ಪಾತಕಿಗಳಿಗೆ ಬಿದ್ದಿಲ್ಲ ಪಾತಾಳಗರಡಿ, ಹೊಡೆದುರುಳಿಸಲು ಪೊಲೀಸರು ಇನ್ನೂ ಆಗಿಲ್ಲ ರೆಡಿ, ಜನ ದಂಗಾಗಿದ್ದಾರೆ ನೋಡಿ!
ಗುಲ್ಬರ್ಗ: ಗುಲ್ಬರ್ಗ ಪಾತಕಿಗಳ ಸುರಕ್ಷಿತ ಅಡಗುದಾಣವಾಗುತ್ತಿದೆಯೆ?
ಜ.8ರಂದು ನಡೆದ ಪಾತಕಿ ಮುನ್ನಾ ಶೂಟೌಟ್ ಪ್ರಕರಣ ಹುಟ್ಟು ಹಾಕಿರುವ ಗಂಭೀರ ಪ್ರಶ್ನೆ ಇದು.
ಶೂಟೌಟ್ನಲ್ಲಿ 2 ಗುಂಡು ಪಿಎಸ್ಐ ಬಂಡೆ ತಲೆ ಹೊಕ್ಕಾದ ಮೇಲಷ್ಟೇ ಮುನ್ನಾ ಅದೆಂಥ ನಟೋರಿಯಸ್ ಎಂದು ಅಧಿಕಾರಿಗಳಿಗೆ ಗೊತ್ತಾಗಿದ್ದು ಎಂಬಂಶವೇ ಇಲ್ಲಿನ ಖಾಕಿಪಡೆ ಪಾತಕಿಗಳ ಚಲನವಲನದ ಮೇಲೆ ಅದ್ಹೇಗೆ ನಿಗಾ ಇಡುತ್ತಿದೆ ಎಂಬುದಕ್ಕೆ ಸಾಕ್ಷಿ. ಒಂದು ಕಾಲದಲ್ಲಿ ಸಿಮಿ ಸಂಘಟನೆ ಕ್ರಿಯಾಶೀಲವಾಗಿದ್ದು ಗುಲ್ಬರ್ಗದಲ್ಲಿಯೇ. ಹೈದರಾಬಾದ್ನ ಸಮ್ಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ, ವಿಚಾರಣೆ ಎದುರಿಸಿದವರಲ್ಲಿ ಅನೇಕರು ಕೇರಾಫ್ ಗುಲ್ಬರ್ಗ.
2006ರಲ್ಲಿ ಲಷ್ಕರ್-ಎ-ತೋಯ್ಬಾ ಸಂಘಟನೆಯ ಉಗ್ರ ಶಮೀಮ್ ಅಹ್ಮದ್ (ಗೋವಾ ಮೂಲ) ಬಂಧಿತನಾಗಿದ್ದು ಗುಲ್ಬರ್ಗ ರೈಲು ನಿಲ್ದಾಣದಲ್ಲಿಯೇ. ಇಲ್ಲಿನ ಜಿಲಾನಾಬಾದ್ ಪ್ರದೇಶದಲ್ಲಿ ಮನೆ ಮಾಡಿಕೊಂಡಿದ್ದ ಶಮೀಮ್ ಮೇಲೆ ಜಿಹಾದ್ಗೆ ಪ್ರೇರಣೆ ನೀಡುತ್ತಿದ್ದ ಎಂಬ ಆರೋಪವಿತ್ತು.
ಸುರಕ್ಷಿತ ಅಡಗುದಾಣ: ಮುಂಬೈ-ಚೆನ್ನೈ ಬ್ರಾಡ್ಗೇಜ್ ರೈಲು ಮಾರ್ಗದಲ್ಲಿರುವ ಗುಲ್ಬರ್ಗಕ್ಕೆ ದೇಶದ ಯಾವುದೇ ಮೂಲೆಯಿಂದಲೂ ಸಂಪರ್ಕ ಸುಲಭ. ಹೀಗಾಗಿ ಪಾತಕಿಗಳು ಎಲ್ಲೆಲ್ಲೋ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡು ಇಲ್ಲಿಗೆ ಬರುತ್ತಾರೆ.
8 ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ಪಾಕಿಸ್ತಾನ ಮೂಲದ ಲಷ್ಕರ-ಎ-ತೋಯ್ಬಾ ಉಗ್ರ ಸೆರೆ ಸಿಕ್ಕಾಗ ಎಕೆ-47 ಬಂದೂಕು, 2 ಹ್ಯಾಂಡ್ ಗ್ರೆನೇಡ್, ನಾರಾಯಣಪುರ ಅಣೆಕಟ್ಟೆ ಸೇರಿದಂತೆ ಗುಲ್ಬರ್ಗ, ಯಾದಗಿರಿ ಸುತ್ತಲಿರುವ ಅಣೆಕಟ್ಟೆ, ಮಹತ್ವದ ಸ್ಥಳಗಳ ನಕಾಶೆಗಳು ದೊರಕಿದ್ದವು.
ಇದೀಗ 1998ರಲ್ಲಿ ಮುಂಬೈ ಪೊಲೀಸರು ಗಡಿಪಾರು ಮಾಡಿದ್ದ ಪಾತಕಿ ಮುನ್ನಾ ಗುಲ್ಬರ್ಗದಲ್ಲಿ ಬಂದು ನೆಲೆನಿಂತಿದ್ದ. ಇಲ್ಲಿಯೂ ಕೊಲೆ, ಸುಲಿಗೆಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತನ್ನ ಪಾತಕ ಲೋಕದ ಚಟುವಟಿಕೆಗಳನ್ನು ಗುಲ್ಬರ್ಗ, ರಾಯಚೂರು, ಯಾದಗಿರಿಗೂ ವಿಸ್ತರಿಸಿದ್ದ.
ಮುನ್ನಾನ ಸಮಾಜ ವಿರೋಧಿ ಚಟುವಟಿಕೆಗಳ ಬಗ್ಗೆ ದಶಕದ ಹಿಂದೆಯೇ ಇಲ್ಲಿನ ರೋಜಾದಲ್ಲಿದ್ದ ಪಿಎಸ್ಐ ಸುಧೀರ ಹೆಗಡೆ ತಂಡ ದಾಖಲಿಸಿತ್ತು. ಆದರೂ ಮುನ್ನಾ ಸಹಚರರ ಬಗ್ಗೆ ನಿಗಾ ಇಟ್ಟವರೇ ಇಲ್ಲ. ಅದಕ್ಕೆ ಈತನಿಂದ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟರೂ ಆತನ ತಂಡದ ಬಗ್ಗೆ ಪೊಲೀಸರಿಗೆ ಮಾಹಿತಿ ಕಲೆ ಹಾಕುವುದು ಕಬ್ಬಿಣದ ಕಡಲೆಯಂತಾಗಿದೆ.
ನಿಗಾ ಇಡುವಲ್ಲೇ ಎಡವಿದರೆ ಹೇಗೆ?: ಪೊಲೀಸ್ ಮ್ಯಾನುಯಲ್ ಪ್ರಕಾರ ಅಪರಾಧಿಗಳು ಖುಲಾಸೆಗೊಂಡು ಜೈಲಿಂದ ಹೊರಬಂದ ಮೇಲೆ ಅವರ ಚಲನವಲನಗಳ ಮೇಲೆ ನಿಗಾ ಇಡಲೇಬೇಕು. ಈ ಕೆಲಸ ಆಯಾ ಠಾಣೆಗಳ ವ್ಯಾಪ್ತಿಯಲ್ಲಿರುವ ಬೀಟ್ ಪೊಲೀಸರು ನಿರ್ವಹಿಸಬೇಕು. ಠಾಣಾಧಿಕಾರಿಗಳು ಇಂಥ ಬೀಟ್ ಪೊಲೀಸರಿಗೆ ತಮ್ಮ ವ್ಯಾಪ್ತಿಯಲ್ಲಿರುವ ನಟೋರಿಯಸ್ ಗೂಂಡಾಗಳು, ರೌಡಿಗಳ ಬಗ್ಗೆ ಮಾಹಿತಿಯನ್ನು ಕಾಲಕಾಲಕ್ಕೆ ಒದಗಿಸುತ್ತ ಅವರ ಈಗಿನ ಚಲನವಲನಗಳನ್ನು ದಾಖಲಿಸುತ್ತಿರಲೇಬೇಕು.
ಆದರೆ ಪೊಲೀಸ್ ಅತ್ಯಂತ ಮುತುವರ್ಜಿಯಿಂದ ಮಾಡಬೇಕಾದ ಕೆಲಸವೇ ಇಲ್ಲಿ ಸ್ಥಗಿತಗೊಂಡಿದೆ. ಸ್ಥಳೀಯ ಪೊಲೀಸರೂ ರೌಡಿಗಳ ಬಗ್ಗೆ ಮೃದು ಧೋರಣೆ ತಾಳುತ್ತಿರುವಂತೆ ಕಾಣುತ್ತಿದೆ. ರೌಡಿ ಶೀಟರ್ಗಳು, ಪಾತಕಿಗಳ ಮೇಲೆ ನಿಗಾ ಇಡುವಲ್ಲಿ ಪೊಲೀಸರ ನಿರಾಸಕ್ತಿಯೇ ಇಂದು ಪಾತಕಿಗಳ ಪಾಲಿಗೆ ಗುಲ್ಬರ್ಗ 'ಸೇಫ್ಸಿಟಿ' ಆಗುತ್ತಿದೆ.
ಗುಲ್ಬರ್ಗ ನಗರ ಹಾಗೂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ, ಸಾಗಾಣಿಕೆಯಂಥ ಕುಕೃತ್ಯಗಳು ನಡೆಯುತ್ತಿವೆ. ಇಷ್ಟಿದ್ದರೂ ಇಲ್ಲಿನ ಖಾಕಿ ಪಡೆ ಇವೆಲ್ಲ ಮಾಮೂಲು ಎಂಬಂತೆ ಸುಮ್ಮನಿದೆ. ಇದು ಗುಲ್ಬರ್ಗ ಸಾರ್ವಜನಿಕರ ಸುರಕ್ಷತೆಯನ್ನೇ ಅಪಾಯಕ್ಕೆ ತಳ್ಳಿದಂತಾಗಿದೆ.
ಕುಖ್ಯಾತ ಪಾತಕಿಗಳು, ಗಡಿಪಾರಾಗಿ ಬಂದವರು ಗುಲ್ಬರ್ಗದಲ್ಲಿ ಠಿಕಾಣಿ ಹೂಡುತ್ತಿದ್ದಾರೆ. ಇಲ್ಲಿಯೂ ಪಾತಕ ಕೆಲಸಗಳನ್ನೇ ಮಾಡಿ ಖುಲಾಸೆಯಾಗುತ್ತಿದ್ದಾರೆ. ಇಲ್ಲಿಗೆ ದಕ್ಷ ಪೊಲೀಸ್ ಅಧಿಕಾರಿಗಳ ನೇಮಕ ಹಾಗೂ ಗಂಭೀರ ಪೊಲೀಸಿಂಗ್ ವ್ಯವಸ್ಥೆಯ ಅಗತ್ಯವಿದೆ.
- ಎಸ್.ಕೆ.ಕಾಂತಾ, ಮಾಜಿ ಸಚಿವರು, ಗುಲ್ಬರ್ಗ
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

