ಸ್ಮಶಾನ ಇಲ್ಲ, ಶವಸಂಸ್ಕಾರ ಕಷ್ಟ
ದಾವಣಗೆರೆ: ಸಮೃದ್ಧ ನೀರಾವರಿ ಪ್ರದೇಶವಾದ ಆ ಊರಿನಲ್ಲಿ ಬಡವರು ಸತ್ತರೆ ಸಂಸ್ಕಾರಕ್ಕೆ ಸ್ಮಶಾನವೇ ಇಲ್ಲ. ಇರುವ ಹಳ್ಳದ ದಂಡೆಯ ತುಂಡು ಭೂಮಿಯಲ್ಲಿ ಹೆಣ ಹೂತಿದ್ದ ಜಾಗದಲ್ಲಿಯೇ ಮತ್ತೆ ಮತ್ತೆ ಗುಂಡಿ ತೋಡಿ, ಸಂಸ್ಕಾರ ನಡೆಸುವುದು ಅನಿವಾರ್ಯವಾಗಿದೆ.
ಇದು ದಾವಣಗೆರೆ ತಾಲೂಕಿನ ಪುಟಗನಾಳ್ ಗ್ರಾಮ ಹಲವಾರು ದಶಕಗಳಿಂದಲೂ ಎದುರಿಸುತ್ತಿರುವ ಸಮಸ್ಯೆ. ಸ್ವಲ್ಪವೂ ಜಮೀನು ಇಲ್ಲದ ಕಾರಣ ಗ್ರಾಮದಲ್ಲಿ ಯಾರೇ ಸತ್ತರೂ ಸಂಸ್ಕಾರಕ್ಕೆ ನಿರ್ದಿಷ್ಟ ಜಾಗವೇ ಇಲ್ಲ. ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಇಲ್ಲಿ ಯಾರಾದರೂ ಬಡವರು ಮೃತಪಟ್ಟರೆ ಅವರ ಅಂತ್ಯಕ್ರಿಯೆಯನ್ನು ಹಳ್ಳದ ದಂಡೆಯ ತುಂಡು ಭೂಮಿಯಲ್ಲಿಯೇ ನಡೆಸಲಾಗುತ್ತದೆ.
ಕಾಡಜ್ಜಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪುಟಗನಾಳ್ನಲ್ಲಿ ಸುಮಾರು 350 ಮನೆಗಳಿವೆ. ಒಟ್ಟು 1,600 ಮತದಾರರು ಇಲ್ಲಿದ್ದು, ಮಕ್ಕಳು, ವಯೋವೃದ್ಧರೂ ಸೇರಿದಂತೆ ಸುಮಾರು 2500ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಲಿಂಗಾಯತ, ಗಂಗಾ ಮತಸ್ಥ, ನಾಯಕರು, ಪರಿಶಿಷ್ಟರೇ ಹೆಚ್ಚಾಗಿರುವ ಇಲ್ಲಿ ಬಡ ಕುಟುಂಬಗಳ ಸಂಖ್ಯೆಯೇ ಹೆಚ್ಚು.
ರಸ್ತೆ ಬದಿಯಲ್ಲೇ ಸಮಾಧಿ: ಸ್ವಂತ ಜಮೀನು ಇದ್ದವರು ತಮ್ಮವರು ಯಾರಾದರೂ ಸತ್ತರೆ ತಮ್ಮ ಹೊಲದಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತಾರೆ. ಆದರೆ, ತುಂಡು ಭೂಮಿಯೂ ಇಲ್ಲದ ಬಡ ಕುಟುಂಬಗಳಲ್ಲಿ ಯಾರಾದರೂ ಸತ್ತರೆ ಶವಸಂಸ್ಕಾರಕ್ಕೆ ಪರದಾಡಬೇಕು. ಪುಟಗನಾಳ್ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸೂಕ್ತ ಸ್ಮಶಾನ ಒದಗಿಸುವಂತೆ ಜಿಲ್ಲಾಡಳಿತ, ಜಿಪಂಗೆ ಗ್ರಾಮಸ್ಥರು ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಗ್ರಾಮ ನೀರಾವರಿ ಪ್ರದೇಶವಾಗಿದ್ದರಿಂದ ಜಮೀನು ಮಾರಲೂ ಯಾರೂ ಮುಂದಾಗುತ್ತಿಲ್ಲ. ಕೆಲವರು ಮುಂದೆ ಬಂದರೂ ಸರ್ಕಾರ ಭೂಮಿ ಖರೀದಿಸಲು ನೀಡುವ ಹಣ ಅತ್ಯಲ್ಪವಾದ್ದರಿಂದ ಹಲವಾರು ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.
ಜಿಲ್ಲಾಡಳಿತಕ್ಕೆ ಮನವಿ: ಇನ್ನಾದರೂ ಜಿಲ್ಲಾಡಳಿತ, ಜಿಪಂ ಈ ಗಂಭೀರ ಸಮಸ್ಯೆಯ ಬಗ್ಗೆ ಗಮನ ಹರಿಸಲು ಎಂಬುದು ಗ್ರಾಮದ ಹಿರಿಯರ ಆಗ್ರಹ. ಅಲ್ಲದೇ, ಗ್ರಾಮ ನಕಾಶೆಯನ್ನು ಪರಿಶೀಲಿಸಿ ಸರ್ಕಾರಿ ಜಮೀನು ಇದ್ದರೆ, ಆಕಸ್ಮಾತ್ ಸರ್ಕಾರಿ ಭೂಮಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತಕ್ಷಣ ಹದ್ದುಬಸ್ತ್ ಮಾಡಿ, ಗ್ರಾಮಸ್ಥರ ಬೇಡಿಕೆಯಂತೆ ಸ್ಮಶಾನ ಭೂಮಿಯಾಗಿ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.
-ನಾಗರಾಜ ಬಡದಾಳ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

