ಎಲ್ಲರಂತಲ್ಲ ಇವರು, ಜನ ಸೆಳೆಯುವವರಲ್ಲ, ಸ್ವಂತ ಊರಲ್ಲಿ ಗೆಲ್ಲುವವರಲ್ಲ... ಇವರೇ ವೀರಪ್ಪ ಮೊಯ್ಲಿ!

ಕನ್ನಡಪ್ರಭ ವಾರ್ತೆ ಬೆಂಗಳೂರು ಜ.29
ರಾಜಕೀಯವಾಗಿ ಪ್ರಖ್ಯಾತರಲ್ಲ. ಪ್ರಮುಖ ಜಾತಿಯವರೂ ಅಲ್ಲ. ಜನರನ್ನು ಸೆಳೆಯುವಂತಹ ಪ್ರಖರ ನಾಯಕರೂ ಅಲ್ಲ.
42ನೇ ವರ್ಷದಲ್ಲಿ ಮುಖ್ಯಮಂತ್ರಿಯಾದವರು ಎಂಬ ಹೆಗ್ಗಳಿಕೆ ಬಿಟ್ಟರೆ, ರಾಜ್ಯದಲ್ಲಿ ಒಬ್ಬ ನಾಯಕರಾಗಿ ಬೆಳಯದ, ತನ್ನ ಹುಟ್ಟೂರಿನ ಕ್ಷೇತ್ರದಲ್ಲಿ ಗೆಲ್ಲಲಾಗದೇ ಕೊನೆಗೆ ಚಿಕ್ಕಬಳ್ಳಾಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬೇಕಾದ ಸ್ಥಿತಿ ತಲುಪಿದ ವೀರಪ್ಪ ಮೊಯಿಲಿ ಅವರು ಕೇಂದ್ರದಲ್ಲಿ ಮಾತ್ರ ಭಾರೀ ಮಹತ್ವದ ಖಾತೆಗಳನ್ನು ಪಡೆದುಕೊಂಡಿದ್ದು, ಯುಪಿಎ 2ನ ಅಚ್ಚರಿಗಳಲ್ಲೊಂದು.
ಮೊದಲೇ ಕರ್ನಾಟಕಕ್ಕೆ ನೀಡಿದ ಸಚಿವ ಸ್ಥಾನ ಹೆಚ್ಚಿತ್ತು. ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡಿಸ್, ಮುನಿಯಪ್ಪ ಅವರು ಸಚಿವರಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 6 ಕಾಂಗ್ರೆಸ್ ಸಂಸದರು. ಅವರಲ್ಲಿ 4 ಸಚಿವರಾದ ನಂತರ ವೀರಪ್ಪ ಮೊಯಿಲಿ ಅವರೂ ಸಚಿವರಾಗಿದ್ದೇ ದೊಡ್ಡ ಅಚ್ಚರಿಗಳಲ್ಲೊಂದು.
ಆದರೆ ಅಚ್ಚರಿಗಳ ಸರಣಿ ಅಲ್ಲಿಗೇ ನಿಲ್ಲಲಿಲ್ಲ. ಅವರು ಕಾನೂನು ಸಚಿವರಾದರು. ದೇಶದ ರಾಜಕೀಯ ವಲಯವೇ ಮೈಚಿವುಟಿ ನೋಡಿಕೊಳ್ಳುವಂತೆ ಪೆಟ್ರೋಲಿಯಂ ಸಚಿವರಾದರು!
ಈಗ ಪರಿಸರ ಇಲಾಖೆ ಹೆಚ್ಚುವರಿ ಜವಾಬ್ದಾರಿಯೂ ಅವರ ಮೇಲಿದೆ.
ಮೊಯ್ಲಿ ಅವರ ಈ ಬೆಳವಣಿಗೆಗೆ ಕೇವಲ ಒಂದೇ ಅಂಶಗಳು ಕಾರಣವಲ್ಲ. ಆದರೆ ಇದೆಲ್ಲದಕ್ಕೂ ಮೂಲ ಮಾತ್ರ ಪ್ರಧಾನಿ ಮನಮೋಹನ ಸಿಂಗ್!
ಎಲ್ಲರೂ ಅಂದುಕೊಂಡಿರುವ ಪ್ರಕಾರ ವೀರಪ್ಪ ಮೊಯಿಲಿ ರಾಹುಲ್ ಗಾಂಧಿಗೆ ಬಹಳ ಹತ್ತಿರ ಎಂದು. ಆದರೆ ಅದಕ್ಕಿಂತ ಅವರು ಮನಮೋಹನ ಸಿಂಗ್ ಅವರಿಗೆ ಹತ್ತಿರ. ಇನ್ನೊಂದು ಅವರು ಹೈಕಮಾಂಡ್ ಹೇಳಿದ್ದನ್ನು ಪ್ರಶ್ನಿಸದೇ ಮಾಡುತ್ತಾರೆ. ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣವೂ ಭರಪೂರವಾಗಿದೆ. ಹೇಳಿದಂತೆ ಕೇಳುವವರು ಯಾರಿಗೆ ಇಷ್ಟವಾಗಲ್ಲ ಹೇಳಿ.
ಇದೇ ಕಾರಣಕ್ಕೆ ಮೊಯ್ಲಿ ಅವರಿಗೆ ಕೇಂದ್ರ ಸಂಪುಟದಲ್ಲಿ ಒಂದಾದ ಮೇಲೊಂದು ಪ್ರಮುಖ ಇಲಾಖೆಗಳು ದೊರೆತಿವೆ. ಆದರೆ ಕೇಂದ್ರದಲ್ಲಿ ಪ್ರಭಾವಿಯಾದಷ್ಟು ರಾಜ್ಯದಲ್ಲಿ ಪ್ರಭಾವಿಯಾಗಲು ಮೊಯ್ಲಿ ಅವರಿಗೆ ಸಾಧ್ಯವಾಗದಿರುವುದು ಕೂಡ ವಿಶೇಷ.
ಮನಮೋಹನ ಸಾಂಗತ್ಯ: ಕೇಂದ್ರದಲ್ಲಿ ಎನ್ಡಿಎ ಅಧಿಕಾರದಲ್ಲಿತ್ತು. ಮೊಯಿಲಿ ಅವರಿಗೆ ಯಾವುದೇ ಅಧಿಕಾರ ಇರಲಿಲ್ಲ. ಈಗ ಪ್ರಧಾನಿಯಾಗಿರುವ ಮನಮೋಹನ ಸಿಂಗ್ ಆಗ ಪ್ರತಿಪಕ್ಷ ನಾಯಕರಾಗಿದ್ದರು.
ಈ ಸಂದರ್ಭದಲ್ಲಿ ವೀರಪ್ಪ ಮೊಯಿಲಿ ಅವರು ದಿಲ್ಲಿಗೆ ಹೋದಾಗೆಲ್ಲ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡುತ್ತಿದ್ದರು. ಮೊಯಿಲಿ ಅವರು ಸ್ವಲ್ಪ ಅರ್ಥಶಾಸ್ತ್ರಜ್ಞರಾಗಿದ್ದರಿಂದ ಇಬ್ಬರೂ ಅರ್ಥಶಾಸ್ತ್ರದ ಚರ್ಚೆ ನಡೆಸುತ್ತಿದ್ದರು ಎಂದು ಅಂದಾಜಿಸಬಹುದು. ಯುಪಿಎ ಅಧಿಕಾರಕ್ಕೆ ಬಂದು ಮನಮೋಹನ ಸಿಂಗ್ ಅವರು ಪ್ರಧಾನಿಯಾಗುತ್ತಿದ್ದಂತೆ ವೀರಪ್ಪ ಮೊಯಿಲಿ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದರು. ಅದು ಮೊಯ್ಲಿ ಪಾಲಿಗೆ ಟರ್ನಿಂಗ್ ಪಾಯಿಂಟ್.
ರಾಹುಲ್ ಇಂಪ್ರೆಸ್: ವರದಿಗಳನ್ನು ತಯಾರಿಸುವುದರಲ್ಲಿ, ಲಿಖಿತ ಸಂವಹನದಲ್ಲಿ ಮೊಯಿಲಿ ಅವರದ್ದು ಎತ್ತಿದ ಕೈ. ಇದರ ಪರಿಣಾಮವಾಗಿಯೇ ಆಡಳಿತ ಸುಧಾರಣಾ ಆಯೋಗದಲ್ಲಿದ್ದಾಗ ವರದಿಗಳನ್ನು ನೀಡಿದರು. ಅವುಗಳಲ್ಲಿ ಎಷ್ಟು ಜಾರಿ ಮಾಡಲು ಸಾಧ್ಯ ಮತ್ತು ಜಾರಿಯಾಗಿವೆ ಎಂಬುದು ಚರ್ಚಾರ್ಹ ಸಂಗತಿ.
ಆದರೆ ಆಗಿನ್ನೂ ರಾಜಕೀಯಕ್ಕೆ ಕಾಲಿಡುತ್ತಿದ್ದ, ವ್ಯವಸ್ಥೆ ಬದಲಾಯಿಸುವ ಕನಸು ಕಾಣುತ್ತಿದ್ದ ರಾಹುಲ್ ಗಾಂಧಿ ಅವರಿಗೆ ವೀರಪ್ಪ ಮೊಯಿಲಿ ಅವರು ನೀಡಿದ ಸಲಹೆಗಳು ಭಾರೀ ಆಶಾಕಿರಣದಂತೆ ಗೋಚರಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಇದು ಮೊಯಿಲಿ- ರಾಹುಲ್ ಸಂಬಂಧ ವೃದ್ಧಿಗೆ ಕಾರಣವಾಯಿತು.
'ಶೇಖರ'ನಿಂದ 'ರಾಜ'ನಾದ!: ಮನಮೋಹನ ಸಿಂಗ್ ಅವರ ಸ್ನೇಹವಷ್ಟೇ ಆಗಿದ್ದರೆ ಬಹುಶಃ ವೀರಪ್ಪ ಮೊಯಿಲಿ ಅವರು ಇಷ್ಟು ಉತ್ತುಂಗಕ್ಕೆ ಏರುತ್ತಿರಲಿಲ್ಲ.
ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು ಆಂಧ್ರಪ್ರದೇಶದ ಪಕ್ಷದ ಉಸ್ತುವಾರಿ ಸ್ಥಾನ. ನಿಜವಾಗಿ ಹೇಳಬೇಕೆಂದರೆ ಅತ್ಯಂತ ಪ್ರಭಾವಿಯಾಗಿದ್ದ, ಹೈಕಮಾಂಡ್ನೊಂದಿಗೆ ನೇರವಾಗಿ ವ್ಯವಹರಿಸುವಷ್ಟು ಆಂಧ್ರಪ್ರದೇಶ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಪ್ರಬಲರಾಗಿದ್ದರು. ಅಂತಹ ಸಂದರ್ಭದಲ್ಲಿ ಪಕ್ಷದ ಉಸ್ತುವಾರಿ ನೆಪ ಮಾತ್ರಕ್ಕೆ ಎಂಬಂತಿತ್ತು. ಅದೇ ಕಾರಣಕ್ಕೆ ವೀರಪ್ಪ ಮೊಯಿಲಿ ಅವರನ್ನು ಆಂಧ್ರಪ್ರದೇಶಕ್ಕೆ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಅದನ್ನೇ ಸುವರ್ಣಾವಕಾಶವೆಂಬಂತೆ ಬಳಸಿಕೊಂಡ ಮೊಯ್ಲಿ, ರಾಜಶೇಖರ ರೆಡ್ಡಿಯೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಿದ್ದಲ್ಲದೆ, ರಾಜಶೇಖರ ರೆಡ್ಡಿಯ ವಿಶ್ವಾಸ ಗಳಿಸಿದರು.
ಅದರ ಪರಿಣಾಮವಾಗಿಯೇ ಮೊಯ್ಲಿಗೆ ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ದೊರೆತಿದ್ದು, ಚುನಾವಣೆಗೆ ಸಹಾಯ ದೊರೆತಿದ್ದು. ರಾಜ್ಯದಲ್ಲಿ ಕೇವಲ 6 ಕಾಂಗ್ರೆಸ್ ಸಂಸದರು ಗೆದ್ದಿದ್ದರೂ, 5ನೇ ಸಚಿವರಾಗಿ ಮೊಯ್ಲಿ ಅವರಿಗೆ ಸ್ಥಾನ ಸಿಕ್ಕಿದ್ದು ಅವರ ಪ್ರಭಾವದಿಂದಲೇ.
ರಿಯಲ್ ರಿಲಯನ್ಸ್!:
ರಾಜಶೇಖರ ರೆಡ್ಡಿ ಸಾವು ಮೊಯಿಲಿ ಪಾಲಿಗೆ ಬರಸಿಡಿಲಾಗಿ ಬಡಿದಿತ್ತು. ಅದಾದ ಕೆಲವೇ ದಿನದಲ್ಲಿ ಮೊಯಿಲಿ ಅವರನ್ನು ಕಾನೂನು ಸಚಿವ ಸ್ಥಾನದಿಂದ ತೆಗೆದು ಅಷ್ಟೇನೂ ಪ್ರಮುಖವಲ್ಲದ ಕಾರ್ಪೊರೇಟ್ ಅಫೇರ್ಸ್ ಸಚಿವರನ್ನಾಗಿ ಮಾಡಿದರು. ಅಲ್ಲಿದ್ದಾಗ ಮೊಯಿಲಿ ರಿಲಯನ್ಸ್ ಸಂಸ್ಥೆ ಮುಖ್ಯಸ್ಥರ ಸಾಮಿಪ್ಯ ಸಾಧಿಸಿದರು. ರಿಲಯನ್ಸ್ ಮುಖ್ಯಸ್ಥರು ಮೊಯಿಲಿ ಅವರ ಬೆಂಗಳೂರು ಮನೆಗೆ ಭೇಟಿಕೊಟ್ಟಿದ್ದರು ಎಂಬ ಸುದ್ದಿಯೂ ಇದೆ. ಅದಕ್ಕೆ ಸರಿಯಾಗಿ ಜಯಪಾಲ ರೆಡ್ಡಿ ಅವರು ಪೆಟ್ಲೋಲಿಯಂ ಖಾತೆಯಲ್ಲಿ ರಿಲಯನ್ಸ್ ಪಾಲಿಗೆ ರಿಯಲ್ ಪ್ರಾಬ್ಲೆಮ್ ಆಗಿದ್ದರು. ಇದರ ನಂತರವೇ ಮೊಯಿಲಿ ಅವರು ಪೆಟ್ರೋಲಿಯಂ ಖಾತೆಗೆ ಕಾಲಿಟ್ಟಿದ್ದು.
3 ವಾರದಲ್ಲಿ 70 ಯೋಜನೆ!:
ಕೇಂದ್ರ ಸರ್ಕಾರ ಪರಿಸರ ಇಲಾಖೆ ಉಸ್ತುವಾರಿಯನ್ನು ವೀರಪ್ಪ ಮೊಯಿಲಿಗೆ ವಹಿಸಲಾದ 3 ವಾರದಲ್ಲಿ 70 ಯೋಜನೆಗಳಿಗೆ ಅನುಮತಿ ನೀಡಿದ್ದು, ಅವರ ಕಾರ್ಯಕ್ಷಮತೆಗೆ ದೊಡ್ಡ ಸಾಕ್ಷಿ!
ಪರಿಸರ ಇಲಾಖೆಯಲ್ಲಿ ಬಾಕಿ ಇರುವ ಎಲ್ಲ ಯೋಜನೆಗಳನ್ನು ಫೆ.15ರೊಳಗೆ ಅಂತಿಮಗೊಳಿಸುವ ಭರವಸೆಯನ್ನು ಸಚಿವರೇ ಖುದ್ದಾಗಿ ಘೋಷಿಸಿದ್ದಾರೆ. ಇದರಲ್ಲಿ ಸುಮಾರು 60 ಕಲ್ಲಿದ್ದಲು ಗಣಿಗಳು ಸೇರಿವೆ. ಇದರರ್ಥ ಮೊಯ್ಲಿ ಅವರನ್ನು ಪರಿಸರ ಇಲಾಖೆಗೆ ನೇಮಿಸಿದ್ದೇ ಬಾಕಿಇರುವ, ಪರಿಸರ ಇಲಾಖೆಯ ತಕರಾರಿರು ಯೋಜನೆಗಳನ್ನು ಚುನಾವಣೆಗೂ ಮುನ್ನ ಅನುಮತಿ ನೀಡಲು ಎಂಬುದು ಸ್ಪಷ್ಟ. ಕಾರ್ಪೊರೇಟ್ ಜಗತ್ತಿನ ಚುನಾವಣಾ ಫಂಡ್ಗಾಗಿ ಈ ಕೆಲಸ ನಡೆಯುತ್ತಿದೆಯೇ ಎಂಬ ಗುಮಾನಿ ಎದ್ದಿದೆ. ಯಾಕೆಂದರೆ ಈ ವರೆಗೆ ಅನುಮತಿ ನೀಡಿರುವ ಯೋಜನೆಗಳ ಮೊತ್ತ 1.50 ಲಕ್ಷ ಕೋಟಿಗಳನ್ನು ದಾಟಿದೆ.
ನಾವು ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಸಚಿವರನ್ನು ಬಯಸುತ್ತೇವೆ ಹೊರತು, ಪರಿಸರ ನಾಶಕ್ಕೆ ಸಹಾಯ ಮಾಡುವ ಸಚಿವರನ್ನಲ್ಲ. ಈವರೆಗಿನ ಅವರ ವರ್ತನೆ ನೋಡಿದರೆ ಪಟ್ಟಭದ್ರಹಿತಾಸಕ್ತಿ ಇರುವಂತೆ ಕಾಣುತ್ತಿದೆ. ಅವರನ್ನು ಶೀಘ್ರವೇ ಬದಲಾಯಿಸಬೇಕು.
-ಗ್ರೀನ್ಪೀಸ್ ಸಂಘಟನೆ
ನಾನು ಆದಷ್ಟು ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುತ್ತೇನೆ.
-ಎಂ.ವೀರಪ್ಪ ಮೊಯಿಲಿ
ಕೇಂದ್ರ ಪೆಟ್ರೋಲಿಯಂ ಮತ್ತು ಪರಿಸರ ಸಚಿವರು
ಮೊಯ್ಲಿ ಅನುಮತಿ ನೀಡಿದ ಪ್ರಮುಖ ಯೋಜನೆಗಳು
ಒಡಿಶಾದಲ್ಲಿ ಪೊಸ್ಕೊ ಸ್ಟೀಲ್ ಪ್ಲ್ಯಾಂಟ್ - ರು 52000 ಕೋಟಿ
ಹರ್ಯಾಣದಲ್ಲಿ ಎನ್ಪಿಸಿಯ 2800 ಮೆಗಾ.ವ್ಯಾ. ವಿದ್ಯುತ್ ಯೋಜನೆ - ರು. 23000 ಕೋಟಿ
ಅರುಣಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆ -ರು. 6000 ಕೋಟಿ
ಹಿಂದುಜಾ ನ್ಯಾಷನಲ್ ಪವರ್ ಕಾರ್ಪೊರೇಶನ್ -ರು. 5545 ಕೋಟಿ
ಭಾಕ್ರಾ ಕಲ್ಲಿದ್ದಲು ಗಣಿ -ರು. 55.48 ಕೋಟಿ
-ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


