ಕೊರೆವ ಚಳಿಯಲ್ಲಿ ಹೆರಿಗೆಗೆಂದು ಈಕೆ ನಡೆದಿದ್ದು 45 ಮೈಲು!

ಲಡಾಖ್: -35 ಡಿಗ್ರಿ ಸೆಲ್ಸಿಯಸ್ ತಾಪಮಾನ... ಮೈಮರಗಟ್ಟುವಷ್ಟು ಚಳಿ...
ಇಂಥ ವಾತಾವರಣದಲ್ಲಿ ನಡೆಯುವುದು ಬಿಡಿ, ಮನೆಯಿಂದ ಹೊರಬರಲೂ ಹೆದರಬೇಕು. ಅಂಥದ್ದರಲ್ಲಿ ಈ ತುಂಬು ಗರ್ಭಿಣಿ ಹೆರಿಗೆಗಾಗಿ ಬರೋಬ್ಬರಿ 45 ಮೈಲುಗಳಷ್ಟು ನಡೆದಿದ್ದಾಳೆ. ಕೊರೆಯುವ ಚಳಿಲೆಕ್ಕಿಸದೆ ಆಸ್ಪತ್ರೆಗೆ ನಡೆದೇ ತೆರಳಿ, ತನ್ನ ಕರುಳಿನ ಕುಡಿಗೆ ಜನ್ಮ ನೀಡಿದ್ದಾಳೆ. ಅಲ್ಲಿಗೇ ಮುಗಿದಿಲ್ಲ. ಆ ಹಸುಳೆಯನ್ನು ಹೊತ್ತುಕೊಂಡು ಅದೇ ದಾರಿಯಲ್ಲಿ ನಡೆದೇ ವಾಪಸಾಗಿದ್ದಾಳೆ!
9 ದಿನ ನಡೆದರು: ಅಚ್ಚರಿಯಾದರೂ ಇದು ಸತ್ಯ. ಜಮ್ಮು ಮತ್ತು ಕಾಶ್ಮೀರದ ಲಡಾಖ್‌ನಲ್ಲಿ ಹೆರಿಗೆ ಆಸ್ಪತ್ರೆಗೆಂದು ಬಹುದೂರದ ಲಿಂಗ್ಶೆಡ್‌ಗೆ ತೆರಳಬೇಕಿತ್ತು. ಹಾದಿಯಲ್ಲಿ ಒಂದೆಡೆ ಜಾಂಸ್ಕರ್ ನದಿ(ಸಮುದ್ರಮಟ್ಟದಿಂದ 11,123 ಅಡಿ ಎತ್ತರದಲ್ಲಿದೆ), ಪಕ್ಕದಲ್ಲೇ ಹಿಮಪರ್ವತ. ಹಾಗಾಗಿ ಅಲ್ಲಿ -35 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಹೆರಿಗೆಯಾಗಬೇಕೆಂದರೆ ಆಸ್ಪತ್ರೆಗೆ ತೆರಳಲೇಬೇಕು. ಬೇರೆ ದಾರಿ ಕಾಣದೇ ಕುಟುಂಬವೊಂದು ನಡೆದೇ ತೆರಳಲು ತೀರ್ಮಾನಿಸಿತು. ಅದರಂತೆ, ತಮಗೆ ಬೇಕಾದ ಆಹಾರ ವಸ್ತುಗಳು, ಹೊದಿಕೆ ಮತ್ತಿತರ ವಸ್ತುಗಳನ್ನು ಬೆನ್ನಿಗೇರಿಸಿ ಹೊರಟೇಬಿಟ್ಟಿತು. ರಾತ್ರಿ ವೇಳೆ ಪರ್ವತದ ಗುಹೆಗಳಲ್ಲಿ ತಂಗಿ, ಬೆಳಗಿನ ವೇಳೆ ಪ್ರಯಾಣ ಮುಂದುವರಿಸಿತು. ವಿಶೇಷವೆಂದರೆ, ಅವರ ಜತೆ ಮತ್ತೊಂದು ಪುಟ್ಟ ಮಗುವೂ ಇತ್ತು.
ದಿನಕ್ಕೆ 8 ಗಂಟೆ: ಪ್ರತಿ ದಿನ 8 ಗಂಟೆ ನಡೆಯುತ್ತಾ 9 ದಿನಗಳಲ್ಲಿ 45 ಮೈಲು ದೂರ ಸಾಗಿತು ಕುಟುಂಬ. ಆಸ್ಪತ್ರೆಯಲ್ಲಿ ಹೆರಿಗೆ ಆಗಿ, ನವಜಾತ ಶಿಶುವನ್ನು ಬಾಸ್ಕೆಟ್‌ನಲ್ಲಿಟ್ಟು ಬಂದ ದಾರಿಯಲ್ಲೇ ಹಿಂತಿರುಗಿತು.
ಮಗು ಹೊತ್ತುಕೊಂಡು ವಾಪಸಾಗುತ್ತಿದ್ದ ಕುಟುಂಬದ ಫೋಟೋವನ್ನು ಐಸ್‌ಲ್ಯಾಂಡ್‌ನ ಟಿಮ್ ವೋಲ್ಮರ್ ಸೆರೆಹಿಡಿದಿದ್ದಾರೆ. ಪರ್ವತದಲ್ಲಿ ಟ್ರೆಕಿಂಗ್‌ಗೆಂದು ಬಂದಿದ್ದ ವೋಲ್ಮರ್‌ಗೆ ಈ ಕುಟುಂಬದ ಸ್ಥಿತಿ ನೋಡಿ ಅಚ್ಚರಿಯಾಯಿತಂತೆ. 'ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆಸ್ಪತ್ರೆ, ಹೆರಿಗೆಗೆ ಎಷ್ಟೊಂದು ವ್ಯವಸ್ಥೆಗಳಿವೆ. ಆದರೆ ಇಲ್ಲಿನ ಕುಟುಂಬವು ಹೆರಿಗೆಗಾಗಿ ಈ ಚಳಿಯಲ್ಲಿ, ಪರ್ವತದಲ್ಲಿ ನಡೆದುಕೊಂಡು ಸಾಗುವುದೆಂದರೆ ಸಾಮಾನ್ಯದ ವಿಷಯವೇ? ನನಗೆ ನಂಬಲೇ ಸಾಧ್ಯವಾಗಲಿಲ್ಲ' ಎನ್ನುತ್ತಾರೆ ವೋಲ್ಮರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


