ಪ್ರಧಾನ ಸುದ್ದಿ

ಬಡತನದ ನೆಪವೊಡ್ಡಿ ಹಸುಗೂಸು ಮಾರಾಟ ಮಾಡಿದ ಮೈಗಳ್ಳ ತಂದೆ!

Published On :

ಚಿತ್ರದುರ್ಗ, ಜ.31
ಮೈಗಳ್ಳ ತಂದೆಯೊಬ್ಬ ಬಡತನ ನೆಪವೊಡ್ಡಿ ತನ್ನ ತನ್ನ 14 ದಿನಗಳ ಹಸುಗೂಸನ್ನು ಮಾರಾಟ ಮಾಡಿದ್ದಾನೆ. ಇನ್ನೂ ಆಶ್ಚರ್ಯದ ಸಂಗತಿ ಎಂದರೆ, ಒಂದು ವರ್ಷದ ಹಿಂದೆ ತನ್ನ ಮೊದಲ ಹೆಣ್ಣು ಮಗುವನ್ನು ಕೂಡಾ 3 ಸಾವಿರಕ್ಕೆ ಮಾರಾಟ ಮಾಡಿದ್ದ!
ಹಸುಗೂಸು ಮಾರಾಟ ಮಾಡಿರುವ ಈ ತಂದೆ ಪೊಲೀಸರ ಅತಿಥಿಯಾಗಿದ್ದಾನೆ. ಅಂದ ಹಾಗೆ, ಪೋಲಿಯೊ ಹನಿ ಹಾಕುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯ ಪ್ರಯತ್ನದಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ ಪಂಡರಹಳ್ಳಿಯ ಓಂಕಾರಪ್ಪ ಎಂಬಾತನೇ ತನ್ನ ಮಗುವನ್ನು ಮಾರಾಟ ಮಾಡಿದವ. 2 ಎಕರೆ ಜಮೀನಿದೆಯಾದರೂ ಮೈ ಮುರಿದು ಕೆಲಸ ಮಾಡದ ಮೈಗಳ್ಳ. ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಮೊದಲ ಹೆಂಡತಿಯಿಯನ್ನು ದೂರ ಮಾಡಿದ್ದ. 2 ವರ್ಷದ ಹಿಂದೆ ಯಶೋಧಳನ್ನು ಪುಸಲಾಯಿಸಿ ಮನೆಗೆ ಕರೆದೊಯ್ದು ಸಂಸಾರ ಹೂಡಿದ್ದ. ಪರಿಣಾಮ 1 ವರ್ಷದ ಹಿಂದಷ್ಟೇ ಭೈರವಿ ಎಂಬ ಹೆಣ್ಣು ಮಗು ಜನಿಸಿದೆ. ಆ ಮಗುವನ್ನು 3 ಸಾವಿರಕ್ಕೆ ಮಾರಾಟ ಮಾಡಿದ್ದ. ವಿಷಯ ತಿಳಿದ ಗ್ರಾಮಸ್ಥರು ಪಂಚಾಯಿತಿ ಮಾಡಿ ಮಗುವನ್ನು ವಾಪಸ್ ಕೊಡಿಸಿದ್ದರು.
ಘಟನೆ ವಿವರ: ಪಂಡರಹಳ್ಳಿಯಲ್ಲಿ ಓಂಕಾರಪ್ಪನ ಎರಡನೇ ಹೆಂಡತಿ ಎಂದು ಹೇಳಿಕೊಳ್ಳುವ ಯಶೋದ ಗರ್ಭಿಣಿಯಾಗಿದ್ದಾಗ ಆಕೆಯ ತಪಾಸಣೆಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕೊಡಿಸಿದ್ದರು. ನಗರದಲ್ಲಿ ಜ. 19ರಂದು ಮಕ್ಕಳಿಗೆ ಮನೆ ಮನೆಗೆ ತೆರಳಿ ಪೋಲಿಯೊ ಹನಿ ಹಾಕುವ ಕಾರ್ಯ ನಡೆದಿತ್ತು. ಮನೆಯಲ್ಲಿ ಮಗು ಇಲ್ಲದಿರುವುದನ್ನು ಕಂಡು ವಿಚಾರಣೆ ನಡೆಸಿದ್ದಾರೆ. ಪೋಷಕರಿಂದ ಸರಿಯಾದ ಉತ್ತರ ಬರದಿದ್ದಾಗ ಅವರು ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದರು. ಪೊಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಮಗುವನ್ನು ಮಾರಾಟ ಮಾಡಿದ್ದೇಕೆ ಎಂದು ಓಂಕಾರಪ್ಪನನ್ನು ಕೇಳಿದರೆ ತಾವು ಬಡವರು, ಮಗುವನ್ನು ಸಾಕಲು ಶಕ್ತಿಯಿಲ್ಲ. ಆದ್ದರಿಂದ ಬೇರೊಬ್ಬರಿಗೆ ದತ್ತು ನೀಡಿರುವುದಾಗಿ ಹೇಳುತ್ತಾನೆ. ಈ ಮಗವನ್ನು ಚಿತ್ರದುರ್ಗದ ಬ್ಯಾಂಕ್ ಕಾಲೋನಿ ನಿವಾಸಿ ಪಿಡಬ್ಲ್ಯುಡಿ ಗುತ್ತಿಗೆದಾರ ಎ.ಎಂ. ಇಮಾಮ್ ಎಂಬವರಿಗೆ ಮಗು ಮಾರಾಟ ಮಾಡಿದ್ದ. ಮಗುವನ್ನು ವಶಕ್ಕೆ ಪಡೆದಿರುವ ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಸ್ಪತ್ರೆಗೆ ದಾಖಲಿಸಿದೆ. ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಓಂಕಾರಪ್ಪನನ್ನು ಬಂಧಿಸಿದ್ದಾರೆ.
ಮಗುವನ್ನು ತಮ್ಮ ವಶಕ್ಕೆ ಪಡೆದು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದು ಆರೋಗ್ಯವಾದ ನಂತರ ಅದನ್ನು ಬೆಂಗಳೂರಿನಲ್ಲಿನ ಮಕ್ಕಳ ಸಮಿತಿಗೆ ಒಪ್ಪಿಸಲಾಗುವುದು. ಇದರ ಬಗ್ಗೆ ಸೋಮವಾರ ಕಲ್ಯಾಣ ಸಮಿತಿಯ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
- ಡಿ.ಕೆ. ಶೀಲಾ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.