ಗೃಹ ಸಾಲದ ಕಂತಿಗೆ ರೆಪೋ ಬರೆ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಆರ್ಥಿಕ ತಜ್ಞರ ಲೆಕ್ಕಾಚಾರ ತಲೆಕೆಳಗು ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ರೆಪೋ ದರವನ್ನು ಅನಿರೀಕ್ಷಿತವಾಗಿ ಹೆಚ್ಚಿಸಿದೆ.
ಮೂರನೇ ತ್ರೈಮಾಸಿಕ ಸಾಲ ನೀತಿ ಪ್ರಕಟಿಸಿರುವ ಆರ್‌ಬಿಐ ಗೌರ್ನರ್ ರಘುರಾಮ್ ರಾಜನ್ 25 ಅಂಶಗಳಷ್ಟು ರೆಪೋ ದರ (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) ಹೆಚ್ಚಿಸಿದ್ದಾರೆ. ಪ್ರಸ್ತುತ ದರ ಶೇ.8ಕ್ಕೆ ಏರಿದೆ. ರಿವರ್ಸ್ ರೆಪೋ ದರ (ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇಟ್ಟಿರುವ ಹಣಕ್ಕೆ ನೀಡುವ ಬಡ್ಡಿ ದರ) ಶೇ.7ಕ್ಕೆ ಏರಿದೆ. ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ತುರ್ತು ಸಾಲದ (ಎಂಎಸ್‌ಎಫ್) ಮೇಲಿನ ಬಡ್ಡಿದರವನ್ನು ಶೇ.9ರಷ್ಟು ನಿಗದಿ ಮಾಡಲಾಗಿದೆ. ಆದರೆ, ನಗದು ಮೀಸಲು ಪ್ರಮಾಣ (ಸಿಆರ್‌ಆರ್)ಯಾವುದೇ ಬದಲಾವಣೆ ಮಾಡಿಲ್ಲ. ಶೇ.4ರಷ್ಟನ್ನು ಕಾಯ್ದುಕೊಳ್ಳಲಾಗಿದೆ. ರೆಪೋ ದರ ಏರಿಕೆಯಿಂದಾಗಿ ನಿರೀಕ್ಷೆಯಂತೆ ಗೃಹ ಸಾಲ ಸೇರಿ ವಿವಿಧ ಸಾಲದ ಮೇಲಿನ ಬಡ್ಡಿ ದರ ಹೆಚ್ಚಾಗಲಿದೆ. ಈಗಾಗಲೇ ಪಡೆದಿರುವ ಸಾಲದ ಮೇಲಿನ ಇಎಂಐ ಕೂಡಾ ಹೆಚ್ಚಾಗಲಿದೆ.
ಬಡ್ಡಿ ದರವನ್ನು ಗ್ರಾಹಕ ದರ ಹಣದುಬ್ಬರ ಆಧರಿಸಿ ನಿಗದಿ ಮಾಡಬೇಕೆಂಬ ಉರ್ಜಿತ್ ಪಟೇಲ್ ಸಮಿತಿ ಶಿಫಾರಸನ್ನು ಜಾರಿ ಮಾಡಲು ಮುಂದಾಗಿದೆ.
ರಿಸರ್ವ್ ಬ್ಯಾಂಕ್, ಹಣದುಬ್ಬರ ದರ ಎರಡಂಕಿ ದಾಟದಿದ್ದರೂ ಸಹ ರೆಪೊ ದರವನ್ನು ಹೆಚ್ಚಿಸಿದೆ. ಡಿಸೆಂಬರ್‌ನಲ್ಲಿ ಹಣದುಬ್ಬರದ ದರ ಶೇ.9.87ರಷ್ಟಿತ್ತು.
ಉರ್ಜಿತ್ ಪಟೇಲ್ ಸಮಿತಿಯು ಗ್ರಾಹಕ ದರ ಹಣದುಬ್ಬರ ಆಧರಿಸಿ ಸಾಲ ನೀತಿ ರೂಪಿಸವಂತೆ ಆರ್‌ಬಿಐಗೆ ಶಿಫಾರಸು ಮಾಡಿದ್ದು, ದೀರ್ಘಕಾಲದಲ್ಲಿ ಗ್ರಾಹಕದರ ಹಣದುಬ್ಬರವನ್ನು ಶೇ.4ಕ್ಕೆ ತಗ್ಗಿಸುವ ಗುರಿ ನಿಗದಿ ಮಾಡಿದೆ.
2015ಕ್ಕೆ ಶೇ.8 ಮತ್ತು 2016ಕ್ಕೆ ಶೇ.6ಕ್ಕೆ ತಗ್ಗಿಸಲು ಅಲ್ಪಕಾಲೀನ ಗುರಿ ನೀಡಿದೆ.
ಈ ಹಿನ್ನೆಲೆಯಲ್ಲಿ ಬಹುತೇಕ ಆರ್ಥಿಕ ಪಂಡಿತರು ಮೂರನೇ ತ್ರೈಮಾಸಿಕದಲ್ಲಿ ರೆಪೊ ದರ ಯಥಾಸ್ಥಿತಿ(ಶೇ.7.75) ಕಾಯ್ದುಕೊಳ್ಳಲಾಗುತ್ತದೆಂದು ಅಭಿಪ್ರಾಯ ಪಟ್ಟಿದ್ದರು. ಆದರೆ, ಎಲ್ಲರ ನಿರೀಕ್ಷೆ ಮೀರಿ ಹೆಚ್ಚಿಸಲಾಗಿದೆ.
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆ ಶೇ.5ಕ್ಕಿಂತ ಕಡಮೆ ಇರಲಿದೆ. 2014-15ರ ವಿತ್ತೀಯ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಸುಧಾರಿಸಲಿದ್ದು, ಶೇ.5.5ಕ್ಕೆರಲಿದೆ. ಚಾಲ್ತಿ ಖಾತೆ ಕೊರತೆಯು(ಸಿಎಡಿ) ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.2.5ಕ್ಕಿಂತ ಕೆಳಮಟ್ಟದಲ್ಲಿರಲಿದೆ.
ಮಾರ್ಚ್ ಅಂತ್ಯಕ್ಕೆ ಹಣದುಬ್ಬರ ಪ್ರಮಾಣ ಶೇ.8ನ್ನು ಮೀರಲಿದೆ. ದರ ಏರಿಕೆಯಿಂದ ಹಣದುಬ್ಬರ ನಿಯಂತ್ರಣದಲ್ಲಿಡಲು ನಿರೀಕ್ಷಿಸಲಾಗಿದೆ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

