'ಆಧಾರ್' ಇದರ ಅಗತ್ಯತೆ ಭವಿಷ್ಯದಲ್ಲಿ ತಿಳಿಯುತ್ತೆ: ನಂದನ್ ನೀಲೇಕಣಿ

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜ.24-
ಆಧಾರ್ ಜಾರಿ ವಿಚಾರದಲ್ಲಿ ನಾನು ಸಾರ್ವಜನಿಕ ಚರ್ಚೆಯಿಂದ ತಪ್ಪಿಸಿಕೊಳ್ಳುತ್ತಿಲ್ಲ. ದೇಶಕ್ಕೆ ಆಧಾರ್ ಅಗತ್ಯ ಎಷ್ಟಿದೆ ಎಂಬುದು ಭವಿಷ್ಯದಲ್ಲಿ ಗೊತ್ತಾಗುತ್ತದೆ ಎಂದು ವಿಶಿಷ್ಟ ಗುರುತಿನ ಪತ್ರ ಪ್ರಾಧಿಕಾರದ ಅಧ್ಯಕ್ಷ ನಂದನ್ ನೀಲೇಕಣಿ ಹೇಳಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ. ಆಧಾರ್ ಯೋಜನೆ ಸಂಬಂಧ ಇತ್ತೀಚಿನ ದಿನಗಳಲ್ಲಿ ಹಲವು ಟೀಕೆಗಳು ಕೇಳಿ ಬರುತ್ತಿವೆ. ಇವೆಲ್ಲಕ್ಕೂ ನಾವು ಸೂಕ್ತ ವೇದಿಕೆಯಲ್ಲಿ ಉತ್ತರವನ್ನೂ ನೀಡಿದ್ದೇವೆ. ಆದರೆ ನಾಲ್ಕೂವರೆ ವರ್ಷದ ನಂತರ ಆಧಾರ್ನ ಕಾರ್ಯಸಾಧ್ಯತೆ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಆಧಾರ್ ಆರಂಭಿಸುವುದಕ್ಕೆ ಮುನ್ನ ಕಾರ್ಯ ಸಾಧ್ಯತೆ ಅಧ್ಯಯನ ಕೈಗೊಂಡಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಏಕೆಂದರೆ ನಾಲ್ಕೂ ಮುಕ್ಕಾಲು ವರ್ಷದಲ್ಲಿ ನಾವು 56 ಕೋಟಿ ಜನರಿಗೆ ಆಧಾರ್ ಕಾರ್ಡ್ ನೀಡಿದ್ದೇವೆ. ಕಾರ್ಯ ಸಾಧ್ಯತೆ ಆಗುವುದಿಲ್ಲ ಎಂದು ಟೀಕೆ ಮಾಡುವವರಿಗೆ ಇಷ್ಟೊಂದು ಪ್ರಮಾಣದಲ್ಲಿ ಕಾರ್ಡ್ ವಿತರಣೆ ಮಾಡಿರುವುದೇ ಉತ್ತರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆಧಾರ್ ವಿತರಣೆಯಲ್ಲಿ ತುಸು ವಿಳಂಬವಾಗುತ್ತಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಆ ರೀತಿ ಆರೋಪಿಸುವುದಕ್ಕೆ ಮುನ್ನ ಆಧಾರ್ ಎಂಬುದು ವಿಶ್ವದ ಅತಿ ದೊಡ್ಡ ಮಾಹಿತಿ ಸಂಗ್ರಹಣಾ ಅಭಿಯಾನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. 56 ಕೋಟಿ ಜನರಿಗೆ ಇದುವರೆಗೆ ಕಾರ್ಡ್ ವಿತರಣೆ ಮಾಡಿರುವುದು ಸಣ್ಣ ಸಂಗತಿಯಲ್ಲ ಎಂದರು.
ನಾಗರಿಕತೆ ಪ್ರಶ್ನೆಯಲ್ಲ: ಆಧಾರ್ ಮೂಲಕ ದೇಶದ ನಾಗರಿಕತ್ವವನ್ನು ನಿರ್ಧರಿಸುವ ಪ್ರಯತ್ನವನ್ನು ನಡೆಸುತ್ತಿಲ್ಲ. ಇದು ಗುರುತಿನ ಪ್ರಶ್ನೆ. ನಾಗರಿಕತ್ವವನ್ನು ನಿರ್ಧರಿಸುವ ಅಧಿಕಾರ ಇರುವುದು ಕೇಂದ್ರ ಗೃಹ ಇಲಾಖೆಗೆ ಮಾತ್ರ. ಇದರ ಜತೆಗೆ ವಿದೇಶಿ ಪ್ರಜೆಗಳಿಗೆ ಆಧಾರ್ ನೀಡಲಾಗುತ್ತಿದೆ ಎಂಬ ಆರೋಪದಲ್ಲೂ ಹುರುಳಿಲ್ಲ ಎಂದು ಹೇಳಿದರು. ಆಧಾರ್ನಿಂದ ನಾಗರಿಕರ ಬದುಕು ಉತ್ತಮಗೊಂಡಿದೆ. ಇದರ ಮಹತ್ವವೇನು ಎಂಬುದು ಭವಿಷ್ಯದಲ್ಲಿ ಎಲ್ಲರಿಗೂ ಅರ್ಥವಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಗುರುತಿನ ಪತ್ರ ಇಲ್ಲ ಎಂಬ ಕಾರಣಕ್ಕೆ ಬ್ಯಾಂಕ್ ಪಾಸ್ಬುಕ್ ಪಡೆಯುವುದಕ್ಕೂ ತೊಂದರೆಯಾಗುತ್ತಿತ್ತು. ಆಧಾರ್ನಿಂದ ಇದೆಲ್ಲದಕ್ಕೂ ಪರಿಹಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸೋರಿಕೆ ತಡೆ: ಆಧಾರ್ನ ಮೂಲ ಆಶಯ ಎಂಬುದನ್ನು ಟೀಕಾಕಾರರು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕ ವಿತರಣಾ ಪದ್ಧತಿ ಸೇರಿದಂತೆ ಸುಮಾರು 3000 ಕೋಟಿ ಸಬ್ಸಿಡಿಯನ್ನು ಸರ್ಕಾರ ವಿವಿಧ ಯೋಜನೆಗಳ ಮೂಲಕ ನಾಗರಿಕರಿಗೆ ನೀಡುತ್ತಿದೆ. ಇದನ್ನು ನೈಜ ಫಲಾನುಭವಿಗಳಿಗೆ ತಲುಪಿಸಿ ಸೋರಿಕೆ ತಡೆಯುವುದಕ್ಕೆ ಆಧಾರ್ ಮುಖ್ಯ ಗುರಿ. ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ತಲುಪಿಸುವುದರಿಂದ ಅವ್ಯವಹಾರ ತಡೆಯುವುದಕ್ಕೆ ಸಾಧ್ಯವಿದೆ ಎಂದು ಹೇಳಿದರು.
ಕೋರ್ಟ್ ನಿರ್ಧಾರ: ಎಲ್ಪಿಜಿ ಸಿಲಿಂಡರ್ ವಿತರಣೆಯಲ್ಲಿ ಆಧಾರ್ ಕಡ್ಡಾಯಗೊಳಿಸಬಾರದು ಎಂಬ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿದೆ. ಹೀಗಾಗಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ. ದಯಾನಂದ, ಡಿಸಿಪಿಗಳಾದ ಗಿರೀಶ್, ರಾಜೇಂದ್ರ ಪ್ರಸಾದ್ ಭಾಗವಹಿಸಿದ್ದರು.
ನೈಟ್ ಲೈಫ್ ಅವಧಿ ವಿಸ್ತರಣೆ ಬಗ್ಗೆ ಚರ್ಚೆ
ಬೆಂಗಳೂರಿನಲ್ಲಿ ನೈಟ್ ಲೈಫ್ ಅವಧಿ ವಿಸ್ತರಣೆ ಬಗ್ಗೆ ಗೃಹ ಸಚಿವರ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ವಿಧಾನ ಮಂಡಲದ ಅಧಿವೇಶನ ಬಳಿಕ ಈ ಸಂಬಂಧ ಸಭೆ ನಡೆಸುವುದಾಗಿ ಗೃಹ ಸಚಿವರು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಜನ ಸ್ವಯಂ ಪ್ರೇರಿತರಾಗಿ ಆಧಾರ್ ಪಡೆಯುತ್ತಿದ್ದಾರೆ. ಬಳಸುತ್ತಿದ್ದಾರೆ. ಇದರಿಂದ ನ್ಯಾಯಾಂಗ ನಿಂದನೆಯಾಗುವ ಬಗ್ಗೆ ನಮಗೇನೂ ಗೊತ್ತಿಲ್ಲ. ಆದರೆ ಆಧಾರ್ ನೋಂದಣಿ ಮತ್ತು ವಿತರಿಸುವಂತೆ ನಮ್ಮ ಪ್ರಾಧಿಕಾರದಿಂದಲೇ ಸೂಚನೆ ಇದೆ.
- ರತನ್ ಕೇಳ್ಕರ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಆಧಾರ್ ವಿಭಾಗದ ಮುಖ್ಯಾಧಿಕಾರಿ
ಆಧಾರ್ ಕಡ್ಡಾಯ ಎಂದು ನಾವು ಹೇಳುತ್ತಿಲ್ಲ. ಗ್ರಾಹಕರೇ ಸ್ವಯಂ ಪ್ರೇರಣೆಯಿಂದ ನೀಡುತ್ತಿದ್ದಾರೆ. ನಾವು ಬೇಡ ಎನ್ನಲಾಗುವುದಿಲ್ಲ. ಆದರೆ ಸಿಲಿಂಡರ್ ಸಬ್ಸಿಡಿಗೆ ಸದ್ಯಕ್ಕೆ ಆಧಾರ್ ಕಾರ್ಡ್ ಸೂಕ್ತ.
- ಸತ್ಯನ್, ರಾಜ್ಯ ಅಡುಗೆ ಅನಿಲ ವಿತರಕರ ಒಕ್ಕೂಟದ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


