ಪ್ರಧಾನ ಸುದ್ದಿ

ಮಕ್ಕಳಿಗೆ 'ಪ್ರೇಮಾಧಿಪತಿ' ಚಿತ್ರ ನೋಡಲು ಬಿಇಒ ಆದೇಶ!

Published On :

ಮಾಲೂರು: ಬೌದ್ಧಿಕ ಮಟ್ಟ ಬೆಳವಣಿಗೆಗೆ ಪೂರಕ ಚಿತ್ರಗಳನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ತೋರಿಸುವುದು ಸಾಮಾನ್ಯ. ಆದರೆ, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಕ್ಕಳಿಗೆ ಇದು ಅನ್ವಯ ಆದಂತೆ ಕಾಣುತ್ತಿಲ್ಲ. ಕಾರಣ, ಈ ತಾಲೂಕಿನ ಮಕ್ಕಳಿಗೆ ಪ್ರೇಮ ಸಂದೇಶ ಇರುವ ಚಿತ್ರ ತೋರಿಸುವಂತೆ ಬಿಇಒ ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಡಿಡಿಪಿಐ ಕೂಡ ಅಧಿಕೃತ ಆದೇಶದ ಮುದ್ರೆ ಒತ್ತಿದ್ದಾರೆ.
ಹೌದು. ಕಳೆದ ತಿಂಗಳು ರಾಜ್ಯಾದ್ಯಂತ ಬಿಡುಗಡೆಯಾದ, ಪ್ರೇಮ ಸಂದೇಶ ಇರುವ 'ಪ್ರೇಮಾಧಿಪತಿ' ಎಂಬ ಚಿತ್ರವನ್ನು ಕಡ್ಡಾಯವಾಗಿ ನೋಡಬೇಕೆಂದು ಮಾಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣ್ಯ ಅವರು ತಾಲೂಕಿನ ಎಲ್ಲ ಶಾಲೆಗಳಿಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ಮಕ್ಕಳಿಂದ ಈ ಚಿತ್ರಕ್ಕಾಗಿ 20 ಸಂಗ್ರಹಿಸುವಂತೆಯೂ ಆದೇಶದಲ್ಲಿ ಹೇಳಿದ್ದಾರೆ ಬಿಇಒ.
ಡಿಡಿಪಿಐಯಿಂದಲೂ ಅನುಮತಿ: ಪ್ರೇಮಾಧಿಪತಿ ಚಿತ್ರ ವಿದ್ಯಾರ್ಥಿಗಳಿಗೆ ತೋರಿಸಬೇಕೆಂಬ ಬಿಇಒ ನೀಡಿರುವ ಆದೇಶಕ್ಕೆ ಡಿಡಿಪಿಐ ಕೂಡ ಅನುಮತಿ ನೀಡಿದ್ದಾರೆ. ತಾಲೂಕಿನ ಶಾಲಾ ಮಕ್ಕಳಿಗೆ ಪ್ರೇಮಾಧಿಪತಿ ಚಿತ್ರವನ್ನು ತೋರಿಸಲು ಅವಕಾಶ ನೀಡಬೇಕೆಂದು ಕೋರಿ (ಸಂಖ್ಯೆ ಇ-393-ಚಲನಚಿತ್ರ ಪ.ಅನು-16-2013-14) ಬಿಇಒ ಸುಬ್ರಮಣ್ಯ ಅವರು ಉಪನಿರ್ದೇಶಕರಿಂದ ಕೇಳಿದ್ದಾರೆ. ಪ್ರೇಮಾಧಿಪತಿ ಚಿತ್ರದಲ್ಲಿ ಮಕ್ಕಳು ಮಕ್ಕಳಿಗೆ ಸಹಾಯ ಮಾಡುವುದು, ಹೆಣ್ಣು ಶಿಶು ಭ್ರೂಣ ಹತ್ಯೆ ನಿರ್ಮೂಲನೆ, ಅನಾಥ ಮಕ್ಕಳ ಸಂರಕ್ಷಣೆ, ಹೆಣ್ಣಿಗೆ ಸ್ಥಾನಮಾನ ನೀಡುವುದು ಒಳಗೊಂಡಿದೆ ಎಂದು ತಿಳಿಸಿ ಉಪನಿರ್ದೇಶಕರಿಂದ ಅನುಮತಿ (ಸಂಖ್ಯೆ ಆ3-835-ಚಲನಚಿತ್ರ-09-2013-14) ಪಡೆದಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ಮಕ್ಕಳಿಂದ 20 ಸಂಗ್ರಹಿಸುವಂತೆಯೂ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಇದಕ್ಕಿಂತ ಮುಖ್ಯವಾಗಿ ಮಾಲೂರು ತಾಲೂಕಿನಲ್ಲಿ ಮಾತ್ರ ಇಂತಹ ಆದೇಶವಿದೆ. ಇದಕ್ಕೆ ಮುಖ್ಯ ಕಾರಣ, ಮಾಲೂರಿನ ತಾಲೂಕಿನ ದೊಡ್ಡದಾವಣಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್.ನಾರಾಯಣಸ್ವಾಮಿ ಅವರೇ ಈ 'ಪ್ರೇಮಾಧಿಪತಿ' ಚಿತ್ರದ ನಾಯಕನಾಗಿರುವುದು!
ಅನುಮತಿ ಕೊಟ್ಟವರನ್ನು ಕೇಳಿಕೊಳ್ಳಿ: ಈ ಕುರಿತು ಕನ್ನಡಪ್ರಭ ಬಿಇಒ ಸುಬ್ರಮಣ್ಯ ಅವರನ್ನು ಪ್ರಶ್ನಿಸಿದಾಗ, 'ಚಲನಚಿತ್ರ ಪ್ರೇಮಾಧಿಪತಿಯನ್ನು ನೋಡುವುದು ಮಕ್ಕಳಿಗೆ ಕಡ್ಡಾಯ ಮಾಡಿಲ್ಲ. ಇಷ್ಟಪಟ್ಟು ಮಕ್ಕಳು ಮಾತ್ರ ನೋಡಬಹುದು. ಚಿತ್ರ ತಯಾರಿಸಿರುವ ನಾರಾಯಣಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿದ್ದೇನೆ. ನೀವು ಪ್ರಶ್ನಿಸುವುದಾದರೆ, ಅನುಮತಿ ನೀಡಿರುವ ಡಿಡಿಪಿಐ ಅವರನ್ನೇ ವಿಚಾರಿಸಿಕೊಳ್ಳಿ' ಎಂದಿದ್ದಾರೆ.
ವ್ಯಾಪಕ ಖಂಡನೆ: ಬಿಇಒ ಅವರ ಈ ವರ್ತನೆ ವಿರುದ್ಧ ಹಲವಾರು ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕರವೇಯ ಮಂಜುನಾಥ್ ಗೌಡ ಅವರು ಬಿಇಒ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಸಂಸ್ಕಾರ ಬೆಳೆಸುವ, ಸಂಸ್ಕೃತಿ ತಿಳಿಸುವ ಮಕ್ಕಳ ಜ್ಞಾನಾರ್ಜನೆಗೆ ಸಹಕಾರಿಯಾಗುವಂತಹ ಚಿತ್ರಗಳನ್ನು ವೀಕ್ಷಿಸಲು ಮಕ್ಕಳಿಗೆ ಅನುವು ಮಾಡಿಕೊಡಬೇಕಾದ ಶಿಕ್ಷಣಾಧಿಕಾರಿಗಳು ಈ ರೀತಿ ಆದೇಶಿಸಿರುವುದು ಖಂಡನೀಯ.
- ಸಿ.ಲಕ್ಷ್ಮಿನಾರಾಯಣ್, ಪುರಸಭೆ ಸದಸ್ಯ, ಕೇಂದ್ರ ಕೃಷಿ ಮಂಡಳಿ ಸದಸ್ಯ

ತಮ್ಮ ಇಲಾಖೆಯ ಶಿಕ್ಷಕನ ನಟನೆ ಚಲನಚಿತ್ರ ಎಂಬ ಕಾರಣಕ್ಕೆ ಆ ಶಿಕ್ಷಕನ ಹಿತಕಾಯಲು ಇಡೀ ತಾಲೂಕಿನ ಮಕ್ಕಳನ್ನು ಕೆಟ್ಟ ಚಿತ್ರ ವೀಕ್ಷಣೆ ಮೂಲಕ ಹಾಳು ಮಾಡುತ್ತಿರುವ ಇಲ್ಲಿನ ಬಿಇಓ, ಅನುಮತಿ ನೀಡುವ ಮೊದಲು ಚಿತ್ರ ವೀಕ್ಷಿಸಬೇಕಾಗಿತ್ತು.
- ರಘುರಾಮ್ ರೆಡ್ಡಿ, ಪೋಷಕರು

ರಾಜೇಂದ್ರ ವೈದ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.