಿ ಆಳದ ಹಳ್ಳಗಳು ಅಣಕಿಸುತ್ತಿದ್ದವು. ಈ ರಸ್ತೆಯಲ್ಲಿ ಪ್ರಯಾಣಿಸಿ ಅರಗಿಸಿಕೊಳ್ಳಬಲ್ಲೆಯಾ ಎಂದು ಸವಾಲು ಹಾಕುತ್ತಿದ್ದವು. ಏನಾಶ್ಚರ್ಯ..? ಈಗ ರಸ್ತೆಯಲ್ಲಿ ಹುಡುಕಿದರೂ ಒಂದೇ ಒಂದು ಹಳ್ಳ ಕಾಣಸಿಗದು. ಆಸ್ಕರ್ ಫರ್ನಾಂಡಿಸ್ ಅವರು ಕೊಟ್ಟ ಭರವಸೆಯಂತೆ ನಡೆದುಕೊಂಡಿದ್ದಾರೆ. ಅವರ ನುಡಿ ಮತ್ತು ನಡೆ ಅಭಿನಂದನಾರ್ಹ. ಏಕೆಂದರೆ, ಸರ್ಕಾರ ಹೇಳಿದಂತೆ ನಡೆದುಕೊಂಡಿರುವುದು ಇದೇ ಮೊದಲು ಎಂದನಿಸುತ್ತದೆ.
ಆದರೆ ಇಲ್ಲಿ ಇನ್ನೂ ಒಂದು ಮಾತು. ನಾವು ಇಷ್ಟಕ್ಕೇ ಖುಷಿಪಡುವ ಆಗತ್ಯವಿಲ್ಲ. ಏಕೆಂದರೆ ಇದು ದುರಸ್ತಿ ಕಾಮಗಾರಿಯಷ್ಟೇ. ಮುಂದೆ ಮಳೆಗಾಲ ಶುರುವಾಗಲಿದೆ. ಬಳಿಕ ರಸ್ತೆ ಮೊದಲಿನ ರೂಪಕ್ಕೆ ಮರಳುವ ಎಲ್ಲ ಅಪಾಯವೂ ಇದೆ. ಹೀಗಾಗಿ ಶಾಶ್ವತ ಕಾಮಗಾರಿಯತ್ತ ಗಮನ ಹರಿಸುವುದು ಮುಖ್ಯ. ಈ ವಿಚಾರದಲ್ಲೂ ಮಾತು ಉಳಿಸಿಕೊಳ್ಳಬೇಕು. ಎಲ್ಲಕ್ಕಿಂತ ಮಿಗಿಲಾಗಿ ರಸ್ತೆ ಎಂದರೆ ಕೇವಲ ಶಿರಾಡಿಘಾಟ್ ಮಾತ್ರವಲ್ಲ. ರಾಜ್ಯದ ಹಲವೆಡೆ ಇದೇ ಪರಿಸ್ಥಿತಿ ಇದೆ. ಹೀಗಾಗಿ ಆಸ್ಕರ್ ಫರ್ನಾಂಡಿಸ್ ಅವರು ಇದೇ ಮಾದರಿಯನ್ನೂ ಎಲ್ಲ ರಸ್ತೆಗಳ ವಿಚಾರದಲ್ಲಿ ಅನುಸರಿಸಬೇಕು. ಆಗಷ್ಟೇ ಅವರ ಹಾಗೂ ಅವರು ವಹಿಸಿಕೊಂಡಿರುವ ಖಾತೆ ಬಗ್ಗೆ ಸಾರ್ವಜನಿಕ ಗೌರವ ಇಮ್ಮಡಿಯಾಗುತ್ತದೆ.


-ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.