ಬ್ಯಾನರ್ ವಿವಾದ ಕೊಲೆಯಲ್ಲಿ ಅಂತ್ಯ
ಕನ್ನಡಪ್ರಭ ವಾರ್ತೆ , ಶಹಾಪುರ , ಜ.17
ಕ್ಷುಲ್ಲಕ ಕಾರಣಕ್ಕಾಗಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ದಲಿತ ಮುಖಂಡರೊಬ್ಬರು ಕೊಲೆಯಾದ ಘಟನೆ ಶಹಾಪುರ ತಾಲೂಕಿನ ಕನ್ಯಕೋಳೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಯಲ್ಲಿ ಪೊಲೀಸ್ ಅಧಿಕಾಗಳಿಬ್ಬರು ಸೇರಿ ಒಟ್ಟು 20 ಜನರು ಗಾಯಗೊಂಡಿದ್ದಾರೆ.
ಗ್ರಾಮದಲ್ಲಿ ನಡೆದ ಅನಿರೀಕ್ಷಿತ ಘಟನೆಯಿಂದ ಎರಡು ಕೋಮುಗಳಲ್ಲಿ ದ್ವೇಷಮಯ ವಾತಾವರಣವಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಏತನ್ಮಧ್ಯೆ, ಕೊಲೆಯಾದ ದೇವೇಂದ್ರಪ್ಪನ ಕುಟುಂಬಕ್ಕೆ ಸರ್ಕಾರ 3.75 ಲಕ್ಷ ಪರಿಹಾರ ಘೋಷಿಸಿದೆ.
ಕನ್ಯಕೋಳೂರಲ್ಲಿ ಸಂಕ್ರಮಣ ದಿನಗಳಲ್ಲಿ ಚೌಡೇಶ್ವರಿ ಜಾತ್ರೆ ನಡೆಯುತ್ತದೆ. ಮುಖ್ಯರಸ್ತೆಗಳಲ್ಲಿ ಬ್ಯಾನರ್ ಕಟ್ಟುವುದರ ಸಂಬಂಧ ನಡೆದ ಸಣ್ಣ ಜಗಳ ವಿಕೋಪಕ್ಕೆ ತಿರುಗಿದೆ. ಬ್ಯಾನರನ್ನು ಕಿಡಿಗೇಡಿಗಳು ಹರಿದರೆಂದು ನೆಪ ಮಾಡಿ ಶುಕ್ರವಾರ ಬೆಳಗ್ಗೆಯಿಂದಲೇ ಎರಡು ಸಮುದಾಯಗಳ ಮಧ್ಯೆ ಜಗಳ ಆರಂಭವಾಗಿದೆ.
ಕ್ರಮೇಣ ಅದು ವಿಕೋಪಕ್ಕೆ ತಿರುಗಿ ಹಿಂಸಾಚಾರಕ್ಕೆ ನಾಂದಿ ಹಾಡಿದೆ. ಈ ವೇಳೆ, ದಲಿತ ಮುಖಂಡ ದೇವೇಂದ್ರಪ್ಪರ ಹತ್ಯೆಯಾಗಿದೆ.
ಗಲಭೆಯ ಸುದ್ದಿ ತಿಳಿದ ಶಹಾಪುರ ಪೊಲೀಸ್ ಸಿಬ್ಬಂದಿ ಕನ್ಯಕೋಳೂರ ಗ್ರಾಮಕ್ಕೆ ಧಾವಿಸಿದಾಗ ಅವರ ಮೇಲೂ ಹಲ್ಲೆ ನಡೆಯಿತು. ಪಿಎಸ್ಐ ದೊಡ್ಡಪ್ಪ ಅವರ ತಲೆಗೂ ಗಂಭೀರ ಗಾಯವಾಗಿದ್ದು, ಸಿಪಿಐ ನ್ಯಾಮಗೌಡರ ಅವರಿಗೆ ಗಂಭೀರ ಗಾಯಗಳಾಗಿವೆ. ಇತರ 10 ಪೊಲೀಸ್ ಸಿಬ್ಬಂದಿ ಸೇರಿ 20 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪಿಎಸ್ಐ ದೊಡ್ಡಪ್ಪ, ಸಿಪಿಐ ನ್ಯಾಮಗೌಡ ಅವರನ್ನು ಗುಲ್ಬರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳೀಯ ಶಾಸಕ ಗುರುಪಾಟೀಲ ಶಿರವಾಳ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಅಘೋಷಿತ ಬಂದ್: ಘಟನೆಯ ಸುದ್ದಿ ಹರಡುತ್ತಿದ್ದಂತೆ ಶಹಾಪುರ ಪಟ್ಟಣದಲ್ಲಿ ಅಘೋಷಿತ್ ಬಂದ್ ನಡೆಯಿತು. ಶಾಲಾ ಕಾಲೇಜುಗಳು, ಅಂಗಡಿ ಮುಂಗ್ಗಟ್ಟುಗಳು, ಬಸ್ ಸಂಚಾರ ಅಸ್ತವ್ಯಸ್ತವಾಗಿ ಎಲ್ಲಾ ವ್ಯಾಪಾರ ವಹಿವಾಟುಗಳು ಬಂದಾದವು. ಘಟನೆಯಿಂದ ಆಕ್ರೋಶಗೊಂಡ ಕೆಲವರು ಹೊಸ ಬಸ್ ನಿಲ್ದಾಣದಲ್ಲಿ ನಿಂತಿದ್ದ ನಾಲ್ಕು ಬಸ್ಗಳಿಗೆ ಕಲ್ಲು ಹೊಡೆದು ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ.
ಶವವಿಟ್ಟು ಪ್ರತಿಭಟನೆ
ದಲಿತರ ಮೇಲಿನ ಹಲ್ಲೆ ದೌರ್ಜನ್ಯ ವಿಪರೀತವಾಗುತ್ತಿದ್ದು ದಲಿತರ ಪ್ರಾಣಗಳಿಗೆ ಬೆಲೆಯೆ ಇಲ್ಲದಂತಾಗಿದೆ. ಮೃತ ದೇವಿಂದ್ರಪ್ಪನ ಕೊಲೆ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ, ಬಸವೇಶ್ವರ ವೃತ್ತದಲ್ಲಿ ಸಾವಿರಾರು ಜನರು ಶವವಿಟ್ಟು ಪ್ರತಿಭಟಿಸಿದರು. ಸುದ್ದಿ ತಿಳಿದ ಯಾದಗಿರಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಎಸ್.ಪಿ. ವಂಶೀಕೃಷ್ಣ ಮತ್ತು ಐಜಿಪಿ ವಜೀರ್ ಅಹ್ಮದ್ ಅವರು ಬಸವೇಶ್ವರ ವೃತ್ತದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದವರಿಗೆ ಸೂಕ್ತ ತನಿಖೆ ಭರವಸೆ ನೀಡಿದರು. ಆರೋಪಿಗಳು ಯಾರೇ ಆಗಿದ್ದರೂ ಅವರನ್ನು ಬಂಧಿಸುವ ಜವಾಬ್ದಾರಿ ನಮ್ಮದು. ಮೃತಪಟ್ಟ ಕುಟುಂಬಕ್ಕೆ ಪರಿಹಾರ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

