ಶಶಿ ತರೂರ್ ಪತ್ನಿ ಸುನಂದಾ ನಿಗೂಢ ಸಾವು, ಆತ್ಮಹತ್ಯೆಯೋ, ಇನ್ನೇನೋ? ಕಾರಣವೂ ನಿಗೂಢ

ನವದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ (52) ಶಂಕಾಸ್ಪದವಾಗಿ ಅಸುನೀಗಿದ್ದಾರೆ. ರಾಷ್ಟ್ರ ರಾಜಧಾನಿಯ ದಕ್ಷಿಣ ಭಾಗದಲ್ಲಿರುವ ಲೀಲಾ ಪ್ಯಾಲೇಸ್ ಹೊಟೇಲ್ನ ಸ್ಯೂಟ್ ಒಂದರಲ್ಲಿ ಶುಕ್ರವಾರ ಸುನಂದಾ ಮೃತದೇಹ ಪತ್ತೆಯಾಗಿದೆ. ದೇಹದ ಯಾವುದೇ ಭಾಗಗಳಲ್ಲಿ ಗಾಯಗಳು ಕಂಡು ಬಂದಿಲ್ಲ. ಇದೊಂದು ಆತ್ಮಹತ್ಯೆಯ ಪ್ರಕರಣವಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಗುರುವಾರವಷ್ಟೇ ಪಾಕ್ ಮೂಲದ ಪತ್ರಕರ್ತೆ ಮೆಹರ್ ತರಾರ್ ಜತೆ ಪತಿ ಶಶಿ ತರೂರ್ ಸಂಬಂಧ ಹೊಂದಲು ಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದರು. ಇದಾದ ಬಳಿಕ ತರೂರ್ ಮತ್ತು ಸುನಂದಾ ಜಂಟಿ ಹೇಳಿಕೆ ನೀಡಿ ತಾವಿಬ್ಬರೂ ಸುಖದಿಂದ ದಾಂಪತ್ಯ ಜೀವನ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದರು. ಸುನಂದಾ, ತರಾರ್ ಅವರನ್ನು ಪಾಕಿಸ್ತಾನದ ಉಗ್ರ ಸಂಘಟನೆ ಐಎಸ್ಐ ಏಜೆಂಟ್ ಎಂದು ಜರೆದಿದ್ದರು.
ಏನಾಗಿತ್ತು?: ತಮ್ಮ ಪತಿ ಕೇಂದ್ರ ಸಚಿವ ಶಶಿ ತರೂರ್ ಮತ್ತು ಪಾಕಿಸ್ತಾನದ ಪತ್ರಕರ್ತೆ ಮೆಹರ್ ಜತೆಗಿನ ಟ್ವಿಟರ್ ಪ್ರೇಮ ಪ್ರಕರಣ ಬಹಿರಂಗವಾದ ನಂತರ ಸುನಂದಾ ತೀವ್ರವಾಗಿ ಆಘಾತಕ್ಕೆ ಒಳಗಾಗಿದ್ದರು. ಕೇಂದ್ರ ಸಚಿವ ಶಶಿ ತರೂರ್ ದಿನವಿಡೀ ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸಿದ್ದರು. ಸುಮಾರು 8.50ರ ವೇಳೆಗೆ ತರೂರ್ ಅವರು ಅಧಿವೇಶನ ಮುಕ್ತಾಯದ ಬಳಿಕ ಹೊಟೇಲ್ಗೆ ಬಂದಿದ್ದರು. ಈ ಸಂದರ್ಭದಲ್ಲಿ ಸುನಂದಾ ಪುಷ್ಕರ್ ತಂಗಿದ್ದ ಸ್ಯೂಟ್ನ ಬಾಗಿಲು ತಟ್ಟಿದ್ದರು. ತಕ್ಷಣಕ್ಕೆ ಬಾಗಿಲು ತೆಗೆಯದೇ ಇದ್ದುದರಿಂದ ನಿದ್ರಿಸುತ್ತಿರಬಹುದೆಂದು ಸಚಿವರು ಭಾವಿಸಿದ್ದರು. ನಂತರವೂ ಬಾಗಿಲು ತೆಗೆಯದೇ ಇದ್ದುದರಿಂದ ಕೂಡಲೇ ಹೊಟೇಲ್ ಆಡಳಿತ ವರ್ಗ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅಂತಿಮವಾಗಿ ಸ್ಯೂಟ್ನ ಬಾಗಿಲು ತೆಗೆದಾಗ ಸುನಂದಾ ಮೃತದೇಹ ಪತ್ತೆಯಾಯಿತು. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಡ ರಾತ್ರಿ ಕೇಂದ್ರ ಸಚಿವ ಶಶಿ ತರೂರ್ ಅವರನ್ನು ವಿಚಾರಣೆಗೆ ಒಳಪಡಿಸಿದರು.
ವಿಧಿ ವಿಜ್ಞಾನ ತಜ್ಞರ ಭೇಟಿ: ಸುದ್ದಿ ತಿಳಿಯುತ್ತಿದ್ದಂತೆ ದೆಹಲಿ ಪೊಲೀಸರು ವಿಧಿವಿಜ್ಞಾನ ತಜ್ಞರರೊಂದಿಗೆ ಲೀಲಾ ಪ್ಯಾಲೇಸ್ ಹೊಟೇಲ್ನತ್ತ ಧಾವಿಸಿದರು. ಸುನಂದಾ ಮೃತ ದೇಹವನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಕಳುಹಿಸಲಾಗಿದೆ.
2 ಸ್ಯೂಟ್ ಕಾಯ್ದಿರಿಸಿದ್ದರು: ತರೂರ್ ಅವರ ನಿವಾಸದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಟೇಲ್ನಲ್ಲಿ 2 ಪ್ರತ್ಯೇಕ ಸ್ಯೂಟ್ ಕಾಯ್ದಿರಿಸಿದ್ದರು. ಹೀಗಾಗಿ ಗುರುವಾರ ರಾತ್ರಿಯಿಂದಲೇ ದಂಪತಿ ಇದ್ದರು. ಆದರೆ ಮತ್ತೊಂದು ಮೂಲದ ಪ್ರಕಾರ ಮನೆಯಲ್ಲಿ ಅಂಥ ಯಾವುದೇ ಕೆಲಸ ನಡೆಯುತ್ತಿರಲಿಲ್ಲ ಎನ್ನಲಾಗಿದೆ. ಇನ್ನೊಂದು ಸ್ಯೂಟ್ ಅನ್ನು ಯಾಕೆ ಕಾಯ್ದಿರಿಸಿದ್ದರು ಎಂಬ ವಿಚಾರ ಇನ್ನೂ ಗೊತ್ತಾಗಿಲ್ಲ.
ಆವರಣದಲ್ಲಿ ಕಾಣಿಸಿಕೊಂಡಿದ್ದರು: ಸುನಂದಾ ಪುಷ್ಕರ್ ಹೊಟೇಲ್ ಆವರಣದಲ್ಲಿ ಶುಕ್ರವಾರ ಇಳಿ ಹಗಲು 3.30ಕ್ಕೆ ಕಾಣಿಸಿಕೊಂಡಿದ್ದರು. ಇದಾದ ನಂತರ ಅವರು ತಮ್ಮ ಸ್ಯೂಟ್ಗೆ ತೆರಳಿದ್ದರು.
ಮ್ಯಾಜಿಸ್ಟ್ರೇಟ್ರಿಂದ ತನಿಖೆ: ಮದುವೆಯಾಗಿ ಏಳು ವರ್ಷಗಳ ಮೊದಲೇ ಪತ್ನಿ ಸಾವನ್ನಪ್ಪಿದ್ದರಿಂದ ಪ್ರಕರಣವನ್ನು ಸಬ್-ಡಿವಿಷನಲ್ ಮ್ಯಾಜಿಸ್ಟ್ರೆಟ್ ತನಿಖೆ ಮಾಡಬೇಕಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಹೊಟೇಲ್ ಸಿಬ್ಬಂದಿಯ ತನಿಖೆ: ಪೊಲೀಸರು ಹೊಟೇಲ್ನ ಎಲ್ಲ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಿದರು. ಜತೆಗೆ ಸಿಸಿಟಿವಿಯ ದೃಶ್ಯಾವಳಿಯನ್ನೂ ಪರೀಕ್ಷಿಸಲು ನಿರ್ಧರಿಸಿದ್ದಾರೆ.
ಆತ್ಮಹತ್ಯೆಯೋ? ಕೊಲೆಯೋ?
ಪಾಕ್ ಪತ್ರಕರ್ತೆ ಮೆಹರ್ ತರಾರ್ ಜತೆಗಿನ ಗಲಾಟೆ ನಡೆದ ಮಾರನೇ ದಿನವೇ ಸುನಂದಾ ಸಾವಿಗೀಡಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ತರಾರ್ ಅವರನ್ನು ಐಎಸ್ಐ ಏಜೆಂಟ್ ಎಂದು ಸುನಂದಾ ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಪತ್ನಿಯನ್ನು ಕೊಲೆ ಮಾಡಿರಬಹುದೇ ಎಂಬ ಸಂಶಯಗಳು ವ್ಯಕ್ತವಾಗಿದೆ. ಇಂಥ ವಾದಕ್ಕೆ ಪುಷ್ಟಿ ನೀಡುವಂಥ ವಿಚಾರಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗುತ್ತಿದೆ. ಪೊಲೀಸರು ಬಾಯಿಬಿಡುತ್ತಿಲ್ಲ.
ಆಘಾತವಾಗಿದೆ
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಮೆಹರ್ ತರಾರ್ 'ನನಗೆ ಆಘಾತವಾಗಿದೆ' ಎಂದಿದ್ದಾರೆ. ಇದೆಂಥಾ ಸುದ್ದಿ? ಸುನಂದಾ. ಓ ಮೈ ಗಾಡ್' ಎಂದು ಟ್ವೀಟ್ ಮಾಡಿದ್ದಾರೆ. ಇದು ನಿಜಕ್ಕೂ ದುಃಖದಾಯದಾಯಕ ವಿಚಾರ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


